ಪೋಸ್ಟ್‌ಗಳು

ಮಾರ್ಚ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು,

ಇಮೇಜ್
 (ಎಷ್ಟೇ ಕಷ್ಟಪಟ್ಟರೂ ಆಗುತ್ತಿಲ್ಲ ಎಂದು ಹತಾಶರಾದವರಿಗೆ) ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು, ಪಟ್ಟೆನೆಷ್ಟು ಕಷ್ಟ, ತೊಟ್ಟೆನೆಷ್ಟು ಗಾಯಗಳು ಆದರೂ ಬೀಳಲೊಲ್ಲ ಶತ್ರು, ಕಾಣನು ಸೋಲು ಎಲ್ಲವೂ ಯಥಾಸ್ಥಿತಿ, ಬದಲಾಗಿಲ್ಲ ಚೂರೂ. ಭರವಸೆಗಳು ಹುಸಿಯಾದರೆ, ಭಯಗಳೂ ಹುಸಿ ಇರಬಹುದು ನಿನಗೆ ಕಾಣದಂತೆ ಹೊಗೆಯ ಹಿನ್ನೆಲೆಯೊಳಗೆ ನಿನ್ನ ಪಕ್ಷದವರು ಹಿಮ್ಮೆಟ್ಟಿಸಿ ಶತ್ರುಪಡೆ ಆಗಲೇ ಮೈದಾನವನು ವ್ಯಾಪಿಸಿಕೊಂಡಿರಬಹುದು ಗೆದ್ದು. ಇಲ್ಲಿ ಬಲಹೀನ ಅಲೆಗಳು ಯತ್ನಿಸಿ ಸೋತರೂ ಪೂರಾ ಅಂಗುಲವೂ ಬಿಟ್ಟುಕೊಡದ ಮಹಾಪರ್ವತ ಇನ್ನೆಲ್ಲೋ ಸೋತಿರಬಹುದು  ಕಣಿವೆಗಳಲ್ಲಿ, ತೀರ್ಥ ಎಳೆಯಾಗಿ ಒಳನುಗ್ಗಿ ಉಂಟಾಗಿರಬಹುದು ಮಹಾಪೂರ. ಪೂರ್ವಮುಖಿ ಕಿಟಕಿಗಳಿಂದಷ್ಟೆ ಬಾರದು ಬೆಳಕು ಮೇಲೇರ ತೊಡಗಿದಾಗ ಸೂರ್ಯ ಒಳಬರುವ ನಸುಬೆಳಕು, ಕಂಡರೂ ಕಾಣದಂತಿರುವ ಬೆಳಕು, ನೋಡಲ್ಲಿ ಪಶ್ಚಿಮದಲ್ಲಿ ತಂದಿಹುದು ಬೆಳಗು. ಮೂಲ: ಆರ್ಥರ್ ಹ್ಯೂ ಕ್ಲೋ ಅನುವಾದ: ಸಿ. ಪಿ. ರವಿಕುಮಾರ್

