ಪೋಸ್ಟ್‌ಗಳು

Harivansha Rai Bachchan ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕತ್ತಲ ಹಣತೆ

ಇಮೇಜ್
ಕತ್ತಲ ಹಣತೆ ಮೂಲ: ಹರಿವಂಶರಾಯ್ ಬಚ್ಚನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಆಗಸ್ಟ್ ಹದಿನೈದು ೨೦೨೩ ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಕಮನೀಯ ಮಂದಿರವನ್ನು ಕಟ್ಟಿದ್ದೆಯಾ ಕಲ್ಪನೆಯ ಕೈಯಿಂದ? ಭಾವನೆಯ ಕೈಯಿಂದ ಅದರೊಳಗೆ ಬಂಧಿಸಿದ್ದೆಯಾ ಸ್ವಚ್ಛಂದ?ಕನಸುಗಳ ಕೈಯಿಂದ ಸಿಂಗರಿಸಿದ್ದೆಯಲ್ಲ ಬಹು ಅಂದ?ಅಲ್ಲಿ ಹರಡಿದ್ದೆಯಾ ಸ್ವರ್ಗದ ಸೌರಭದ ಸಿರಿಗಂಧ? ಮುರಿದು ಬಿದ್ದಿತೆ ಸೌಧ? ಆಯ್ದು ಇಟ್ಟಿಗೆ ಕಲ್ಲು ಅದರಿಂದ ಕಟ್ಟಿಕೊಳ್ಳಲು ಕಷ್ಟವೇ ಸರಳ ಶಾಂತಿ ಕುಟೀರವೊಂದ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ನಭನೀಲ ನೀಲಿಮೆಯಿಂದ ಮಾಡಿದ ಮಧುಪಾತ್ರೆಯೋ ಮನಮೋಹಕ ಮುಗಿಲ ಕಂಬನಿಯಲ್ಲಿ ನೆಂದು ಹೊಳೆಯುತ ಲಕಲಕ ಮಧುಪಾತ್ರೆಯೊಳು ನವಮೇಘದೊಲು ತುಳುಕುವ ದ್ರಾವಕ ಉಷೆಯ ಕೋಮಲ ಪ್ರಥಮ ಕಿರಣದ ಬಣ್ಣದ ಸಿಹಿ ಪಾನಕ ಮುರಿದು ಹೋದರೆ ಪಾತ್ರೆ ಜೋಡಿಸಿ ಎರಡು ಕೈಗಳ ಅಂಜಲಿ ಒಂದು ನಿರ್ಮಲ ನೀರಧಾರೆಯ ಕುಡಿಯಲು ಯಾವ ನಿರ್ಬಂಧ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಹಿಂದೆ ಜೀವನದಲ್ಲಿ ಎಂದೂ ಹತ್ತಿರ ಬರಲಿಲ್ಲ ಚಿಂತೆ ಕತ್ತಲೆಯ ಮಾತಿರಲಿ ಕರಿಛಾಯೆಯೂ ಬೀಳಲಿಲ್ಲ ಎಂಬಂತೆ! ಕಣ್ಣಲ್ಲಿತ್ತು ಮಾದಕತೆ, ಮಾತುಗಳಲ್ಲಿ ಮೋದದ ಕವಿತೆ ಗುಡುಗಿನಂತಹ ನಗೆಗೆ ನಾಚುತ್ತಿತ್ತು ಕಾರ್ಮೋಡಗಳ ಸಂತೆ ಕಳೆದುಕೊಂಡು ಇದೆಲ್ಲ ಉಲ್ಲಾಸವೇ ಕಳೆದುಹೋದಂತೆ, ಆದರೆ ಅಸ್ಥಿರತೆಯ ಈ ಸಮಯದಲ್ಲಿ ಮುಗುಳುನಗಲು ಯಾರ ನಿರ್ಬಂಧ? ಇರುಳು ಕತ್ತಲುಮಯವಾದ...

ನಗು (ಕವಿತೆ)

