ಪೋಸ್ಟ್‌ಗಳು

ಸ್ವಂತ ಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಂಪಾದಕನ ಸ್ವಗತ

ಇಮೇಜ್
ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ  ವರದಿ ತಲುಪಿದೆ  ಬ್ರಿಟನ್ ಸುದ್ದಿಪತ್ರಿಕೆಯ ಸಂಪಾದಕನಿಗೆ.  ಕನ್ನಡಕದ ಕಣ್ಣು ಓದುತ್ತಿದೆ ವರ್ತಮಾನ.  ಅಮೃತ ಸರೋವರದ ದಡದಲ್ಲಿ ಮೃತ್ಯುವಿಗೆಲ್ಲಿದೆ ಸ್ಥಾನ? ಸತ್ತವರ ಸಂಖ್ಯೆ ನೂರೂ ಚಿಲ್ಲರೆ ಅದಕ್ಕೇಕೆ ದೊಡ್ಡಕ್ಷರದ ಬಿಗುಮಾನ? ಬೇಡ ಇದಕ್ಕೆ ಸಲ್ಲದು ಮೊದಲ ಪುಟದ ಸ್ಥಾನಮಾನ ಒಳಗಿನ ಪುಟದ ಮೂಲೆಯಲ್ಲಿರಲಿ ಸಾಕು ಜಲಿಯಾನ್ ವಾಲಾ ಉದ್ಯಾನ! ಮೊದಲ ಪುಟ ಸುದ್ದಿಯೆಂದರೆ ರಾಣಿಯ ಹೊಸಬೆಕ್ಕು ಜೊಹಾನಾ. ನಗರದಲ್ಲಿದ್ದಾಗ ರೌಲಟ್ ಕಾಯಿದೆ ಅಷ್ಟೊಂದು ಜನ ಸೇರಿದ್ದೇ ಅಪಮಾನ! ಡಯರ್ ಮಾಡಿದ್ದು ಒಳ್ಳೆಯದೇ ಹೆಚ್ಚಿಕೊಳ್ಳುತ್ತಿದ್ದಾರೆ ಕಂದುಜನ ದಿನದಿನಾ! ನೆನ್ನೆ ಖಜಾನೆಗೆ ಲಗ್ಗೆ ಇಡುವಷ್ಟು ಧಾರ್ಷ್ಟ್ಯ! ಒಬ್ಬ ಬ್ರಿಟಿಷ್ ಹೊಂದಿದ್ದಾನೆ ಅವಸಾನ! ಗಾಯಗೊಂಡಿದ್ದಾರೆ ರಾಣಿಯ ಇಬ್ಬರು ಸೇವಕರು! ಈ ಗಾಂಧಿ ಆಗಿಕೂತಿದ್ದಾನೆ ದೊಡ್ಡ ಯಜಮಾನ!! ಲೋ ಯಾರಲ್ಲಿ! ತೊಗೊಳ್ಳಿ ಎಂಟನೇ ಪುಟಕ್ಕೆ ಅಳವಡಿಸಿ ಈ ಜುಜುಬಿ ವರದಿಯನ್ನ (c) ಸಿ. ಪಿ. ರವಿಕುಮಾರ್, ಏಪ್ರಿಲ್ ೨೦೨೧

ಮಧ್ಯಾಹ್ನದ ಮಳೆ (ಮಕ್ಕಳ ಪದ್ಯ)

ಇಮೇಜ್
ಕತ್ತಲಾಗುತಿದೆ ನಡುಮಧ್ಯಾಹ್ನ ಸೂರ್ಯನೆಲ್ಲಿ ಹೋದನು ಹೇಳಮ್ಮಾ ಮೋಡಗಳಿವು ಬಂದವು ಎಲ್ಲಿಂದ? ಒಮ್ಮೆಲೇ ಸೂರ್ಯನಿಗೇತಕೆ ಬಂಧ! ಬ್ರೇಕಿಂಗ್ ನ್ಯೂಸ್ ಬರುತಿದೆಯೇನಮ್ಮಾ ಹಚ್ಚು ಟಿವಿ ಹಚ್ಚು! ನಡೆಯುತ್ತಿದೆಯೇನಮ್ಮಾ ಯುದ್ಧ? ಏನದು ಬಾನೊಳು ಗುಡುಗುಡು ಶಬ್ದ! ನೋಡಮ್ಮಾ ಈ ರೊಯ್ಯನೆ ಗಾಳಿ ನುಗ್ಗುವ ಹಾಗೆ ಸೊಕ್ಕಿದ ಗೂಳಿ ಗುಟುರು ಹಾಕಿ ಬರುತಿದೆ ಸನ್ನದ್ಧ! ಮುಚ್ಚು ಕದವ ಮುಚ್ಚು! ಧೋ ಧೋ ಮಳೆ  ಸುರಿಯುತ್ತಿದೆ ಹೇಗೆ ಮರಗಳೆಲ್ಲ ಉಯ್ಯಾಲೆಯ ಹಾಗೆ ತೂಗಾಡುತ್ತಿವೆ ಅತ್ತಿಂದಿತ್ತ! ಗಿಡಗಳು ಬಾಗಿವೆ ಸೊಟ್ಟಂಪಟ್ಟ! ಕಾಣದು ಏನೂ ಕಿಟಕಿಯ ಹೊರಗೆ, ಎಲ್ಲಿ ದೀಪ ಸ್ವಿಚ್ಚು! ಕೊನೆಗೂ ನಿಂತಿತು ಮಳೆ ಸುರಿಸುರಿದು ಶುಭ್ರಾಕಾಶವು ಬರಿದೋ ಬರಿದು ಶಾಂತವಾಗಿಹವು ಗಿಡಮರಬಳ್ಳಿ ಸೂರ್ಯ ನಗುತಿಹನು ಆಗಸದಲ್ಲಿ ಏಳು ಬಣ್ಣಗಳ ಕಮಾನು ತೆರೆದು! ಹೊರಡುವೆ, ಆಟದ ಹೊತ್ತು! ಸಿ. ಪಿ. ರವಿಕುಮಾರ್ 