ಕಾಡುದಾರಿಯ ಹಾಡು

ಇಮೇಜ್
 (ಆಸ್ಕರ್ ಫಿಗುವರ್ಡೋ ಅವರ ಒಂದು ವರ್ಣ ಚಿತ್ರ ನೋಡಿ ಬರೆದ ಕವಿತೆ. ಇಲ್ಲಿ ಕೊಟ್ಟಿರುವ ಚಿತ್ರವನ್ನು ಬರೆದಿದ್ದು ಏಐ) ಎಷ್ಟೋ ಜನ ತುಳಿದು ಹೋದ ಹಾದಿಯನ್ನೇ ನೀನೂ ತುಳಿ ಕಷ್ಟವೆನ್ನಿಸಿದಾಗ ಮೇಲೇರುವಾಗ ಏದುಬ್ಬಸ ಪಡುವಾಗ ಅಷ್ಟು ಹೊತ್ತು ನಿಂತು ನೋಡು ಇಕ್ಕೆಲದಲ್ಲೂ ಹಬ್ಬಿ ಸುಸ್ತಾದ ಪಯಣಿಗನಿಗೆ ನೆರಳು ಕೊಡುವ ವನರಾಜಿ. ಮತ್ತೆ ಬರುವೆಯೋ ಇಲ್ಲವೋ ಈ ದಾರಿಯಲ್ಲಿ! ಸುತ್ತಲೂ ನೋಡು,ಪಕ್ಕದಲ್ಲಿಟ್ಟು ನಿನ್ನ ಸಂವಹನ ಸಾಧನ! ಗುಟ್ಟುಗಳೆಷ್ಟೋ ಒಳಗಿಟ್ಟುಕೊಂಡು ಹೊರಗೆ ನಗುತ್ತಾ ನಿತ್ಯವೂ ವಾಟ್ಸಾಪ್ ಇತ್ಯಾದಿಗಳಲ್ಲಿ ನಡೆಸುವ ಸಂಭಾಷಣೆ ವ್ಯರ್ಥ! ಅಗೋ ಕೇಳು.  ಕಿವಿಗೊಟ್ಟು ಏನು ಹೇಳುತ್ತಿದೆ  ಎತ್ತರದ ಮರ! ಅದೆಷ್ಟು ಹಕ್ಕಿ ಹುಳಹುಪ್ಪಟೆಗಳ ಆಗರ! ಎಷ್ಟು ಗಿಳಿ ಗಿಡುಗ ಸಂಸಾರ ಹೂಡಿವೆಯೋ ಇದರೊಳಗೆ ಹುಟ್ಟಿವೆಯೋ ಎಷ್ಟು ಮರಿ, ಜೀವಗಳೆಷ್ಟು ಸತ್ತಿವೆಯೋ! ಅತ್ತ ನೋಡು ಸಂಭ್ರಮಿಸುತ್ತಿದೆ  ಹೂ ಮುಡಿದ ಬಳ್ಳಿ ಉತ್ತರವಿಲ್ಲ ಏನು ಕಾರಣವೆಂಬ ಪ್ರಶ್ನೆಗೆ ಯಾರಲ್ಲಿ

ಕೆಟ್ಟ ಹವಾಮಾನದ ಕಾವ್ಯ

ಇಮೇಜ್
ಕ್ಲಾಸ್ ರೂಮಿನ ಬಾಗಿಲ ಬಳಿಯಲ್ಲೇ ಯಾರೋ ಗೋಡೆಗೆ ಆನಿಸಿ ಇಟ್ಟಿದ್ದಾರೆ ಸ್ಕೇಟ್ ಬೋರ್ಡ್: ಗಂಟೆ ಬಾರಿಸಿದ ಕ್ಷಣವೇ ಪರಾರಿಯಾಗಲು ಹೊರಗೆ. ಆಗ ಫೆಬ್ರುವರಿಯ ತಿಂಗಳು ಫ್ಲಾರಿಡಾದಲ್ಲಿ ತರಗತಿಗಳ ಪಾಠದಲ್ಲಿ ಬರುತ್ತಿತ್ತು  ಟ್ಯಾನಿಂಗ್ ಮುಲಾಮಿನ ಘಮ. ನನ್ನ ವಿದ್ಯಾರ್ಥಿಗಳು ಯೋಚಿಸುವರು ಅದೇಕೆ ಎಲ್ಲ ಶ್ರೇಷ್ಠ ಕವಿಗಳೂ ಬದುಕಿದರು ನಮ್ಮ ಉತ್ತರದಲ್ಲಿ? ಅಲ್ಲಿ ಬೇರೇನೂ ಇರಲಿಲ್ಲವೇ ಅವರಿಗೆ ಕೆಲಸ ಒಳ್ಳೆಯ ಹವಾಮಾನಕ್ಕೆ ಪ್ರಾರ್ಥಿಸುವುದರ ಹೊರತು? ತರಗತಿಯಲ್ಲಿ ಇದ್ದಿದ್ದರೆ ಒಂದು ಕಿಟಕಿ, ಎಲ್ಲರೂ ಇತ್ತ ಗಡಿಯಾರದ ಮೇಲೆ ಒಂದು ಕಣ್ಣಿಟ್ಟುಕೊಂಡೇ, ನಿರುಕಿಸುತ್ತಿದ್ದರು ಎಳೆಯರಲ್ಲಿರದ ನಯನಾಜೂಕಿನಿಂದ ಕಾಡುನೇರಳೆ ತಲೆದೂಗುವುದನ್ನು. ಪಕಳೆಗಳು ಉದುರಿ ಹರಡುವುದನ್ನು ಮಾಡಬಹುದಾಗಿತ್ತು ಅಧ್ಯಯನ ನಾವು, ಅದರಲ್ಲೇ ಕಾಣಬಹುದಾಗಿತ್ತು ಹಿಮಪಾತದ ಸಂಭ್ರಮ. ಕೋಣೆ ತುಂಬಿಕೊಳ್ಳತೊಡಗಿತು ಮೌನದಿಂದ ಒಂದೊಂದೇ ಕಣಕಣ. ಜೀವನವನ್ನು ಬಂಧನದಲ್ಲೇ ಕಳೆಯುವ ನಿರ್ಬಂಧಕ್ಕೆ ಕಟ್ಟುಬಿದ್ದ ಗಾಳಿಯ ಕ್ಷೀಣ ಗರ್ಜನೆಯ ವಿನಾ ಬೇರೇನೂ ಸದ್ದಿಲ್ಲ. ಸೆಲ್ ಫೋನಿನಲ್ಲಿ ಉಲಿಯುವ ಹಕ್ಕಿಯ  ಹಾಡೂ ಕೇಳಿಸದು. ಮನೆಗೆ ಹೋಗು ಎನ್ನೋಣ ಎಂದುಕೊಂಡೆ ಪುಟದಲ್ಲಿದ್ದ ಕುದುರೆಗೆ. ನಿನಗೆ ಗೊತ್ತಲ್ಲ ದಾರಿ, ಚಳಿಯಲ್ಲಿ ನೀಲಿ  ಬಣ್ಣಕ್ಕೆ ತಿರುಗಿದ ಹಿಮಪಾತದಲ್ಲೂ. ಮೂಲ: ಡೆಬೊರಾ ಗ್ರೆಗರ್ ಅನುವಾದ: ಸಿ. ಪಿ. ರವಿಕುಮಾರ್

