ಪೋಸ್ಟ್‌ಗಳು

ಜುಲೈ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾತ್ರಿ ದುಸ್ಸಹವಾಗಿವೆ

ಇಮೇಜ್
ಮೂಲ ಹಿಂದಿ ಗೀತೆ - ಶೈಲೇಂದ್ರ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಮಹಮ್ಮದ್ ರಫಿ ಹಾಡಿರುವ ಈ ಗೀತೆಯನ್ನು "ಗೈಡ್" ಚಿತ್ರದಲ್ಲಿ ಬಳಸಲಾಗಿದೆ. ಎಸ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ಶೈಲೇಂದ್ರ ಬರೆದ ಹಾಡನ್ನು ರಫಿ ತಮ್ಮ ವಿಷಾದ ತುಂಬಿದ ಧ್ವನಿಯಲ್ಲಿ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದಲ್ಲಿ ಬರುವ ಸನ್ನಿವೇಶ ಹೀಗಿದೆ - ಕಥಾನಾಯಕ ಒಂದು  ಪ್ರಾಚೀನ ದೇವಾಲಯದಲ್ಲಿ  ಒಬ್ಬ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದಾನೆ.  ಆ ಪಾಳುದೇವಾಲಯವನ್ನು ನೋಡಲು ಬಂದ ಒಬ್ಬ ವೃದ್ಧ ಚರಿತ್ರಕಾರನ ಚಿಕ್ಕವಯಸ್ಸಿನ ಹೆಂಡತಿಯಲ್ಲಿ ನಾಯಕ ಅನುರಕ್ತನಾಗುತ್ತಾನೆ. ಆಕೆಯೂ ತನ್ನ ಗಂಡನನ್ನು ತೊರೆದು ಇವನೊಂದಿಗೆ ಓಡಿಹೋಗಲು ಸಿದ್ಧಳಾಗುತ್ತಾಳೆ.  ಆಕೆ ಒಳ್ಳೆಯ ನರ್ತಕಿ. ಕಥಾನಾಯಕ ತನ್ನ ಮಾತಿನ ಕೌಶಲದಿಂದ ಆಕೆಗೆ ಒಳ್ಳೆಯ ಏಜೆಂಟ್ ಆಗುತ್ತಾನೆ. ಆಕೆ ಪ್ರಸಿದ್ಧಿಯ ಮೆಟ್ಟಿಲೇರುತ್ತಾಳೆ. ಕ್ರಮೇಣ ಇವರಲ್ಲಿ ಒಡಕು ಉಂಟಾಗುತ್ತದೆ. ಒಂದೇ ಮನೆಯಲ್ಲಿದ್ದರೂ ಅವರ ನಡುವೆ ಒಂದು ಗೋಡೆ ಅಡ್ಡವಾಗುತ್ತದೆ. ಈ ಸಂದರ್ಭದಲ್ಲಿ ನಾಯಕ ಹಳೆಯದನ್ನು ನೆನೆದು ಹಾಡುವ ಗೀತೆ. ತೆರೆಯ ಮೇಲೆ ದೇವ್ ಆನಂದ್ ಇದನ್ನು ಅಭಿನಯಿಸಿದ್ದಾರೆ.  ನೂಕಬಹುದು ದಿನಗಳನ್ನು , ರಾತ್ರಿ ದುಸ್ಸಹವಾಗಿವೆ ನೀನಂತೂ ಬರಲಿಲ್ಲ, ನಿನ್ನ ನೆನಪುಗಳು ಕಾಡುತ್ತಿವೆ ಯಾರ ಪ್ರೇಮದಲ್ಲಿ ನಾನು ಜಗವನ್ನು ತೊರೆದೆನೋ ಸುತ್ತಿಕೊಂಡಿತೋ ನನ್ನ ಬಾಳಿಗೆ ಅಪಮಾನ ಅವರಿಂದಲೇ ನನಗೆ ಈ ಸ್ಥಿತಿಯು ಬಂದಿತೇ

ನಸುವೆ ಸಪ್ಪಳವಾದರೂ

ಇಮೇಜ್
ಮೂಲ ಕವಿತೆ - ಕೈಫಿ ಆಜ್ಮಿ  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ನಸುವೆ ಸಪ್ಪಳವಾದರೂ ಹೃದಯಕ್ಕೆ ಏನೋ ಭ್ರಮೆ ಅವರೇ ಇರಬಹುದೇ? ಇರಬಹುದೆ ಅವರೇ? ಕೂಗಿ ಕರೆಯುತ್ತಾರೆ ಯಾರೋ ಎದೆಯೊಳಗೆ ಅವಿತು ಸಂಜೆಯಾಗುವ ಮುನ್ನವೇ ಎದೆಯ ದೀಪ ಹಚ್ಚಿಟ್ಟು ಹೃದಯವಿದು ಸದಾ ಅವರಿಗೇ ಸೇರಿದ್ದು ಎಲ್ಲ ನಡೆನುಡಿಯೂ ಅವರಿಗೇ ಮುಡಿಪು ಚಿತ್ತಮೋಹಕ ರೂಪ ಸುತ್ತುತ್ತದೆ ಕಂಡ ಕಡೆಗೆಲ್ಲಾ ಹಾರುತ್ತವೆ ಕಿಡಿಯಂಥದು ಮೈಮನದೊಳಗೆಲ್ಲಾ ಯಾರ ಸೆರಗಿನ ಗಾಳಿ ಸುಳಿಯುತ್ತ ಬಂದು ಮುಟ್ಟಿಹೋಯಿತೋ ನನ್ನ, ಯಾರಿಗೆ ಗೊತ್ತು!

