ಪೋಸ್ಟ್‌ಗಳು

ಸೆಪ್ಟೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜನುಮ ಜನುಮದ ಅನು"ಬಂದಾ"

ಮದುವೆ ಮಾಡಿಸಲು ಬರಬೇಕಾಗಿದ್ದ ಪುರೋಹಿತರಿಗೆ ಆಟೋ, ಓಲಾ, ಊಬರ್ ಯಾವುದೂ ಸಿಕ್ಕಲಿಲ್ಲ.  "ಬೆಳಗ್ಗೆ ಏಳುಗಂಟೆಗೇ ಬಂದ್ ಬಿಡಿ" ಎಂಬ ಆಹ್ವಾನವು ಭವಿಷ್ಯವಾಣಿಯಾಗಿಬಿಟ್ಟಿತ್ತು. ಬೆಳಗ್ಗೆ ಏಳುಗಂಟೆಗೇ ಎಲ್ಲ ಟಿವಿವಾಹಿನಿಗಳೂ ಭಾರತಬಂದ್ ಘೋಷಿಸಿಬಿಟ್ಟವು.  ಪುರೋಹಿತರು ಇರಲಿ, ಮದುವೆಯ ಗಂಡು ಕೂಡಾ ರೈಲ್ವೆ ಸ್ಟೇಷನ್ನಲ್ಲಿ ಪೆಚ್ಚಾಗಿ ಕೂತಿದ್ದ. ಅವನ ಪರಿವಾರದವರು ಎಲ್ಲಾದರೂ ಬ್ರೇಕ್ ಫಾಸ್ಟ್ ಸಿಕ್ಕಬಹುದೇ ಎಂದು ಹುಡುಕುತ್ತಾ ಓಡಾಡುತ್ತಿದ್ದರು. ಮದುವೆಯ ಹೆಣ್ಣು ಮತ್ತು ಅವಳ ಪರಿವಾರದವರು ನಿಮಿಷ ನಿಮಿಷಕ್ಕೂ ಕಾಲ್ ಮಾಡಿ ಯಾವಾಗ ಬರುವಿರಿ ಎಂದು ಗಂಡಿನ ಕಡೆಯವರನ್ನು ಕೇಳುತ್ತಿದ್ದಿದ್ದನ್ನು ಕೇಳಿ ಕೇಳಿ 'ಕಾಲ ಪುರುಷ'ನ ಬ್ಯಾನ್ಡ್ ವಿಡ್ತ್ ಕೂಡಾ ಲುಪ್ತವಾಗಿ '"ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎಂಬ ಮೆಸೇಜಿನ "ತಾಳಿ ಭಾಗ್ಯ"ವನ್ನೇ ಪಡೆಯಬೇಕಾಯಿತು. ತಾನು ವಧೂಪರೀಕ್ಷೆಯ ದಿನ "ದೇವ ಬಂದಾ," "ಮೆಲ್ಲ ಮೆಲ್ಲನೆ ಬಂದನೇ", "ಯಾರೇ ಬಂದವರು" ಇತ್ಯಾದಿ "ಬಂದ" ಪದಖಚಿತ ಕೀರ್ತನೆಗಳನ್ನು ಹಾಡಿದ್ದರಿಂದಲೇ ಈ ಬಂದ್ ಬಂದು ವಕ್ಕರಿಸಿತೇ ಎಂದು ವಧು ಮರುಗಿದಳು. ಕೊನೆಗೂ ಹೆಣ್ಣಿನ ಅಜ್ಜಿಗೆ ಈ ಸಮಸ್ಯೆಯ ಪರಿಹಾರ ಹೊಳೆದೇ ಬಿಟ್ಟಿತು. ಮದುವೆ ಹೆಣ್ಣನ್ನು ಲ್ಯಾಪ್ ಟಾಪ್ ಮುಂದೆ ಕೂಡಿಸಿ ಐಟಿ ಗೌರಿ ಪೂಜೆ ಮಾಡಮ್ಮಾ ಎಂದು ಬಾಸಿಂಗ ಕಟ್ಟ