ಇಮೇಜ್
 ನಗು  (ಮೂಲ ಹಿಂದಿ ಕವಿತೆ: ಹರಿವಂಶರಾಯ್ ಬಚ್ಚನ್) ಏಕಾಂಗಿಯಾಗಿರುವಾಗ ಬಾ,  ಹೀಗೆ ಜನರ ನಡುವೆ ಇದ್ದಾಗ ಬಂದು  ನನ್ನನ್ನು ನಗುಪಾಟಲು ಮಾಡದಿರು ಎಂದು ಕಂಬನಿಗೆ ತಿಳಿಹೇಳಿದಾಗ  ಅದು ನೀಡಿತು ಮಾರುತ್ತರ ಜನರ ನಡುವೆ ಇದ್ದಾಗಲೂ ನೀನು  ಏಕಾಂಗಿ ಎಂದೇ ತೋರಿತು ಅದಕ್ಕೇ ಬಂದೆ ನಿನ್ನ ಹತ್ತಿರ. ಜೀವನದ ಓಟದಲ್ಲಿ ಅನುಭವ ಮಾಗಲಿಲ್ಲ,  ಹಸಿಯಾಗಿಯೇ ಉಳಿದು ಬಿಟ್ಟಿತು ನಟನೆ ಕಲಿಯಲಾಗದೆ ಮನಸ್ಸು  ಮಗುವಾಗಿಯೇ ಉಳಿದು ಬಿಟ್ಟಿತು ಬಾಲ್ಯದಲ್ಲಿ ಎಲ್ಲೆಂದರಲ್ಲಿ ಅಳುತ್ತಿದ್ದೆವು  ಎಲ್ಲೆಂದರಲ್ಲಿ ನಗುತ್ತಿದ್ದೆವು  ಆದರೆ ಈಗ  ನಗಲು ಬೇಕು ಮರ್ಯಾದೆಯ ಮುಸುಕು  ಮತ್ತು ಅಳಲು ಏಕಾಂತ! ಯಾವ ಮುಲಾಜಿಲ್ಲದೆ ನಾನೂ ನಗುತ್ತಿದ್ದೆ ಹಿಂದೊಮ್ಮೆ. ನನ್ನದೇ ಹಳೆಯ ಚಿತ್ರಗಳಲ್ಲಿ ಸಿಕ್ಕಿದೆ ಪುರಾವೆ. ನಡೆ, ನಾವು ಮುಗುಳ್ನಗಲು ಹುಡುಕೋಣ ಕಾರಣ ನೀನು ನನ್ನನ್ನು ಹುಡುಕು, ನಾನು ಹುಡುಕುವೆ ನಿನ್ನ.

ಅಗೋ ಕಳೆಯಿತು ದಿವಸ, ಅಗೋ ರಾತ್ರಿ (ಅನುವಾದಿತ ಕವಿತೆ}

ಇಮೇಜ್
  ಸೂರ್ಯನು ಸೇರಿ ಪಶ್ಚಿಮ ದಡ ,  ಮುಳುಗಿದನು ಸಂಧ್ಯೆಯ ಮುಸುಕನ್ನು ತೊಟ್ಟಿತು ಧಾತ್ರಿ ನೂರು ಸಂಜೆಗಳಂತೆಯೇ ಆ ಸಂಜೆಯೂ ಇತ್ತು ಮತ್ತೆ ಎದ್ದೇಳುವಾಗ ನನಗೇಕೆ ಅನ್ನಿಸಿತ್ತು ದಿನದಲ್ಲಿ ನಡೆವುದು ಏನಾದರೂ ಹೊಸತು? ಅಗೋ ಕಳೆಯಿತು ದಿವಸ, ಅಗೋ ರಾತ್ರಿ  ಮೆಲ್ಲಮೆಲ್ಲನೆ ಹೊರಬಂದವು ತಾರಗೆ ಮಿನುಗತೊಡಗಿತು ಬಿಚ್ಚಿಟ್ಟ ಬಾನ್ ಛತ್ರಿ ನೂರು ಇರುಳುಗಳಂತೆ ಆ ಇರುಳೂ ಇತ್ತು ಮತ್ತೆ ಸಂಜೆಯಾದಾಗ ಹೀಗೇಕೆ ಅನ್ನಿಸಿತ್ತು ತರುವುದೇನಾದರೂ ನಿಶೆ ಹೊಸದನ್ನು ಹೊತ್ತು? ಅಗೋ ಕಳೆಯಿತು ದಿವಸ, ಅಗೋ ರಾತ್ರಿ ಹಕ್ಕಿಗಳು ಉಲಿದವು, ಬಿರಿದವು ಮೊಗ್ಗು ಮತ್ತೆ ಬೆಸೆಯಿತು ಕಮಲ ಸೂರ್ಯನ ಮೈತ್ರಿ ಎಂದಿನಂತೆಯೇ ಇತ್ತು ಆ ದಿನದ ಬೆಳಗು ಮತ್ತೇಕೆ ನಿದ್ರೆಯಲ್ಲಿ ಉಲಿಯುತ್ತಿತ್ತು ನನ್ನೊಳಗು ನಸುಕು ನಾವೀನ್ಯವನ್ನು ತಂದೀತು ಎಂದು? ಅಗೋ ಕಳೆಯಿತು ದಿವಸ,  ಅಗೋ ರಾತ್ರಿ ಮೂಲ: ಹರಿವಂಶ ರಾಯ್ ಬಚ್ಚನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಬಂದದ್ದೇನು ನನ್ನ ಪಾಲಿಗೆ? (ಅನುವಾದಿತ ಕವಿತೆ)