ಶುಭವಿದಾಯ

ಇಮೇಜ್
  ಭದ್ರವಾಗಿದೆ ಮಂಜಿನಗಡ್ಡೆ ಎಂದರಲ್ಲ ಅವರು ಹಾಗೆಂದು ನಾನಲ್ಲಿ ಹೋಗುವೆನು ಜನರನ್ನು ನಂಬುವ ಸ್ವಭಾವಕ್ಕೆ ಕಟ್ಟುಬಿದ್ದು ಅಲ್ಲಿ ಕಾಲಿಟ್ಟು ನಿಲ್ಲುವೆನು. ಸಹಜವಾಗಿ ಅದು ಬಾಯಿ ಬಿಡುತ್ತದೆ ಮತ್ತು ನಾನೋ ಕಟ್ಟುಬಿದ್ದು ನನ್ನ ತೋರಿಕೆಯ ಅವಿಚಲ ಸ್ವಭಾವಕ್ಕೆ ಏನೂ ಆಗಿಲ್ಲವೆಂಬಂತೆ ನಟಿಸುತ್ತ  ನೇರವಾಗಿ ಜಾರುತ್ತೇನೆ ನೀರಿಗೆ ತೊಟ್ಟು ಕಪ್ತಾನನ ಟೋಪಿ ಮತ್ತು ಮುಖದ ಮೇಲೆ ದುಃಖದ ಮುಗುಳ್ನಗೆ, "ಶುಭವಿದಾಯ ನನ್ನ ಪ್ರೀತಿಪಾತ್ರರೇ, ಶುಭವಿದಾಯ!" ಮೇಲೆ ನನ್ನ ತಲೆಯ ಮೇಲೆ ಮಂಜಿನಗಡ್ಡೆ ಕ್ಲಿಕ್ ಸದ್ದಿನೊಂದಿಗೆ ಮುಚ್ಚಳದಂತೆ ಮುಚ್ಚಿಕೊಳ್ಳುತ್ತದೆ. ಮೂಲ: ಎಡ್ವರ್ಡ್ ಫೀಲ್ಡ್ ಅನುವಾದ: ಸಿ ಪಿ ರವಿಕುಮಾರ್