ಗಾಂಧಿ, ಜುರಾಸಿಕ್ ಪಾರ್ಕ್ ಮತ್ತು ಆಟೆನ್ ಬರೋ
"ಗಾಂಧಿ" ನಿರ್ದೇಶಿಸಿದ ಆಟೆನ್ ಬರೋಗೆ ಜುರಾಸಿಕ್ ಪಾರ್ಕ್ ಪಾತ್ರಕ್ಕೆ ಗಾಂಧಿಯೇ ಪ್ರೇರಣೆಯಾಗಿದ್ದರೇನೋ! ಸಿ ಪಿ ರವಿಕುಮಾರ್ ರಿಚರ್ಡ್ ಆಟೆನ್ ಬರೋ ಅವರು ತೊಂಬತ್ತು ವರ್ಷಗಳ ತಮ್ಮ ಸುದೀರ್ಘ ಪಯಣ ಮುಗಿಸಿದರೆಂಬ ಸುದ್ದಿ ಬಂದಿದೆ. ಭಾರತೀಯರಿಗೆ ಅವರು "ಗಾಂಧಿ" ಚಿತ್ರದ ನಿರ್ಮಾಪಕ-ನಿರ್ದೇಶಕರೆಂದು ಚಿರಪರಿಚಿತರು. ಎಂಬತ್ತರ ದಶಕದಲ್ಲಿ ಈ ಚಿತ್ರ ಬಿಡುಗಡೆಯಾದಾಗ ಅದನ್ನು ನೋಡಲು ನಾನು ನನ್ನ ತಂದೆಯವರ ಜೊತೆ ಹೋಗಿದ್ದು ನೆನಪಾಗುತ್ತಿದೆ. ಆಗ ನನ್ನ ತಂದೆಯವರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಹೊರಗೆ ಹೋಗಿ ಬಂದರೆ ಒಂದು ಬದಲಾವಣೆ ಇರುತ್ತದೆಂದು ಅವರನ್ನು "ಗಾಂಧಿ" ಚಿತ್ರ ನೋಡಲು ಹೋಗೋಣವೇ ಎಂದು ಕರೆದೆ. ಆಶ್ಚರ್ಯಕ್ಕೆ ಅವರು ಒಪ್ಪಿಕೊಂಡರು. ಹತ್ತಿರ ಇದ್ದ ಬೆಂಗಳೂರು ಡ್ರೈವ್-ಇನ್ ಥಿಯೇಟರಿನಲ್ಲಿ ಹಿಂದಿ ಭಾಷೆಯಲ್ಲಿ ಚಿತ್ರ ನೋಡಲು ಹೊರಟೆವು. ಈಗ ಈ ಚಿತ್ರಮಂದಿರ ಇಲ್ಲ. ದೊಡ್ಡ ತೆರೆಯ ಮೇಲೆ ಗಾಂಧಿ ಚಿತ್ರವನ್ನು ನೋಡಿದಾಗ ರೋಮಾಂಚನವಾಯಿತು. ಚಿತ್ರ ಪ್ರಾರಂಭವಾಗುವುದು ಗಾಂಧೀಜಿಯ ಹತ್ಯೆಯ ಸನ್ನಿವೇಶದಿಂದ. "ಹೇ ರಾಮ್!" ಎಂದು ಗಾಂಧೀಜಿ ಕುಸಿದಾಗ ಕಥೆ ಹಿಂದಕ್ಕೆ ಹಾರುತ್ತದೆ. ಅಪಾರ್ಥೇಡ್ ನಾಡಾದ ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ಬಿಳಿದೊರೆಯ ಜೊತೆ ಪ್ರಯಾಣ ಮಾಡುವ ಧಾರ್ಷ್ಟ್ಯ ತೋರಿಸಿದ ಒಬ್ಬ ಮಧ್ಯವಯಸ್ಕ ಭಾರತೀಯನನ್ನು ರೈಲಿನಿಂದ ಹೊರಗೆ ತಳ್ಳಿದ ಘಟನೆ. ಮುಂದೆ ಇದೇ ಕಂದು ತ...