ಕಳೆದುಹೋಗಿದೆ

ಸಿ. ಪಿ. ರವಿಕುಮಾರ್ 

"ಸಮ್ಮೇಳನದ ಗದ್ದಲದಲ್ಲಿ ಕಳೆದುಹೋಗಿದೆ, ದಯವಿಟ್ಟು ಅನೌನ್ಸ್ ಮಾಡಿ" ಎಂದು ಒಬ್ಬರು ಅವಲತ್ತುಕೊಂಡರು.


ಸಮ್ಮೇಳನದ ಆಯೋಜಕರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವುದರಲ್ಲಿ "ಬಿಸಿ"ಯಾಗಿದ್ದರು. ಮಂತ್ರಿಗಳು ಆರು ಗಂಟೆ ತಡವಾಗಿ ಬಂದು ಕಾರ್ಯಕ್ರಮಗಲೆಲ್ಲಾ ಆಕ್ರಮಗಳಾಗಿಹೋಗಿದ್ದವು. ಮಂತ್ರಿಗಳ ಭಾಷಣದ ನಡುವೆ ಒಂದು ಗುಂಪು ಘೋಷಣೆ ಕೂಗಿದ್ದು ಆಭಾಸಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲೇ ಮಂತ್ರಿಗಳು ತಮ್ಮ ಹೆಸರು ಆರನೇ ಸಾಲಿನಲ್ಲಿ ಬಂದಿದೆ ಅಂತ "ಗರಂ" ಆಗಿದ್ದರು. ಅವರಿಗಾಗಿ ಆಮಂತ್ರಣ ಪತ್ರಿಕೆ, ಬ್ಯಾನರ್ ಎಲ್ಲವನ್ನೂ ಮರುಮುದ್ರಣ ಮಾಡಿ ಬಜೆಟ್ ಗೋತಾ ಹೊಡೆದಿತ್ತು. ಇಷ್ಟೆಲ್ಲಾ ಗೊಂದಲದ ನಡುವೆ ಸುಸ್ತಾದರೂ ಮರುದಿನ ಪತ್ರಿಕೆಗಳಿಗಾಗಿ ಊಟದ ವ್ಯವಸ್ಥೆಗಳ ಫೋಟೋ ತೆಗೆಸುತ್ತಿದ್ದರು.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ವ್ಯವಸ್ಥೆ ಇದ್ದುದನ್ನು ನೋಡಿ ಜನ ಮೆಚ್ಚುಗೆಯಿಂದ ತಲೆದೂಗುತ್ತಿದ್ದರು.

"ಸರ್ ದಯವಿಟ್ಟು ಅನೌನ್ಸ್ ಮಾಡಿ!" ಎಂದು ಬಂದವರು ಮತ್ತೊಮ್ಮೆ ಕೈಮುಗಿದು ಕೇಳಿಕೊಂಡರು.

ಆಯೋಜಕರು ಸಿಡಿಮಿಡಿಗೊಂಡರು. ಆದರೂ ಪತ್ರಕರ್ತರು ಅಲ್ಲೇ ಓಡಾಡುತ್ತಾ ಇದ್ದುದರಿಂದ ಸಂಭಾಳಿಸಿಕೊಂಡು "ಆಗಲಿ, ಅನೌನ್ಸ್ ಮಾಡೋಣ. ಏನು ಕಳೆದುಹೋದವರ ಹೆಸರು?" ಎಂದರು.

"ಕಳೆದುಹೋದವರು ಅಲ್ಲ, ಕಳೆದುಹೋದದ್ದು."

"ಅಯ್ಯೋ ಕಳೆದುಹೋದದ್ದು ಮತ್ತೆ ಸಿಕ್ಕುತ್ತೆ ಅಂತ ಏನು ಗ್ಯಾರಂಟಿ? ಯಾರೋ ಹೊಡೆದುಕೊಂಡು ಹೋಗಿರಬಹುದು."

"ಇಲ್ಲ ಸಾರ್. ಯಾರೂ ಕೇರ್ ಮಾಡುವಂಥದ್ದು ಅಲ್ಲವೇ ಅಲ್ಲ."

"ಮತ್ತೆ? ಅದಕ್ಕೆ ಯಾಕೆ ಅನೌನ್ಸ್ ಮಾಡಬೇಕು?"

"ಅಯ್ಯೋ ಹಾಗೆನ್ನಬೇಡಿ. ದಯವಿಟ್ಟು ಅನೌನ್ಸ್ ಮಾಡಿ. ಸಿಕ್ಕಿದರೆ ನಿಮಗೆ ಪುಣ್ಯ ಬರುತ್ತೆ."

"ಸರಿ, ಏನು ಕಳೆದು ಹೋಗಿರೋದು?"

"ಸಾಹಿತ್ಯ" ಎಂದು ಅವರು ಏದುಸಿರು ಬಿಡುತ್ತಾ ಉತ್ತರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)