ಚಿನ್ನದ ಕಟ್ಟು - ಸಣ್ಣಕಥೆ - ಭಾಗ - 1

ಮೂಲ ಕಥೆ: ಆರ್. ಕೆ. ಲಕ್ಷ್ಮಣ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ಭಾಗ - 1

ಮಾಡರ್ನ್ ಫ್ರೇಮ್ ವರ್ಕ್ಸ್” ಎಂಬ ಬರಹವುಳ್ಳ ಬೋರ್ಡು ನಿಜಕ್ಕೂ ಒಂದು ದೊಡ್ಡ ಮರದ ಪೆಟ್ಟಿಗೆ; ಅದರ ಮೇಲೆ ಹೆಸರನ್ನು ಬರೆದು ಔಷಧಾಲಯ ಮತ್ತು ರೇಡಿಯೋ ರಿಪೇರಿ ಅಂಗಡಿಗಳ ನಡುವಿನ ಸಣ್ಣ ಜಾಗದ ಮುಂದೆ ಲಡಕಲಡಕ ಅಲ್ಲಾಡುತ್ತಿದ್ದ ಕಾಲುಗಳ ಮೇಲೆ ನಿಲ್ಲಿಸಲಾಗಿತ್ತು. ಅಂಗಡಿಯ ಮಾಲೀಕ ದತ್ತ ಈ ಅಂಗಡಿಯಲ್ಲಿ ಹೇಳಿ ಮಾಡಿಸಿದ ಬಿಡಿ ಭಾಗದ ಹಾಗೆ ಕೂತಿದ್ದ. ಅವನ ಹೊಟ್ಟೆ ಮುಂದೆ ಬಂದಿತ್ತು. ಕಣ್ಣುಗಳ ಮುಂದೆ ಬೆಳ್ಳಿಯ ಕಟ್ಟಿನ ಕನ್ನಡಕ ಕೂತಿತ್ತು. ಮೈಕಾಂತಿಯೋ ಒಳ್ಳೆ ಚೆನ್ನಾಗಿ ಎಣ್ಣೆ ಹಾಕಿ ಪಾಲಿಷ್ ಮಾಡಿದ ಮರದ ಹಾಗಿತ್ತು.

ಅವನು ಮೌನಿ. ಕಷ್ಟ ಪಟ್ಟು ದುಡಿಯುವ ವ್ಯಕ್ತಿ. ಗಿರಾಕಿಗಳು ಕೇಳಿದ ಪ್ರಶ್ನೆಗಳಿಗೆ ಚುಟುಕಾದ ಉತ್ತರ ಕೊಡುತ್ತಾನೆ. ತನ್ನ ಮೌನವೃತಕ್ಕೆ ಭಂಗ ಉಂಟುಮಾಡಬಲ್ಲ ಕಾಡುಹರಟೆ ಕೊಚ್ಚುವ ಗೆಳೆಯರನ್ನು ಅವನು ಆದಷ್ಟೂ ದೂರವಿಡುತ್ತಾನೆ.  ಅವನನ್ನು ನೋಡಿದಾಗಲೆಲ್ಲ ಸುತ್ತಲೂ ಕಾರ್ಡ್ ಬೋರ್ಡ್ ಚೂರುಗಳು, ಮರದ ಪಟ್ಟಿಗಳು, ಮೊಳೆಗಳಿದ್ದ ಪೆಟ್ಟಿಗೆ, ಗೋಂದಿನ ಬಾಟಲಿ,  ಪೈಂಟ್ ಡಬ್ಬಗಳು ಮೊದಲಾದವುಗಳನ್ನು ಸುತ್ತಲೂ ಹರಡಿಕೊಂಡು ಬೆನ್ನು ಬಾಗಿಸಿಕೊಂಡು ಕೂತಿರುತ್ತಾನೆ. ಈ ಅವ್ಯವಸ್ಥೆಯಲ್ಲಿ  ಒಮ್ಮೊಮ್ಮೆ ಅವನ ಮೋಟುದ್ದದ ಪೆನ್ಸಿಲ್ಲೋ ಅಥವಾ ಗಾಜನ್ನು ಕತ್ತರಿಸುವ ಸಾಧನವೋ ಕಳೆದುಹೋಗುತ್ತದೆ . ಆಗ ಮಾತ್ರ ಅವನು ತನ್ನ ತಪಸ್ಸಿನ ಭಂಗಿಯಿಂದ ಮೇಲೆದ್ದು ಕಳೆದ ವಸ್ತುವಿಗಾಗಿ ಅಸಹನೆಯಿಂದ ಹುಡುಕಾಡುತ್ತಾನೆ. ಒಮ್ಮೊಮ್ಮೆ ಅವನು ಮೇಲೆದ್ದು ಉಟ್ಟಿದ್ದ ಧೋತ್ರವನ್ನು ಬಲವಾಗಿ ಕೊಡವಿದಾಗ ಮಾತ್ರ ಕಳೆದುಹೋಗಿದ್ದ ವಸ್ತು ಕೆಳಗೆ ಬೀಳುತ್ತಿತ್ತು. ಅವನು ಕೊಡವಿದ ರಭಸಕ್ಕೆ ಅಂಗಡಿಯಲ್ಲಿ ಒಂದು ಕಲ್ಲೋಲ ಉಂಟಾಗಿ ತೂಗುಹಾಕಿದ್ದ ಚಿತ್ರಗಳು ಮೆಲ್ಲಗೆ ಅಲ್ಲಾಡುತ್ತಿದ್ದವು.