ನ್ಯೂಟನ್, ಬುದ್ಧ, ಮತ್ತು ಮರ

ನ್ಯೂಟನ್, ಬುದ್ಧ, ಮತ್ತು ಮರ ^^^^^^^^^^^^^^^^^^^^^^^^^^^^ ಒಬ್ಬನು ಹೋಗಿ ಕೂತ ಬೋಧಿ ಮರದ ಕೆಳಗೆ ಪೂರ್ಣಿಮೆಯ ರಾತ್ರಿ ಮಲಗಿರುವಾಗ ಧಾತ್ರಿ ಇರದಿದ್ದರೂ ಸದ್ದು ನಿದ್ದೆ ಬರದೆ ಎದ್ದಿದ್ದು ಆಸೆಯೇ ದುಃಖಕ್ಕೆ ರೂಟು ಎಂದೇನೇನೋ ನೂರೆಂಟು ರಚಿಸಿ ಸಮೀಕರಣ ತೊಡಿಸಿದ ಆಭರಣ ನಮ್ಮ ನಿಮ್ಮ ತಲೆಗೆ ಬೋಧಿ ಮರದ ಕೆಳಗೆ ಇನ್ನೊಬ್ಬ ಹೋಗಿ ಕೂತ ಸೇಬಿನ ಮರದ ಕೆಳಗೆ ಸೇಬು ತಿನ್ನುವ ಆಸೆ ಒಳಗೊಳಗೇ ಮೇಲೇಳಲು ಮಾತ್ರ ಬಿಡದು ಆಲಸಿಕೆ ಪ್ಲೇಗ್ ಹರಡಿದ್ದ ಕಾಲಮಾನ ಲಾಕ್ ಡೌನ್ ಪರಿಣಾಮ ರದ್ದಾಗಿ ಸಾರೋಟು ಲೈಸೆನ್ಸು ಎಲ್ಲೆಲ್ಲೂ ಶಾಂತಿ ಸೈಲೆನ್ಸು ಹೀಗಿರುವಾಗ ಸದ್ದಾಗಿ ಟಪ್ ಎಂದು ಹಣ್ಣು ತಲೆಯಮೇಲೇ ಬಿದ್ದಿತೊಂದು! ಏನಾಯಿತೋ ತಲೆಯಲ್ಲಿ ಪರಿವರ್ತನೆ ವಿಚಿತ್ರವಾಯಿತು ಐಸಾಕನ ವರ್ತನೆ ಫೋರ್ಸು ಗ್ರಾವಿಟಿ ಎಂಜಿ ಎಂದು ಏನೇನೋ ಬಡಬಡಿಸಿ ಮಡದಿ "ಯಾವಾಗ ಬರುವುದೋ ರೇಷನ್ನು?" ಎಂದರಿವನು "ಬಂದಾಗ ಆಕ್ಸಲರೇಷನ್ನು, ಯಾವುದೂ ಬಾರದು ತನ್ನಿಂದ ತಾನೇ ತಡೆಯಲೂ ನಡೆಸಲೂ ಶಕ್ತಿ ಇರಬೇಕು ಕಾಣೇ" ಎಂದು ಆಕೆಗೂ ತನ್ನ ಕನ್ಫ್ಯೂಷನ್ನು ಹರಡಿಬಿಡುತ್ತಿದ್ದನಂತೆ ನ್ಯೂಟನ್ನು! ಪಾಪ ಇನ್ನೇನು ಮಾಡಿಯಾಳು ಬಡಪಾಯಿ ಹೆಣ್ಣು ನೀಡದೆ ಈಕ್ವಲ್ ಅಂಡ್ ಆಪೋಸಿಟ್ ರಿಯಾಕ್ಷನ್ನು! ಕಂಡುಹಿಡಿಯುವ ಮುನ್ನ ಪ್ಲೇಗ್ ಲಸಿಕೆ ಚುಚ್ಚಿಬಿಟ್ಟನು ಎಲ್ಲರಿಗೂ ಕ್ಯಾಲ್ಕ್ಯುಲಸಿಕೆ! ಒಂದೆರಡಲ್ಲ ಚಲನಕ್ಕೆ ಮೂರು ಸೂತ್ರಗಳು ಯೂ, ವೀ, ಏ, ಟೀ ಎಂಬ ವಿಚಿತ್ರ ಪಾತ್ರಗಳು! ತುಂಬಿಹೋದ ನಮ್ಮ...

ಬೂರ್ಶ್ವಾ

ಬ್ರೆಡ್ ಕದ್ದನೆಂಬ ಅಪರಾಧಕ್ಕಾಗಿ ಜಾನ್ ವಾಲ್ಜಾನ್ ಅನುಭವಿಸಿದ ವರ್ಷಗಟ್ಟಲೆ ಸೆರೆವಾಸ ಮತ್ತು ತಪ್ಪಿಸಿಕೊಂಡಾಗ ಬೆಂಬಿಡದ ಪೊಲೀಸ್ ಅಧಿಕಾರಿ ಜಾವೇ ಕಣ್ತಪ್ಪಿಸಿ ಓಡಾಡುವ ದುಸ್ಸಾಹಸ. ಮಂದಿಗೆ ಬ್ರೆಡ್ ಸಿಕ್ಕದ ಕಾಲದಲ್ಲೂ ಬೂರ್ಶ್ವಾ ಶ್ರೀಮಂತರು ನಡೆಸುತ್ತಿದ್ದರು ಕೇಕ್ ಮತ್ತು ವೈನ್ ಗಮ್ಮತ್ತು. ಮೇರಿ ಅಂಟಾಯ್ನೇ ಕೇಳಿದ ಪ್ರಶ್ನೆಯಿಂದ ಉದ್ರಿಕ್ತ ಜನ ಗಿಲೊಟಿನ್ ಗರಗಸಕ್ಕೆ ದೂಡಿದರು ಅವಳ ನಾಜೂಕು ಕತ್ತು. ಯಾರೋ ಅನ್ನುತ್ತಾರೆ ದಿನಗೂಲಿ ಜನರಿಗೆ ತಿನ್ನಲು ಗತಿಯಿಲ್ಲ. ಇನ್ನೊಬ್ಬರು ಶೇರ್ ಮಾಡುತ್ತಾರೆ ಇದು ನಾನೇ ಮನೆಯಲ್ಲಿ ಮಾಡಿದ ರಸಗುಲ್ಲ. ಸಮೋಸಾ ವಡೆ ಕಾಶಿ ಹಲ್ವಾ. ನಾವೆಲ್ಲರೂ ಹೀಗೆ ಬೂರ್ಶ್ವಾ ಆಗಿಬಿಟ್ಟಿದ್ದೇವಲ್ವಾ. ಇರಲಾರದು ನಮಗೆ ಗಿಲೊಟಿನ್ ಆಪತ್ತು ಆದರೆ ಹೇಗಿದ್ದೀತು ಕತ್ತರಿಸಿದರೆ ನಮ್ಮೆಲ್ಲರ ನೆಟ್ಟು. ಸಿ. ಪಿ. ರವಿಕುಮಾರ್

ಲಾಕ್ ಡೌನ್ ಶಾಪ

ಮಾಲಿನಲ್ಲಿ ಅದೆಷ್ಟು ಮಾಡಿದೆವು ಶಾಪ ವೀಕೆಂಡಿನಲ್ಲಿ ತುಂಬಿ ತುಂಬಿ ತಂದೆವು ಪಾಪ ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡ ಪ್ರತಿ ಇಂದ್ರಚಾಪ ಆನ್ಲೈನ್ ಖರೀದಿಯಂತೂ ಇಪ್ಪತ್ನಾಕು ಬಾರ್ ಏಳು ಹಚ್ಚಿಕೊಂಡೆವು ಕ್ಲಿಕ್ ಮಾಡಿ ತರಿಸುವ ಗೀಳು ಮನೆಗೇ ಹರಿಯಿತು ಕಾಮಧೇನುವಿನ ಹಾಲು ಮನೆಗೆ ಬಂದ ಪೀಟ್ಸಾ ತಣ್ಣಗಾಗಿದೆ ಎಂದು ಮೂಗು ಮುರಿದೆವು ಬೈದಾಡಿಕೊಂಡು ಡ್ರೋನ್ ತರಲಾರದೇ ಹಾರುತ್ತಾ ಬಂದು? ಓಲಾಡಿ ಹೊರಟೆವು ಓಲಾ ಊಬರುಗಳಲ್ಲಿ ಕಬಳಿಸಿದವು ನಗರಗಳು ಒಂದೊಂದೇ ಹಳ್ಳಿ ಹಬ್ಬಿದಷ್ಟೂ ರಿಸಾರ್ಟ್ ಕನಸುಗಳ ಬಳ್ಳಿ. ತಟ್ಟಿಬಿಟ್ಟಿತು ನಮಗೆ ಪ್ರಾಣಿಪಕ್ಷಿಗಳ ಶಾಪ ತೋಡಿಕೊಂಡೆವು ನಮಗಾಗಿ ನಾವೇ ಕೂಪ. ಸಿ.ಪಿ. ರವಿಕುಮಾರ್

