ಶಶಿ ಕಪೂರ್ ಅವರ ಎರಡು ಚಿತ್ರಗಳು
ಸಿ ಪಿ ರವಿಕುಮಾರ್ ಶಶಿ ಕಪೂರ್ ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿದ್ದು ಸಂತೋಷದ ವಿಷಯ. ಅವರ ಚಿತ್ರಗಳಲ್ಲಿ ನನಗೆ ಥಟ್ಟನೆ ನೆನಪಿಗೆ ಬರುವುದು "ಜುನೂನ್.". ಜುನೂನ್ ಎಂಬ ಉರ್ದು ಪದದ ಅರ್ಥ "ಭಾವತೀವ್ರತೆ" ಅಥವಾ "ಭಾವೋನ್ಮಾದ." ಈ ಚಿತ್ರದ ಕಥೆ 1857ರಲ್ಲಿ ನಡೆದ ಸಿಪಾಯಿದಂಗೆಯ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಕುರಿತದ್ದು. ಭಾರತೀಯ ಕಾದಂಬರಿಕಾರ ರಸ್ಕಿನ್ ಬಾಂಡ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಈ ಚಿತ್ರ ನೋಡಿದ್ದು ನೆನಪಾಗುತ್ತಿದೆ. ಸಿಪಾಯಿದಂಗೆ ನಡೆದಾಗ ಉತ್ತರಭಾರತದಲ್ಲಿ ನೆಲೆಸಿದ್ದ ಬ್ರಿಟಿಷ್ ಪ್ರಜೆಗಳ ಜೀವನ ಅಲ್ಲೋಲಕಲ್ಲೋಲವಾಯಿತು. ಒಮ್ಮೆಲೇ ಅವರು ಅಲ್ಪಸಂಖ್ಯಾತರಾಗಿ ಭಾರತೀಯರ ಕೈಗೆ ಸಿಕ್ಕ ಪಾರಿವಾಳಗಳಾಗಿಹೋದರು. ಇಂಥ ಒಂದು ಕುಟುಂಬದಲ್ಲಿ ರೂಥ್ ಎಂಬ ಚೆಲುವೆಯೊಬ್ಬಳಿದ್ದಾಳೆ. ಅವಳ ತಂದೆ ಸಿಪಾಯಿದಂಗೆಯಲ್ಲಿ ಕೊಲೆಯಾಗುತ್ತಾನೆ. ಜಾವೇದ್ ಖಾನ್ ಎಂಬ ಒಬ್ಬ ಮುಸ್ಲಿಂ ಯುವಕನಿಗೆ ರೂಥ್ ಕುರಿತು ಜುನೂನ್ ಭಾವನೆ ಇದೆ. ಅವಳ ತಂದೆಯ ಕೊಲೆಗಡುಕರಲ್ಲಿ ಅವನೂ ಒಬ್ಬ. ಅವನು ರೂಥ್ ಳನ್ನು ಕೊಲೆ ಮಾಡದೆ ಉಳಿಸುತ್ತಾನೆ. ರೂಥ್ ಳ ತಾಯಿ ತಮ್ಮ ಕುಟುಂಬಕ್ಕೆ ಹತ್ತಿರದವನಾಗಿದ್ದ ಒಂದು ಹಿಂದೂ ಶ್ರೀಮಂತನ ಮನೆಯಲ್ಲಿ ಆಶ್ರಯ ಬೇಡುತ್ತಾಳೆ. ಈ ಶ್ರೀಮಂತನಿಗೆ ಧರ್ಮ ಸಂಕಟ. ಬ್ರಿಟಿಷರನ್ನು ಬಚ್ಚಿಟ್ಟುಕೊಂಡಿದ್ದಾನೆ ಎಂದು ತಿಳಿದರೆ ಅವನ ಕುಟು...