ನನಗಿಷ್ಟವಾದ ಉತ್ತರ

ಇಮೇಜ್
ಸಿ ಪಿ ರವಿಕುಮಾರ್  ನಿನ್ನನ್ನು ಪ್ರಶ್ನೆ ಕೇಳಿದಾಗ ಬೇಕಾದದ್ದು ನನಗಿಷ್ಟವಾದ ಉತ್ತರ ನನ್ನ ಮನಸ್ಸಿನಲ್ಲಿ ಈಗಾಗಲೇ ಇರುವ ನಿರ್ಧಾರ ಹುಡುಕುತ್ತಿದೆ ನಿನ್ನಲ್ಲಿ ಪುನರುಚ್ಚಾರ ನನ್ನ ಪ್ರಶ್ನೆಗೆ ಇರುವುದು ಒಂದೇ ಉತ್ತರ ಅದು ಈಗಾಗಲೇ ಇದೆ ನನ್ನ ಹತ್ತಿರ ನನ್ನ ಮನದಾಳದಲ್ಲಿ ಗುಟ್ಟಾಗಿ ಎ ಅಥವಾ ಬಿ ಇಲ್ಲವೇ ಸಿ ಅಥವಾ ಡಿ  ಆಬ್ಜೆಕ್ಟಿವ್ ಪ್ರಶ್ನೆಗೆ ಯಾವಾಗಲೂ ಒಂದೇ ಸಬ್ಜೆಕ್ಟಿವ್ ಉತ್ತರ ನೀನು ಮಾಡಬೇಕಾದದ್ದು ಕೇವಲ ಬಿತ್ತರ ಸಿಡಿಮಿಡಿಗೊಳ್ಳುತ್ತೇನೆ ನಾನು ನನ್ನ ಮನದ ಮಾತನ್ನು ಆಡದಿದ್ದಾಗ ನೀನು ನಿನ್ನ ಉತ್ತರಕ್ಕೆ ನನಗೆ ಕೊಡಬೇಡ ಸ್ಪಷ್ಟನೆ ಕೇಳಲು ವ್ಯವಧಾನ ಯಾರಿಗಿದೆ? ಟಿಕ್ ಮಾಡುವುದನ್ನು ನೀನು ಕಲಿಯಬೇಕು, ಅದರಲ್ಲೂ ಸರಿಯಾದ ಒಂದೇ ಉತ್ತರದ ಮುಂದೆ ಮುಂದೆ ಹೋಗಲು ಇರುವ ಮಾರ್ಗವಿದೊಂದೇ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ

ಅಂಬರದ ಪವಿತ್ರ ಬಿಂದಿಗೆ

ಮೂಲ ಕವಿತೆ - ಅಮೃತಾ ಪ್ರೀತಂ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಆಶಾ ಭೋಂಸ್ಲೆ ಹಾಡಿರುವ ಈ ಗೀತೆಯ ರಚನೆ ಅಮೃತಾ ಪ್ರೀತಂ ಅವರದ್ದು. "ಕಾದಂಬರಿ" ಎಂಬ ಚಿತ್ರದಲ್ಲಿ ಇದನ್ನು ಬಳಸಲಾಗಿದೆ. ಅಮೃತಾ ಪಂಜಾಬೀ  ಹಾಗೂ ಹಿಂದಿ ಭಾಷೆಗಳ  ಪ್ರಸಿದ್ಧ ಲೇಖಕಿ. ಕಾದಂಬರಿ, ಸಣ್ಣಕಥೆ, ಕವಿತೆ -ಈ ಎಲ್ಲಾ ಪ್ರಕಾರಗಳಲ್ಲೂ ಅವರು ಯಶಸ್ವಿಯಾಗಿ ಪ್ರಯೋಗ ಮಾಡಿದವರು. ಈಚೆಗೆ ಯಶಸ್ವೀ ಪ್ರದರ್ಶನಗಳನ್ನು ಕಂಡ "ತುಮ್ಹಾರೀ ಅಮೃತಾ" ನಾಟಕವು ಅಮೃತಾ ಪ್ರೀತಂ ಮತ್ತು ಕವಿ ಸಾಹಿರ್ ಲುಧಿಯಾನ್ವಿ ಅವರ ಫಲಿಸದ ಪ್ರೇಮವನ್ನು ಕುರಿತದ್ದು.   ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಜೀವನದರ್ಶನವನ್ನು ಸರಳ-ಸುಂದರವಾದ ಭಾಷೆಯಲ್ಲಿ ಹಿಡಿದುಕೊಟ್ಟಿದ್ದಾರೆ.  ದೇವರ ಪ್ರೀತಿಯನ್ನು ಪ್ರತಿನಿತ್ಯ ಅನುಭವಿಸುತ್ತಿರುತ್ತೇವೆ - ಇಷ್ಟಾದರೂ ನಾವು ಪಾಪದ ಮಾತುಗಳನ್ನೇ ಆಡುತ್ತಿರುತ್ತೇವೆ! ನಾವು ಬದುಕಿರುವುದು ಕೂಡಾ ಸಾಲದ ಮೇಲೆ - ಸಾವಿನಿಂದ ಸಾಲವಾಗಿ ಪಡೆದುಕೊಂಡ ಸಮಯವೇ ನಮ್ಮ ಆಯಸ್ಸು. ಇಷ್ಟಾದರೂ ನಮ್ಮ ಅಹಂಕಾರವೆಷ್ಟು!  "ನಮ್ಮದು" ಎಂದು ನಾವು ಹೇಳಿಕೊಳ್ಳುವುದು ಇಲ್ಲಿ ಏನಿದೆ? ಎಲ್ಲವೂ ಭಗವಂತನ ಸ್ವತ್ತು.  ಕೆರೆಯ ನೀರನು ಕೆರೆಗೆ ಚೆಲ್ಲಿದರೂ "ಇದೆಲ್ಲಾ ನಮ್ಮ ಔದಾರ್ಯ" ಎಂಬ ಠೇಂಕಾರದಿಂದ ಮೆರೆಯುವವರು ನಾವು!  ...  ಚಿತ್ರದಲ್ಲಿ ಬಳಸಿದಾಗ ಈ ಕವಿತೆಯಲ್ಲಿ ಒಂದು ದ್ವಂದ್ವಾರ್ಥವೂ ಹೊಮ್ಮುತ್ತದೆ. ಈ ಚಿತ್ರದ ಕಥೆಯಲ್ಲಿ ನ