ಬಂದದ್ದೇನು ನನ್ನ ಪಾಲಿಗೆ? ಎಲ್ಲಿ ಮಾಡಬೇಕಿತ್ತೋ ಸೀಯಾಳದಿಂದ ನೀರಾವರಿ ಅಲ್ಲಿ ಉ ಪ್ಪುನೀರಿನ ಹೊರತು ಬೇರೇನಿಲ್ಲ ರಹದಾರಿ ಏನೂ ಬೆಳೆಯದ ಜೀವನಹೊಲದಿಂದೇಕೆ ವಿಧಿ ತುಂಬಿತು ಈ ಬಾಳ ಜೋಳಿಗೆ? ಬಂದದ್ದೇನೆನ್ನ ಪಾಲಿಗೆ? ಕಣ್ಣೀರಿನಿಂದ ತೊಯ್ಯಿಸಿದರೂ ಹೊಲದಲ್ಲಿ ಬೆಳೆಯದಲ್ಲ ಫಲ ನೀಡುವ ಬಳ್ಳಿ ಸೃಷ್ಟಿಯ ಯಾವ ಗೂಢಾರ್ಥ ಅಡಗಿಹುದು ವ್ಯರ್ಥ ಪುನಃ ಪ್ರಯತ್ನದೊಳಗೆ? ಬಂದದ್ದೇನೇನ್ನ ಪಾಲಿಗೆ? ಮುರಿದುಹೋಗುತ್ತವೆ ಮಧುಮಾಸಗಳು ಏಕೆ ಕಾಲಿಡುವ ಮೊದಲೇ ಮಧುವನದ ಒಳಗೆ? ನಾಳೆಯ  ಪೂರ್ವ ಸಿದ್ಧತೆಯಲ್ಲೆ ಕರಗಿಹೋಗುತ್ತಿರುವ ಬಾಳಿಗೆ ಬಂದದ್ದೇನೆನ್ನ ಪಾಲಿಗೆ? ಮೂಲ: ಹರಿವಂಶ ರಾಯ್ ಬಚ್ಚನ್ ಅನುವಾದ: ಸಿ. ಪಿ. ರವಿಕುಮಾರ್

ಆದದ್ದಾಯಿತು, ಮರೆತು ನಡೆ ಮುಂದೆ!

ಆದದ್ದಾಯಿತು, ಮರೆತು ನಡೆ ಮುಂದೆ!  ಜೀವನದಲ್ಲೊಂದಿದ್ದಿತು ತಾರೆ  ಸುರಿಸುತ್ತಿದ್ದಿತು ಚೆಲುವಿನ ಧಾರೆ  ಅಸ್ತಂಗತವಾಯಿತೆ? ಹೋದರೆ ಹೋಯ್ತು, ಬಡವಾಯಿತೆ  ಅಂಬರದ ಕಲಾಪತ್ತು?  ಎಷ್ಟು ಉರುಳುವುವೋ ಮಣಿ-ತಾರೆ!  ಜಗಮಗಿಸುವುದಾದರೂ ಜರಿಸೀರೆ ಮರಳಿ ಸಿಗುವುದೇ ಕೆಳಗುರುಳಿದ ತಾರೆ? ಅದಕಳುವುದೇ ಅಂಬರ ಎಂದಾರೆ? ಆದದ್ದಾಯಿತು, ಮರೆತು ನಡೆ ಮುಂದೆ! ಜೀವನದಲ್ಲಿತ್ತೊಂದು ಸುಕುಮಾರ ಕುಸುಮ  ಸಮರ್ಪಿಸಿಕೊಂಡೆಯಲ್ಲ ಅದಕ್ಕೆ ಹೃದಯ  ಒಣಗಿ ಹೋಯಿತು ಆ ಹೂವು ಒಂದು ದಿನ  ಅದರಿಂದ ಬರಿದಾಯಿತೇ ಹೇಳು, ಮಧುವನ?  ಒಣಗುತ್ತವೆ ನಿತ್ಯವೂ ಮಧುವನದಲ್ಲಿ  ಅದೆಷ್ಟು ಹೂವು, ಅದೆಷ್ಟು  ಬಳ್ಳಿ? ಒಣಗಿ ಉರುಳಿದ ಹೂವು  ಅರಳುವುದೇ ಮರಳಿ? ಮಿಡಿವುದೇ ವನವು ಒಂದಾದರೂ ಕಂಬನಿ? ಆದದ್ದಾಯಿತು, ಮರೆತು  ನಡೆ ಮುಂದೆ! ಜೀವನದಲ್ಲಿತ್ತೊಂದು  ಮಧು ಹೀರುವ ಬಟ್ಟಲು  ಸುತ್ತುತ್ತಿತ್ತು ನಿನ್ನ ಬದುಕು ಅದರ ಸುತ್ತಲೂ   ಒಂದು ದಿನ ಕೆಳಗೆ ಬಿದ್ದು ಚೂರಾಯಿತು  ಚೂರಾಗಲೇ ಬೇಕಲ್ಲ ಯಾವುದೇ ಗಾಜು? ಮದಿರಾಲಯದ ಅಂಗಳದಲ್ಲಿ ನಿತ್ಯವೂ ಹೀಗೆ  ಅಲ್ಲಾಡಿ ಕೆಳಬಿದ್ದು ಮುರಿಯುವ  ಮಧುಪಾತ್ರೆ ಮಣ್ಣಾಗಿ ಹೋಗುವುವು ಮಣ್ಣಲ್ಲಿ ಬೆರೆತು  ಶೋಕಿಸದು ಮದಿರಾಲಯವು ಒಂದಿನಿತೂ ಆದದ್ದಾಯಿತು, ಮರೆತು  ನಡೆ ಮುಂದೆ! ಮೃದುವಾದ ಮಣ್ಣಿಂದ ಮಾಡಿರುವ  ಮಡಕ...

