ಹೊಟ್ಟೆನೋವು ಮತ್ತು ಹೋಮಿಯೋಪತಿ
ಸಿ ಪಿ ರವಿಕುಮಾರ್ ಆಗ ನನಗೆ ಹನ್ನೊಂದೋ ಹನ್ನೆರಡೋ ವಯಸ್ಸು. ನಾವು ಆಗ ದೆಹಲಿಯಲ್ಲಿದ್ದೆವು. ಆಗ ಅಷ್ಟೊಂದು ಕ್ಲಿನಿಕ್ ಗಳು ಇರಲಿಲ್ಲ. ಜನ ಚಿಕಿತ್ಸೆಗಾಗಿ ಸರಕಾರೀ ಡಿಸ್ಪೆನ್ಸರಿಗೆ ಹೋಗುತ್ತಿದ್ದರು. ನಾವಿದ್ದ ಮನೆಯ ಬೀದಿಯಲ್ಲೇ ಒಬ್ಬ ಪ್ರಸಿದ್ಧ ವೈದ್ಯರು ಮನೆಯಲ್ಲೇ ಕ್ಲಿನಿಕ್ ಹಾಕಿಕೊಂಡಿದ್ದರು. ಡಾ| ಘೋಷಾಲ್ ಎಂಬುದು ಅವರ ಹೆಸರು. ಅವರನ್ನು ಕಾಣಲು ದೂರದೂರದಿಂದ ಜನ ಬರುತ್ತಿದ್ದರು. ದಿನಬೆಳಗಾದರೆ ಅವರ ಮನೆಯ ಮುಂದೆ ದೊಡ್ಡ ಕ್ಯೂ ನಿಲ್ಲುತ್ತಿತ್ತು. ಕೆಲವು ಸಲ ಸರಿರಾತ್ರಿಯ ಹೊತ್ತು ಯಾರಾದರೂ ಅವರನ್ನು ಕಾಣಲು ಬಂದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. "ಡಾಕ್ಟರ್ ಸಾಬ್! ಡಾಕ್ಟರ್ ಸಾಬ್!" ಎಂದು ಅವರು ಕೂಗಿಕೊಳ್ಳುತ್ತಿದ್ದುದು ನಮ್ಮ ಮನೆಗೂ ಕೇಳುತ್ತಿತ್ತು. ಡಾಕ್ಟರ್ ಸಾಹೇಬರು ಇದನ್ನು ಕಿವಿಗೇ ಹಾಕಿಕೊಳ್ಳದೆ ಇದ್ದುಬಿಡುತ್ತಿದ್ದರು. ಕೆಲವೊಮ್ಮೆ ಅವರು ಬೈದು "ನಾಳೆ ಬೆಳಗ್ಗೆ ಬನ್ನಿ" ಎಂದು ಹೇಳುವುದು ಕೇಳುತ್ತಿತ್ತು. ಒಂದು ಸಲ ಯಾರದೋ ಮನೆಗೆ ಹೋದಾಗ ಅಲ್ಲಿ ಅವಲಕ್ಕಿ ತಿಂದದ್ದಕ್ಕೋ ಏನೋ ನನಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಈ ಹೊಟ್ಟೆ ನೋವು ಬಂದಾಗ ಒಂದು ಅರ್ಧ ಗಂಟೆ ತುಂಬಾ ಕಷ್ಟವಾಗುತ್ತಿತ್ತು. ಕ್ರಮೇಣ ಹೊಟ್ಟೆ ನೋವು ಕಡಿಮೆಯಾಗುತ್ತಿತ್ತು. ದಿನಕ್ಕೆ ಹೀಗೆ ಒಂದೆರಡು ಸಲ ಆಗತೊಡಗಿತು. ಮೊದಲು ಮನೆವೈದ್ಯ ಮಾಡಿದರು. ಗುಣವಾಗಲಿಲ್ಲ. ನಾನು ಒದ್ದಾಡುವುದು ನೋಡಿ ಅಷ್ಟು ಹತ್ತಿರದಲ್ಲಿದ್ದ ಡಾ...