ಲಾಕ್ ಡೌನ್ ಸಡಿಲ

ಈಗ ಹೊರಗಡೆ ಓಡಾಡುವುದು ಸುಲಭವಲ್ಲ ಗೂಗಲ್ ಅಕ್ಕನಿಗೂ ರಸ್ತೆ ತಿಳಿಯುವುದಿಲ್ಲ ಕೆಲವು ದಾರಿಗಳು ಮುಚ್ಚಿವೆ ಕೆಲವು ಅರ್ಧ ಮಾತ್ರ ಕಣ್ಬಿಚ್ಚಿವೆ ಜನ ಹೇಗೆ ಗಾಡಿ ಓಡಿಸುತ್ತಿದ್ದಾರೋ ಕಾಣೆ ಹೇಗೋ ಒಪ್ಪಿಕೊಂಡಿದ್ದಾರೆ ಬದಲಾವಣೆ ನಮ್ಮ ಜನರಿಗಿಲ್ಲ ಮಾಸ್ಕ್ ತೊಟ್ಟು ಅಭ್ಯಾಸ ಕೆಲವರು ಹಾಗೇ ಹೊರಬಂದಿದ್ದಾರೆ ರಾಜಾರೋಷ ಕೆಲವರ ಧ್ವಜ ಜಾರಿದೆ ಅರ್ಧದಷ್ಟು ಕೆಳಗೆ ಕೆಲವರಿಗೆ ಮಾತ್ರ ಬಾಯ್ಮುಚ್ಚುವಷ್ಟು ಸಲುಗೆ ಜನ ಹೇಗೋ ಉಸಿರಾಡುತ್ತಿದ್ದಾರೆ ಈಗಲೂ ಮೂಗು ಬಾಯಿ ಲಾಕ್ ಡೌನ್ ಮಾಡಿದರೂ ಬಾಗಿಲು ಇರಾಕ್, ಸಿರಿಯಾಗಳಲ್ಲಿ ಬಾಂಬ್ ದಾಳಿಗೆ ಹೆದರಿ ಜನ ಹೇಗೆ ಬದುಕುವರೋ ದಿನದಿನ! ಧರ್ಮಾಂಧನ ಎದೆ ಕರೋನಾಗಿಂತ ಕಠಿಣ ಸಿಡಿಯುವುದು ಯಾವುದೋ ಅನಿರೀಕ್ಷಿತ ಕ್ಷಣ ಯಾವ ಮುಖವಾಡವೂ ನೀಡಲಾರದು ರಕ್ಷೆ ಎಷ್ಟು ಕೈ ತೊಳೆದರೇನು ಯಾರ ಪಾಪಕ್ಕೆ ಬಾಂಬ್ ದಾಳಿಯ ನಂತರ ಹೊರಗೆ ಬಂದಂತೆ ಜನ ಅಳುಕುತ್ತಿದ್ದರೂ ತಾಳಲಾಗದೇ ಬಂಧನ ಹೊರಗೆ ಇಣುಕುತ್ತಿದ್ದಾರೆ ಮೆಲ್ಲಮೆಲ್ಲನೆ ಮಂದಿ ಬಹುಮೆಲ್ಲನೆ ಕುಂಟುತ್ತಿದೆ ಬದುಕಿನ ಜಟಕಾ ಬಂಡಿ. ಮುಖವಾಡವಿದ್ದರೂ ಗುರುತಿಸಿ ಮುಗುಳ್ನಗೆ ಹೆಚ್ಚು ಮಾತಿಲ್ಲ ಹೊರಗೆ, ಎಲ್ಲ ಒಳಗೊಳಗೇ. "ತೆರೆದ ಬಾಗಿಲು ನಾನು, ಸರ್ವಋತು ಬಂದರು." ವೈಶಾಖ ಕಳೆದರೂ ವರ್ಷಋತು ಬಂದರೂ. ಬರಲಿ ಏನೇ ಪಾಲಿಗೆ ಅದುವೆ ಪಂಚಾಮೃತ ಎನ್ನುತ್ತ ಜನಗಣವು ಬಿಡದೆ ಜೀವನವೃತ ಮುನ್ನಡೆಯುತ್ತಿದೆ ಹೇಗೋ ನಮ್ಮ ಮಹಾನ್ ಭಾರತ ಗತಿ ನಿಧಾನವಾದರೇನು ಯಾರಿಗಿಲ್...

ಲಾಕ್ ಡೌನ್ ಇಲ್ಲದ ಹಕ್ಕಿಗಳು

ಇಮೇಜ್
ಹೊರಗಡೆ ಮರದಲಿ ಅಮ್ಮಾ ನೋಡು ಹಕ್ಕಿಯೊಂದು ಕಟ್ಟಿದೆ ಹೊಸ ಗೂಡು ಬಿಡದೆ ಹಾಡುವುದು ಯಾವುದೋ ಹಾಡು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಹೊರಗಡೆ ಮರದಲಿ ಅಮ್ಮಾ ನೋಡು ಎಲೆಗಿಂತಲೂ ಹೆಚ್ಚಾಗಿದೆ ಹೂವು ದಟ್ಟಹಳದಿ, ನೀಲಿ, ತಿಳಿಗೆಂಪು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನೋಡು ಹಕ್ಕಿಗಳು ಬಡಿಯುತ ರೆಕ್ಕೆ ಪಟಪಟ ಹಾರುತ್ತವೆ ಮೇಲಕ್ಕೆ ಲಾಕ್ ಡೌನ್ ಇಲ್ಲವೇ ಇಲ್ಲ ಇವಕ್ಕೆ! ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಬಂದಿರುವಾಗ ಸಕ್ಕರೆ ನಿದ್ದೆ ಕನಸೊಳು ಕಾರ್ಟೂನ್ ನೋಡುತ್ತಿದ್ದೆ ಇವುಗಳ ಕಲಕಲ ಕೇಳುತ ಎದ್ದೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಯಾಕಮ್ಮಾ ಹಕ್ಕಿಗಳಿವು ಹೀಗೆ ಕೂಡದೆ ಸುಮ್ಮನೆ ಒಂದೇ ಕಡೆಗೆ ಹಾರುತ್ತಿರುವುವು ದಿನಾ ಬೆಳಗ್ಗೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನಿನ್ನ ಹಾಗೆ ಹಕ್ಕಿಗಳೂ ಪುಟ್ಟ ಬರುವೆಯಲ್ಲ ತಿಂಡಿಯ ಹುಡುಕುತ್ತ ಹಾಗೇ ಹುಡುಕುತ್ತವೆ ಹುಳು ಹುಪ್ಟ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ತಿಂಡಿ ಎಂದ ಕೂಡಲೇ ನೆನಪಾಯ್ತು ಏನೋ ಘಮಘಮ ಬರ್ತಾ ಇತ್ತು ಮೈಸೂರ್ ಪಾಕೇನಮ್ಮ ಇವತ್ತು? ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! - ಸಿ.ಪಿ. ರವಿಕುಮಾರ್, ಏಪ್ರಿಲ್ ೨೫, ೨೦೨೦

