ಬಿರುಸು ಮಳೆಯಲ್ಲಿ ಬಸ್

ಮೂಲ ಚೈನೀಸ್ ಕವಿತೆ - ಲಿ ಹೆಂಗ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

Image result for bus rain storm
ಬರಿದಾದ ನಿಲ್ದಾಣದಲ್ಲಿ 
ಶುರುವಾದ ಮಳೆಯಿಂದ ಪಾರಾಗಲು 
ನಾನು ಓಡಿಹೋಗಿ ಹತ್ತಿಕೊಳ್ಳುತ್ತೇನೆ 
ಯಾವುದೋ ಬಸ್ 
ಅದು ಎಲ್ಲಿಗೆ ಹೊರಟಿದೆಯೋ ನನಗೆ ಗೊತ್ತಿಲ್ಲ. 
ವೇಗ ವರ್ಧಿಸಿಕೊಂಡು 
ಸೇತುವೆಯ ತಿರುವಿನಲ್ಲಿ ತಿರುಗುತ್ತದೆ
ತನಗೂ ಮಳೆಗೂ ಸಂಬಂಧವಿಲ್ಲ 
ಎಂದು ಸಾಬೀತು ಪಡಿಸುವ ಧಾವಂತದಲ್ಲಿ.
ಆದರೆ 
ಜೋರುಮಳೆಯ ನೆರಳು 
ಕುರುಡನ ರೂಪದಲ್ಲಿ ನುಡಿಸುತ್ತಿದೆ
ನೀರಿನಲ್ಲಿ ಚಲಿಸುವ ಬಸ್ ಪಿಯಾನೋ.
ಪ್ರಯಾಣಿಕರು ಅದರ ವಿವಿಧಾಕಾರದ 
ಕಪ್ಪು-ಬಿಳಿ ಮನೆಗಳು.
ಯದ್ವಾ ತದ್ವಾ ಕುಟ್ಟುತ್ತಿದೆ ಅವರನ್ನು ಪಟಪಟ. 
ಬಸ್ ನಿಂತಾಗ ಅವುಗಳ (ಅಂದರೆ ನಮ್ಮ)
ಶ್ರುತಿ ಮತ್ತು ತಾಳ ಕೆಟ್ಟುಹೋಗಿರುತ್ತದೆ ಖಂಡಿತ. 
ಟಿಪ್ಪಣಿ - ಯಾರಿಗಾದರೂ ಇಂಥ ಅನುಭವ ಆಗಿರಬಹುದು. ಸೂರಿಲ್ಲದ ಬಸ್ ನಿಲ್ದಾಣದಲ್ಲಿ ಮಳೆ ಪ್ರಾರಂಭವಾಗಿದೆ. ಮಳೆಯಿಂದ ಪಾರಾಗಲು ಹತ್ತಿರದಲ್ಲಿ ಕಂಡ ಬಸ್ ಒಂದನ್ನು ಕವಿ ಏರಿ ಕುಳಿತಿದ್ದಾನೆ.  ಅದು ಮಳೆಯಿಂದ ಅಪ್ರತಿಭವಾಗದೆ ಮುಂದೆ ಚಲಿಸುತ್ತಿದೆ, ನಿಜ. ಆದರೆ ಒಳಗೆ ಕುಳಿತವರ ಮೇಲೆ ಮಳೆಯ ಪ್ರಭಾವ ಖಂಡಿತಾ ಆಗುತ್ತಿದೆ. ಕೊನೆಗೂ ಬಸ್ ನಿಂತಾಗ ಇವರು ಶ್ರುತಿ ಕೆಟ್ಟ ಪಿಯಾನೋ ಮಣೆಗಳ  (ಮನೆಗಳ) ಹಾಗೆ ಹೊರಬರುವುದು ಖಚಿತ. ಎಷ್ಟು ಜನರ ಜೀವನ ಹೀಗಿರಬಹುದು! ಯುದ್ಧದಿಂದ ಜರ್ಜರಿತವಾದ ಸಿರಿಯಾ ದೇಶದ ಮಂದಿ ಸಿಕ್ಕ ಸಿಕ್ಕ ಕಡೆ ವಲಸೆ ಹೋದರು. ಆಫ್ಘಾನಿಸ್ತಾನದ ಜನರು ಕೂಡಾ ಹೀಗೇ. ಆದರೆ ಯುದ್ಧದ ಪ್ರಭಾವದಿಂದ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ನಿಜಕ್ಕೂ ಸಾಧ್ಯವೇ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)