ಅನೇಕ ಕಾಂಪ್ಲೆಕ್ಸ್ ಗಳ ಬುದ್ಧಿಜೀವಿಗಳು

ಮೂಲ - ಕಾನ್ರಾಡ್ ಎಲ್ಸ್ಟ್ 

ಕನ್ನಡಕ್ಕೆ - ಸಿ ಪಿ ರವಿಕುಮಾರ್ 


ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ| ಕಪಿಲ್ ಕಪೂರ್ ಅವರು ಇಂದೋರ್ ನಲ್ಲಿ ಸಮಾವೇಶಗೊಂಡ ಇಂಡಿಯಾ ಇನ್ಸ್-ಪೈರ್ಸ್ ಸಂಸ್ಥಾನದ ಸಭೆಯಲ್ಲಿ ಮಾಡಿದ ಭಾಷಣದಿಂದ ಕೆಲವು ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇನೆ.  ಅದರಲ್ಲೂ ನಮ್ಮ ಭಾರತೀಯ ಬುದ್ಧಿಜೀವಿಗಳನ್ನು ಕುರಿತು ಅವರ ಅನ್ನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಗ್ರಹಣದಲ್ಲಿ ದೋಷಗಳಿದ್ದರೆ ಅವು ನನ್ನವು ಎಂದು ಮೊದಲೇ ಹೇಳಿಬಿಡುತ್ತೇನೆ.

ನಮ್ಮ ಭಾರತೀಯ ಬುದ್ಧಿಜೀವಿಗಳಿಗೂ ಹಿಂದೂ ಪರಂಪರೆಯ ಜ್ಞಾನವಂತ ಋಷಿಗಳಿಗೂ ವ್ಯತ್ಯಾಸವಿದೆ. ಋಷಿಗಳು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಿಟ್ಟವರು. ಜವಾಬ್ದಾರಿಯುತ ವರ್ತನೆ, ಸ್ವಾವಲಂಬನೆ ಮತ್ತು ಮಾನಸಿಕವಾಗಿ ಗೆಲುವಾಗಿರುವುದರ ಮೇಲೆ ಅವರು ಒಟ್ಟು ಕೊಟ್ಟವರು. ನಮ್ಮ ಇಂದಿನ ಬುದ್ಧಿಜೀವಿಗಳೋ  ತಮ್ಮ ಬುದ್ಧಿಯ ಬಲದಿಂದ ಜೀವನೋಪಾಯ ಹುಡುಕಿಕೊಳ್ಳುತ್ತಿರುವವರು. ಅವರ ವ್ಯಕ್ತಿತ್ವಕ್ಕೆ ಕೆಲವು ಮಗ್ಗಲುಗಳಿವೆ..