ಸಂತವಾಣಿ

ಇಮೇಜ್
ಸಿ  ಪಿ ರವಿಕುಮಾರ್ ಸಂತರೊಬ್ಬರು ಕಥೆ ಹೇಳುತ್ತಿದ್ದರು.  ಜನ ಅವರ ಮುಂದೆ ಕುಳಿತು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. "ಜೋರಾಗಿ ಗಾಳಿ ಬೀಸುತ್ತಿತ್ತು. ಇಂಥ ಬಿರುಗಾಳಿಯಲ್ಲೇ ಅವನು ಹೊರಟುನಿಂತಿದ್ದ. ಅವನ ಕೈಯಲ್ಲಿ ರಸ್ತೆ ಬೆಳಗಲು ಒಂದು ಚಿಮಣಿದೀಪ. ಅದನ್ನೇ ನಂಬಿಕೊಂಡು ಅವನು ಮುಂದೆ ಹೆಜ್ಜೆ ಇಡುತ್ತಿದ್ದ. ನನ್ನ ಹತ್ತಿರ ದೀಪವಿದೆ, ರಸ್ತೆಯಲ್ಲಿ ತೊಂದರೆ ಆಗುವುದಿಲ್ಲ ಎಂದು ಅವನು ಸಂತೃಪ್ತಿಯಿಂದಲೇ ನಡೆಯುತ್ತಿದ್ದ." ಜನರ ಕುತೂಹಲ ಈಗ ಹೆಚ್ಚಿತು. ಮುಂದೆ ಏನಾದರೂ ಕೆಟ್ಟದ್ದು ಆಗಲೇಬೇಕು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ. "ಸ್ವಲ್ಪ ಹೊತ್ತಿನಲ್ಲೇ ಚಿಮಣಿಯ ಒಂದು ಭಾಗ ಕಪ್ಪಾಗತೊಡಗಿತು. ಬತ್ತಿ ಕತ್ತರಿಸುವಾಗ ಅದನ್ನು ಓರೆಯಾಗಿ ಕತ್ತರಿಸಿದ್ದಾರೇನೋ ಎಂದುಕೊಂಡ. ಕ್ರಮೇಣ ಮಸಿ ಹರಡುತ್ತಾ ಸಾಗಿತು. ಚಿಮಣಿದೀಪದ ಬೆಳಕು ಕ್ಷೀಣವಾಗುತ್ತಾ ಹೋಯಿತು. ಅವನು ಬಿರುಗಾಳಿಯಲ್ಲೇ ನಿಂತು ಸಾಹಸ ಪಡುತ್ತಾ ದೀಪದ ಬತ್ತಿಯನ್ನು ಇನ್ನಷ್ಟು ಮೇಲೆ ಮಾಡಿದ. ಆದರೂ ಇದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ದೀಪದಲ್ಲಿ  ಎಣ್ಣೆ ತೀರಾ ಕಡಿಮೆಯಾಗಿತ್ತು." ಜನ ಈಗ ವಿಹ್ವಲರಾದರು. ಅವನು ಈಗ ಏನು ಮಾಡುತ್ತಾನೋ? ಯಾವ ಕಷ್ಟಕ್ಕೆ ಗುರಿಯಾಗುತ್ತಾನೋ? "ಕುರುಡುಗತ್ತಲಿನಲ್ಲೇ ಅವನು  ತಡವರಿಸಿಕೊಂಡು ಹಾಗೇ ಸ್ವಲ್ಪ ಹೊತ್ತು ಮುಂದುವರೆದ. ಆಗಾಗ ಎಣ್ಣೆಯಿಲ್ಲದ ದೀಪದ ಬತ್ತಿಯನ್ನು ದೊಡ್ಡದು ಮಾಡಿದ. ಆದರೆ ಏನು ಮಾಡುವುದು?

ಮುದಿ ರೈತ

ಮೂಲ ಹಿಂದಿ - ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಇದೋ ಮುಗಿದುಹೋಯಿತು ನನ್ನ ಕೆಲಸ  ಇನ್ನೇನಿದ್ದರೂ ನಿದ್ದೆ, ಆಲಸ.  ಇನ್ನೇಕೆ ಮಚ್ಚು,  ಇನ್ನೇಕೆ ಮಂಕರಿ, ಇನ್ನೇಕೆ ಸನಿಕೆ, ಗುದ್ದಲಿ,          ಹಾರೆ, ನೇಗಿಲು, ಎಲ್ಲಾ ಕೊಟ್ಟುಬಿಟ್ಟೆ.  ನನ್ನ ಮಣ್ಣಿನಲ್ಲಿ ಏನು ಬರೆದಿತ್ತೋ  ಮೊಗೆಮೊಗೆದು ತೆಗೆದೆ ನಾನು ಕಣ್ಣೀರು, ಬೆವರು, ರಕ್ತ ಹರಿಸಿ.  ಕಡಿದೆ, ರಟ್ಟೆ ಬೀಳುವವರೆಗೂ ದುಡಿದೆ, ಈಗ ಸಾವು ಬಂದರೂ ನನ್ನ ಮಣ್ಣಲ್ಲಿ ಏನು ಸಿಕ್ಕೀತು ಅದಕ್ಕೆ? ಲೊಟ್ಟೆ.  

ಬೆಳಕಿನ ಪೆಟ್ಟಿಗೆ

ಇಮೇಜ್
ಸಿ ಪಿ ರವಿಕುಮಾರ್ (ಮಂಗಲೇಶ್ ಡಬರಾಲ್ ಅವರ ಒಂದು ಕವಿತೆಯನ್ನು ಆಧರಿಸಿದ್ದು.) ಅಪ್ಪ ಬರುವುದನ್ನೇ ಮಕ್ಕಳು ಕಾಯುತ್ತಿದ್ದರು.  ಚಿಕ್ಕವನಿಗೆ ಆರು ವರ್ಷ, ದೊಡ್ಡವನಿಗೆ ಎಂಟು. ಅಮ್ಮ ಅಡುಗೆಮನೆಯಲ್ಲಿ ಕೆಲಸದಲ್ಲಿರುವಾಗ ಕಣ್ಣುತಪ್ಪಿಸಿ ಅವರು ಬಂದಿದ್ದಾರೆ. ಅವರ ಹಂಚಿನ ಮನೆ ಇದ್ದದ್ದು ಬೆಟ್ಟದ ಮೇಲಿರುವ ಹಳ್ಳಿಯಲ್ಲಿ. ಬೆಟ್ಟವನ್ನು ಹಾವಿನಂತೆ ಸುತ್ತಿಕೊಂಡಿರುವ ರಸ್ತೆಯ ಮೇಲೆ ಧೂಳು ಚಿಮ್ಮಿಸುತ್ತಾ ಬಸ್ ಬರುತ್ತದೆ. ಈ ನಿಲ್ದಾಣದಲ್ಲಿ ಇಳಿದುಕೊಳ್ಳುವವನು ಅಪ್ಪ ಒಬ್ಬನೇ. ಮುಂದಿನ ಹಳ್ಳಿಯಲ್ಲಿ ದೇವಸ್ಥಾನವಿದೆ; ಅಲ್ಲಿ ಬಂದುಹೋಗುವವರ ಸಂಖ್ಯೆ ಹೆಚ್ಚು. ಅಪ್ಪ ಪ್ರತಿ ಶುಕ್ರವಾರ ರಾತ್ರಿ ಬರುತ್ತಾನೆ.  ಭಾನುವಾರ ರಾತ್ರಿ ಮತ್ತೆ ಹೊರಡುತ್ತಾನೆ. ದೂರದಲ್ಲಿರುವ ನಗರದ ಕಾರ್ಖಾನೆಯಲ್ಲಿ ಅವನಿಗೆ ಕೆಲಸ.  ಪ್ರತಿದಿನದಂತೆ ಇವತ್ತೂ ಬಸ್ ಮೇಲೇರಿ ಬರುವುದು ಕಾಣುತ್ತದೆಯೋ ಎಂದು ಮಕ್ಕಳು ಮೇಲಿನಿಂದ ನೋಡುತ್ತಾ ನಿಂತಿದ್ದಾರೆ. ಚಳಿಗಾಲವಾದ್ದರಿಂದ ಬೇಗ ಕತ್ತಲಾಗಿಬಿಡುತ್ತದೆ; ಬಸ್ ಕಾಣುವುದಿಲ್ಲ. ಆದರೂ ಮಕ್ಕಳು ಆಸೆಯಿಂದ ಕಾಯುತ್ತಾರೆ.  ಬಸ್ ನಿಲ್ದಾಣದಲ್ಲಿ ಇವರನ್ನು ಹೊರತು ಬೇರಾರೂ ಇಲ್ಲ. ಸುತ್ತಲೂ ನಿಶ್ಶಬ್ದ ಆವರಿಸಿಕೊಂಡಿದೆ. ಜೀರ್ ಜೀರ್ ಎಂದು ಜೀರುಂಡೆಯ ಸದ್ದು ಮಾತ್ರ ಹಿನ್ನೆಲೆಯಲ್ಲಿ ಕೇಳುತ್ತಿದೆ. ಅಪ್ಪ ಪ್ರತಿಸಲ ಬಂದಾಗಲೂ ಏನಾದರೂ ತರುತ್ತಾನೆ.  ಇವರಿಗೆ ಹೆಸರೇ ಗೊತ್ತಿರದ ಮಿಠಾಯಿ. ಶಾಲೆಯ ಪುಸ್ತಕ. ಬಣ್ಣದ ಪೆನ್ಸಿಲ್ ಪೆಟ್ಟಿಗೆ