ಲಾಕ್ ಡೌನ್ ಉದಯ

ಇಮೇಜ್
ಬೆಳ್ಳಂಬೆಳಗ್ಗೆ ಮಳೆ ಬಲು ಜೋರು ಏಳಲು ಯಾತಕ್ಕೋ ಬೇಜಾರು ಮಲಗುವೆನಮ್ಮಾ ಬೆಚ್ಚಗೆ ಹೊದ್ದು ಮಾಡಲಾದರೂ ಏನಿದೆ ಎದ್ದು ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು ಈಗ ಯಾವ ಎಕ್ಸಾಮ್ ಇದೆ ಹೇಳು ದೇವರು ವರ ಕೊಟ್ಟರೂ ಪೂಜಾರಿ ಕೊಡದ ಹಾಗೆ ನೀನೇತಕೆ, ವೈರಿ, ಏಳೋ ಏಳೋ ಏಳೋ ಬೇಗ ರಿಕಾರ್ಡು ಹಚ್ಚುವೆ ಒಂದೇ ರಾಗ! ಏನು ಮಾಡಲಿದೆ ನಾ ಮೇಲೆದ್ದು ಹೊರಗಡೆ ಹೋದರೆ ಕೊಡುವರು ಗುದ್ದು ಬೋರಾಗಿದೆ ಮನೆಯೊಳಗೇ ಇದ್ದು ಕೋವಿಡ್ ಕರೋನಾ ಎರಡರದೇ ಸದ್ದು ಸರಿಯೇ ಕಣೋ ಹೇಳುವುದೂ ನೀನು ಬೆಚ್ಚಗೆ ಹೊದ್ದು ಮಲಗುವೆ ನಾನೂ ಅಪ್ಪನೇ ಮಾಡಲಿ ಇಂದಿನ ತಿಂಡಿ ಮಲಗಲು ಸೂಚಿಸುತಿದೆ ಈ ಥಂಡಿ ಅಯ್ಯೋ ಬೇಡಮ್ಮಾ ಇದೋ ಎದ್ದೆ ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ ನೀನೇ ಮಾಡು ಪೂರಿಸಾಗು ರೆಡಿಯಾದಾಗ ನನ್ನನು ಕೂಗು ಅಷ್ಟರವರೆಗೂ ಮಲಗುವೆ ನಾನು ಸವಿಯುತ್ತಾ ನಿದ್ದೆಯ ಜಾಮೂನು - ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಎಂಜಲು

ಇಮೇಜ್
ಎಂಜಲಿಗೇಕೆ ಹೆದರುವಿರಿ, ಎಂಜಲು ಬದುಕಿನಲ್ಲಿ? ನೀವು ಕುಡಿಯುವ ಹೊಳೆಯ ನೀರನ್ನು ಅಲ್ಲೆಲ್ಲೋ ಎಂಜಲು ಮಾಡಿದೆ ಒಂದು ಸಾರಂಗ, ಒಂದು ಕಾಡೆಮ್ಮೆ, ಒಂದು ಆನೆ. ಪಾಲಿಥೀನ್ ಬ್ಯಾಗಲ್ಲಿ ಬಂತೆಂದು ಹಾಲೇನೂ ಪರಿಶುದ್ಧವಲ್ಲ ಅಮ್ಮನ ಕೆಚ್ಚಲಿಗೆ ಬಾಯಿಟ್ಟು ಎಂಜಲು ಮಾಡಿದೆ ಕರು. ನೀಟಾಗಿ ಪ್ಯಾಕೇಜ್ ಮಾಡಿದ ಬೇಳೆ ಕಾಳನ್ನು ಹೊಲದಲ್ಲಿ ರುಚಿ ನೋಡಿ ಎಂಜಲು ಮಾಡಿದೆ ಒಂದು ಹಕ್ಕಿ. ನೀವು ಆನಂದದಿಂದ ಮೆಲ್ಲುವ ಪಾನಿಪೂರಿಯ ಹಿಟ್ಟಿನ ರುಚಿ ನೋಡಿದೆ ಜಿರಳೆ ಎಂಜಲು ಮಾಡಿದೆ ಇಲಿ. ಹೆದರಿಕೆ ಏಕೆ ಎಂಜಲಿಗೆ ಎಂಜಲಿನಲ್ಲಿರಬಹುದು ವೈರಾಣು ಎಂದೇ? ಮೈಕ್ರೋಸ್ಕೋಪಿನಲ್ಲಿ ನೋಡಿದರೆ ಕೋಟಿಗಟ್ಟಲೆ ಕಾಣುತ್ತವೆ ಜೀವಿಗಳು, ಎರಡೇ, ಒಂದೇ! ಕಂಡಾಗ ತಿನ್ನುವ ಆಸೆಯಾದರೂ ದ್ರಾಕ್ಷಿ ಗೊಂಚಲು ಬೇಡ ಎನ್ನುತ್ತಿರುವಿರಿ - ನೆನೆದು ಯಾರದೋ ಎಂಜಲು! ಪಾಪಗಳನ್ನು ತೊಳೆಯುವ ಗಂಗೆ ಬರುತ್ತಾಳಲ್ಲ ನಿಮ್ಮ ಮನೆಗೆ! ಅಡುಗೆ ಮನೆಯಲ್ಲಿ ಹುಡುಕಿ ನೋಡಿ ಸಿಕ್ಕುತ್ತದೆ ಉಪ್ಪಿನ ಜಾಡಿ ಬೆಚ್ಚನೆ ನೀರಿನಲ್ಲಿ ಉಪ್ಪು ಬೆರೆಸಿ ತೊಳೆಯಿರಿ ಹಣ್ಣು ಕೊಟ್ಟ ಭೂಮಿಯನ್ನು ಸ್ಮರಿಸಿ ಉಪ್ಪು ನೀಡಿದ ಕಡಲನ್ನು ನೆನೆದು ಉಜ್ಜಿ ತೊಳೆದರೆ ನಾಶ ಎಲ್ಲ ಕೆಟ್ಟಕ್ರಿಮಿಜೀವಕೋಶ ತೊಳೆದರೆ ಶುದ್ಧಜಲದಲ್ಲಿ ಮತ್ತೊಮ್ಮೆ ನೈವೇದ್ಯಕ್ಕೆ ಸಿದ್ಧ, ಗೊಂಚಲಿನ ಹೆಮ್ಮೆ. ದ್ರಾಕ್ಷಿಯೊಂದಿಗೆ ನಿಮ್ಮ ಭೀತಿಯನ್ನೂ ಒಂದಿಷ್ಟು ತೊಳೆದುಬಿಡಿ ಉಪ್ಪು ನೀರಿನಲ್ಲಿಟ್ಟು. --ಸಿ. ಪಿ. ರವಿಕುಮಾರ್

ಹೆದರಬೇಕೇ ಕೊರೊನಾವೈರಸಕ್ಕೆ (ಗಜಲ್)

ಸಿ.ಪಿ. ರವಿಕುಮಾರ್ ಯೋಚಿಸುತ್ತೇನೆ, ಹೆದರಬೇಕೇ  ಕೊರೊನಾ ವೈರಸಕ್ಕೆ ಹೆದರಬೇಕಾಗಿರುವುದು ಕಾರಣವಿಲ್ಲದ ವಿರಸಕ್ಕೆ ಬಂದೀತು ಇಂದಲ್ಲ ನಾಳೆ ಒಂದು ಆಂಟಿಬಯಾಟಿಕ್ ಯಾವ ಮದ್ದಿದೆ ಹೇಳಿ ಕಾರಣವಿಲ್ಲದ ವಿರಸಕ್ಕೆ ಯಾರು ಹರಡಿ ಹಂಚಬೇಕೋ ಪ್ರೀತಿಯ ರಸವನ್ನು ಧರ್ಮಗುರುಗಳು ಬೆರೆಸುತ್ತಾರೆ ಆಸಿಡ್ ರಸಕ್ಕೆ ಹೆದರಿಸುತ್ತೀ ನೀನು ಹಣದ ಉಬ್ಬರ ನಿರುದ್ಯೋಗಗಳ ಬಗ್ಗೆ ಒಳಗೆ ಟೊಳ್ಳಾದ ಬಳ್ಳಿಯೇ ಬೀಳುವುದು ಗಾಳಿಯ ರಭಸಕ್ಕೆ ಹೆದರುತ್ತೀ ನೀನು ಭೂತಪಿಶಾಚಿಗಳಿಗೆ, ದುಷ್ಟಗ್ರಹಗಳಿಗೆ ಒಪ್ಪಿಸಿಕೊಳ್ಳುವೆ ನಿನ್ನನ್ನೇ ಒಡೆದು ಆಳುವ ಅಂಕುಶಕ್ಕೆ ಎಷ್ಟು ಸುಲಭ ದ್ವೇಷಿಸುವುದು ನಿನ್ನವರನ್ನು ನೀನು ಹೆದರುತ್ತೇನೆ ನಾನು ಕಾರಣವಿಲ್ಲದ ಈ ದ್ವೇಷಕ್ಕೆ #ಗಜಲ್

