ನಿಸಾರ್ ಅಹಮದ್ ಅವರ ನೆನಪು
ನಿ ಸಾರ್ ಅಹ್ಮದ್ ಅವರೊಂದಿಗೆ ಒಮ್ಮೆ ಪ್ರಯಾಣಿಸುವ ಮತ್ತು ಅವರೊಂದಿಗೆ ಕಾವ್ಯವಾಚನದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಬಂದಿತ್ತು. ಅದು ಆದದ್ದು ಹೀಗೆ. ಶ್ರೀ ಎಂ. ಎಸ್. ಭಾರದ್ವಾಜ್ ಅವರು ನನ್ನ ತಂದೆಯವರ ಹತ್ತಿರದ ಮಿತ್ರರು. ಅವರಿಗೆ ವಾರ್ತಾ ಇಲಾಖೆಯಲ್ಲಿ ಉನ್ನತ ಹುದ್ದೆ. ನಿರಂಜನ, ಭಾರದ್ವಾಜ್, ನಮ್ಮ ತಂದೆ ಇವರು ಮೂವರೂ ಹತ್ತಿರದ ಮಿತ್ರರು. ನನ್ನ ತಂದೆ ದೆಹಲಿಗೆ ಹೋದಾಗ ಭಾರದ್ವಾಜ್ ಅವರೂ ದೆಹಲಿಯಲ್ಲಿದ್ದರು. ಅವರ ಮನೆಗೆ ನಾವು ಹೋದ ನೆನಪು ಹಸಿರಾಗಿದೆ. ಅವರ ಹೆಂಡತಿ ಶ್ರೀಮತಿ ವೃಂದಾ ಭಾರದ್ವಾಜ್ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಮಕ್ಕಳು ಮಾಯಾ ಮತ್ತು ಮಮತಾ. ನಮ್ಮ ತಂದೆ ದೆಹಲಿಯಲ್ಲಿ 5 ವರ್ಷ ಕೆಲಸ ಮಾಡಿ ಬೆಂಗಳೂರಿಗೆ ಮರಳಿದರು. ಮುಂದೆ ಭಾರದ್ವಾಜ್ ಕೂಡಾ ಬೆಂಗಳೂರಿಗೆ ಮರಳಿ ಬಂದರು. ಅವರ ಮನೆ ನಮ್ಮ ಮನೆಯ ಪಕ್ಕದ ಬೀದಿಯಲ್ಲೇ ಇತ್ತು. ಅವರು ಈಗ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ನನ್ನನ್ನು ಅವರು ತಮ್ಮ ಮಗನಷ್ಟೇ ಪ್ರೀತಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ನಾನೂ ಒಂದಿಷ್ಟು ಬರೆಯುತ್ತೇನೆ ಎಂದು ನನ್ನ ತಂದೆ ಅವರಿಗೆ ಹೇಳಿದ್ದೇ ಅವರಿಗೆ ಸಾಕಾಯಿತು. ಒಂದು ದಿನ ಬಂದು "ಚಿತ್ರದುರ್ಗದಲ್ಲಿ ಒಂದು ಕವಿಗೋಷ್ಠಿ ಇದೆ. ರವಿಯನ್ನೂ ಕಳಿಸಿಕೊಡಿ, ನನ್ನ ಜೊತೆ ಬರುತ್ತಾನೆ, ಅವನೂ ಒಂದು ಕವಿತೆ ಓದಲಿ" ಎಂದರು. ಹಿಂದೆಂದೂ ಕವಿಗೋಷ್ಠಿಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೆ ಇದು ಹೊಸ ಅನುಭವ. ನಾನು ಒಂದು ಕವಿತ...