“ಪತ್ರ” (ಸಣ್ಣಕತೆ)
“ಪತ್ರ” ಮೂಲ ಗುಜರಾತಿ ಕಥೆ - ಧೂಮಕೇತು ಕನ್ನಡಕ್ಕೆ – ಸಿ. ಪಿ. ರವಿಕುಮಾರ್ ಆಕಾಶ ಶುಭ್ರವಾಗಿತ್ತು ; ತಾರೆಗಳು ಬೆಳಗುತ್ತಿದ್ದವು. ಇರುಳು ಹಿಂದೆ ಜರುಗುತ್ತಾ ನಸುಕಿಗೆ ಸ್ಥಳ ಮಾಡಿಕೊಡುತ್ತಿತ್ತು. ಸಾಯುವ ಮುನ್ನ ಒಬ್ಬ ಮನುಷ್ಯ ಹೇಗೆ ತನ್ನ ಸೌಖ್ಯದ ದಿನಗಳನ್ನು ನೆನೆಸಿಕೊಂಡು ಒಂದಷ್ಟು ಸಮಾಧಾನ ತಂದುಕೊಳ್ಳುತ್ತಾನೋ , ಹೇಗೆ ಮರಣೋನ್ಮುಖನಾದ ಮನುಷ್ಯನ ಮುಖದ ಮೇಲೆ ಕಂಡೂ ಕಾಣದಂತೆ ಮುಗುಳ್ನಗುವೊಂದು ಮೂಡಿ ಮಾಯವಾಗುತ್ತದೋ , ಇನ್ನೇನು ಬರಲಿರುವ ಸೂರ್ಯನ ರಶ್ಮಿಗಳ ಆಗಮನದಿಂದ ಮಾಯವಾಗಿಹೋಗುವ ಮುನ್ನ ತಾರೆಗಳು ಅದೇ ರೀತಿಯಲ್ಲಿ ಮುಗುಳ್ನಗು ಸೂಸುತ್ತಿದ್ದವು. ಅದೊಂದು ಚಳಿಗಾಲದ ನಸುಕು. ಬೀಸುತ್ತಿದ್ದ ಕುಳಿರ್ಗಾಳಿ ನಡುಕ ಹುಟ್ಟಿಸುವಂತಿತ್ತು. ಕೆಲವು ಮನೆಗಳಲ್ಲಿ ಬೆಳಗಿನ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದವು. ಹೆಂಗಸರು ಬೀಸುವ ಕಲ್ಲು ತಿರುಗಿಸುತ್ತಾ ಹಾಡಿಕೊಳ್ಳುವ ಸದ್ದು ಕೇಳುತ್ತಿತ್ತು. ವಯಸ್ಸಾದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಒಂಟಿಯಾಗಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಡೆದುಹೋಗುತ್ತಿದ್ದ. ಚಳಿಗಾಳಿಯನ್ನು ಎದುರಿಸಲು ಹಳೆಯ ಬಟ್ಟೆಯನ್ನು ಮೈಗೆ ಸುತ್ತಿಕೊಂಡಿದ್ದ. ಎಲ್ಲೆಲ್ಲೂ ಗಾಢವಾದ ಮೌನ ಮುಸುಕಿಕೊಂಡಿತ್ತು. ನಡುವೆ ಎಲ್ಲೋ ಒಂದು ನಾಯಿ ಬೊಗಳಿದ ಸದ್ದು , ಕೆಲಸಕ್ಕೆ ಹೊರಟ ಹೆಂಗಸರು ಮಾತಾಡಿಕೊಂಡ ಸದ್ದು , ಅಥವಾ ತಮ್ಮ ಗೂಡುಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ಸದ್ದು ಒಮ್ಮೆ...