ರಂಜಕ (ಕವಿತೆ)

ರಂಜಕ ಸಿ.ಪಿ. ರವಿಕುಮಾರ್ ಆ ಸಿನಿಮಾದಲ್ಲಿ ಹುಡುಗ ಹುಡುಗಿಯನ್ನು ಪ್ರೇಮಿಸಿದ ಹುಡುಗಿ ಅದೇ ಹುಡುಗನನ್ನು ಪ್ರೇಮಿಸಿದಳು ಅವರು ಮದುವೆಯಾಗಲು ಯಾರದ್ದೇ ತಕರಾರಿರಲಿಲ್ಲ ಯಾವ ಖಳನಾಯಕನೂ ಇರಲಿಲ್ಲ ಸಿನಿಮಾ ಸಪ್ಪೆಯಾಗಿತ್ತು ಅವನಿಗೆ ಸೇರಲಿಲ್ಲ ಆ ಪತ್ರಿಕೆಯಲ್ಲಿ ಕೇವಲ ವರ್ತಮಾನ ಪ್ರಕಟವಾಗುತ್ತಿತ್ತು ಚರಿತ್ರೆಯ ಪುನರಾವಲೋಕನವಿಲ್ಲ ಭವಿಷ್ಯದ ಕಾಳಜಿಗಳಿಲ್ಲ ಇದ್ದದ್ದನ್ನು ಇದ್ದಹಾಗೇ ಬರೆಯುತ್ತಿದ್ದರು ಅವನು ಪತ್ರಿಕೆಯನ್ನು ಓದಲಿಲ್ಲ ಟಿವಿ ಹಚ್ಚಿದರೆ  ಯಾವ ವಾಗ್ವಾದಗಳೂ ಇಲ್ಲ ಶಾಸ್ತ್ರೀಯ ಸಂಗೀತ, ಭರತನಾಟ್ಯ ಕೃಷಿಕರಿಗೆ ಸಲಹೆ ಏನೋ ಗಹನ ಚರ್ಚೆ ಅವನಿಗೆ ಭಾರವೆನ್ನಿಸಿ ಆರಿಸಿದ. ಹೊರಗೆ ಬಂದು ಸೆಲ್ಫೀ  ಸೆರೆ ಹಿಡಿಯಲು ಪ್ರಯತ್ನಿಸಿದ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಫಿಲ್ಟರ್ ಯಾವುದೂ ಇರಲಿಲ್ಲ ಕಂಡದ್ದನ್ನು ಕಂಡಹಾಗೆ ಸೆರೆಹಿಡಿಯುವ ಕ್ಯಾಮೆರಾ ಅವನಿಗೆ ಇಷ್ಟವಾಗದೆ ಮುನ್ನಡೆದ ಪಾರ್ಕಿನಲ್ಲಿ ಕವಿಗೋಷ್ಠಿಯಲ್ಲಿ ಯಾರೂ  ರಾಜಕೀಯ ಕವಿತೆಗಳನ್ನು ಓದಲಿಲ್ಲ  ಘೋಷಣೆ ಕೂಗಲಿಲ್ಲ ಎಲ್ಲರೂ ಹೂವು, ಬೆಟ್ಟ, ಮರ  ಮತ್ತು ಪ್ರೇಮದ ಕವಿತೆಗಳನ್ನು ಓದುತ್ತಿದ್ದರು ಚಪ್ಪಾಳೆಗಳು ಜೋರಾಗಿರಲಿಲ್ಲ ವರದಿಗಾರರೂ ಇರಲಿಲ್ಲ ಅವನು ನಡುವೆಯೇ ಎದ್ದು ಮನೆಗೆ ಬಂದ ತಾಯಿ ಬಡಿಸಿದ ಊಟದಲ್ಲಿ ಇದ್ದದ್ದು ಅತಿರಂಜಿತವಲ್ಲದ  ಮನೆಯ ಹಿತಮಿ...

ಇನ್ನೂ ಹತ್ತು ಲಿಮರಿಕ್

ಇನ್ನೂ ಹತ್ತು ಲಿಮರಿಕ್  ಸಿ. ಪಿ. ರವಿಕುಮಾರ್  ೧. ಡಬ್! ಹಾಲಿವುಡ್ ಸಿನಿಮಾದಲ್ಲಿ ಹಾರರ್ ದೃಶ್ಯ ಕನ್ನಡಕ್ಕೆ ಅನುವಾದಿಸಿದ ಸ್ಕ್ರೀನ್ ರೈಟರ್ ಶಿಷ್ಯ ಕಟ್ ಎಂದು ಕೂಗಿದರು ನಿರ್ದೇಶಕರು ಒಮ್ಮೆಲೇ "ಎದೆ ಡಬ್ ಡಬ್ ಅಂತಿದೆ ಅಂತ ಬರೀಬಹುದೇನಲೇ? ಡಬ್ಬಿಂಗ್ ಇದೆಯೋ ಇಲ್ವೋ ಮೊದ್ಲು ತಿಳ್ಕೋ ವಿಷ್ಯಾ" ೨. ಅನುವಾದ  ಇದ್ದಳೊಬ್ಬಳು ಅನುರೂಪಾ ಅಂತ ಅಟೆಂಡ್ ಮಾಡಿದಳು ಅನುವಾದ ಕಮ್ಮಟ ಈಗ ಗಂಡನ ಜೊತೆಗೆ ಬರಿಯ ವಾಗ್ವಾದ ಅವನು "ಮಸಾಲೆ" ಎಂದರೆ ಇವಳು "ಬೇಡ, ಸಾದಾ" ಇದು ಅನು-ವಾದ ಕಮ್ಮಟದ ಪುಟ್ಟ ಅಪಘಾತ ೩. ಡಬ್ಬಿ  ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಲೈನು ನಿಂತಿದ್ದನು ಕವಿಯೊಬ್ಬ ಕ್ಯೂನಲ್ಲಿ ತಾನೂ ಸರದಿ ಬಂದಾಗ ತಟ್ಟೆಯಲ್ಲಲ್ಲದೇ ಡಬ್ಬಿಯಲ್ಲೂ ಕೊಂಡೊಯ್ದ ನಾಲಕ್ಕು ಫೇಡೆ "ಡಬ್ಬಿಂಗಿಗೆ ಈಗ ಪರವಾಗಿದೆ ಕಾನೂನು" ೪. ಜಾಹೀರಾತು  ಕುಡಿತದ ಸಮಸ್ಯೆಯೇ? ಚಿಂತಿಸದಿರಿ! ನಮ್ಮಲ್ಲಿ ಪರಿಹಾರವಿದೆ, ಡೋಂಟ್ ವರಿ! ಕೆಳಗೆ ಕೊಟ್ಟಿದೆ ನೋಡಿ ಮೊಬೈಲ್ ಸಂಖ್ಯೆ ವಾರಕ್ಕೆ ಏಳು ದಿನ ಇಪ್ಪತ್ನಾಲಕ್ಕು ಗಂಟೆ ಕಾಲ್ ಮಾಡಿದರೆ ಮನೆಗೇ ಮಾಡುವೆವು ಡೆಲಿವರಿ" ೫. ಸಂತಾ  ಸಂತಾಸಿಂಗ್ ಮನೆಗೆ ಬಂದಾಗ ಬಂತಾ ತನ್ನ ಇಂಗ್ಲಿಷ್ ಸ್ವಲ್ಪ ತೋರಿಸೋಣ ಅಂತಾ "ಐ ಆಮ್ ಸರ್ದಾರ್ ಅಂಡ್ ಶೀ ಈಸ್ ಸರದಾರ್ನೀ ಹೀ ಈಸ್ ಮೈ ಕಿಡ್ ಅಂಡ್ ಶೀ ಈಸ್ ಮೈ ಕಿಡ್ನೀ" ಎಂದು ಹೆಂಡತಿ ಮಕ್ಕಳ ಜೊತೆಗೆ ಹಲ್...

