ಬೆಣ್ಣೆಯ ತಿಂದಿಲ್ಲ ನಾನು

ಮೂಲ ರಚನೆ - ಸೂರದಾಸ 
ಕನ್ನಡಕ್ಕೆ - ಸಿ.ಪಿ. ರವಿಕುಮಾರ್ 

"ಮೈಯ್ಯಾ ಮೋರಿ, ಮೈ ನಹೀಂ ಮಾಖನ್ ಖಾಯೋ" ಎಂಬುದು ಸೂರದಾಸರ ಅತ್ಯಂತ ಜನಪ್ರಿಯ ರಚನೆ ಎಂದರೆ ತಪ್ಪಾಗಲಾರದು. ಕೃಷ್ಣನ ಬಾಲಲೀಲೆಯನ್ನು ಕುರುಡರಾದ ಸೂರದಾಸರು ತಮ್ಮ ಮನೋಚಕ್ಷುಗಳಿಂದ ಕಂಡು ಅವುಗಳನ್ನು ಮನೋಹರವಾಗಿ ಚಿತ್ರಿಸಿದರು. ಈ ಗೀತೆಯಲ್ಲಿ ಕೃಷ್ಣ ತಾನು ಬೆಣ್ಣೆ ಕದ್ದಿಲ್ಲವೆಂದು ಸಾಧಿಸುತ್ತಾ ಅಮ್ಮನಿಗೆ ಲಾ ಪಾಯಿಂಟ್ ಹಾಕುವುದರಲ್ಲಿ ಸುಕುಮಾರವಾದ ಹಾಸ್ಯವಿದೆ.  "ನನ್ನನ್ನು ಬೆಳಗಿನಿಂದ ಸಂಜೆಯವರೆಗೂ ಚಾಕರಿಗೆ ಅಟ್ಟಿರುತ್ತೀ! ನಾನು ಬೆಣ್ಣೆ ಯಾವಾಗ ಕದಿಯಬೇಕು?" ಎಂಬುದು ಒಂದು ಪಟ್ಟು. ಅಷ್ಟು ಗಿಡ್ಡವಾಗಿರುವ ತನಗೆ ಅಟ್ಟದ ಮೇಲಿರುವ ಗಡಿಗೆ ನಿಲುಕುವುದೇ ಎಂಬುದು ಇನ್ನೊಂದು ಪಟ್ಟು. ಗೊಲ್ಲರ ಹುಡುಗರು ತಾವು ತಿಂದು ನನ್ನ ಮೂತಿಗೆ ಬೆಣ್ಣೆ ಬಳಿದರು ಎಂಬ ಆರೋಪ! ಅದನ್ನೂ ನಂಬದಿದ್ದಾಗ "ನಾನು ಎಷ್ಟಾದರೂ ಬೇರೆಯವನಲ್ಲವೇ! ಸರಿ, ಇಗೋ, ನಾನು ಮನೆ ಬಿಟ್ಟು ಹೊರಟೆ" ಎಂಬ ಬ್ರಹ್ಮಾಸ್ತ್ರ!  ಈ ಗೀತೆಯನ್ನು ಅದೆಷ್ಟೋ ಜನ ಗಾಯಕರು ಹಾಡಿದ್ದಾರೆ. ಇಲ್ಲಿ ನಾನು ಲತಾ ಮಂಗೇಶ್ಕರ್ ಅವರು ಅದ್ಭುತವಾಗಿ ಹಾಡಿರುವ ಈ ಧ್ವನಿಮುದ್ರಿಕೆಯನ್ನು ಅನುಸರಿಸಿದ್ದೇನೆ.  





















ಇಲ್ಲ ಅಮ್ಮಾ, ಬೆಣ್ಣೆಯ ತಿಂದಿಲ್ಲ ನಾನು 

ಬೆಳಗಾದರೆ ಗೋವುಗಳ ಹಿಂದೆ ಕಾಡಿಗೆ ಅಟ್ಟುವೆ ನೀನು 
ನಾಲ್ಕು ತಾಸು ಕೊಳಲೂದುವ ಕೆಲಸ, ಬರುವಾಗ ಕೆಂಪಾದ ಬಾನು!

ನಾನೋ ಬಾಲಕ, ಕೈಗಳು ಗಿಡ್ಡ! ಅಟ್ಟವು ನಿಲುಕುವುದೇನು!
ಗೊಲ್ಲರ ಹುಡುಗರು ಮೂತಿಗೆ ಬಳಿದರು! ಅಮ್ಮ, ಅಮಾಯಕ ನಾನು!

ಇವರ ಮಾತು ಕೇಳುವೆಯಲ್ಲಮ್ಮಾ, ಎಂತಹ ಮುಗುದೆಯೇ ನೀನು!
ನಾನು ಬೇರೆಯವನೆಂದು ಸುಮ್ಮನೇ ಸಂಶಯ ಪಡುವೆಯೋ ನೀನು!

ಇದಿಗೋ ನಿನ್ನಯ ಕೋಲು, ಕಂಬಳಿ! ಸಾಕಿವುಗಳ ಸಹವಾಸ!
ಸೂರದಾಸ! ನಗುನಗುತ ಯಶೋದೆ, ಆಲಿಂಗಿಸಿದಳು ತಾನು!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)