ಅವನ ಅಂಗಡಿಯ ಗೋಡೆಗಳ ಪ್ರತಿಯೊಂದು ಚದುರ ಅಂಗುಲವೂ ಚಿತ್ರಗಳಿಂದ ಆವೃತವಾಗಿತ್ತು. ದೇವತೆಗಳು, ಸಂತರು, ಹಾಕಿ ಆಟಗಾರರು, ಮಕ್ಕಳು, ಮೋನಾ ಲಿಸಾಳ ಅಗ್ಗದ ಪ್ರತಿಗಳು, ರಾಷ್ಟ್ರದ ನಾಯಕರು, ಮದುವೆ ಜೋಡಿಗಳು, ಉರ್ದೂ ಕೈಬರಹ, ಹಿಮದಿಂದ ಆವೃತವಾದ ಫುಜಿಯಾಮಾ ಮೊದಲಾದ ನಿಸರ್ಗಚಿತ್ರಗಳು, ಈ ಎಲ್ಲ ಸಮಸ್ತ ನಿರ್ಜೀವರಾಶಿಗಳೂ ಆ ಚಿಕ್ಕ ಅಂಗಡಿಯ ಗೋಡೆಗಳ ಮೇಲೆ ಕಲಸುಮೇಲೋಗರವಾಗಿ ಯಾರಾದರೂ ಬಂದು ತಮ್ಮ ಗೋಜಲುಮಯ ಜಗತ್ತನ್ನು ನೇರ್ಪುಗೊಳಿಸುತ್ತಾರೋ ಎಂಬುದನ್ನೇ ಕಾಯುತ್ತಿದ್ದವು.