ಹಾಡುವರಾರು ನದೀತಟದಲ್ಲಿ?

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಹಾಡುವರಾರು ನದೀತಟದಲ್ಲಿ? ಭಂಗಗೊಳಿಸುತ್ತ ನಿಶೆಯ ನೀರವ  ಮೇಲೇಳುವ ಈ ಗ್ರಾಮೀಣ ಸ್ವರ  ಹಾಯುತ ಹುರುಳಿಯ ಹೊಲಗಳ ಮೇಲೆ  ಎಬ್ಬಿಸುತಿದೆ ಕಾವೇರಿಯೊಳು ಅಲೆ! ಹಾಡುವರಾರು ನದೀತಟದಲ್ಲಿ? ಬಂಧುಗಳಿರಬಹುದಿಲ್ಲೇ ಸನಿಹದಲಿ, ಧ್ಯಾನಿಸುತ್ತ ಮೌನದಿ ಮನದಲ್ಲಿ, ವ್ಯರ್ಥವಲ್ಲ ತಮ್ಮಯ ಆಲಾಪ,  ಶ್ರವಣಸುಖವ ತರುತಿದೆ ಜನಪದಕೆ! ಹಾಡುವರಾರು ನದೀತಟದಲ್ಲಿ? ವಿಚಲಿತವಾಗಿದೆ ಇಂದೇತಕೆ ಮನ  ಕೇಳುತ ಈ ಏಕಾಂತದ ಗಾಯನ? ಇದನೇ ಕೇಳುತ ನಾ ಮುಂಜರಿವೆ! ಇದನೇ ಹಾಡುವೆ, ಇದನೇ ಬರೆವೆ!  ಹಾಡುವರಾರು ನದೀತಟದಲ್ಲಿ?

ಬರುತಿದೆ ರವಿಯ ಸವಾರಿ!

ಇಮೇಜ್
ಮೂಲ - ಹರಿವಂಶರಾಯ್ ಬಚ್ಚನ್ ಅನುವಾದ - ಸಿ. ಪಿ. ರವಿಕುಮಾರ್ ಬರುತಿದೆ ರವಿಯ ಸವಾರಿ! ನವಕಿರಣದ ಹೊಳೆವ ರಥ ಬಿರಿವ ಮುಗುಳ ಕುಸುಮಪಥ ಸ್ವಾಗತಿಸುವ ಮೇಘಸೈನ್ಯ ಸ್ವರ್ಣವಸ್ತ್ರಧಾರಿ! ಬರುತಿದೆ ರವಿಯ ಸವಾರಿ! ವಿಹಗ, ಭೃಂಗ, ಹೆಜ್ಜೇನು, ಹಾಡುತ್ತಿವೆ ಕೀರ್ತಿಯನು ತ್ಯಜಿಸಿ ರಣವ ತಾರಾಬಲ ಆಗುತಿದೆ ಪರಾರಿ! ಬರುತಿದೆ ರವಿಯ ಸವಾರಿ! ಕುಣಿದು ಜಯವ ಕೂಗಲು ಮನ ಶಂಕಿಸುವುದು ಏಕೆ? ಹೀನ- ನಂತೆ ನಿಂತ ನಿಶೆಯ ನೋಡಿ, ಭಿಕ್ಷುವೇಷಧಾರಿ! ಬರುತಿದೆ ರವಿಯ ಸವಾರಿ!

ನಿದ್ರಿಸುವೆ, ನೀ ಹಾಡಿದರೆ!