ಮಾಮ ಮಾಮು ಸಲ್ಲಾಪ

ಸಿ ಪಿ ರವಿಕುಮಾರ್  ಮಾಡರ್ನ್ ಮುದ್ದಣ ಮನೆಗೆ ಬಂದಾಗ ಮಾಡರ್ನ್ ಮನೋರಮೆ ಅವನಿಗೆ ತನಿವಾಲಂ ಕುಡಿಯಲು ಕೊಡುವ ಬದಲು ಅವನ ಮುಖದ ಮುಂದೆ ಒಂದು ಕನ್ನಡ ಜಾಹೀರಾತು ಹಿಡಿದಳಂತೆ.  ಆಗ ನಡೆದ ಕೆಳಕಂಡ ಸಲ್ಲಾಪವನ್ನು ಕದ್ದಾಲಿಸಿ ಬರೆದದ್ದಕ್ಕೆ ಕ್ಷಮೆ ಕೋರುತ್ತೇನೆ. ಇಲ್ಲಿ ಮಾಮ ಎಂದರೆ ಮಾಡರ್ನ್ ಮನೋರಮೆ ಮತ್ತು ಮಾಮು ಎಂದರೆ ಮಾಡರ್ನ್ ಮುದ್ದಣ. ಮಳೆಗಾಲದ ಒಂದು ಸಂಜೆ. ಮಾಮು ತನ್ನ ಐಟಿ ಕೆಲಸ ಮುಗಿಸಿ ಹೈಟೀ ಸಿಕ್ಕಬಹುದೇ ಎಂಬ ಆಸೆಯಿಂದ ಟ್ರಾಫಿಕ್ಕಿನಲ್ಲಿ ಹೇಗೋ ಪರದಾಡುತ್ತಾ ಮನೆಗೆ ಬರುವುದನ್ನು ದೂರದಿಂದಲೇ ನೋಡಿದ ಮಾಮ ಮನೆಯೊಳಗೆ ಓಡಿಹೋಗಿ ಅವನ ಮುಂದೆ ಅಂದಿನ ನ್ಯೂಸ್ ಪೇಪರನ್ನು ಹಿಡಿಯುತ್ತಾಳೆ.  ಮಾಮು: ಮನೋರಮೆ, ಎಲ್ಲಿ ನನ್ನ ತನಿವಣ್ಣು ಮತ್ತು ತನಿವಾಲು? ಅರ್ಥಾತ್ ಕೋಲ್ಡ್ ಫ್ರೂಟ್ ಅಂಡ್ ಕೋಲ್ಡ್ ಮಿಲ್ಕ್?  ಮಾಮ: ಹಣ್ಣು ತನ್ನಿ ಅಂತ ಹೇಳಿಹೇಳಿ ಸಾಕಾಯ್ತು. ತನಿವಣ್ಣು ಅಂತ ನನ್ನೇ ಕೇಳ್ತೀರಲ್ರೀ.   ಮಾಮು: ಹೋಗಲಿ ತನಿವಾಲು?  ಮಾಮ: ಅದನ್ನು ಹುಡುಕಿಕೊಂಡೇ ಹೋಗಿದ್ದೆ ಇವತ್ತು ಸೂಪರ್ ಮಾರ್ಕೆಟ್ಟಿಗೆ. ಆಗ ಸಿಕ್ತು ನೋಡಿ ಈ ಆsಡು.   ಮಾಮು: ಆsಡು! ಏನಿದು ಮಚ್ ಆಡೂ ಅಬೌಟ್ ನಥಿಂಗ್?   ಮಾಮ: ಅದೇನೋ ಮೂಶೇಕ್ ಅಂತೆ, ಕುರ್ ಕುಮಿನ್ ಇದೆಯಂತೆ. ಈಗ ತಾನೆ ಹಾಲು ಸೂಪರ್ರಾಗಿದೆಯಂತೆ.    ಮಾಮು: ಸರಿ ಬಿಡು, ಈ ಸಲ ಗಣೇಶ ಮೂಶೇಕವಾಹನನಾಗಿಯೇ ಬರುತ್ತಾನೆ.   ಮಾಮ: (ಓದುತ್ತಾ) "ಮೂಶೇಕ್ ಗೆ ಹಲೋ ಅನ್ನಿ."  ಮಾ

ಬಾಹುಬಲಿ

ಸಿ ಪಿ ರವಿಕುಮಾರ್  ಅವನ ಬಾಹುಗಳಲ್ಲಿ ಬಲವಿತ್ತು ಮನದಲ್ಲಿ ಹಂಬಲವಿತ್ತು ಬಂಜರಿನಲ್ಲೂ ಬಿತ್ತಿ ಬೆಳೆಯುವ ಛಲವಿತ್ತು. ಯಾವ ಸಿಡಿಲು ತಾಕಿತೋ ನಿಂತ ದಿಗಂಬರನಾಗಿ ಎಲ್ಲಾ ಬಿಟ್ಟು ಬೆಟ್ಟದ ಮೇಲೇರಿ ಕಣ್ ತೆರೆದು ಅಜಾತಶತ್ರು ಎಲ್ಲವನ್ನೂ ತ್ಯಾಗ ಮಾಡು ಕೊಟ್ಟುಬಿಡು ಬಲಿ ನಿನ್ನ ನಡೆ, ನಿನ್ನ ನುಡಿ ಬಿತ್ತಿ            ಬೆಳೆದದ್ದು                    ಸಾಕು ಬಾಹುಬಲಿ, ಬಿಟ್ಟಿ             ಬಂದದ್ದು                   ಉಣ್ಣುವುದ ಕಲಿ.

