ಮೊಗ್ಗಿನ ಮನಸ್ಸು ಮೂಲ ಹಿಂದಿ ಕವಿತೆ: ಕೈಫಿ ಆಜ್ಮಿ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಏನಾದರೂ ನುಡಿಯಿತೆ ನಿನ್ನ ಹೃದಯ? ಇಲ್ಲ, ಏನೂ ಇಲ್ಲ. ನನ್ನ ಹೃದಯಕ್ಕೆ ಏನೋ ಕೇಳಿಸಿತಲ್ಲ? ಇಲ್ಲ, ಏನೂ ಇಲ್ಲವಲ್ಲ! ಹೀಗೂ ನಡೆಯುತ್ತದೆ ಕೆಲವೊಮ್ಮೆ ಕಿವಿಗೆ ಕೇಳದ ಮೌನ ಸಂಭಾಷಣೆ! ಒಳಗೊಳಗೇ ಮೈಮುರಿಯುವ ಹೃದಯಕ್ಕೆ ಯಾರು ಹೇಳುವರು ತಿಳುವಳಿಕೆ? ಕಣ್ತೆರೆದು ಮೇಲೆದ್ದು ಸುಪ್ತ ಬಯಕೆ ದೂಡಿದರೆ ಪಾಪಕ್ಕೆ ಎಂಬ ಶಂಕೆ! ಕನಸುಗಳೆಂಬ ಅಪ್ಸರೆಯರು ಮಲಗಿರಲಿ ಹಾಗೇ ತಂಪಾಗಿದೆ ಕಣ್ಣ ರೆಪ್ಪೆಗಳ ಹಾಸಿಗೆ! ಮನಸ್ಸಿಗೆ ಹೇಳುತ್ತದೆ ಸುಳ್ಳು ಸಮಾಧಾನ ಹೊರಗಿನ ಶೃಂಗಾರ ಸಾಧನ ಮನದೊಳಗೋ ಮೌನ; ಮಂದ್ರ ಶಿಶಿರಗಾನ ಜನರಿಗೆ ಭ್ರಮೆಯ ವಸಂತಾಗಮನ! ನಗೆಮುಗುಳನ್ನು ಎಂದಾದರೂ ಕೇಳುವರೇ ಜನ - ನಗುತಿಹೆಯೋ ಅಳುತಿಹೆಯೋ ಎಂಬುದನ್ನ? * * * ಕೈ ಫಿ ಆಜ್ಮಿ ಬರೆದಿರುವ ಈ ಕವಿತೆಯನ್ನು ಒಂದು ಹಿಂದಿಚಿತ್ರದಲ್ಲಿ ಗೀತೆಯಾಗಿ ಬಳಸಿಕೊಳ್ಳಲಾಗಿದೆ. ಲತಾ ಮಂಗೇಶ್ಕರ್ ಹಾಡಿರುವ ಗೀತೆ. ನಾನು ಓದುತ್ತಿದ್ದಾಗ ರಾತ್ರಿ ಹತ್ತು ಗಂಟೆಗೆ ವಿವಿಧ ಭಾರತಿಯಲ್ಲಿ ಪ್ರಸಾರವಾಗುವ ಛಾಯಾಗೀತ್ ಎಂಬ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಯಾವುದಾದರೂ ಒಂದು ಭಾವನೆಯ ಅಥವಾ ಸಂದರ್ಭದ ಥೀಮ್ ಉಳ್ಳ ಗೀತ...