ಇಮೇಜ್
ಮೂಲ ಹಿಂದಿ ... ಹರಿವಂಶರಾಯ್ ಬಚ್ಚನ್ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ (ಹರಿವಂಶರಾಯ್ ಬಚ್ಚನ್ ಅವರ ಈ ಗೀತೆಯನ್ನು ಆಲಾಪ್ ಹಿಂದಿಚಿತ್ರದಲ್ಲಿ ಬಳಸಲಾಗಿದೆ. ಇದನ್ನು ಏಸುದಾಸ್ ಹಾಡಿದ್ದಾರೆ.) ನಿದ್ರಿಸುವೆ, ನೀ ಹಾಡಿದರೆ! ಸಂಸ್ಕೃತಿಯ ವಿಶಾಲ ಸಮುದ್ರದೊಳು ಸುಖದುಃಖದ ಅಲೆಗಳ ಬೀಳೇಳು ಏರುವೆ ಸ್ವಪ್ಪದ ನೌಕೆಯ ಮಡಿಲು! ತೇಲುತ ಸಾಗುವೆ ಹಗಲೂ ಇರುಳೂ! ನಿದ್ರಿಸುವೆ, ನೀ ಹಾಡಿದರೆ! ಬೀರುತ ನನ್ನೆಡೆ ಪ್ರೇಮದ ನೋಟ ಹಾಡುತ ಶುಭಹರಕೆಯ ಸಂಗೀತ ಮಾತೆಯ ಮಮತೆಯ ಮಡಿಲಿನ ಮಾಟ ಹಣೆ ನೇವರಿಸುವ ಬೆರಳಿನ ಆಟ ನಿದ್ರಿಸುವೆ, ನೀ ಹಾಡಿದರೆ! ನನ್ನಯ ಬದುಕಿನ ಕಹಿನಾಟಕವ ನನ್ನಯ ಜೀವನ ಕಾರ್ಕೋಟಕವ ಸಿಹಿಗೊಳಿಸುತ ತನ್ನಯ ಗೀತೆಯಲಿ ಮೆಲ್ಲನೆ ಹಾಡಿದರಿನಿದನಿಯಲ್ಲಿ, ನಿದ್ರಿಸುವೆ, ನೀ ಹಾಡಿದರೆ! ಮೂಲ ಹಿಂದಿ ... ಹರಿವಂಶರಾಯ್ ಬಚ್ಚನ್ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್

ಮೋಡವೇ ಮಾತಾಡು ನನ್ನೊಡನೆ!

ಇಮೇಜ್
ಮೂಲ ಹಿಂದಿ ರಚನೆ - ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  ಮೋಡವೇ ಮಾತಾಡು ನನ್ನೊಡನೆ! ತುಂಬಿದೆ  ಕಗ್ಗತ್ತಲು    ನಿನ್ನೊಳಗೆ ಕಗ್ಗತ್ತಲು  ತುಂಬಿದೆ ನನ್ನೊಳಗೂ ಹೇಗೆ ತುಂಬಿಹುದೋ ನಿನ್ನೊಳು  ನೋವು   ಹಾಗೆ ತುಂಬಿಹುದು  ನೋವು  ನನ್ನೊಳಗೂ  ನಿನ್ನ ಹೃದಯಕೂ  ನನ್ನ ಹೃದಯಕೂ ಆಗದೇ  ಮೇಘವೇ,   ಸಮತುಲನೆ! ಮೋಡವೇ ಮಾತಾಡು ನನ್ನೊಡನೆ! ಅಡಗಿದೆ ಹೇಗೋ ನಿನ್ನೊಳು ಅಗ್ನಿ ಅಡಗಿದೆ ಅಗ್ನಿಯು ನನ್ನೊಳಗೂ ರಾಗರಂಗುಗಳು ನಿನ್ನೊಳು ಹೇಗೋ  ಹಾಗೇ ತುಂಬಿವೆ ನನ್ನೊಳಗೂ  ಇಬ್ಬರೂ  ಹೃದಯದ್ವಾರವ ತೆರೆದು  ಹರಿಸುವ ಮರುಕದ ಧಾರೆಯನೇ! ಮೋಡವೇ, ಮಾತಾಡು ನನ್ನೊಡನೆ! ಗುಣದೊಳಲ್ಪ  ವ್ಯತ್ಯಾಸವು ನನಗೂ  ನಿನಗೂ ಇರುವುದು ಒಂದು  ಉಪ್ಪಾಗಿದೆ ನನ್ನಯ ಕಣ್ಣೀರು  ಮಧುರ ನಿನ್ನ ಪ್ರತಿ ಬಿಂದು  ವ್ಯರ್ಥವು  ನನ್ನೀ ಕಂಬನಿ, ಮೋಡದ  ಹನಿ  ನೀಡುವುದು ಬದುಕನ್ನೇ!  ಮೋಡವೇ, ಮಾತಾಡು ನನ್ನೊಡನೆ!

ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ?