ನಗರದಲ್ಲಿ ಸಂಕ್ರಾಂತಿ

ಇಮೇಜ್
ಸಿ. ಪಿ. ರವಿಕುಮಾರ್ ನನ್ನ ಮೊಬೈಲ್ ತೆರೆ ಮೇಲೆ ಸಗಣಿ ಸಾರಿಸಿಟ್ಟ ರಂಗೋಲೆ ಬೆಳಗಿನ ವೇಳೆ ಯಾರೋ ಕಳಿಸಿದ ಸಂಕ್ರಾಂತಿಯ ಶುಭ ಓಲೆ ಅಲ್ಲೊಂದು ಮಣ್ಣಿನ ಗಡಿಗೆ ಸೌದೆ ಬೆಂಕಿ ಉರಿ ಕೆಳಗೆ ಬೇಯುತ್ತಿದೆ ಒಳಗೆ ಹೊಸ ಅಕ್ಕಿ, ಬೆಲ್ಲ, ಹಾಲು ಏಳುತ್ತಿದೆ ಹೊಗೆ ಮೇಲ್ಗಡೆಗೆ ಜೋಡಿಸಿಟ್ಟ ಕಬ್ಬು ಜಲ್ಲೆ ಲಂಗ ತೊಟ್ಟು ಕುಂಟೆಬಿಲ್ಲೆ ತಟ್ಟೆಯಲ್ಲಿ ಬೆಲ್ಲಕಡಲೆ ಗಾಳಿಪಟವು ಮೀರಿ ಎಲ್ಲೆ ಹಾರುತ್ತಿದೆ ಗಗನದಲ್ಲೇ ಹಚ್ಚಿ ಹುಡುಕಿದರೂ ದೀಪ ಎಲ್ಲೂ ಸಮೀಪ ಕಾಣದ ಅಪರೂಪ ಹಂಚಿದ್ದಾನೆ ಯಾರೋ ಭೂಪ ಲೈಕ್ ಒತ್ತು,  ಪಾಪ

ಕೋಆಲಾ, ಕಾಂಗರೂ ಮತ್ತು ಬೆಂಕಿ (ಸ್ವಂತ ಕವಿತೆ)

ಆಸ್ಟ್ರೇಲಿಯಾದ ಕಾಡುಗಳಲ್ಲಿ ಕಚ್ಚಾಡುತ್ತಿದ್ದ ಕೋಆಲಾ ಕರಡಿಗಳ ಕಣ್ಣುಗಳಲ್ಲಿ ತುಂಬಿಕೊಂಡಿತ್ತು ಪರಸ್ಪರ ದ್ವೇಷದ ಧಗೆ ಹೀಗಾಗಿ ಕಾಣಲೇ ಇಲ್ಲ ಹಬ್ಬಿಕೊಳ್ಳುತ್ತಿರುವ ದಟ್ಟ ಹೊಗೆ ಒಂದು ಇನ್ನೊಂದರ  ವಿರುದ್ಧ ಕಾರುತ್ತಿದ್ದವು ಕಿಡಿ ಮಸೆಯುತ್ತಿದ್ದವು ಮಚ್ಚಿನ ಕಾವು ಒಳಗೊಳಗೇ ಬೇಯುತ್ತಿತ್ತು ಕಿಚ್ಚು ಒಮ್ಮೊಮ್ಮೆ ಕಣ್ಣುಗಳಿಂದ  ಫೂತ್ಕರಿಸುತ್ತಿತ್ತು ಬೆಂಕಿಯ ಜ್ವಾಲೆ ಹೀಗಾಗಿ ಕಾಣಲೇ ಇಲ್ಲ ಹರಡಿಕೊಳ್ಳುತ್ತಿರುವ ಹಳದಿ ಅಲೆ. ತನ್ನ ಮಕ್ಕಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡು ನೆಗೆಯುತ್ತಿದ್ದ ಕಾಂಗರೂ ಸಂತತಿಗೆ ಯಥೇಚ್ಛ ಹುಲ್ಲು ತಿಂದು ಹೊಟ್ಟೆ ತುಂಬಿದಾಗ ಕೋಆಲಾ ಕರಡಿಗಳ ದೃಷ್ಟಿಯುದ್ಧವನ್ನೇ ನೋಡುತ್ತಾ ಆನಂದಿಸುತ್ತಿದ್ದವು ಒಳಗೇ ಬೆಚ್ಚಗೆ ಮಲಗಿದ್ದ ಮರಿಗಳೂ ಹೊರಗೆ ಹಾಕಿ ತಲೆ ಕಣ್ಣುಬಿಟ್ಟು ನೋಡುತ್ತಿದ್ದವು ಪಿಳಿಪಿಳಿ ಯಾಕೋ ಅಮ್ಮನ ಮಡಿಲಿನ ಕಾವು ಹೆಚ್ಚಾಗುತ್ತಿದೆ ಎಂಬ ಕಳಕಳಿ ಆಸ್ಟ್ರೇಲಿಯಾದ ನಿಬಿಡಾರಣ್ಯಗಳಲ್ಲಿ ಹೀಗಿದ್ದಾಗ ಸೂಪರ್ ಚಾರ್ಜ್ ವಾತಾವರಣ ಯಾರೋ ಗೀರಿದರು ಬೆಂಕಿಕಡ್ಡಿ ಯಾರೋ ಎಸೆದರು ಸಿಗರೆಟ್ ಕೊನೆ ಯಾರೋ ಮಸೆದರು ಮಚ್ಚಿನ ಮೊನೆ ಕಣ್ತುಂಬಾ ಹೊಗೆ ತುಂಬಿದ್ದ ಕೋಆಲಾ ಕರಡಿಗಳಿಗೆ ಕಾಣಲಿಲ್ಲ ಹೊಟ್ಟೆ ತುಂಬಾ ಕಿಚ್ಚು ತುಂಬಿದ್ದ ಕಾಂಗರೂಗಳಿಗೆ ಕಾಣಲಿಲ್ಲ ಬೆಚ್ಚಗೆ ತಾಯಿಯ ಮಡಿಲಲ್ಲಿ ಮಲಗಿದ ಮರಿಗಳಿಗೆ ಗೊತ್ತಾಗಲೇ ಇಲ್ಲ ಸಿ.ಪಿ. ರವಿಕುಮಾರ್ 