  • ಅವರು ನಿತ್ಯದುಃಖಿಗಳು  - ಅವರ ಮುಖದ ಮೇಲೆ ಸದಾ ಚಿಂತೆಯ ಕಳೆ. ಬಹಳ ಜತನದಿಂದ ಅವರು ತಮ್ಮ ಮುಖದ ಮೇಲೆ ಉಪೇಕ್ಷೆಯ ಭಾವನೆಯನ್ನು ತಂದುಕೊಂಡರೂ ಕೂಡಾ ಅವರು ಚಿಂತಿತರೆಂದು ಗೊತ್ತಾಗುತ್ತದೆ. ಎಲ್ಲವೂ ಕೆಟ್ಟದ್ದೇ ಎಂಬುದು ಅವರ ನಂಬಿಕೆ. ಅದರಲ್ಲೂ ಹಿಂದೂ ಧರ್ಮದಿಂದ ಹುಟ್ಟಿದ ಎಲ್ಲವೂ ಕೆಟ್ಟದ್ದೇ ಆಗಿರಬೇಕು - ಉದಾಹರಣೆಗೆ ಜಾತಿ ಪದ್ಧತಿ, ಸತಿ, ಮೂಢನಂಬಿಕೆ, ಮೊದಲಾದವು. (ಹಾಗೆ ನೋಡಿದರೆ ಶಿವನ ಹೆಂಡತಿ ಸತಿಯು  ಪತಿಯಾದ ಶಿವ ಬದುಕಿದ್ದಾಗಲೇ ತಾನೇ ಅಗ್ನಿಕುಂಡಕ್ಕೆ ಹಾರಿಕೊಂಡಳು. ಸತಿ ಪದ್ಧತಿಯನ್ನು ಋಗ್ವೇದದಿಂದ ಹಿಡಿದು ಎಲ್ಲಾ ಹಿಂದೂ ಧರ್ಮಗ್ರಂಥಗಳೂ ಖಂಡಿಸಿವೆ.) ಬುದ್ಧಿಜೀವಿಗಳು ಅಲ್ಪಸಂಖ್ಯಾತರ ಬಗ್ಗೆ ಚಿಂತಿಸುತ್ತಾರೆ. ಲಿಂಗತಾರತಮ್ಯದ ಬಗ್ಗೆ ಚಿಂತೆಗೊಳಗಾಗುತ್ತಾರೆ. ಪರಿಸರದ ಬಗ್ಗೆ ಯೋಚಿಸಿ ವಿಹ್ವಲರಾಗುತ್ತಾರೆ. ತಮ್ಮ ಸ್ವಂತ ಲೋಲುಪ್ತಿಯ ಜೀವನಶೈಲಿಯನ್ನು ಎಂದೂ ಪ್ರಶ್ನಿಸಿಕೊಳ್ಳದಿದ್ದರೂ ಹಿಂದೂಗಳು ಏನು ಮಾಡಿದರೂ ಅದು ಪರಿಸರವನ್ನು ಕಲುಷಿತಗೊಳಿಸುತ್ತದೆ ಎಂದು ಹಲುಬುತ್ತಾರೆ. ಹೋಳಿಯ ದಿನ ಹಿಂದೂಗಳು ಎರಚುವ ಬಣ್ಣ ಪರಿಸರವನ್ನು ನಾಶ ಮಾಡುತ್ತಿದೆ ಎಂದು ದೂರುತ್ತಾರೆ. ಸನಿಕೆಗೂ ನೇಗಿಲಿಗೂ ವ್ಯತ್ಯಾಸ ಗೊತ್ತಿಲ್ಲದಿದ್ದರೂ ಈನಡುವೆ ಅವರು ರೈತರ ಬಗ್ಗೆ ಚಿಂತಿತರಾಗಿದ್ದಾರೆ. 




  • ಭಾರತದ ಬುದ್ಧಿಜೀವಿಗಳಿಗೆ ತಾವು ಹತಭಾಗ್ಯರು ಎಂಬ ತಲ್ಲಣವಿದೆ. ತಾವೇಕೆ ಒಂದು ಬಡ ಪ್ರಗತಿಪರ ರಾಷ್ಟ್ರದಲ್ಲಿ ಹುಟ್ಟಬೇಕಾಗಿತ್ತು? ಅಮೇರಿಕಾದಲ್ಲಿ ಯಾಕೆ ಹುಟ್ಟಲಿಲ್ಲ? ನಿಜ ಹೇಳಬೇಕೆಂದರೆ "ಪ್ರಗತಿಪರ ರಾಷ್ಟ್ರ" ಎಂಬ ಬಿರುದು ಇರುವುದರಿಂದಲೇ ದತ್ತಿಧನ ಈ ಬುದ್ಧಿಜೀವಿಗಳ ಕಡೆಗೆ ಹರಿದು ಬರುತ್ತಿರುವುದು. ಈ ಹಣದಿಂದಲೇ ಬುದ್ಧಿಜೀವಿಗಳ ಮಕ್ಕಳು ಅಮೇರಿಕಾದಲ್ಲಿ ಪಿಎಚ್.ಡಿ. ಪದವಿ ಗಳಿಸಲು ಸಾಧ್ಯವಾಗುತ್ತಿರುವುದು. 




