1914

1914 

ಮೂಲ ಇಂಗ್ಲಿಷ್ ಕವಿತೆ - ವಿಲ್ಫ್ರೆಡ್ ಒವೆನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್


ವಿಲ್ಫ್ರೆಡ್ ಒವೆನ್ ಒಬ್ಬ ಇಂಗ್ಲಿಷ್ ಕವಿ. ಮೊದಲ ಮಹಾಯುದ್ಧ ಪ್ರಾರಂಭವಾದಾಗ ಇಪ್ಪತ್ತರ ಹರೆಯದ ತರುಣ. ಯಾವುದೋ ಸಣ್ಣ ಕಾಲೇಜಿನಲ್ಲಿ ಅಧ್ಯಾಪಕನಾಗಿ ತನ್ನಪಾಡಿಗೆ ತಾನಿದ್ದವನ ಜೀವನದಲ್ಲಿ ಯುದ್ಧವು ಚಂಡಮಾರುತದಂತೆ ಪ್ರವೇಶಿಸಿತು. ಅವನೂ ಯುದ್ಧದಲ್ಲಿ ಪಾಲ್ಗೊಳ್ಳಬೇಕಾಯಿತು. ಇಂಗ್ಲೆಂಡ್ ಪರವಾಗಿ ಯುದ್ಧದಲ್ಲಿ ಹೋರಾಡಿದ. ಯುದ್ಧದಲ್ಲಿ ಗಾಯಗೊಂಡು ತಿಂಗಳಾನುಗಟ್ಟಲೆ ಚೇತರಿಸಿಕೊಳ್ಳುವಾಗ ಅವನು ಬರೆದ ಕವಿತೆಗಳನ್ನು ಸಿಗ್ಫ್ರೀಡ್ ಸಾಸೂನ್ ಎಂಬ ಕವಿ ಓದಿ ಅವನನ್ನು ಪ್ರೋತ್ಸಾಹಿಸಿದ. ಆದರೆ ಮರುವರ್ಷ ಮತ್ತೆ ಅವನನ್ನು ಫ್ರಾನ್ಸ್ ದೇಶಕ್ಕೆ ಯುದ್ಧಕ್ಕಾಗಿ ಕಳಿಸಲಾಯಿತು. ತರುಣ ಕವಿ ಯುದ್ಧಭೂಮಿಯಲ್ಲಿ ಹತನಾದ. ಪ್ರಸ್ತುತ ಕವಿತೆ ಯುದ್ಧವನ್ನು ಕುರಿತು ಅವನ ಭಾವನೆಗಳನ್ನು ಪ್ರಕಟಿಸುತ್ತದೆ. ಯುದ್ಧದಲ್ಲಿ ಸುರಿಯುತ್ತಿರುವ ರಕ್ತ ಹೊಸದೊಂದು ವಸಂತವನ್ನು ಅರಳಿಸಬಹುದೆಂಬ ಆಸೆ ಕವಿತೆಯಲ್ಲಿದೆ.



ಯುದ್ಧ ಪ್ರಾರಂಭವಾಗಿದೆ; ಜಗತ್ತಿಗೆ ಕಾಲಿಡುತ್ತಿದೆ
ನಿರ್ನಾಮಗೊಳಿಸುವ ಮಹಾಶಿಶಿರದ ಕತ್ತಲು.
ಬರ್ಲಿನ್ ನಗರದಲ್ಲಿದೆ ದುಷ್ಟ ಪ್ರಳಯದ ಕೇಂದ್ರ,
ಫೂತ್ಕರಿಸುತ್ತಿದೆ ಯೂರೋಪಿನ ಸುತ್ತಲೂ.
ಆಗುತ್ತಿವೆ ಧೂಳೀಪಟ ಪ್ರಗತಿಯ ಎಲ್ಲ ಹಾಯಿಗಳೂ .
ವಿಚ್ಛಿದ್ರವಾಗುತ್ತಿವೆ ಕಲೆಯ ಲಾಂಛನಗಳೆಲ್ಲಾ.
ಬಿಕ್ಕುತ್ತಿದೆ ಕವಿತೆ. ಆಲೋಚನೆಗಳಿಗೆ-ಭಾವನೆಗಳಿಗೆ ಬಂದಿದೆ ಕ್ಷಾಮ.
ತೆಳುವಾಗಿದೆ ಪ್ರೀತಿಯ ಮದಿರೆ, ಕೆಳಗುರುಳಿದೆ ಮಾನವತೆಯ ಶರತ್ಕಾಲ.

ಗ್ರೀಸಿನಲ್ಲಿ ಅರಳಿದ ವಸಂತವು ಪ್ರಜ್ವಲಿಸಿತು
ಗ್ರೀಷ್ಮದ ವೈಭವವಾಗಿ ರೋಮ್ ಉದ್ದಗಲಕ್ಕೂ.
ಶರದೃತುವಾಗಿ ಮೆಲ್ಲನೆ ಕೆಳಗುದುರಿತು,
ಮೊಗೆದಷ್ಟೂ ಉಕ್ಕುವ ಸುಗ್ಗಿ-ಸಂಪತ್ತು.
ಆದರೆ ನಮ್ಮ ಪಾಲಿಗೆ ಬಂದಿದ್ದು ಮಾತ್ರ ಕೊರೆಯುವ ಕ್ರೂರ ಶಿಶಿರ.
ಬಿತ್ತಬೇಕು ಮತ್ತೆ ವಸಂತದ ಬೀಜ, ಮೇಲೆ ಸುರಿಯಬೇಕು ನೆತ್ತರ.    


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)