ಸಯೀದ್ ಜಾಫ್ರಿ - ಚದುರಂಗದ ಆಟಗಾರ
ಸಿ ಪಿ ರವಿಕುಮಾರ್ ಚಿತ್ರನಟ ಸಯೀದ್ ಜಾಫ್ರಿ ಅವರು ನಿಧನರಾದ ಸುದ್ದಿ ಬಂದಿದೆ. ಸಯೀದ್ ಜಾಫ್ರಿ ಎಂದಾಗ ನೆನಪಾಗುವುದು ಅವರ ವಿಶಿಷ್ಟವಾದ ಧ್ವನಿ ಮತ್ತು ಮಧುರ ಲಖನವಿ ಸಂಭಾಷಣಾ ಶೈಲಿ. ನಾನು ನೋಡಿದ ಅವರ ಮೊದಲ ಚಿತ್ರ "ಶತರಂಜ್ ಕೇ ಖಿಲಾಡಿ." ಅವಧ್ ಪ್ರಾಂತದಲ್ಲಿ ನವಾಬನಾದ ವಾಜಿದ್ ಅಲಿ ಶಾಹ್ ಒಬ್ಬ ವಿಲಾಸಿ ರಾಜ. ಅವನಿಗೆ ಮೂರು ಹೊತ್ತೂ ಶಾಯರಿ-ನೃತ್ಯ-ಗೀತೆಗಳಲ್ಲೇ ಮೋಹ. ಸ್ವಂತ ಕವಿ ಕೂಡ! ಯಥಾ ರಾಜಾ ತಥಾ ಪ್ರಜಾ! ಜನರಿಗೂ ಇಂಥದ್ದೇ ಶೋಕಿಗಳು. ಈ ಚಿತ್ರದಲ್ಲಿ ಸಜ್ಜದ್ ಅಲಿ ಮತ್ತು ರೋಷನ್ ಅಲಿ ಎಂಬ ಇಬ್ಬರು ಶ್ರೀಮಂತರ ಪಾತ್ರಗಳು ಬರುತ್ತವೆ. ಸಯೀದ್ ಜಾಫ್ರಿ ಮತ್ತು ಸಂಜೀವ್ ಕುಮಾರ್ ಈ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಇಬ್ಬರೂ ಶ್ರೀಮಂತರಿಗೆ ಶತರಂಜ್ ಆಡುವ ಶೋಕಿ. ಅದರಲ್ಲೇ ಮೂರು ಹೊತ್ತೂ ಮಗ್ನರಾಗಿರುವ ಇವರಿಗೆ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಮನವೇ ಇರುವುದಿಲ್ಲ. ಒಬ್ಬ ಶ್ರೀಮಂತನ ಹೆಂಡತಿ ವಿರಹದಲ್ಲಿ ಬೇಯುತ್ತಾ ಹುಚ್ಚಿಯಂತಾಗಿದ್ದಾಳೆ. ಇನ್ನೊಬ್ಬನ ಹೆಂಡತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ! ಇತ್ತ ಈಸ್ಟ್ ಇಂಡಿಯಾ ಕಂಪನಿ ಅವಧ್ ಮೇಲೆ ಕಣ್ಣಿಟ್ಟಿದೆ. ಶತ್ರುಗಳು ಬಂದಾಗ ವಾಜಿದ್ ಅಲಿ ಶಾಹ್ ಯಾವುದೇ ಹೋರಾಟವಿಲ್ಲದೆ ತನ್ನ ತಲೆಯ ಮೇಲಿನ ಮುಕುಟವನ್ನು ಎತ್ತಿ ಕೆಳಕ್ಕಿಟ್ಟುಬಿಡುತ್ತಾನೆ. ಯುದ್ಧಕ್ಕೆ ಹೆದರಿದ ಶ್ರೀಮಂತರು ಓಡಿ ಒಂದು ಸ್ಮಶಾನದಲ್ಲಿ ಬಚ್ಚಿಟ್ಟ...