ಪೋಸ್ಟ್‌ಗಳು

Nirala ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಾಜನು ತನ್ನನ್ನು ರಕ್ಷಿಸಿಕೊಂಡ

ಇಮೇಜ್
ಮೂಲ ಹಿಂದಿ - ಸೂರ್ಯಕಾಂತ್ ತ್ರಿಪಾಠಿ ನಿರಾಲಾ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ರಾಜನು ತನ್ನನ್ನು ರಕ್ಷಿಸಿಕೊಂಡ.  ಕೋಟೆ ಕಟ್ಟಿದ, ದೊಡ್ಡ ಸೈನ್ಯ ಇಟ್ಟುಕೊಂಡ.  ಬಾಲ ಅಲ್ಲಾಡಿಸುವ ಸಾಮಂತರಾಜರು  ತಮ್ಮ ಸ್ವಾರ್ಥದ ಕೋಲನ್ನಿಟ್ಟುಕೊಂಡು  ಅವನ  ಹಿಂದೆ ಬಂದರು.  ಗ್ರಂಥಗಳಲ್ಲಿ  ಬ್ರಾಹ್ಮಣರು  ಜನತೆಯನ್ನು ಬಂಧಿಸಿ ತಂದ ರು.  ಕವಿಗಳು ರಾಜನ ಶೌರ್ಯವನ್ನು ಹಾಡಿದರು, ಲೇಖಕರು ಲೇಖನಗಳನ್ನು ಬರೆದರು, ಇತಿಹಾಸಕಾರರು ಇತಿಹಾಸದ ಪುಟ ತುಂಬಿಸಿದರು.  ನಟರು-ಕಲಾವಿದರು ನಾಟಕಗಳನ್ನು ರಚಿಸಿ  ರಂಗಮಂಚದ ಮೇಲೆ ಆಡಿದರು.  ಜನರ ಮೇಲೆ ನಾಟಿತು ರಾಜನ ಸಮ್ಮೋಹನಾಸ್ತ್ರ, ಲೋಕದ ನಾರಿಯರಿಗೆ ಅವನ ರಾಣಿಯರು ಆದರ್ಶರಾದರು, ಧರ್ಮಕಾರ್ಯಗಳು ಹೆಚ್ಚುತ್ತಿವೆ ಎಂಬ ಸುಳ್ಳು ಹಬ್ಬಿತು.  ಆದರೆ ಸಭ್ಯತೆಯ ಹೆಸರಿನಲ್ಲಿ ಧರ್ಮ ಕಂಟಕದಲ್ಲಿತ್ತು.  ರಕ್ತದ ನದಿ ಹರಿಯಿತು, ಜನ ಕಣ್ಣು-ಕಿವಿ ಮುಚ್ಚಿಕೊಂಡು ಅದರಲ್ಲಿ ಮುಳುಗೆದ್ದರು.  ಕಣ್ಣು ತೆರೆದಾಗ ರಾಜ ತನ್ನನ್ನು ರಕ್ಷಿಸಿಕೊಂಡ. 

ಜಯ ಭಾರತೀ ವಸುಂಧರೆ!

ಇಮೇಜ್
ಮೂಲ ಹಿಂದಿ ಕವಿತೆ - ಸೂರ್ಯಕಾಂತ ತ್ರಿಪಾಠಿ  ನಿರಾಲಾ   ಜಯ ಭಾರತೀ ವಸುಂಧರೆ, ಕನಕ-ಸಸ್ಯ-ಕಮಲಧರೆ!  ಶ್ರೀಲಂಕೆಯ ಪದತಲ, ಪದ್ಮಪೀಠ  ಶತದಳ  ಪೂಜ್ಯ ಚರಣ ಯುಗಳವ,  ಸ್ತುತಿಸಿ ಶುಭ್ರಗೊಳಿಸುವ  ನೀಲಕಡಲ ಹೆದ್ದೆರೆ!  ವನ-ಉಪವನ-ತರುಲತೆ ಸಸ್ಯವಸನ ಶೋಭಿತೆ ಕೊರಳಿನಲ್ಲಿ ಫಳಫಳ ಗಂಗೆಯ ಜ್ಯೋತಿರ್ಜಲ ಹಾರದಂತೆ ಹೊಳೆದಿದೆ! ಮುಕುಟ ಶುಭ್ರ ಹಿಮ-ತುಷಾರ, ಪ್ರಾಣ ಪ್ರಣವ ಓಂಕಾರ ಗೊಳ್ಳುತಿಹುದು ಅನುರಣ, ಕೋಟಿಕೋಟಿ ಹೃನ್ಮನ  ಒಂದು ಕೊರಳು, ಒಂದೆದೆ! (ಚಿತ್ರ - ವಿಕಿಪೀಡಿಯಾ) 

ನೀಡೌ, ವೀಣಾವಾದಿನಿ, ವರವ!

ಇಮೇಜ್
ಮೂಲ - ಸೂರ್ಯಕಾಂತ ತ್ರಿಪಾಠಿ "ನಿರಾಲಾ" ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನೀಡೌ, ವೀಣಾವಾದಿನಿ, ವರವ! ನವ ಸ್ವಾತಂತ್ರ್ಯದ  ಅಮೃತಮಂತ್ರವು  ತುಂಬುವಂತೆ ಭಾರತವ! ಸೀಳಿ ಅಂಧಕಾರದ ಎದೆಯನ್ನು  ಹರಿಸು ತಾಯೆ ಜ್ಯೋತಿರ್ಮಯವನ್ನು  ಭೇದವೆಂಬ ತಮವನು ಕತ್ತರಿಸಿ  ಎಲ್ಲೆಡೆ ಜ್ಞಾನಪ್ರಕಾಶವ ಹರಿಸಿ ಬೆಳಗು ನಮ್ಮ ಮಾನಸವ! ಹೊಸ ತಾಳ-ಸ್ವರ-ರಾಗ-ಲಯಗಳು  ಕಂಠವು ಮರಿಮೋಡದ ಗುಡುಗಿನೊಲು, ನೀಡೌ ಆಕಾಶದ ತುದಿಯೊಳಗೆ   ರೆಕ್ಕೆಯೊಡೆದು ಹಾರುವ ಖಗಗಳಿಗೆ  ಮಾಡಲಿ ಶುಭ ಕಲರವವ!  ನೀಡೌ, ವೀಣಾವಾದಿನಿ, ವರವ! (ಹಿಂದಿಯ ಪ್ರಸಿದ್ಧ ಕವಿ "ನಿರಾಲಾ" ಅವರು ಬರೆದ ಈ ಸರಸ್ವತಿವಂದನೆಯನ್ನು  ಅನೇಕ ಕಲಾವಿದರು ಹಾಡಿದ್ದಾರೆ. ನಿಮಗೆ ಯೂಟ್ಯೂಬಿನಲ್ಲಿ ಧ್ವನಿಮುದ್ರಿಕೆಗಳು ಸಿಕ್ಕುತ್ತವೆ. ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದಾಗ ಬರೆದ ಈ ಕವಿತೆಯಲ್ಲಿ ಭಾರತವನ್ನು ಕುರಿತು ಕವಿಯ ಕನಸುಗಳಿವೆ.)