ಬಾಳೆಹಣ್ಣು ಮತ್ತು ಕಲೆ

ಇಮೇಜ್
ಸಿ.ಪಿ. ರವಿಕುಮಾರ್ ಪ್ರಸಿದ್ಧ ಆರ್ಟ್ ಗ್ಯಾಲರಿಯಲ್ಲೊಬ್ಬ ಭೂಪ ತಿಂದುಬಿಟ್ಟನಂತೆ ಒಂದು ಬಾಳೆಹಣ್ಣು, ಪಾಪ! ಪಾಪ ಎಂದಿದ್ದು ಅವನಿಗಲ್ಲ, ಬಾಳೆಹಣ್ಣಿಗೆ ಸಾಧಾರಣ ಎನ್ನಿಸುತ್ತಿತ್ತು ಎಲ್ಲರ ಕಣ್ಣಿಗೆ! ಆದರೆ ಕಲಾವಿದನೊಬ್ಬ ಅಸಾಧಾರಣ ಕಲೆಯನ್ನು ಕಂಡನು ಹಣ್ಣಿನಲ್ಲಿ, ಜಾಣ! ಟೇಪ್ ಹಾಕಿ ಅಂಟಿಸಿ ಗೋಡೆ ಮೇಲೆ ಕಲೆಗೆ ಅವನಿಟ್ಟ ಹೆಸರು "ನಗೆಗಾರ." ನೋಡಿದ ಜನರಲ್ಲಿ ವಾವ್‌ವಾವ್‌ಕಾರ! ಬಂದನೊಬ್ಬನು ನಕಲೀಶಾಮ ಗ್ಯಾಲರಿಗೆ ನೋಡಿ ಬಾಳೆಹಣ್ಣು ಹಣೆಯಲ್ಲಿ ನೆರಿಗೆ! ಎಡದಿಂದ ನೋಡಿದನು  ಬಲದಿಂದ ನೋಡಿದನು! ಸನಿಹದಿಂ ನೋಡಿದನು ದೂರದಿಂ ನೋಡಿದನು! ಉದ್ದನೆಯ ಬಾಳೆಹಣ್ಣು, ಹಳದಿ ಸಿಪ್ಪೆ! ಕಣ್ಣಗಲಿಸಿ ಏನದರ ಸಿಂಬಾಲಜಿ ಎಂದು ಗೂಗಲಿಸಿ ನೋಡಿದನು ತಿರುತಿರುಗಿ! ಅರ್ಥವಾಗದೆ ಮರುಗಿ! "ಏನು ಹೇಳಲು ಬಯಸುತ್ತಿದ್ದೀರಾ ಕಲೆಯಲ್ಲಿ?" ಎಂದು ಕೇಳಿಯೇ ಬಿಟ್ಟ ಕೊನೆಯಲ್ಲಿ. ಶ್ ಶ್ ಶ್ ಎಂದಿಟ್ಟು ಬಾಯಮೇಲ್ ಬೆರಳು "ಯಾರಿವನು, ಅರಸಿಕ ಹೊರಗಟ್ಟಿ ಮೊದಲು!" "ಕಲೆಯೆಂದರೆ ಕಲೆ!" "ಕಲೆಗಾಗಿ ಕಲೆ!" "ಇವನಿಗೇನು ಅರ್ಥವಾದೀತು, ಅವನ ತಲೆ!" ಎಂದು ಕಲಾವಿಮರ್ಶಕರೆಲ್ಲ ಸೇರಿ  ಗದರಿ ಸುಮ್ಮನಾದನು ಕಲಾಪ್ರೇಮಿಯೂ ಹೆದರಿ! ಕಟ್ಟಲಾಗದು ಬೆಲೆ, ಆದರೂ ಕೇಳುವೆವು ಕ್ಷಮಿಸಿ! ಮಂತ್ರಮುಗ್ಧ ಜನರೆಂದರು ಕಲಾವಿದನನ್ನು ರಮಿಸಿ ನಾನು ಹೇಳುವುದಿಲ್ಲ, ನೀವೇ ಬೆಲೆ ಕಟ್ಟಿ! ...

ಬಸ್ ಪ್ರಯಾಣ

ಪ್ರಯಾಣವನು ದೀರ್ಘಗೊಳಿಸಿದೆ ಟ್ರಾಫಿಕ್ಕು ದೀರ್ಘತರಗೊಳಿಸಿದೆ ಫೇಸ್ ಬುಕ್ಕು ಎಷ್ಟು ಓದಲು ಸಾಧ್ಯ ಪತ್ರಿಕೆಯನು ಗೆಳೆಯಾ! ವಾರ್ತೆಗಾಗಿ ಬಿಡಿಸಬೇಕು ಅಭಿಪ್ರಾಯಗಳ ಸಿಕ್ಕು ನೋಡೋಣವೆಂದು ತೆರೆದರೆ ಮುಖಪುಸ್ತಕ ಎಷ್ಟು ನೋಡಲು ಸಾಧ್ಯ ಕಾಮಿಕ್ಕು ಗಿಮಿಕ್ಕು ಬ್ಯಾನ್ ಆದರೂ ಕಾಡುವುದೊಂದು ಭಯಂಕರ ಬ್ಯಾನೆ ಗುಡ್ ಮಾರ್ನಿಂಗ್ ಚಿತ್ರಕ್ಕೂ ಈಗ ಬಂದಿದೆ ಪ್ಲಾಸ್ಟಿಕ್ಕು ಹತ್ತಿರದ ಹೋಟೆಲಿನ ತಿಂಡಿಗಳ ಚಿತ್ರಗಳು ಹಸಿದು ಕುಳಿತವನನ್ನು ಕಾಡುತ್ತವೆ ಉದ್ದಕ್ಕೂ

ಗಾಂಧೀಸ್ತುತಿ (ಗಜಲ್)

ಇಮೇಜ್
ಅಂಚೆಚೀಟಿಯ ಮೇಲೆ ನಿನ್ನನ್ನು ಮುದ್ರಿಸಿದೆವು ಗಾಂಧಿ ಅಂಚಿಗೆ ನಿನ್ನನ್ನು ಮೆಲ್ಲಗೆ ತಳ್ಳಿದೆವು ಗಾಂಧಿ ನೋಟಿನ ಮೇಲೆ ನಿನ್ನನ್ನು ಮುದ್ರಿಸಿದೆವು ಗಾಂಧಿ ಗೀಟಿನಾಚೆಗೆ ನಿನ್ನ ನಿಲ್ಲಿಸಿದೆವು ಗಾಂಧಿ ಮೀಮ್‌ನಲ್ಲಿ ಜೂಮ್ ಮಾಡಿ ತೋರಿದೆವು ಗಾಂಧಿ ಜೂಮ್ ಔಟ್ ಮನದಲ್ಲಿ ಮಾಡಿದೆವು ಗಾಂಧಿ ಸತ್ಯದೊಂದಿಗೆ ನಿನ್ನ ಪ್ರಯೋಗಗಳು ಗಾಂಧಿ ಹತ್ಯೆಯದರದು ನಮ್ಮ ನಿತ್ಯಚರಿ ಗಾಂಧಿ ತಂದೆ ತಾತ ಎಂದೆಲ್ಲ ಮೆರೆಸುವುವು ಗಾಂಧಿ ಒಂದು ದಿನ ವರ್ಷಕ್ಕೆ ನೆನೆಯುವೆವು ಗಾಂಧಿ ರಜೆಯಿಲ್ಲದಿದ್ದರೆ ನಿನ್ನ ಜನ್ಮದಿವಸಕ್ಕೆ ಗಾಂಧಿ ನಜರಿನಲ್ಲಿ ನೀನು ಇರಲಾರೆ ಗಾಂಧಿ