ಬೆಣ್ಣೆಯ ತಿಂದಿಲ್ಲ ನಾನು

ಇಮೇಜ್
ಮೂಲ ರಚನೆ - ಸೂರದಾಸ  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  "ಮೈಯ್ಯಾ ಮೋರಿ, ಮೈ ನಹೀಂ ಮಾಖನ್ ಖಾಯೋ" ಎಂಬುದು ಸೂರದಾಸರ ಅತ್ಯಂತ ಜನಪ್ರಿಯ ರಚನೆ ಎಂದರೆ ತಪ್ಪಾಗಲಾರದು. ಕೃಷ್ಣನ ಬಾಲಲೀಲೆಯನ್ನು ಕುರುಡರಾದ ಸೂರದಾಸರು ತಮ್ಮ ಮನೋಚಕ್ಷುಗಳಿಂದ ಕಂಡು ಅವುಗಳನ್ನು ಮನೋಹರವಾಗಿ ಚಿತ್ರಿಸಿದರು. ಈ ಗೀತೆಯಲ್ಲಿ ಕೃಷ್ಣ ತಾನು ಬೆಣ್ಣೆ ಕದ್ದಿಲ್ಲವೆಂದು ಸಾಧಿಸುತ್ತಾ ಅಮ್ಮನಿಗೆ ಲಾ ಪಾಯಿಂಟ್ ಹಾಕುವುದರಲ್ಲಿ ಸುಕುಮಾರವಾದ ಹಾಸ್ಯವಿದೆ.  "ನನ್ನನ್ನು ಬೆಳಗಿನಿಂದ ಸಂಜೆಯವರೆಗೂ ಚಾಕರಿಗೆ ಅಟ್ಟಿರುತ್ತೀ! ನಾನು ಬೆಣ್ಣೆ ಯಾವಾಗ ಕದಿಯಬೇಕು?" ಎಂಬುದು ಒಂದು ಪಟ್ಟು. ಅಷ್ಟು ಗಿಡ್ಡವಾಗಿರುವ ತನಗೆ ಅಟ್ಟದ ಮೇಲಿರುವ ಗಡಿಗೆ ನಿಲುಕುವುದೇ ಎಂಬುದು ಇನ್ನೊಂದು ಪಟ್ಟು. ಗೊಲ್ಲರ ಹುಡುಗರು ತಾವು ತಿಂದು ನನ್ನ ಮೂತಿಗೆ ಬೆಣ್ಣೆ ಬಳಿದರು ಎಂಬ ಆರೋಪ! ಅದನ್ನೂ ನಂಬದಿದ್ದಾಗ "ನಾನು ಎಷ್ಟಾದರೂ ಬೇರೆಯವನಲ್ಲವೇ! ಸರಿ, ಇಗೋ, ನಾನು ಮನೆ ಬಿಟ್ಟು ಹೊರಟೆ" ಎಂಬ ಬ್ರಹ್ಮಾಸ್ತ್ರ!  ಈ ಗೀತೆಯನ್ನು ಅದೆಷ್ಟೋ ಜನ ಗಾಯಕರು ಹಾಡಿದ್ದಾರೆ. ಇಲ್ಲಿ ನಾನು ಲತಾ ಮಂಗೇಶ್ಕರ್ ಅವರು ಅದ್ಭುತವಾಗಿ ಹಾಡಿರುವ ಈ ಧ್ವನಿಮುದ್ರಿಕೆಯನ್ನು ಅನುಸರಿಸಿದ್ದೇನೆ.   

ಯಾರೊಡನೆ ಆಡಲಿ ಹೋಳಿ

ಇಮೇಜ್
ತನ್ನ ಕಡೆಯ ದಿನಗಳನ್ನು ಮೀರಾಬಾಯಿ ವೃಂದಾವನ ಮತ್ತು ದ್ವಾರಕಾ ಕ್ಷೇತ್ರಗಳಲ್ಲಿ ಕಳೆದಳು ಎನ್ನುತ್ತಾರೆ. ಕೃಷ್ಣನಿಗಾಗಿ ಪರಿತಪಿಸುತ್ತಾ ಅವಳು ಇಡೀ ಜೀವಮಾನವನ್ನೇ ಕಳೆದಳು. ವೃಂದಾವನದಲ್ಲಿ ಹೋಳಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕೃಷ್ಣ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಆಡುತ್ತಿದ್ದ  ರಾಸಲೀಲೆಯನ್ನು ಮರುಸೃಷ್ಟಿಸಲಾಗುತ್ತದೆ.  ಈ ಸಂಭ್ರಮವನ್ನು ನೋಡಿದಾಗ ಮೀರಾಳ ಮನಸ್ಸು ಕುಗ್ಗುತ್ತದೆ. ತಾನು ಯಾರೊಂದಿಗೆ ಹೋಳಿ ಆಚರಿಸಲಿ? ತಾನು ನಂಬಿದವನು ಒಂಟಿ ಬಿಟ್ಟು ಹೊರಟುಹೋದನಲ್ಲ ಎಂಬ ಅಧೈರ್ಯ ಮೂಡುತ್ತದೆ.  ಆದರೆ ತನ್ನ ದೈನ್ಯವನ್ನು ತೋಡಿಕೊಳ್ಳುವಾಗಲೂ  ಅವಳಿಗೆ ಶ್ಯಾಮನ ದರ್ಶನದ  ಆಸೆ ಬತ್ತಿಹೋಗಿಲ್ಲ.   ಮೂಲ ರಚನೆ - ಮೀರಾಬಾಯಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಯಾರೊಡನೆ ಆಡಲಿ ಹೋಳಿ ನನಗೇನು ಗೊತ್ತು ಪ್ರಿಯನು ಒಬ್ಬಂಟಿ ಹೋಗಿಹನು ಬಿಟ್ಟು ಮಾಣಿಕ್ಯ ಮುತ್ತು ಎಲ್ಲವನೂ ಬಿಟ್ಟು, ತುಳಸೀಮಣಿ ಕೊರಳಲ್ಲಿ ತೊಟ್ಟು ಊಟದೊಳು ರುಚಿಯಿಲ್ಲ ಮನೆಯಲ್ಲಿ ಮನಸಿಲ್ಲ, ಹೇಳಲೇನಿದರ ಗುಟ್ಟು ಪ್ರಿಯಕರನ ಕಾಯುತ್ತ ಉರುಳುತ್ತಿದೆ ಹೊತ್ತು ... ನಿನ್ನೊಲವು ಈಗ ಬೇರಾರದೋ ಸೊತ್ತು! ನನ್ನೊಂದಿಗೇತಕ್ಕೆ ಆಡಬೇಕಿತ್ತು?  ಇಂದೂ ಬರಲಿಲ್ಲ, ಎಷ್ಟು ದಿನವಾಯಿತು, ನನ್ನನ್ನು ಹೀಗೆ ಒಬ್ಬಳನ್ನೇ ಬಿಟ್ಟು! ಏಳುತ್ತಿದೆ ಮನದೊಳಗೆ ತಲ್ಲಣದ ಸುತ್ತು ...    ಶ್ಯಾಮನಿಲ್ಲದೆ ಮನಸು ಬಾಡಿ ಹೋಯಿತು ಹೇಗೆ ನೀರಿಲ್ಲದ ಬಳ್ಳಿ ಹೋಗುವುದೋ