ಕಬೀರನ ಒಂದು ದ್ವಿಪದಿಯಲ್ಲಿ ಅವನು ಹೀಗೆ ಹೇಳಿದ್ದಾನೆ. ಎಲ್ಲಿ ಹೆಸರಿದೆಯೋ ಅಲ್ಲಿ ಕೆಲಸವಿಲ್ಲ, ಎಲ್ಲಿ ಕೆಲಸವಿದೆಯೋ ಅಲ್ಲಿಲ್ಲ ಹೆಸರು ಎಂದೂ ಸೇರವು ಒಂದೇ ಸ್ಥಳದಲ್ಲಿ ತಿಂಗಳು ಮತ್ತು ನೇಸರು ಬೇಂದ್ರೆ ಅವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ನಿಮಗೆ ನೆನಪಾಗಿರಬಹುದು. ಸೂರ್ಯ ಮತ್ತು ಚಂದ್ರ ಒಂದು ಕಡೆ ಹೇಗೆ ಸೇರುವುದಿಲ್ಲವೋ ಹಾಗೇ ಕೆಲಸ ಮತ್ತು ಹೆಸರು ಎಂದೂ ಒಂದೇ ಕಡೆ ಸೇರುವುದಿಲ್ಲ ಎನ್ನುವುದು ಕಬೀರನ ದ್ವಿಪದಿಯ ಸಾರಾಂಶ. ಕೆಲಸ ಯಾರದೋ ಆದರೂ ಹೆಸರು ತೆಗೆದುಕೊಳ್ಳುವವರು ಬೇರೆ ಎಂಬ ವಿಷಯವನ್ನು ನೀವು ಪ್ರತಿನಿತ್ಯ ನೋಡುತ್ತೀರಿ. ಯಾರೋ ಕಷ್ಟ ಪಟ್ಟು ಬರೆದದ್ದನ್ನು ಅನಾಯಾಸವಾಗಿ ಕಾಪಿ ಮಾಡಿ ತಮ್ಮ ಹೆಸರು ಹಾಕಿಕೊಳ್ಳುವುದು ಈಗ ಬಹಳ ಸಾಧಾರಣವಾಗಿದೆ. ಇದಕ್ಕೆ ಪ್ಲೇಜಿಯರಿಸಮ್ ಎಂಬ ಒಂದು ಇಸಂ ಪದವಿದೆ. ಆಲೆಕ್ಸ್ ಹೇಯ್ಲಿ ಎಂಬ ಅಮೆರಿಕನ್ ಮೂಲದ ಲೇಖಕ ರೂಟ್ಸ್ ಎಂಬ ಕಾದಂಬರಿ ಬರೆದ. ಕಪ್ಪು ಅಮೆರಿಕನ್ ಜನರ ಬೇರುಗಳನ್ನು ಶೋಧಿಸುವ ಈ ಕಾದಂಬರಿಯ ಸಂಕ್ಷಿಪ್ತ ರೂಪ ಬಹಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಿಸಿತು. ಆಗ ಅದನ್ನು ಓದಿ ಈ ಜನಾಂಗದವರು ಒಳಗಾದ ಶೋಷಣೆ ಕುರಿತು ನನ್ನ ಕಣ್ಣು ತೆರೆಯಿತು. ಮುಂದೆ ಈ ಕಾದಂಬರಿಯಲ್ಲಿ ಹೆರಾಲ್ಡ್ ಕೊರ್ಲಾಂಡರ್ ಎಂಬ ಲೇಖಕನ ದ ಆಫ್ರಿಕನ್ ಕೃತಿಯಿಂದ ಭಾಗಗಳನ್ನು ಕದಿಯಲಾಗಿದೆ ಎಂಬ ಆಪಾದನೆ...