ಅಂಗಡಿಯ ಹೊರಗೆ ಫುಟ್ ಪಾತ್ ಮೇಲೆ ಓಡಾಡುವವರಿಗೆ ಅಡಚಣೆಯಾಗಿ ನಿಂತಿದ್ದ  ಗಿರಾಕಿಯೊಬ್ಬ “ಈ ಚಿತ್ರಕ್ಕೆ ಕಟ್ಟು ಹಾಕಿಸಬೇಕಿತ್ತು” ಎಂದು ಘೋಷಿಸಿದ. ಎಂದಿನಂತೆ ಅದಕ್ಕೆ ಯಾವ ಭಾವನಾತ್ಮಕ ಪ್ರತಿಕ್ರಿಯೆಯನ್ನೂ ತೋರಿಸದೆ ದತ್ತ ತನ್ನ ಮುಂದಿದ್ದ ಚಿತ್ರಕ್ಕೆ ಸ್ಕ್ರೂ ಮೊಳೆ ಜೋಡಿಸುವ ಕೆಲಸ ಮುಂದುವರೆಸಿದ. “ಕೆಲಸ ಚೆನ್ನಾಗಿ ಆಗಬೇಕು, ಖರ್ಚು ಎಷ್ಟಾದರೂ ಪರವಾಗಿಲ್ಲ” ಎಂದು ಗಿರಾಕಿ ಮುಂದುವರೆಸಿದ. ತನ್ನ ಕೈಯಲ್ಲಿದ್ದ  ಪತ್ರಿಕೆಯ ಹಾಳೆಯಲ್ಲಿ ಸುತ್ತಿದ್ದ  ಪೊಟ್ಟಣ ಬಿಚ್ಚಿ ಒಂದು ಚಿತ್ರವನ್ನು ಅವನು ಹೊರಗೆ ತೆಗೆದ. ಯಾರೋ ವಯಸ್ಸಾದ ವ್ಯಕ್ತಿಯೊಬ್ಬನ ಕಂದು ಬಣ್ಣದ ಹಳೆಯ ಭಾವಚಿತ್ರ. ಓಬೀರಾಯನ ಕಾಲದ ಚಿತ್ರದಂತೆ ಕಂಡರೂ ಮಾಸಿರಲಿಲ್ಲ. ಅದರ ಪ್ರಿಂಟ್ ಇನ್ನೂ ಹೊಳೆಯುತ್ತಿತ್ತು.
“ಎಂಥ ಫ್ರೇಮ್ ಬೇಕಾಗಿತ್ತು?” ಕತ್ತನ್ನು ಮೇಲೆತ್ತದೇ ದತ್ತ ಪ್ರಶ್ನಿಸಿದ.

“ಎಲ್ಲಕ್ಕಿಂತ ಬೆಸ್ಟ್ ಇರಬೇಕು, ನೋಡಿ. ಇಂಥಾ ಪುಣ್ಯಾತ್ಮರ ವಿಷಯದಲ್ಲಿ ಚೌಕಾಶಿಯೇ?”

ದತ್ತ  ಓರೆಗಣ್ಣಿನಿಂದ ಛಾಯಾಚಿತ್ರದ ಕಡೆಗೆ ನೋಡಿದ. ಯಾರೋ ಹಳೇಕಾಲದ ಮನುಷ್ಯರು  ಎಂದು ತನ್ನಲ್ಲೇ ಅಂದುಕೊಂಡ. ಅಜ್ಜನೋ, ಯಾರೋ ಜನೋಪಕಾರಿಯೋ, ಉದಾರದಾನಿಯೋ ಇರಬಹುದು. ಇವರೆಲ್ಲರಿಗೂ ಇರುವಂತೆ ಚಿತ್ರಸ್ಥನಾದವನಿಗೂ ಬಿಳಿಯ ಮೀಸೆ ಮತ್ತು ತಲೆಯ ಮೇಲೆ ರೂಮಲು ಇವೆ. ತಿಂಗಳಿಗೆ ಇಂಥ ಒಂದು ಅರ್ಧ ಡಜನ್ ಚಿತ್ರಗಳಿಗೆ ಕಟ್ಟು ಹಾಕಿಸಲು ಜನ ಬರುತ್ತಾರೆ. ಸ್ವರ್ಗಸ್ಥರಾದವರಿಗೆ ಅವರ ಚಿತ್ರಕ್ಕೆ ಒಳ್ಳೆಯ ಕಟ್ಟು ಹಾಕಿಸುವ ಮೂಲಕ ತಮ್ಮ ಅಭಿಮಾನವನ್ನು ಮೆರೆಯುತ್ತಾರೆ.