ಕತ್ತಲೆ ಬೆಳಕು - ಶ್ರೀರಂಗರ ನಾಟಕ

ಸಿ ಪಿ ರವಿಕುಮಾರ್ ಶ್ರೀರಂಗರ ನಾಟಕಗಳನ್ನು ಈನಡುವೆ ಅಷ್ಟಾಗಿ ಯಾರೂ ಪ್ರಯೋಗಿಸುವುದಿಲ್ಲ. ರಂಗಶಂಕರದಲ್ಲಿ ಇವತ್ತು ಅವರ ಕತ್ತಲೆಬೆಳಕು ನಾಟಕದ ಪ್ರಯೋಗವಿತ್ತು. ಒಂದು ಕಾಲದಲ್ಲಿ ಶ್ರೀರಂಗ ಕನ್ನಡದ ಅಗ್ರಮಾನ್ಯ ನಾಟಕಕಾರರಾಗಿದ್ದರು. ಕೈಲಾಸಂ ನಂತರ ಪ್ರಖ್ಯಾತರಾದ ನಾಟಕಕಾರರೆಂದರೆ ಶ್ರೀರಂಗ (ಆದ್ಯರಂಗಾಚಾರ್ಯ). ಕತ್ತಲೆ-ಬೆಳಕು ನಾಟಕದಲ್ಲಿ ಒಬ್ಬ ನಾಟಕಕಾರನದ್ದು ಕೇಂದ್ರಪಾತ್ರ. ಇವನಿಗೆ ನಾಟಕ ಬರೆದುಕೊಡುವಂತೆ  ಕಂಪನಿಯ ಮಾಲೀಕ ಹಿಂದೆಬಿದ್ದಿದ್ದಾನೆ.  ಆದರೆ ನಾಟಕಕಾರನಿಗೆ ಯಾವ ವಸ್ತುವೂ ರುಚಿಸದಾಗಿದೆ. ಮಾಲೀಕನೇ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಂದು ಸೂಚನೆಗಳನ್ನು ಕೊಡುತ್ತಿದ್ದಾನೆ. ಮಾಲೀಕನಿಗೆ ಬೇಕಾಗಿರುವುದು ರಸವತ್ತಾದ ನಾಟಕ - ವಯಸ್ಸಾದ ಗಂಡನ ಮಗನನ್ನೇ ಪ್ರೇಮಿಸುವ ಮಲತಾಯಿ ತನ್ನ ಗಂಡನನ್ನೇ ಕೊಲೆ ಮಾಡುವ ಕತೆಯನ್ನು ಅವನು ಸೂಚಿಸುತ್ತಾನೆ. ನಾಟಕಕಾರನ ಮನೆಯ ಸಮೀಪದಲ್ಲೇ ಹಲವು ಕತೆಗಳು ನಡೆಯುತ್ತಿವೆ. ಸದಾ ತಾನಾಯಿತು, ತನ್ನ ಬರವಣಿಗೆಯಾಯಿತು ಎಂದು ಕತ್ತಲಿನಲ್ಲಿ ಕುಳಿತಿರುವ ನಾಟಕಕಾರನಿಗೆ ಹೊರಗಿನ ಜಗತ್ತು ಪ್ರಕಾಶವಾಗಿಲ್ಲ. Fact is stranger than fiction ಎನ್ನುತ್ತಾರೆ.  ಶ್ರೀಮಂತನೊಬ್ಬನ ಯುವಪತ್ನಿ ತನ್ನ ಡ್ರೈವರ್ ಜೊತೆಗೆ ಸಂಬಂಧ ಬೆಳೆಸಿದ್ದಾಳೆ. ತನ್ನ ಮುದಿಗಂಡನನ್ನು ಮುಗಿಸಿಬಿಡುವಂತೆ ಕೂಡಾ ಅವಳು ಡ್ರೈವರ್ ಗೆ ಸೂಚಿಸುತ್ತಾಳೆ! ಬಡತನದಲ್ಲಿ ಬೆಂದ ಒಂದು ಗಂಡ-ಹೆಂಡಿರ ಜೋಡಿ ಆತ್ಮಹತ್ಯೆಯ ವಿಚಾರ ಮಾತಾಡಿಕೊಳ್ಳುತ

ಕಾವ್ಯಾಸ್ವಾದನೆ

ಸಿ ಪಿ ರವಿಕುಮಾರ್ ಅವತ್ತು ಭಾನುವಾರ ಜಿಆರ್ ಸಭೆಗೆ ಬಂದಾಗ ಎಂದಿನಂತೆ  ಅವರದ್ದು ಅಚ್ಚಬಿಳಿ ಉಡುಪು. ಸಭಿಕರು: ಈಗ ನಿಜವಾಗಲೂ ಹಳಬರಾದ ಅವರ ಹಳೇ ವಿದ್ಯಾರ್ಥಿಗಳ ಗುಂಪು. ವಿಶೇಷ ಇಷ್ಟೇ: ಜಿಆರ್ ಒಬ್ಬರೇ ಬರಲಿಲ್ಲ; ಜಾನ್ ಕೀಟ್ಸ್ ಬಂದಿದ್ದ ಅವರ ಜೊತೆಗೆ. ವಿಲಿಯಮ್ ಬ್ಲೇಕ್ ಅಲ್ಲೇ ಪಕ್ಕದಲ್ಲಿ ಕೂತಿದ್ದ ಮುಖದಲ್ಲಿ ಸೂಸುತ್ತಾ  ಸ್ನಿಗ್ಧ ನಸುನಗೆ. ಜಾನ್, ಇಪ್ಪತ್ತಾರರ ತರುಣ, ಕ್ಷಯರೋಗಿ, ಕೈಯಲ್ಲಿ ಕಾಸಿಲ್ಲದಿದ್ದರೂ ಕವಿತೆ ಬರೆಯುವ ಖಯಾಲಿ; ಅಸುನೀಗಿದ ತಮ್ಮನ ದುಃಖದ ನಡುವೆ ತ್ಯಜಿಸಿ ಹೋಗಿದ್ದಾಳೆ ಪ್ರೀತಿಸಿದ ಗೆಳತಿ ಬ್ರಾನ್! ಮನೆ-ಮನಗಳೆಲ್ಲಾ ಖಾಲಿ-ಖಾಲಿ. ವಿಷಾದದ ನೋಟ ಬೀರುತ್ತಿದ್ದಾನೆ  ಜಾನ್ ಅಮೃತಶಿಲೆ ಭರಣಿ ಮೇಲೆ ಅಂದದ ಕಲೆ-ಕುಸುರಿ. ಕಿವಿಗೆ ಕೇಳುತ್ತಿದೆ ನಿಶ್ಶಬ್ದ ಮೋಹನ ಮುರಳಿ; ಗೌತಮದೃಷ್ಟಿ ನೋಡುತ್ತಿದೆ ಹಬ್ಬಕ್ಕೆ ತಂದ ಕೊಬ್ಬಿದ ಹರಕೆಯ ಕುರಿ. ಹೊಂಚು ಹಾಕುತ್ತಿದೆ ಮೆಕ್ಯಾನಿಕಲ್ ಹುಲಿಯೊಂದು (ಫ್ರೆಂಚ್ ಸೇನೆ ಟಿಪ್ಪುವಿಗಿತ್ತ ಉಡುಗೊರೆಯಂಥದೇ.) ಕಣ್ಣುಗಳಲ್ಲಿ ಕಾಡುಗತ್ತಲು ಕಿಚ್ಚಾಗಿ ಉರಿಯುತ್ತಿದೆ! ಸುರಿಯುತ್ತಿದೆ ದಾರ್ಶನಿಕ ಬ್ಲೇಕ್  ಕಣ್ಣುಗಳಲ್ಲಿ ಹೆದರಿಕೆ.  ನಡುನಡುವೆ ಬಂದು ಹೋಗುತ್ತಾರೆ ಜಿಆರ್ ಕರೆದಾಗ  ಆಡೆನ್, ಶೇಕ್ಸ್ ಪಿಯರ್, ರಾಮಾನುಜ, ವಾಲ್ಮೀಕಿ!  ಬೀಗುತ್ತಾರೆ ತಮ್ಮ ಸಾಲುಗಳನ್ನು ಜಿಆರ್ ಉದ್ಧರಿಸಿದಾಗ  ಎಪ್ಪತ್ತಾರು ವರ್ಷಗಳ ಸುದೀರ್ಘ ಸ್ಮೃತಿಯನ್ನು ಕೆದಕಿ  ಮುಕ್