  • ಈ ಬುದ್ಧಿಜೀವಿಗಳು ಯಾವುದನ್ನೂ ಕಂಡರೂ ಪ್ರಲಾಪಿಸುತ್ತಲೇ ಇರುತ್ತಾರೆ. ಇವರಿಗೆ ರುಡಾಲಿ-ಕಾಂಪ್ಲೆಕ್ಸ್ ಇದೆ ಎನ್ನಬಹುದು. ರುಡಾಲಿಗಳು ಯಾರಾದರೂ ರಾಜ-ಮಹಾರಾಜರು ಸತ್ತಾಗ ಮಾತ್ರ ಎದೆ ಹೊಡೆದುಕೊಂಡು ಆಳುವ ಬಾಡಿಗೆ ದುಃಖಿಣಿಯರು. ಆದರೆ ಬುದ್ಧಿಜೀವಿಗಳೋ, ಯಾವಾಗಲೂ ಅಳುತ್ತಲೇ ಇರುತ್ತಾರೆ. ಮೊಹರಂ ಹಬ್ಬದ ದಿನ ಷಿಯಾ ಮುಸಲ್ಮಾನರು ಹುಸೇನ್ ಅವರ ಸೋಲನ್ನು ನೆನೆದು ದುಃಖಿಸುತ್ತಾ ತಮ್ಮ ದೇಹವನ್ನು ತಾವೇ ಚಾಟಿಯಿಂದ ದಂಡಿಸುತ್ತಾರೆ. ಭಾರತದ ಬುದ್ಧಿಜೀವಿಗಳಿಗೆ ಪ್ರತಿನಿತ್ಯ ಮೊಹರಂ ಆಚರಣೆಯೇ. 
    • ಭಾರತದ ಬುದ್ಧಿಜೀವಿಗಳಿಗೆ ಹನುಮಾನ್ ಕಾಂಪ್ಲೆಕ್ಸ್ ಕೂಡಾ ಇದೆ. ಹನುಮಂತನಿಗೆ ಅದೆಷ್ಟು ಬಲ ಇತ್ತೆಂದರೆ ದೇವತೆಗಳು ಅವನಿಗೆ ಶಾಪ ಕೊಟ್ಟಿದ್ದರಂತೆ. ಯಾರಾದರೂ ಅವನಿಗೆ ನೀನೆಷ್ಟು ಬಲಶಾಲಿ ಎಂದು ನೆನಪಿಸುವವರೆಗೂ ಹನುಮಂತನಿಗೆ ತನ್ನ ಶಕ್ತಿಯ ಬಗ್ಗೆ ಮರೆವು ಉಂಟಾಗುತ್ತಿತ್ತಂತೆ, ಹಾಗೇ ಈ ಬುದ್ಧಿಜೀವಿಗಳಿಗೆ ತಮ್ಮ ದೇಶದ ನಾಗರೀಕತೆಯ ಭವ್ಯತೆ ಮರೆತೇ ಹೋಗುತ್ತದೆ. ಯೂರೋಪಿನಿಂದ ಬಂದ ಪ್ರಪ್ರಥಮ ಯಾತ್ರಿಕರು ಭಾರತದಲ್ಲಿ ಮಂದಿ ಭೂಪಟವನ್ನೇಕೆ ಬಳಸುವುದಿಲ್ಲ ಎಂದು ಸೋಜಿಗವಾಗುತ್ತಿತ್ತಂತೆ. ಭೂಪಟ ಬೇಕಾದದ್ದು ಯಾರಿಗೆ? ತಮ್ಮ ಸ್ಥಳ ಬಿಟ್ಟು ಬೇರೆ ಕಡೆಗೆ ತಮ್ಮಲ್ಲಿಲ್ಲದ ವಸ್ತುವನ್ನು ತರಲು ಬಯಸುವವರಿಗೆ.  ಆದರೆ ತಮ್ಮ ದೇಶದಲ್ಲೇ ಬೇಕಾದದ್ದೆಲ್ಲಾ ಸಿಕ್ಕುವಾಗ ಭೂಪಟ ಏಕೆ ಬೇಕು? ಇಸ್ಲಾಮಿಕ್ ಮತ್ತು ಬ್ರಿಟಿಷ್ ಕಾಲೊನೀಕರಣ ಹಾಗೂ ನೆಹರೂ ಅವರ ಸಮಾಜವಾದ ನಮ್ಮ ದೇಶಕ್ಕೆ ತಂದುಕೊಟ್ಟ ದಾರಿದ್ರ್ಯದ ಕಳಂಕವನ್ನು ಈ ಬುದ್ಧಿಜೀವಿಗಳು ಹಿಂದೂ ಪ್ರಭಾವಕ್ಕೆ ಹಚ್ಚಿಬಿಡುತ್ತಾರೆ. ನೆಹರೂ ಅವರ ಆಲೋಚನಾ ಕ್ರಮದಿಂದ ಉಂಟಾದ ಆರ್ಥಿಕ ಸೋಲಿನ ಕಾರಣವನ್ನು  ಇವರು "ಹಿಂದೂಗಳ ಬೆಳವಣಿಗೆಯ ವೇಗ"ದಲ್ಲಿ ಹುಡುಕುತ್ತಾರೆ. ಇಂದಿನ ಮಧ್ಯಮವರ್ಗ ಸದಾ ಸರಕಾರದ ಮಧ್ಯಸ್ತಿಕೆಗೆ ಕೂಗಿಕೊಳ್ಳುವಂತೆ, ಪುರಾಣಗಳಲ್ಲಿ ದೇವತೆಗಳು ಅಸುರರ ಕಾಟ ಬಂದಾಗಲೆಲ್ಲಾ ತ್ರಿಮೂರ್ತಿಗಳ ಮೊರೆ ಹೋಗುವಂತೆ ಈ ಬುದ್ಧಿಜೀವಿಗಳು  ಸದಾ ಸತ್ತೆಯ ಸಹಾಯಹಸ್ತಕ್ಕಾಗಿ ಅಂಗಲಾಚುತ್ತಾರೆ.  