ಇಮೇಜ್
ಮೂಲ ಹಿಂದಿ ರಚನೆ - ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ನಾನೇನು ಮಾಡಲಿ? ನೋವಿನಲ್ಲಿದ್ದಾಗಲೆಲ್ಲಾ ನಾನು ಸಂವೇದನೆ ತೋರುವೆ ಕೈ ನೀಡಿ ನಾನೂ ತಿಳಿಸುವೆ ಕೃತಜ್ಞತೆಗಳನ್ನು ಪೂರೈಸುವೆವು ಲೋಕಾರೂಢಿ ಈಚೆಗೇಕೋ ಆಭಾರಿಯಾಗುತ್ತ ಭಾರವಾಗುತ್ತಿದೆ ನನ್ನ ಹೆಗಲು! ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ಏನು ಮಾಡಲಿ? ನನ್ನ ಒಂದಾದರೂ ನಿಟ್ಟುಸಿರು ನಿನ್ನದಾಗಿದ್ದು ಎಂದು? ನಿನ್ನ ಕಣ್ಣುಗಳಿಂದ ಉದುರುವುದೇ ನನ್ನ ಕಂಬನಿಯ ಬಿಂದು? ಎಷ್ಟುದಿನ ಬಚ್ಚಿಟ್ಟೀತು ಸತ್ಯ, ಮಾತುಗಳ ಬಾಗಿಲು! ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು! ನಾನೇನು ಮಾಡಲಿ? ತನ್ನ ದುಃಖ ಪರರಿಗೆ ಕೊಡಬಲ್ಲವರಾರು? ಪರರ ದುಃಖ ತಮ್ಮದೆಂದೇ ಯಾರು ಸ್ವೀಕರಿಸುವರು? ಎಷ್ಟುದಿನ ಈ ವಂಚನೆಯ ವ್ಯಾಪಾರ ಮಾಡಿಕೊಳ್ಳುವೆವು ಅದಲು ಬದಲು? ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ನಾನೇನು ಮಾಡಲಿ? ಒಪ್ಪಿಕೊಳ್ಳೋಣವೇ, ಈ ಪಥದಲ್ಲಿ ಎಲ್ಲರೂ ಒಂಟಿ ನಡೆದರೂ ಅಕ್ಕಪಕ್ಕ. ಅವರವರ ನೋವು ಅವರವರ ಬುತ್ತಿ, ಹಂಚಲಾರದು ಪರಸ್ಪರ ಸುಖದುಃಖ. ಪರರ ವೇದನೆಗೆ ಸಂವೇದನೆ ಸೂಚಿಸುವ ವ್ಯಕ್ತಿ ತನ್ನದೇ ವೇದನೆಯಿಂದ ಪಡೆಯಬಯಸುವನು ಮುಕ್ತಿ ನೀ ದುಃಖಿಯೇ? ಇಗೋ ನಾ ಸುಖಿ! ಅಭಿಶಪ್ತ ವಿಶ್ವದ್ದಿದುವೆ ಅಳಲು! ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ನಾನೇನು ಮಾಡಲಿ?

ಆತ್ಮದೀಪ

ಇಮೇಜ್
ಮೂಲ ಹಿಂದಿ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಮಣ್ಣಿನಿಂದ ಮಾಡಿದ ಸಣ್ಣದೊಂದು ಹಣತೆ ನಾನು ನನಗಿಲ್ಲ ನನ್ನನ್ನು ಕುರಿತು ಎಳ್ಳಷ್ಟೂ ಪ್ರೀತಿ  ಜಗತ್ತು ಎಲ್ಲಿಯವರೆಗೂ ಬಯಸುತ್ತದೋ ಜ್ಯೋತಿ ನನ್ನಿಂದ, ಉರಿಯುತ್ತಾ  ಕೊಡಲು ಸಿದ್ಧನಾಗಿಹೆನು  ಆದರೆ ನನ್ನ ಬೆಳಕಿನಿಂದ ಏನಾದರೂ  ಕೋರೈಸಿದರೆ ನಿದ್ರಿಸಿದ ಜಗದ ಕಣ್ಣು  ನಂದಿಸಿಬಿಡಲಿ ಬೇಕಾದರೆ ನನ್ನನ್ನು  ನಂದಲು ನನ್ನದೇನೂ ಇಲ್ಲ ತಕರಾರು  ತಿಳಿದುಕೊಳ್ಳಲಿ ಇಷ್ಟನ್ನು ಮಾತ್ರ ನನ್ನನ್ನು ಕುರಿತು ಜಗತ್ತು: ಮಣ್ಣಿನ ದೀಪವಾದರೂ ನಾನು ಭಿನ್ನ  ಪ್ರಕೃತಿಯು ಹಾಗೆ ಸೃಷ್ಟಿಸಿದೆ ನನ್ನನ್ನ  ಜೀವಂತ ಹಣತೆಯು ನಾನು, ಅಭಿಮಾನ ನನ್ನಲ್ಲಿ ತುಂಬಿರುವುದು  ನಂದಿಸಲು ನನ್ನನ್ನು ಕೈ ಮುಂದೆ ಮಾಡುವ ಮುನ್ನ  ಯೋಚಿಸಲಿ ಜಗತ್ತು ಒಂದಲ್ಲ ಹತ್ತು ಸಲ  ಪಶ್ಚಾತ್ತಾಪ ಪಡಬಾರದಲ್ಲ ಅನಂತರ  ನಂದಿಸಿದ ನಂತರ ಹಚ್ಚಲಾಗದು ನನ್ನನ್ನು ಪುನಃ 