“ಎಂಥ ಕಟ್ಟು ಹಾಕಿಸಬೇಕು ಅಂತೀರಿ?” ದತ್ತ ಮಧ್ಯದಲ್ಲೇ ಬಾಯಿ ಹಾಕಿದ. “ಸಾದಾ ಮರದ್ದೋ, ಲ್ಯಾಕರ್ ಫಿನಿಷ್ ಇರೋದು ಬೇಕೋ, ಚಿನ್ನದ ಪಾಲಿಶ್ ಇರೋದು ಬೇಕೋ, ಪ್ಲಾಸ್ಟಿಕ್ ಬೇಕೋ, ಅಥವಾ ಬರೀ ಎನಾಮೆಲ್ ಬಣ್ಣದ್ದು ಸಾಕೋ?” ಗೋಡೆಯ ಮೇಲಿದ್ದ ಚಿತ್ರಗಳ ಕಡೆ ಕೈ ಮಾಡಿ ಈ ಕಟ್ಟುಗಳ ಮಾದರಿಗಳು ಅಲ್ಲಿವೆ ಎಂದು ಸೂಚಿಸಿದ. ಗಿರಾಕಿ ವಿವಿಧ ಕಟ್ಟುಗಳನ್ನು ಪರಿಶೀಲಿಸಿ ಸ್ವಲ್ಪ ಹೊತ್ತಾದ ನಂತರ “ನನಗೆ ಬೆಸ್ಟ್ ಕ್ವಾಲಿಟಿ ಬೇಕು ...” ಎಂದು ಹೇಳಲು ಪ್ರಾರಂಭಿಸಿದ.
ನಮ್ಮ ಅಂಗಡಿಯಲ್ಲಿ ಇರೋದು ಎಲ್ಲಾ ಬೆಸ್ಟ್ ಕ್ವಾಲಿಟಿ. ಸೆಕೆಂಡ್ ಕ್ವಾಲಿಟಿ ನಾನು ಇಡೋದೇ ಇಲ್ಲ.” ಎಂದು ದತ್ತ ಮಧ್ಯದಲ್ಲೇ ಗಿರಾಕಿಯ ಮಾತನ್ನು ತುಂಡು ಮಾಡಿದ . ಗಿರಾಕಿಗಾಗಿ ಅನೇಕ ಮಾದರಿಗಳ ಪ್ರದರ್ಶನ ಏರ್ಪಟ್ಟಿತು.  ಸಾಧಾರಣವಾದದ್ದು , ಅಲಂಕಾರವುಳ್ಳದ್ದು, ಹೂಬಳ್ಳಿಗಳು ಇರುವುದು, ತೆಳ್ಳಗಿನದು, ದಪ್ಪವಾದದ್ದು, ಇತ್ಯಾದಿ. ಇಷ್ಟೊಂದು ವೈವಿಧ್ಯವನ್ನು ನೋಡಿ ಗಿರಾಕಿಗೆ ಸ್ವಲ್ಪ ಕಕ್ಕಾಬಿಕ್ಕಿಯಾಯಿತು. ಬಹಳ ಹೊತ್ತು ಅವನು ಎಲ್ಲಾ ಮಾದರಿಗಳನ್ನೂ ನೋಡುತ್ತಾ ನಿಂತ. ತನ್ನ ಗೌರವಾನ್ವಿತ ಬಂಧುವಿಗೆ ಸಲ್ಲದ ಯಾವುದೋ ಅಗ್ಗದ ಫ್ರೇಮ್ ಆಯ್ದು ಅವರಿಗೆ ಅಪಮಾನ ಆಗಬಾರದು ಎಂಬಂತಿತ್ತು ಅವನ ನಡವಳಿಕೆ.   