ಕತ್ತಲುದಾರಿ

ಇಮೇಜ್
ಸಿ ಪಿ ರವಿಕುಮಾರ್ ಅವನು ಊಟಕ್ಕೆ ಕುಳಿತಿದ್ದ. ಹೆಂಡತಿ ಬಡಿಸುತ್ತಿದ್ದಳು. ಊರಿನಿಂದ ಬಂದ ತಮ್ಮ ಈಗ ತನ್ನ ಮನೆಯಲ್ಲೇ ಇದ್ದು ಕೆಲಸ ಹುಡುಕುತ್ತಾನೆಂದು ಗೊತ್ತಾದಾಗ ಇಬ್ಬರಿಗೂ ಇರುಸುಮುರುಸಾಗಿತ್ತು. ಪುಟ್ಟಮನೆಯಲ್ಲಿ ತಮ್ಮ ಜೊತೆಗೆ ಇನ್ನೊಬ್ಬರು ಇರುವುದು ಅವಳಿಗೆ ಇಷ್ಟವಿಲ್ಲ. ಅವಳಿಗೆ ಇಷ್ಟವಿಲ್ಲದ್ದು ಇವನಿಗೂ ಕಹಿಯಾಗಿ ಮಾರ್ಪಡಲು ಎಷ್ಟು ದಿವಸ ಬೇಕು? ತಮ್ಮ ಎಷ್ಟು ದಿನಗಳಿಂದ ಕೆಲಸ ಹುಡುಕುತ್ತಿದ್ದಾನೆ ಎಂದು ಅವನು ಯೋಚಿಸಿದ. ಈಗಾಗಲೇ ಮೂರು ತಿಂಗಳಾದವು.  "ಸರಿಯಾಗಿ ಓದಲಿಲ್ಲ, ಬರೆಯಲಿಲ್ಲ. ಇವನಿಗೆ ದಿನಾಗಲೂ ಬಿಟ್ಟಿ ಕೂಳು ಹಾಕಬೇಕು!" ಎಂದು ಅವಳು ಗೊಣಗಿದಾಗ ಮೊದಲು ಇವನಿಗೆ ರೇಗಿತ್ತು. ಆದರೆ ಈಗ ಅವನಿಗೂ ಹಾಗೇ ಅನ್ನಿಸತೊಡಗಿದೆ. ಅವಳು ತಮ್ಮನಿಗೆ ಕೆಲಸಗಳನ್ನು ಹೇಳುವುದನ್ನು ಅವನು ಗಮನಿಸಿಯೂ ಗಮನಿಸದಂತೆ ಇರುತ್ತಾನೆ. ಹಾಸಿಗೆ ಸುತ್ತಿಡುವುದು, ತರಕಾರಿ ತರುವುದು, ಬಟ್ಟೆ ಒಗೆಯುವುದು, ಹೀಗೆ ಕ್ರಮೇಣ ಅನೇಕ ಕೆಲಸಗಳು ತಮ್ಮನ ಪಾಲಿಗೆ ಬರುತ್ತಿವೆ. ಈ ಕೆಲಸಗಳನ್ನು ಅವನು ಸ್ವಲ್ಪವೂ ಬೇಜಾರಿಲ್ಲದೆ ಮಾಡುವುದು ಇವನನ್ನು  ಇನ್ನಷ್ಟು ರೇಗಿಸುತ್ತದೆ. ತಾನು ಇಂಥ ಕೆಲಸಗಳನ್ನು ಎಂದೂ ಮಾಡಿಲ್ಲ ಎನ್ನುವುದು ಅವನನ್ನು ಚುಚ್ಚುತ್ತದೆ. ತಾವಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದರೂ ಎಷ್ಟು ವಿಭಿನ್ನವಾಗಿದ್ದೇವೆ! ಅವನು ದೇಹವನ್ನು ದಂಡಿಸುತ್ತಾನೆ.  ಹೊಲ ಉಳುವುದು, ಬಾವಿಯಲ್ಲಿ ನೀರು ಸೇದುವುದು, ಮರ ಹತ್ತಿ ಕಾ

