ಯಾರೊಡನೆ ಆಡಲಿ ಹೋಳಿ

ತನ್ನ ಕಡೆಯ ದಿನಗಳನ್ನು ಮೀರಾಬಾಯಿ ವೃಂದಾವನ ಮತ್ತು ದ್ವಾರಕಾ ಕ್ಷೇತ್ರಗಳಲ್ಲಿ ಕಳೆದಳು ಎನ್ನುತ್ತಾರೆ. ಕೃಷ್ಣನಿಗಾಗಿ ಪರಿತಪಿಸುತ್ತಾ ಅವಳು ಇಡೀ ಜೀವಮಾನವನ್ನೇ ಕಳೆದಳು. ವೃಂದಾವನದಲ್ಲಿ ಹೋಳಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕೃಷ್ಣ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಆಡುತ್ತಿದ್ದ  ರಾಸಲೀಲೆಯನ್ನು ಮರುಸೃಷ್ಟಿಸಲಾಗುತ್ತದೆ.  ಈ ಸಂಭ್ರಮವನ್ನು ನೋಡಿದಾಗ ಮೀರಾಳ ಮನಸ್ಸು ಕುಗ್ಗುತ್ತದೆ. ತಾನು ಯಾರೊಂದಿಗೆ ಹೋಳಿ ಆಚರಿಸಲಿ? ತಾನು ನಂಬಿದವನು ಒಂಟಿ ಬಿಟ್ಟು ಹೊರಟುಹೋದನಲ್ಲ ಎಂಬ ಅಧೈರ್ಯ ಮೂಡುತ್ತದೆ.  ಆದರೆ ತನ್ನ ದೈನ್ಯವನ್ನು ತೋಡಿಕೊಳ್ಳುವಾಗಲೂ  ಅವಳಿಗೆ ಶ್ಯಾಮನ ದರ್ಶನದ  ಆಸೆ ಬತ್ತಿಹೋಗಿಲ್ಲ.  



ಮೂಲ ರಚನೆ - ಮೀರಾಬಾಯಿ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಯಾರೊಡನೆ ಆಡಲಿ ಹೋಳಿ ನನಗೇನು ಗೊತ್ತು
ಪ್ರಿಯನು ಒಬ್ಬಂಟಿ ಹೋಗಿಹನು ಬಿಟ್ಟು

ಮಾಣಿಕ್ಯ ಮುತ್ತು ಎಲ್ಲವನೂ ಬಿಟ್ಟು, ತುಳಸೀಮಣಿ ಕೊರಳಲ್ಲಿ ತೊಟ್ಟು
ಊಟದೊಳು ರುಚಿಯಿಲ್ಲ ಮನೆಯಲ್ಲಿ ಮನಸಿಲ್ಲ, ಹೇಳಲೇನಿದರ ಗುಟ್ಟು
ಪ್ರಿಯಕರನ ಕಾಯುತ್ತ ಉರುಳುತ್ತಿದೆ ಹೊತ್ತು ...

ನಿನ್ನೊಲವು ಈಗ ಬೇರಾರದೋ ಸೊತ್ತು! ನನ್ನೊಂದಿಗೇತಕ್ಕೆ ಆಡಬೇಕಿತ್ತು? 

ಇಂದೂ ಬರಲಿಲ್ಲ, ಎಷ್ಟು ದಿನವಾಯಿತು, ನನ್ನನ್ನು ಹೀಗೆ ಒಬ್ಬಳನ್ನೇ ಬಿಟ್ಟು!
ಏಳುತ್ತಿದೆ ಮನದೊಳಗೆ ತಲ್ಲಣದ ಸುತ್ತು ...
  
ಶ್ಯಾಮನಿಲ್ಲದೆ ಮನಸು ಬಾಡಿ ಹೋಯಿತು ಹೇಗೆ ನೀರಿಲ್ಲದ ಬಳ್ಳಿ ಹೋಗುವುದೋ ಸುಟ್ಟು 
ದರ್ಶನವ ನೀಡು ಮೀರಾಳ ಪ್ರಭುವೇ, ಜನ್ಮಜನ್ಮಗಳಲ್ಲೂ ನಿನ್ನಲ್ಲಿ ನಂಬಿಕೆಯನಿಟ್ಟು 
ಕಾದರೂ ನಿಂತಿರುವೆ ಹೊರಗಡೆಗೆ ಮತ್ತೂ ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)