ಸಾಕು ವಿವಾದಮಧು ಸುರಿದದ್ದು ಸಾಕಿ

ಎಷ್ಟು ಸುಲಭ ನಮಗೆಲ್ಲ ಕೀ ಕೊಡುವುದು ಟಿಪ್ಪು ಎಂದರೆ ಸಾಕು ಎಡದಿಂದ ಬಲಕ್ಕೆ ರಾಮ ಎಂದರೆ ಸಾಕು ಬಲದಿಂದ ಎಡಕ್ಕೆ ಎಷ್ಟು ಸುಲಭ ನಮಗೆಲ್ಲ ಕೀ ಕೊಡುವುದು ಎಲ್ಲಿ ಕಳೆದಿದೆ ಹುಡುಕಿ, ಹೆಜ್ಜೆ ಮುನ್ನಡೆಸುವ ಕೀ! ಸಾಕು ವಿವಾದಮಧು ಸುರಿದದ್ದು  ಸಾಕಿ ಎಷ್ಟು ಸುಲಭವಾಗಿ ಬಂತು ನಮಗೆ ಬಾಯಿಪಾಠದ ಮಾತು ಯಾರೋ ಬರೆದುಕೊಡುತ್ತಾರೆ ಸಂಭಾಷಣೆ ಒಪ್ಪಿಸುತ್ತೇವೆ ಚಕಚಕ ಅದನ್ನೇ ಕಿತನೇ ಆದ್ಮೀ ಥೇ ತೇರಾ ಕ್ಯಾ ಹೋಗಾ ಕಾಲಿಯಾ ಸಂಭಾಷಣೆಯಲ್ಲೇ ನಿಂತು ಹೋಗಿದೆ ಸಿನಿಮಾ ಮುಂದೆ ಹೋಗದು ಕತೆ, ಯಾರಾದರೂ ನೂಕಿ ಸಾಕು ವಿವಾದಮಧು ಸುರಿದದ್ದು, ಸಾಕಿ ಎಷ್ಟು ಸುಲಭ ನಮ್ಮನ್ನು ನಂಬಿಸುವುದು ಅದು ಸುಳ್ಳು ಇದು ಸತ್ಯ ಎಂದು ಬಿಂಬಿಸುವುದು ಕೇಳುವುದಿಲ್ಲ ಡೇಟಾ, ಪುರಾವೆ ಮೇಜುಕುಟ್ಟಿ ಮಾಡಿದರೆ ದಾವೆ ಹೌದೆಂದು ನಂಬಿಬಿಡುತೇವೆ ಬೋಧಿವೃಕ್ಷದ ಕೆಳಗೆ ಹಾಸಿಗೆ ಹಾಕಿ ಪಾನಮತ್ತನಾಗಿ ಮಲಗಿದ್ದಾನೆ  ವಿವೇಕಿ ಸಾಕು ಸುರಿದದ್ದು ವಿವಾದಮಧು, ಸಾಕಿ

ಕವಿಸಮಯ (ಗಜಲ್)

ಕವಿಸಮಯ (ಗಜಲ್) ಕವಿಗಳಿಗೆ ಇಂಥದ್ದೆಂದೊಂದು ಉಂಟೇ ಹೇಳಿ ಸಮಯ ಸೂರ್ಯೋದಯ ಚಂದ್ರೋದಯ ಎಲ್ಲವೂ ಕವಿಸಮಯ! ತಂದಿರಿಸಿದ್ದಾರು ಬಿಂದು ಅಮೃತವೆಂಬ ಸೋಜಿಗ ಬೆಳ್ಳಂಬೆಳಗು ಇರುಳು ಚಂದ್ರನಲ್ಲಿ ಪೆಪ್ಪರಮಿಂಟ್ ಕಾಣಿಸುವ ಸಮಯ ಮಟಮಟಮಧ್ಯಾಹ್ನದಲ್ಲಿ ಸಮಾಧಾನ ಹೇಳಿ ಬರಿಗೊಡಳಿಗೆ ಸಂಜೀಯ ಜಾವಿಗೆ ಬಾವಿ ಹೊರಡುವ ಸಮಯ ಶ್ರಾವಣ ಬಂದರೂ ಕವನ, ಕಾಜಾಣ ಕೂಗಿದರೂ ಕವನ, ಸರ್ವಋತು ಬಂದರೂ ಬಾಗಿಲು ತೆರೆದಿಡುವ ಸಮಯ ನವಯುಗಾದಿಗೆ ಕವನ, ರಾಮನವಮಿಗೆ ಕವನ ದೀಪಾವಳಿಯೋ ಕವಿತೆಗಳ ಹಚ್ಚಿಡುವ ಸಮಯ ಪ್ರೇಮದೊರತೆ ಹರಿದಾಗಲೂ ಕವಿತೆ, ಬರಿದಾದರೆ  ವಿರಹಗೀತೆ! ಗೋಪಿ ಗ್ಯಾಂಡಲೀನಳಿಗಾಗಿ ಕನವರಿಸುವ ಸಮಯ! ಭಾಮಿನಿಯು ಮೂರ್ನಾಲ್ಕು ಬಾರಿ ಕೂಗಿ ಕರೆದಿರಬಹುದೆ ನಾರಣಪ್ಪನಿಗೆ ಮಿಂದುಟ್ಟ ಮಡಿ ಆರುವಷ್ಟೇ ಸಮಯ! ಕವಿಗೋಷ್ಠಿಯಲ್ಲಿ ಕವಿತೆ ಓದುತ್ತಾ ನಿಂತಾಗ ಹೇಗೆ ಜಾರಿತು ಹೊತ್ತು ಹೋಯಿತೆಲ್ಲಿ ಸಮಯ! ಸಿ.ಪಿ. ರವಿಕುಮಾರ್

ಅಯೋಧ್ಯೆ

ಸಿ.ಪಿ. ರವಿಕುಮಾರ್ ಮುಗಿಸಿ ಊಟ ಹೊರಬಂದರೆ ಅವರಿಬ್ಬರೂ ಒಂಬತ್ತು ಎಂದು ಊಹಿಸಬಹುದು ವೇಳೆಯ ಜಗುಲಿಯ ಮೇಲೆ ಮಣೆ ಹಾಸಿ ಕುಳಿತು ಜಗಿಯುತ್ತಾರೆ ಮಡದಿ ಮಡಿಸಿಕೊಟ್ಟ ವೀಳೆಯ ಜಗಳವಾಡುತ್ತಾರೆ ಏನಾದರೂ ತೆಗೆದು ಸಗಣಿ ಎರಚುತ್ತಾರೆ ಪರಸ್ಪರರ ಮೇಲೆ ಸಿಗದು ಈ ದೇಶದಲ್ಲಿ ನ್ಯಾಯವೆಂದು ಉಗಿಯುತ್ತಾನೆ ಎಡಗಡೆಗೆ ಕುಳಿತವನು ನಗುತ್ತಾ ಬಲಗಡೆಗೆ ಕುಳಿತವನ ಉತ್ತರ ಮಗ್ಗುಲಿನ ದೇಶಕ್ಕೇಕೆ ಹೋಗಬಾರದು ಬಂಧು! "ಭಗ್ನಗೊಳಿಸಿದವರಿಗೆ ಬೇಡವೇ ಯಾವುದೇ ಶಿಕ್ಷ!" "ಭಗ್ನಗೊಳಿಸಿದ್ದು ಯಾರು ಹಂಪೆಯ ವಿರೂಪಾಕ್ಷ! ಹೀಗೆ ವಾದಕ್ಕೆ ಪ್ರತಿವಾದ, ಉತ್ತರಕ್ಕೆ ಕಾಯದೆ ಯುಗಯುಗಾದಿ ಕಳೆದರೂ ಮುಗಿಯದ ತಗಾದೆ