ಕೋಳಿಗೆ ಕಾಳು

ಇಮೇಜ್
ಸಿ ಪಿ ರವಿಕುಮಾರ್  ನನ್ನ ಮುದ್ದಿನ ಕೋಳಿಗಳೇ ಬನ್ನಿ ನಿಮಗೊಂದು ಕಟ್ಟಿದ್ದೇನೆ ಚಂದದ ಗೂಡು ಪ್ರತಿನಿತ್ಯ ನಿಮಗೆ ತಂದು ಹಾಕುತ್ತೇನೆ ಎಷ್ಟು ಬೇಕಾದರೂ ತಿನ್ನಿ ಬಿಟ್ಟಿಕಾಳು ಬದಲಿಗೆ ನಾನು ಕೇಳುವುದಿಷ್ಟೇ ಓಡಿ ಬರಬೇಕು ನಾನು ಕರೆದಾಗ ಕೊಕ್ ಕೊಕ್ ಎಂದು ಮಾರ್ನುಡಿಯಬೇಕು ನಗಬೇಕು ನಾನು ನಕ್ಕಾಗ ಅಳಬೇಕು ನಾನು ಮುಖ ಹಿಂಡಿದಾಗ ಮೊಟ್ಟೆ ಇಡಬೇಕು ನಾನು ಬೇಡಿದಾಗ ಕಾವು ಕೊಡಬೇಕು ಮರಿ ಮಾಡಬೇಕು ನಿಮ್ಮ ಮರಿಮೊಮ್ಮರಿಗಳಿಗೂ ಕೊಡುತ್ತೇನೆ ಕಾಳು ಬೇಕಾಗಿಲ್ಲ ಕಿಂಚಿತ್ತೂ ಚಿಂತೆ ದೊಡ್ಡ ಸ್ಕ್ರೀನ್ ಟಿ.ವಿ. ಹಾಕಿಸಿದ್ದೇನೆ ನಿಮ್ಮ ಮನರಂಜನೆಗಾಗಿ 24 ಗಂಟೆ ನೋಡುತ್ತಾ ಕಳೆಯಿರಿ ಕಾಲ ಮರಿ ಮಾಡುವಾಗ, ಕಾವು ಕೂತಾಗ ಒಮ್ಮೆಮ್ಮೆ ತರುವೆನು ಚೂರಿ ನನಗಿಷ್ಟ ಚಿಕನ್ ಮಂಚೂರಿ ಹಬ್ಬ ಮಾಡಿದರೆ ಒಮ್ಮೊಮ್ಮೆ ಏನಾಯಿತೀಗ?

ಹೊಂಗೆಮರದ ತುದಿ

ಇಮೇಜ್
ಮೂಲ ಇಂಗ್ಲಿಷ್ ಪದ್ಯ - ಟೆಡ್ ಹ್ಯೂಸ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಟೆಡ್ ಹ್ಯೂಸ್ ಬ್ರಿಟನ್ನಿನ "ರಾಷ್ಟ್ರಕವಿ" ಪದವಿ ಪಡೆದವನು (ಪೊಯೆಟ್ ಲಾರೇಟ್).   ಈ ಕವಿತೆಯಲ್ಲಿ ಟೆಡ್ ಹ್ಯೂಸ್ ತಾನು ನೋಡಿದ ಒಂದು ದೃಶ್ಯವನ್ನು  ವರ್ಣಿಸಿದ್ದಾನೆ. ಹೊಂಗೆಯ ಮರದ ತುದಿಯಲ್ಲಿ ಗೋಲ್ಡ್ ಫ಼್ಲಿಂಚ್ ಹಕ್ಕಿಯೊಂದು ಗೂಡು ಕಟ್ಟಿ ಮರಿ ಮಾಡಿದೆ. ಅದು ತನ್ನ ಮರಿಗಳಿಗೆ ತುತ್ತು ನೀಡಲು ಬಂದಾಗ ಮರದಲ್ಲಿ ಉಂಟಾಗುವ ಸಂಭ್ರಮವನ್ನು ಕವಿ ವರ್ಣಿಸಿದ್ದಾನೆ. ಹೊಂಗೆಯ ಮರದಲ್ಲಿ ಸ್ತಬ್ಧತೆ  ಇದ್ದರೂ ಅಲ್ಲಿ ತುತ್ತಿಗಾಗಿ ಕಾದ ಎಷ್ಟೋ ಜೀವಗಳಿವೆ.  ಹಕ್ಕಿ ಮೆಲ್ಲನೆ ಬಂದು ಕೊಂಬೆಯ ತುದಿಯಲ್ಲಿ ಕುಳಿತು ತನ್ನ ಆಗಮನವನ್ನು ಸೂಚಿಸುತ್ತದೆ. ತನ್ನ ವಿಶಿಷ್ಟ ಕೂಗಿನಿಂದ ತನ್ನ ಇರವನ್ನು ಸಾರುತ್ತದೆ. ಮೆಲ್ಲಗೆ ತನ್ನ ಗೂಡಿನ ಕಡೆಗೆ ಸಾಗುತ್ತದೆ. ಇದುವರೆಗೂ ನಿಶ್ಶಬ್ದವಾಗಿದ್ದ ಹೊಂಗೆಯ ಮರದಲ್ಲಿ ಜೀವಸಂಚಾರವಾಗುತ್ತದೆ. ಹೋದಷ್ಟೇ ಜಾಗರೂಕತೆಯಿಂದ ತಾಯಿಹಕ್ಕಿ ಕೊಂಬೆಯ ತುದಿಗೆ ಮರಳಿ ಅನಂತದ ಕಡೆಗೆ ಹಾರಿಹೋಗುತ್ತದೆ. ಹೊಂಗೆಯ ಮರದಲ್ಲಿ ಮತ್ತೆ ಸ್ತಬ್ಧತೆ ಆವರಿಸಿಕೊಳ್ಳುತ್ತದೆ.  ಈ ಪದ್ಯಕ್ಕೆ ಅನೇಕ ಅರ್ಥಗಳಿರಬಹುದು. ಅವುಗಳನ್ನು ಕುರಿತು ಯೋಚಿಸಿ.  ಮಧ್ಯಾಹ್ನ ಸೆಪ್ಟೆಂಬರ್ ತಿಂಗಳ ಹಳದಿ ಬೆಳಕಿನಲ್ಲಿ  ಹೊಂಗೆ ಮರದ ತುದಿಯೊಳಗೆ ಮೌನ ಆವರಿಸಿದೆ ಒಂದಿಷ್ಟೂ ಮಿಸುಕಾಡದೆ.  ಕೆಲವು ಎಲೆಗಳು ಹಳದಿಯಾಗುತ್ತಿವೆ, ಕಾಯಿಗಳೆಲ್ಲಾ ಕೆಳಗುದುರಿವೆ.