ಪುರಾಣಗಳಲ್ಲಿ ಬರುವ ಅಸುರರು ಸ್ವಾವಲಂಬಿಗಳು ಎಂಬುದನ್ನು ಗಮನಿಸಿ; ದೇವತೆಗಳದ್ದು  ಏನಿದ್ದರೂ ಪುಷ್ಪವೃಷ್ಟಿ ಮಾಡುವ ಕೆಲಸ.
    • ಬುದ್ಧಿಜೀವಿಗಳಿಗೆ ತಿತ್ತಿರಿ ಕಾಂಪ್ಲೆಕ್ಸ್ ಕೂಡಾ ಇದೆ. ತಿತ್ತಿರಿ ಎಂಬುದು ಒಂದು ಭಾರತೀಯ  ಪಕ್ಷಿ. ಈ ಹಕ್ಕಿ ತನ್ನ ಬೆನ್ನ ಮೇಲೆ ಒರಗಿ ಕಾಲುಗಳನ್ನು ಆಕಾಶದ ಕಡೆ ಮಾಡಿಕೊಂಡು ಮಲಗುತ್ತದೆ. ಎಲ್ಲಿ ಆಕಾಶ ಬಿದ್ದುಹೋಗುತ್ತದೋ, ಹಾಗೆ ಬಿದ್ದರೆ ತನ್ನ ಕಾಲುಗಳ ಬಲದಿಂದ ಅದನ್ನು ತಡೆದು ನಿಲ್ಲಿಸುತ್ತೇನೆ ಎಂಬ ಹಾಗೆ ಈ ಹಕ್ಕಿಯ ಭಾವ.  ಹಾಗೇ ಈ ಬುದ್ಧಿಜೀವಿಗಳು ತಮ್ಮ ಕಾಳಜಿ ಇಲ್ಲದಿದ್ದರೆ ಆಕಾಶ ಕಳಚಿ ಬಿದ್ದುಹೋಗುತ್ತದೆ ಎಂದೇ ನಂಬಿದ್ದಾರೆ. 
    • ಕೊನೆಗೆ ಇದನ್ನೆಲ್ಲಾ ಮೀರಿಸುವ ಒಂದು ಗುಣ ನಮ್ಮ ಬುದ್ಧಿಜೀವಿಗಳಲ್ಲಿದೆ. ಪುಸ್ತಕವನ್ನು ಕುರಿತೋದದೆ ಅದರ ಬಗ್ಗೆ ಮಾತಾಡುವ ಗುಣ. ಇದನ್ನು ಅವರು "ಮೀಟಾ-ಅಧ್ಯಯನ" ಎಂದು ಕರೆಯುತ್ತಾರೆ. "ಗೊಬ್ಬರದ ಗುಂಡಿ ದುರ್ಗಂಧದಿಂದ ನಾರುತ್ತದೆ ಎಂಬುದನ್ನು ತಿಳಿಯಲು ಅದರೊಳಗೆ ಹಾರಬೇಕಾಗಿಲ್ಲ"  ಎಂದು ಅಯೋತೊಲ್ಲಾ ಖೋಮೇನಿಯು ಸಲ್ಮಾನ್ ರಷ್ಡೀ ಅವರ "ಸ್ಯಾಟನಿಕ್ ವರ್ಸಸ್" ಎಂಬ ಪುಸ್ತಕದ ಬಗ್ಗೆ ಹೇಳಲಿಲ್ಲವೇ? 

    ಕಾಮೆಂಟ್‌ಗಳು

    ಕಾಮೆಂಟ್‌‌ ಪೋಸ್ಟ್‌ ಮಾಡಿ

    ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

    "ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

    ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

    ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)