ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು -7
ಮೂಲ : ವಿಲಿಯಂ ಡ್ಯಾಲ್ ರಿಂಪಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಇಂದು ಪರಿಸ್ಥಿತಿ ಪುನರಾವರ್ತನೆಗೊಂಡು ಸರ್ ಥಾಮಸ್ ರೋ ಅವರ ಕಾಲದಂತಾಗಿದೆ. ರೋಮನ್ನರ ಕಾಲದಿಂದ ಈಸ್ಟ್ ಇಂಡಿಯಾ ಕಂಪನಿಯ ಕಾಲದವರೆಗೆ ಹರಿಯುತ್ತಿದ್ದಂತೆ ಹಣವು ಮತ್ತೆ ಪಶ್ಚಿಮದಿಂದ ಪೂರ್ವದಿಕ್ಕಿಗೆ ಹರಿಯುತ್ತಿದೆ. ಇಂದು ಬ್ರಿಟನ್ನಿನ ಪ್ರಧಾನಮಂತ್ರಿಯೋ ಫ್ರಾನ್ಸಿನ ಅಧ್ಯಕ್ಷರೋ ಭಾರತಕ್ಕೆ ಭೇಟಿ ಕೊಟ್ಟಾಗ ಅವರು ರಾಬರ್ಟ್ ಕ್ಲೈವ್ ಬಂದಂತೆ ತಮ್ಮ ನಿರ್ಧಾರಗಳನ್ನು ಹೇರಲು ಬರುವುದಿಲ್ಲ. ಯಾವುದೇ ಬಗೆಯ ಒಪ್ಪಂದಗಳೂ ಈ ಭೇಟಿಗಳ ಉದ್ದೇಶವಾಗಿರುವುದಿಲ್ಲ. ಅವರು ಬರುವುದು ಸರ್ ಥಾಮಸ್ ರೋ ಹಾಗೆ, ವ್ಯಾಪಾರಕ್ಕಾಗಿ ಯಾಚನೆ ಮಾಡುವ ಸಲುವಾಗಿ. ಅವರೊಂದಿಗೆ ಬರುವವರು ದೇಶದ ಅತಿದೊಡ್ಡ ಕಾರ್ಪೊರೇಷನ್ ಗಳ ಮುಖ್ಯಾಧಿಕಾರಿಗಳು. ಯೂರೋಪ್ ದೇಶಗಳು ಕಾಲೋನಿಗಳನ್ನು ಸ್ಥಾಪಿಸಲು ಹೊರಟಾಗಲೇ ಕಾರ್ಪೊರೇಷನ್ ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು. ಯೂರೋಪಿಗೆ ವ್ಯಾಪಾರದಲ್ಲಿ ಸ್ಪರ್ಧಿಸುವ ಹುಮ್ಮಸ್ಸನ್ನು ತಂದುಕೊಟ್ಟಿದ್ದೇ ಕಾರ್ಪೊರೇಷನ್ ಗಳು. ಯೂರೋಪಿನ ರಾಜಾಧಿಕಾರಗಳು ಉರುಳಿದರೂ ಕಾರ್ಪೊರೇಷನ್ ಗಳು ಇನ್ನೂ ಉಳಿದುಕೊಂಡಿವೆ. ಭಾರತಕ್ಕೆ ಬ್ರಿಟಿಷರ ಬಳುವಳಿ ಏನೆಂದು ಚರಿತ್ರಕಾರರು ಬರೆಯುವಾಗ ಪ್ರಜಾಪ್ರಭುತ್ವ, ನ್ಯಾಯಬದ್ಧ ಆಳ್ವಿಕೆ, ರೈಲ್ವೆ, ಚಹಾ ಮತ್ತು ಕ್ರಿಕೆಟ್ ಗಳನ್ನು ಹೆಸರಿಸುತ್ತಾರೆ. ಆದರೆ ಅನೇಕ ಹೂಡಿಕೆದಾರರು...