ಸಾಸರ್ ನಾಮ

ಇಮೇಜ್
ಸಿ ಪಿ ರವಿಕುಮಾರ್  ಅನೇಕ ಸ್ವಾರಸ್ಯಕರ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇವುಗಳಿಗೆ ಕವಿತಾರೂಪದ ಪ್ರತಿಕ್ರಿಯೆ.  ಸಾಸರ್ ನಾಮ  (ಹಾರಾಡುವ ತಟ್ಟೆಗಳು ಇರಬಹುದೆಂದು ನಾಸಾ ಒಪ್ಪಿದೆ - ಸುದ್ದಿ.) ನಾಸಾ ಹೇಳುತ್ತಿದೆ ಈಗ, ತಡವಾಗಿ, “ಇರಬಹುದು ಹಾರಾಡುವ ಸಾಸರು” ಸಾಸರ ನಾಮದ ವೆಂಕಟರಮಣನ್ನ ಎಂದೋ ಕೊಂಡಾಡಿದರು ದಾಸರು ಸಾವಿರದ ಪ್ರಶ್ನೆ   "ಸಹಸ್ರ" ತದ್ಭವವಾಗಿ ಸಾಸರವಾಗದೆ, ಸಾಸಿರ ಹೇಗಾಯಿತು? ಸಾಸಿರ ಇದ್ದಿದ್ದರೆ ಪರವಾಗಿರಲಿಲ್ಲ, ಸಾವಿರ ಹೇಗಾಯಿತು? ಪರವಾಹ್-1   (ಹಿಂದಿ ಮಾತಾಡುವವರು ಕನ್ನಡಿಗರನ್ನು ಅವಮಾನಿಸಿದರು ಇತ್ಯಾದಿ ಜಗಳ - ಸುದ್ದಿ.) ಹಿಂದಿ ಬರಲ್ಲ ಕನ್ನಡ ಪರವಾಗಿಲ್ವಾ ಅಂತ ಇವನು ಪರವಾಹ್ ನಹೀ ಬೋಲೋ ಅಂತ ಅವನು ಪರವಾಹ್-2  ಕಾರಣವೇನು ಬೆಂದಕಾಳೂರಲ್ಲಿ ಪರರಿಗೇ ವಾಹ್ ಎಂಬುದಕ್ಕೆ? ಇರಬಹುದೇ ಬೆಂದಕಾಳು ತಿಂದೂ ತಿಂದೂ ವಾಹ್ ಕರಿಕೆ ನ-ಕಲಿ  (ತನಿಖೆಗೆ ಹೆದರಿ ಬಿಹಾರದಲ್ಲಿ ನಕಲಿ ಡಿಗ್ರಿ ಪಡೆದ ಶಿಕ್ಷಕರ ರಾಜೀನಾಮೆ - ಸುದ್ದಿ)  ಇದು ಕಲಿಯುಗವೋ  ನಕಲಿಯುಗವೋ ನ-ಕಲಿ ಯುಗವೋ ರೀ? ಮಕ್ಕಳಿಗೆ  ಏನು ಕಲಿಸುತ್ತಾರೆ ಪಾಠ? ಇವರದ್ದೇ ನ-ಕಲಿ ಡಿಗ್ರಿ.

ಚಿಂತೆ, ಬಿಡಿಹೂವ ಮುಡಿದಂತೆ

ಇಮೇಜ್
ಸಿ ಪಿ ರವಿಕುಮಾರ್  ಬಿಡಿಹೂವು ಮುಡಿದ ಸಸಿಗೆ ಏನು ಚಿಂತೆ? ಮಸಿಯಂತೆ ದಟ್ಟವಾಗಿ ಏಳುತ್ತಿರುವ ಇಂಗಾಲದ ಹೊಗೆ ಆಗಸದವರೆಗೂ ಅದರ ವ್ಯಾಪಕತೆ ಹಾರಾಡುತ್ತಿವೆ ಕ್ರೌರ್ಯ, ದ್ವೇಷ, ಅರಾಜಕತೆ ಪಂಡೋರಳ ಪಟ್ಟಿಗೆಯಿಂದ ಹೊರಬಂದ ಟೆರೋಸಾರ್ಗಳಂತೆ ಗ್ರೀಸ್ ದೇಶದಲ್ಲಿ ಇನ್ನೊಂದು ದುರಂತ ಕತೆ ... ನುಂಗಿಕೊಂಡು ಅರಳಿದೆಯಲ್ಲ ನಗೆಮುಗುಳು ಏನು ನಿನ್ನ ರಹಸ್ಯ? ಕಿವಿಯಲ್ಲಿ ಹೇಳು.

ಅರಳು ಮತ್ತು ತೂಕ

ಸಿ ಪಿ ರವಿಕುಮಾರ್  ಅರಳು ~~~~ ಎರಡು ವರ್ಷದ ಹಿಂದೆ. ಕ್ಷೌರದ ಅಂಗಡಿ (ಅಲ್ಲ ಹೇರ್ ಕಟಿಂಗ್ ಸಲೂನ್). ಐದು ವರ್ಷದ ಮಗು ಅರಳು ಹುರಿದಹಾಗೆ ಕನ್ನಡ ಮಾತಾಡುತ್ತಿದ್ದ ಮಾತಾಡಿಸಿದೆ, ನಿರ್ಭಯವಾಗಿ ಉತ್ತರಿಸಿದ. ಅವನ ತಾಯಿ ಕೂದಲು ಕತ್ತರಿಸಿಕೊಂಡಿದ್ದರೂ ಕುಂಕುಮ ಬಿಟ್ಟಿರಲಿಲ್ಲ ತನ್ನ ಹರಕು ಇಂಗ್ಲಿಷ್ ನಲ್ಲಿ ಗದರಿಸಿ ಹೇಳಿದಳು - ಇಂಗ್ಲಿಷ್ ನಲ್ಲಿ ಮಾತಾಡು ಅಮ್ಮ ಅಲ್ಲ ಮಮ್ಮಿ ಅನ್ನು ಮಗು ಮತ್ತು ನಾನು ಪೆಚ್ಚಾಗಿ ಸುಮ್ಮನಾದೆವು. ಈಗ ಅವನು ಸೇರಿರಬಹುದು ಯಾವುದೋ ಕಾನ್ವೆಂಟು ಪೂರ್ತಿ ಹರಿದಿರಬಹುದು ನಂಟು. ತೂಕ ~~~ ಹಿಂದೊಮ್ಮೆ ಹೀಗಿತ್ತು ಇಂಗ್ಲಿಷ್ ಪತ್ರಿಕೆ ತೂಕಕ್ಕೆ ಹಾಕಿದರೆ ಎರಡೂವರೆ ರೂಪಾಯಿ ಕನ್ನಡ ಪತ್ರಿಕೆಗೆ ಎರಡೇ ರೂಪಾಯಿ. ಇವತ್ತು ಸಾಧಿಸಿದ್ದೇವೆ ಪ್ರಗತಿ - ಎರಡಕ್ಕೂ ಸಿಕ್ಕುತ್ತಿದೆ ಒಂದೇ ಗತಿ ಇದರ ರಹಸ್ಯ ಬಿಡಿಸಲೇ? ಕನ್ನಡ ಪತ್ರಿಕೆಯ ಮುಖಕ್ಕೆ ಆಗಾಗ ಇಂಗ್ಲಿಷ್ ಜಾಹೀರಾತಿನ ಆರತಿ.