ಪೋಸ್ಟ್‌ಗಳು

ಜುಲೈ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ವಚ್ಛ ಆಗಸದ ನಡುರಾತ್ರಿ

ಮೂಲ ಇಂಗ್ಲಿಷ್ ಕವಿತೆ - ವಾಲ್ಟ್ ವ್ಹಿಟ್ ಮನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ಆತ್ಮವೇ ಇಗೋ ಬಂತು ನಿನ್ನ ಘಳಿಗೆ ಹಾರು ಮುಕ್ತವಾಗಿ ಮಾತುಗಳಿಲ್ಲದೆಡೆಗೆ ದಿನವನ್ನು ಅಳಿಸಿ ಪುಸ್ತಕ-ಕಲೆ-ಪಾಠಗಳನ್ನು ದೂರಗೊಳಿಸಿ ಹೊರಬಂದು ದೃಷ್ಟಿಸುತ್ತಾ ನಿಲ್ಲು ಕೇಳಿಸದೋ ಎಲ್ಲಿ ಒಂದೂ ಸೊಲ್ಲು, ಹರಿಯಬಿಡು ನಿನ್ನಿಷ್ಟದ ವಿಚಾರಧಾರೆಗಳು - ಇರುಳು, ನಿದ್ರೆ, ಸಾವು, ಮತ್ತು ತಾರೆಗಳು.

ಮಳೆಗಾಲದ ದಿವಸ

ಇಮೇಜ್
ಮೂಲ ಕವಿತೆ: ಎಚ್. ಡಬ್ಲ್ಯೂ. ಲಾಂಗ್ ಫೆಲೋ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ದಿನವಿಡೀ ಕವಿದ ಮೋಡ, ನಡುಕ ಹುಟ್ಟಿಸುವ ಚಳಿ,   ಒಂದೇಸಮ ಬೀಳುವ ಮಳೆ, ಹುಯ್ಲಿಡುವ ರಭಸದ ಗಾಳಿ; ಹೇಗೋ ಅಂಟಿಕೊಂಡಿದೆ ಬಳ್ಳಿ ಶಿಥಿಲ ಗೋಡೆಯಮೇಲೆ - ಗಾಳಿ ಬೀಸಿದಾಗಲೆಲ್ಲಾ  ಉದುರಿಸುತ್ತದೆ ಹಣ್ಣೆಲೆ; ದಿನವಿಡೀ ಕತ್ತಲು, ಮೇಲೆದ್ದರದು ನಿರುತ್ಸಾಹದ ಅಲೆ.  ಹೀಗೇ ನನ್ನ ಬದುಕು: ಕತ್ತಲು, ನಿರುತ್ಸಾಹ, ಚಳಿ, ಒಂದೇಸಮ ಬೀಳುವ ಮಳೆ, ಹುಯ್ಲಿಡುವ ರಭಸದ ಗಾಳಿ; ಶಿಥಿಲ ಗತಕಾಲಕ್ಕೆ ಅಂಟಿಕೊಂಡರೂ ಆಲೋಚನೆಗಳು     ಹೊಡೆತಕ್ಕೆ ಉದುರಿ ಬೀಳುವ ಯೌವ್ವನದ ಆಶಯಗಳು; ಕತ್ತಲುಮಯ  ದಿನಗಳು;  ಕಟ್ಟಿಕೊಂಡಿದೆ ನಿರುತ್ಸಾಹದ ಬಲೆ.  ಸಾಕು ದುಃಖಿ ಹೃದಯವೇ, ಇನ್ನು ಹಲುಬದಿರು . ಮೋಡಗಳ ಹಿಂದೆ ಇನ್ನೂ ಹೊಳೆಯುತ್ತಿದೆ  ನೇಸರು.  ಎಲ್ಲರಿಗೂ ದೊರೆತದ್ದೇ ದಕ್ಕಿದೆ ನಿನ್ನ ಪಾಲಿಗೂ  ಇರಬೇಕು ಮಳೆಗಾಲ ಪ್ರತಿಯೊಂದು ಬಾಳಿಗೂ   ಒಂದಷ್ಟು ದಿನ  ಕವಿಯಲೇ ಬೇಕಲ್ಲವೆ  ಕತ್ತಲೆ? (c) 2016, ಸಿ. ಪಿ. ರವಿಕುಮಾರ್

ಏನು ಹಾಡುತ್ತಿವೆ ಹಕ್ಕಿ?

ಸಂತ ಕಬೀರನ  ಈ ಭಜನೆಯನ್ನು ಅನೇಕ ಗಾಯಕರು ಹಾಡಿದ್ದಾರೆ. ವೀಣಾ ಸಹಸ್ರಬುದ್ಧೆ ಎಂಬ ಗಾಯಕಿಯ ದನಿಯಲ್ಲಿ ನೀವು ಇಲ್ಲಿ ಕೇಳಬಹುದು.  ಈ ಕವಿತೆಯಲ್ಲಿ ಭಗವಂತನು ಎಲ್ಲೆಡೆ ಕಾಣುವುದನ್ನು ಕವಿ ವಿವರಿಸುತ್ತಾನೆ. "ತಾನೇ ಮಾಲಿ, ಉಪವನವೂ ತಾನೇ, ತಾನೇ ಬಿಡಿಸುವನು ಹೂವು" ಎಂಬ ಸಾಲುಗಳಲ್ಲಿ ಸೃಷ್ಟಿ, ಸ್ಥಿತಿ ಮತ್ತು ಸಾವು  ಈ ಮೂರರಲ್ಲೂ ಭಗವಂತನ ಸಾಕ್ಷಾತ್ಕಾರವನ್ನು  ಕವಿ ನಮಗೆ ತೋರಿಸುತ್ತಾನೆ.  ಮೂಲ : ಮಹಾತ್ಮಾ ಕಬೀರ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಏನು ಹಾಡುತ್ತಿವೆ ಹಕ್ಕಿ ಘಟ್ಟಘಟ್ಟಗಳಲ್ಲಿ  ಕೇಳಿಸಿಕೋ ಎರಡು ಕ್ಷಣ ಮೌನವಾಗಿ ತಾನೇ ಕೋಲಾಗಿ ತಾನೇ ತಕ್ಕಡಿಯಾಗಿ  ತಾನೇ ಕುಳಿತು ತೂಗುತ್ತಿಹನು ನೋಡಲ್ಲಿ  ತಾನೇ ಮಾಲಿ, ಉಪವನವೂ ತಾನೇ  ತಾನೇ ಬಿಡಿಸುವನು ಹೂವು ನೋಡಲ್ಲಿ  ವನದಲ್ಲಿ ಎಲ್ಲೆಡೆಗೂ ತಾನೇ ತಾನಾಗಿ  ಮೆರೆಯುವನು ಜಡದಲ್ಲಿ ಚೈತನ್ಯದಲ್ಲಿ  ಸಾಧುಗಳೇ ಕೇಳಿ, ಹೇಳುವನು ಕಬೀರ  ಮನಸ್ಸಿನ ಗುಂಡಿ ಬಿಡಿಸುವ ಈ ವಾಣಿ