ದತ್ತ ಆತನ ನೆರವಿಗೆ ಬಂದ. ಚಿನ್ನದ ಎಲೆಬಳ್ಳಿಗಳಿಂದ ತುಂಬಿಕೊಂಡಿದ್ದ ಒಂದು ಫ್ರೇಮಿನ ಮಾದರಿಯನ್ನು ಆರಿಸಿ, "ಇದು ಜರ್ಮನಿಯಿಂದ ಇಂಪೋರ್ಟ್ ಮಾಡಿರೋ ಫ್ರೇಮ್" ಎಂದು ಬೀಗಿದ.  ಗಿರಾಕಿಗೆ ಇದರಿಂದ ಒಮ್ಮೆಲೇ ಅತೀವ ತೃಪ್ತಿಯಾಯಿತು. ಆತ ಒಪ್ಪಿಗೆ ನೀಡಿ ಸುಧಾರಿಸಿಕೊಳ್ಳುವ ಮೊದಲೇ ದತ್ತ "ನಿಮಗೆ ಸಾಧಾರಣ ಮೌಂಟ್ ಬೇಕೋ ಅಥವಾ ಕಟ್ ಮೌಂಟ್ ಬೇಕೋ?" ಎಂದು ಪ್ರಶ್ನಿಸಿ ಗಿರಾಕಿಯನ್ನು ಮತ್ತೆ ಗೊಂದಲದಲ್ಲಿ ಸಿಕ್ಕಿಸಿದ. ಮತ್ತೆ ತಾನೇ ಗಿರಾಕಿಯ ಸಹಾಯಕ್ಕೆ ನಿಂತು ವಿವಿಧ ಬಗೆಯ ಮೌಂಟ್ ಗಳ ಮಾದರಿ ತೋರಿಸಿ ಕಟ್ ಮೌಂಟ್ ಹೆಚ್ಚು ಶೋಭಿಸುತ್ತದೆ ಎಂದು ಮನವರಿಕೆ ಮಾಡಿಕೊಟ್ಟ.

"ಸರಿ, ಹಾಗಾದರೆ ಕಟ್ ಮೌಂಟ್ ಇರಲಿ. ಅಲ್ಲಿ ಹಾಕಿರುವ ಫೋಟೋದಲ್ಲಿ ಇರುವುದು  ಕಟ್ ಮೌಂಟ್ ತಾನೇ?" ಎಂದು ತಾದಾತ್ಮ್ಯ ಭಾವದಿಂದ ನೋಡುತ್ತಿರುವ ಒಬ್ಬ ವೃದ್ಧ ಮಹಿಳೆಯ ಚಿತ್ರದ ಕಡೆ ಗಿರಾಕಿ ಬೊಟ್ಟು ಮಾಡಿದ. ಚಿತ್ರವನ್ನು ಅಂಡಾಕಾರದ ಕಟ್ ಮಾಡಿ ಕೂರಿಸಲಾಗಿತ್ತು. "ಈ ಆಕಾರದ ಕಟ್ ನನಗೆ ಇಷ್ಟವಾಯಿತು. ಅದರ ಬೆಲೆ ಬಹಳವಾದೀತೋ?"

"ಇಲ್ಲ, ಫ್ರೇಮ್, ಮೌಂಟ್, ಗಾಜು, ಎಲ್ಲಾ ಸೇರಿ ಹದಿನೇಳು ರೂಪಾಯಿ."


ಇದಕ್ಕಿಂತ ಹೆಚ್ಚಾಗಬಹುದು ಎಂದು ಗಿರಾಕಿ ಅಪೇಕ್ಷಿಸಿದ್ದ. ಆದರೂ ಮುಖದಲ್ಲಿ ಆಘಾತದ ಭಾವ ತಂದುಕೊಂಡು ಚೌಕಾಶಿ ಮಾಡಲು ಮುಂದಾದ. ದತ್ತ ಉತ್ತರಿಸದೆ ತನ್ನ ಯಥಾಸ್ಥಾನಕ್ಕೆ ಮರಳಿ ಪ್ಲೈವುಡ್ ತುಂಡೊಂದನ್ನು ಕತ್ತರಿಸುತ್ತಾ ಕುಳಿತ. ಗಿರಾಕಿಗೆ ಏನೂ ತೋಚದೆ ಸ್ವಲ್ಪ ಹೊತ್ತು ಕಾದಿದ್ದು ಆನಂತರ "ಯಾವಾಗ ರೆಡಿಯಾಗುತ್ತೆ?" ಎಂದು ಕೇಳಿದ. ಪ್ಲೈವುಡ್ ಕತ್ತರಿಸುವ ಸದ್ದಿನಲ್ಲಿ "ಇವತ್ತಿಗೆ ಎರಡು ವಾರದಲ್ಲಿ" ಎಂಬ ಉತ್ತರ ಅವನಿಗೆ ಅಸ್ಪಷ್ಟವಾಗಿ ಕೇಳಿಸಿತು. 

(ಮುಂದುವರೆಯುತ್ತದೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)