ಶಮ್ಮಿ ಕಪೂರ್ ನೆನಪು
ಇವತ್ತು ವಿಜಯದಶಮಿಯ ದಿವಸ ಹಿಂದಿ ಚಿತ್ರನಟ ದಿ| ಶಮ್ಮಿ ಕಪೂರ್ ಅವರ ಜನ್ಮ ದಿನ ಅಂತ ಯಾರೋ ನೆನಪಿಸಿದರು. ಶಮ್ಮಿ ಅನ್ನುವ ಹೆಸರಿಗೂ ಶಮೀ ಪತ್ರೆಯ ಹೆಸರಿಗೂ ಸಂಬಂಧವಿರಬಹುದೇ? ಅದಿರಲಿ ವಿಜಯ ದಶಮೀ ಎಂಬುದು "ವಿಜಯದ ಶಮೀ" ಆಗಿರಬಹುದೇ ಎಂದೆಲ್ಲಾ ನನ್ನ ಮನವೆಂಬ ಮರ್ಕಟ ಆಲೋಚಿಸುತ್ತಿದೆ. ಅದು ಹಾಗಿರಲಿ! ಶಮ್ಮಿ ಕಪೂರ್ ತಮ್ಮ ಕಾಲದ ಸ್ಟೈಲ್ ಕಿಂಗ್. ಶಮ್ಮಿ ಕಪೂರ್ ಅಂದರೆ ನೆನಪಾಗುವುದು ಅವರ ನೃತ್ಯಗಳು ಮತ್ತು ಅವರ ಚಿತ್ರದಲ್ಲಿ ಮಹಮ್ಮದ್ ರಫಿ ಹಾಡಿದ ಹಾಡುಗಳು. ಅಣ್ಣ ರಾಜ್ ಕಪೂರ್ ಆಗಲೇ ಪ್ರಸಿದ್ಧರಾಗಿದ್ದಾಗ ಅವರಿಗಿಂತ ಭಿನ್ನವಾಗಿ ನಟಿಸದೇ ಇದ್ದರೆ ಶಮ್ಮಿ ಕಪೂರ್ ಅವರಿಗೆ ತಮ್ಮದೇ ಸ್ಥಾನ ಸಿಕ್ಕುತ್ತಿರಲಿಲ್ಲ. ಶಮ್ಮಿ ಕಪೂರ್ ತಮ್ಮ ಆಂಗಿಕ ಚೇಷ್ಟೆ, ಹಾಸ್ಯ, ವಿದೇಶೀ ನೃತ್ಯಗಳು ಇವುಗಳಿಂದ ಭಿನ್ನವಾಗಿ ಕಂಡರು. ಆದರೆ ಅವುಗಳನ್ನು ಕುರಿತು ನಾನು ಬರೆಯುವುದಿಲ್ಲ. ಎಂಬತ್ತರ ದಶಕದಲ್ಲಿ ಪ್ರತಿ ಭಾನುವಾರ ಬೈಬಲ್ ಆಧಾರಿತ ಒಂದು ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಟವರ್ ಆಫ್ ಬೇಬೆಲ್" ಕಥೆಯನ್ನು ನೋಡಿದ್ದು ನನಗೆ ನೆನಪಿದೆ. ಇದರಲ್ಲಿ ಶಮ್ಮಿ ಕಪೂರ್ ನಟಿಸಿದ್ದರು. ಅತ್ಯಂತ ಎತ್ತರದ ಒಂದು ಮೀನಾರವನ್ನು ನಿರ್ಮಿಸಲು ನಿಮ್ರೋಡ್ ಎಂಬ ಒಬ್ಬ ರಾಜನ ನಿರ್ದೇಶನದಲ್ಲಿ ಹೀಬ್ರೂ ಜನರು ತೊಡಗುತ್ತಾರೆ. ನೀಮ್ರೋಡ್ ಒಬ್ಬ ದುಷ್ಟ ರಾಜ, ದುರಹಂಕಾರಿ. ತನ...