ಅಗ್ನಿಪಥ

ಇಮೇಜ್
ಮೂಲ ಹಿಂದಿ ಕವಿತೆ: ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಇಂದೊಂದು ಪ್ರೇರಣಾತ್ಮಕ ಕವಿತೆ. ಮುಂದೆ ಸಾಗುವುದೊಂದೇ ಗುರಿಯಾದಾಗ ಎಲ್ಲೂ ನಿಲ್ಲುವ ಪ್ರಶ್ನೆಯಿಲ್ಲ, ವಿಶ್ರಮಿಸಿಕೊಳ್ಳುವ ಪ್ರಶ್ನೆಯಿಲ್ಲ, ಬಂದ ದಾರಿಯ ಕಡೆಗೆ ತಿರುಗಿ ನೋಡುವ ಪ್ರಶ್ನೆಯಿಲ್ಲ.   ನಡೆಯಬೇಕಾದದ್ದು ಕೆಂಡದ ಹಾದಿಯೇ ಇರಲಿ!  ಕಷ್ಟದೊಂದಿಗೆ ಮನುಷ್ಯನ ಹೋರಾಟ ಕವಿಗೆ ಒಂದು ಮಹಾನ್ ದೃಶ್ಯದಂತೆ ಕಾಣುತ್ತದೆ.  ಹಸಿರು ಉಟ್ಟ ಎತ್ತರ ವೃಕ್ಷವಿರಲಿ ಹತ್ತಿರ, ನೆರಳು ಒಂದು ಎಲೆಯದೂ ಬೇಡುವುದು ಅಸಮ್ಮತ, ಅಗ್ನಿಪಥ! ಅಗ್ನಿಪಥ! ಅಗ್ನಿಪಥ! ದಣಿಯಲಾರೆ ನೀನೆಂದೂ ನಿಲ್ಲಲಾರೆ ನೀನೆಂದೂ ತಿರುಗಲಾರೆ ಹಿಂದಕ್ಕೆ ತೊಡು ಶಪಥ, ತೊಡು ಶಪಥ, ತೊಡು ಶಪಥ, ಅಗ್ನಿಪಥ! ಅಗ್ನಿಪಥ! ಅಗ್ನಿಪಥ! ಎಂಥ  ಮಹಾನ್ ದೃಶ್ಯ ಸಾಗುವುದು ಮನುಷ್ಯ ಬೆವರು ಕಣ್ಣೀರು ರಕ್ತದಿಂದ ಓತಪ್ರೋತ ಓತಪ್ರೋತ ಓತಪ್ರೋತ, ಅಗ್ನಿಪಥ! ಅಗ್ನಿಪಥ! ಅಗ್ನಿಪಥ!  (೧೮ ನವೆಂಬರ್ ೨೦೧೬)

ಮುದಿ ರೈತ

ಮೂಲ ಹಿಂದಿ - ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಇದೋ ಮುಗಿದುಹೋಯಿತು ನನ್ನ ಕೆಲಸ  ಇನ್ನೇನಿದ್ದರೂ ನಿದ್ದೆ, ಆಲಸ.  ಇನ್ನೇಕೆ ಮಚ್ಚು,  ಇನ್ನೇಕೆ ಮಂಕರಿ, ಇನ್ನೇಕೆ ಸನಿಕೆ, ಗುದ್ದಲಿ,          ಹಾರೆ, ನೇಗಿಲು, ಎಲ್ಲಾ ಕೊಟ್ಟುಬಿಟ್ಟೆ.  ನನ್ನ ಮಣ್ಣಿನಲ್ಲಿ ಏನು ಬರೆದಿತ್ತೋ  ಮೊಗೆಮೊಗೆದು ತೆಗೆದೆ ನಾನು ಕಣ್ಣೀರು, ಬೆವರು, ರಕ್ತ ಹರಿಸಿ.  ಕಡಿದೆ, ರಟ್ಟೆ ಬೀಳುವವರೆಗೂ ದುಡಿದೆ, ಈಗ ಸಾವು ಬಂದರೂ ನನ್ನ ಮಣ್ಣಲ್ಲಿ ಏನು ಸಿಕ್ಕೀತು ಅದಕ್ಕೆ? ಲೊಟ್ಟೆ.  

