ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨ ಮೂಲ: ಮಹಾತ್ಮಾ ಗಾಂಧಿ ಅನುವಾದ - ಡಾ. ಸಿ. ಪಿ. ರವಿಕುಮಾರ್ (ಮೊದಲ ಭಾಗವನ್ನು ಓದಲು ಈ ಕೊಕ್ಕೆಯನ್ನು ಅನುಸರಿಸಿ.) ಖಾದಿ ಖಾ ದಿ ನನಗೆ ಭಾರತದ ಮಾನವ ಸಮಾಜದ ಐಕ್ಯತೆಯ ಕುರುಹಾಗಿ ಕಾಣುತ್ತದೆ. ಭಾರತದ ಆರ್ಥಿಕ ಸ್ವಾತಂತ್ರ್ಯದ ಕುರುಹಾಗಿ, ಸಮಾನತೆಯ ಕುರುಹಾಗಿ, ಕೊನೆಗೆ ಜವಾಹರಲಾಲ್ ನೆಹರೂ ಅವರ ಕಾವ್ಯಮಯ ಭಾಷೆಯಲ್ಲಿ ಹೇಳುವುದಾದರೆ "ಭಾರತದ ಸ್ವಾತಂತ್ರ್ಯದ ಪೋಷಾಕಿನಂತೆ" ತೋರುತ್ತದೆ. ಖಾದಿ ಮನೋಭಾವ ಎಂದರೆ ಆವಶ್ಯಕ ವಸ್ತುಗಳ ತಯಾರಿಕೆ ಮತ್ತು ವಿತರಣೆಗಳನ್ನು ವಿಕೆಂದ್ರೀಕರಿಸುವುದು ಎಂದೇ ಅರ್ಥ. ಪ್ರತಿಯೊಂದು ಹಳ್ಳಿಯೂ ತನಗೆ ಅಗತ್ಯವಾದುದಕ್ಕಿಂತ ಸ್ವಲ್ಪ ಹೆಚ್ಚು ಪರಿಮಾಣದಲ್ಲಿ ನಗರಗಳ ಆವಶ್ಯಕತೆಯ ಪೂರೈಕೆಗಾಗಿ ಪದಾರ್ಥಗಳನ್ನು ತಯಾರಿಸಬೇಕು. ದೊಡ್ಡ ಕೈಗಾರಿಕೆಗಳನ್ನು ಕೇಂದ್ರೀಕೃತಗೊಳಿಸಿ ರಾಷ್ಟ್ರದ ಮಟ್ಟದಲ್ಲಿ ನಡೆಸಬೇಕು. ಆದರೆ ಯಾವ ರಾಷ್ಟ್ರದ ಬಹುಪಾಲಿನ ಚಟುವಟಿಕೆಗಳು ಹಳ್ಳಿಗಳಲ್ಲಿ ನಡೆಯುತ್ತವೋ ಅಲ್ಲಿ ಈ ದೊಡ್ಡ ಕೈಗಾರಿಕೆಗಳ ಪಾತ್ರ ಗೌಣವೇ ಆಗಿರುತ್ತದೆ. ಖಾದಿಯ ತಯಾರಿಕೆ ಎಂದರೆ ಹತ್ತಿಯ ಕೃಷಿ, ಹತ್ತಿಯನ್ನು ಬಿಡಿಸುವುದು, ಹತ್ತಿಯ ಬೀಜಗಳನ್ನು ಬೇರ್ಪಡಿಸುವುದು, ಹತ್ತಿಯನ್ನು ಸ್ವಚ್ಛಗೊಳಿಸುವುದು, ಎಳೆಗಳನ್ನು ಬಿಡಿಸುವುದು, ಎಳೆಗಳ ಆಕಾರದ ಪ್ರಕಾರ ಅವುಗಳನ್ನು ಬೇರೆ ಮಾಡುವುದು, ಬಣ್ಣ ಹಾಕುವುದು, ...