ಹೊಸ ಅನುಭವ

ಇಮೇಜ್
ಮೂಲ ಕವಿತೆ - ಹರಿವಂಶರಾಯ್ ಬಚ್ಚನ್ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಹಕ್ಕಿಯಲ್ಲಿ ನಾನು ತೋಡಿಕೊಂಡೆ ಬಯಕೆ: ಬರೆಯಬೇಕಾಗಿದೆ ನಿನ್ನ ಬಗ್ಗೆ ಕವಿತೆ. ಹಕ್ಕಿ ಕೇಳಿತು -"ನನ್ನ ರೆಕ್ಕೆಯ ಬಣ್ಣಗಳು ನಿನ್ನ ಶಬ್ದಗಳಲ್ಲಿದೆಯೇ?" "ಇಲ್ಲ" ಎಂದೆ ನಾನು. "ನಿನ್ನ ಶಬ್ದಗಳಲ್ಲಿದೆಯೇ ನನ್ನ ಕಂಠದಲ್ಲಿರುವ ಸಂಗೀತ?" "ಇಲ್ಲ" "ನನ್ನ ಹಾಗೆ ಹಾರಬಲ್ಲವೇ ನಿನ್ನ ಶಬ್ದಗಳು?" "ಇಲ್ಲ" "ಜೀವವಿದೆಯೇ ನಿನ್ನ ಶಬ್ದಗಳಲ್ಲಿ?" "ಇಲ್ಲ" "ಮತ್ತೆ, ಕವಿತೆ ಏನು ಬರೆಯುತ್ತೀ?" "ನಿನ್ನಲ್ಲಿ ನನಗಿರುವ ಪ್ರೇಮ ವ್ಯಕ್ತಗೊಳಿಸಲೇ ಬೇಕು, ಕವಿಯ ಕರ್ಮ" "ಪ್ರೇಮಕ್ಕೂ ಶಬ್ದಗಳಿಗೂ ಸಂಬಂಧವೆಲ್ಲಿದೆ?' ಹೊಳೆದು ಹೊಸದೇನೋ ಶರಣಾದೆ  ಮೌನಕ್ಕೆ.

ಸ್ನೇಹ ... !

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಸ್ನೇಹ - ತಾನು ಪರೀಕ್ಷೆ ಒಡ್ಡುವುದಿಲ್ಲ ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುವುದೂ ಇಲ್ಲ ಹೇಳುತ್ತೇನೆ ಕೇಳು ಸ್ನೇಹ ಏನೆಂದು - ಮಳೆಯಲ್ಲಿ ನೆಂದ ಚೆಹರೆಯ ಮೇಲೂ ಗುರುತಿಸುವುದಿದೆಯಲ್ಲ ಕಣ್ಣೀರ ಕಲೆ  ಸ್ನೇಹದ ಗುರುತೆಂದರೆ ನೋಡು, ಅದೇ! ಇಂದು ಕಳೆದೆ ಒಂದಿಷ್ಟು ಹೊತ್ತು ಭಗವಂತನ ಜೊತೆ ನನ್ನ ಬಗ್ಗೆ ಸಾಕಷ್ಟು ಆಯಿತು ಮಾತುಕತೆ ನಾನೆಂದೆ - "ಎಂಥೆಂಥ ಗೆಳೆಯರಿದ್ದಾರೆ ನನಗೆ! ನನ್ನ ಭಾಗ್ಯಕ್ಕೆ ತುಂಬಿ ಬರುತ್ತದೆ ಎದೆ" ಭಗವಂತನು ಹೀಗೆಂದ:  "ಜೋಪಾನ! ಕಳೆದುಕೊಂಡೀಯೆ ಜೋಕೆ!" ನನ್ನ ಮೆಚ್ಚಿನವರು ಅವರು, ಹೇಗೋ ಬಂದಿದ್ದಾರೆ ನಿನ್ನ ಭಾಗಕ್ಕೆ!" ದಿನಗಳು ಕಳೆದುಹೋಗಿ ಉಳಿಯುತ್ತವೆ ಸವಿನೆನಪು ಕತೆಗಳಾಗಿ ಉಳಿಯುತ್ತವೆ ನಡೆದು ಹೋದ ಮಾತು ಆದರೆ ಗೆಳೆಯರೋ! ಇರುವರು ಸದಾ ನಮ್ಮ ಹೃದಯಕ್ಕೆ  ಹತ್ತಿರದಲ್ಲಿ  ಕೆಲವೊಮ್ಮೆ ಮುಗುಳ್ನಗೆಯಾಗಿ, ಕೆಲವೊಮ್ಮೆ ಕಣ್ಣಲ್ಲಿ ಸುರಿವ ಜಲವಾಗಿ. --- Translation of a poem by Harivansha Rai Bachchan  C.P. Ravikumar