ಕೆಲವಂ ಬಲ್ಲವರಿಂದ && ಬಲ್ಲೆವೆಂದು ಬಲ್ಲವರಿಂದ ಕಲ್ತು
ಬಹಳ ಹಿಂದೆ ನಾನು ಇಂಗ್ಲಿಷ್ ಭಾಷಾಂತರದಲ್ಲಿ ಓದಿದ ಒಂದು ಅರೇಬಿಯನ್ ಗಾದೆ ಹೀಗಿದೆ: ಯಾರಿಗೆ ಗೊತ್ತಿದೆಯೋ ಮತ್ತು ತಮಗೆ ಗೊತ್ತು ಎಂದು ಗೊತ್ತಿದೆಯೋ ಅವನು ಜ್ಞಾನಿ, ಅವನನ್ನು ಗುರುವಾಗಿ ಸ್ವೀಕರಿಸು. ಯಾರಿಗೆ ಗೊತ್ತಿದೆಯೋ, ಆದರೆ ತಮಗೆ ಗೊತ್ತಿದೆ ಎಂದು ಗೊತ್ತಿಲ್ಲವೋ ಅವರನ್ನು ನಿದ್ರೆಯಿಂದ ಎಚ್ಚರಿಸು. ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದು ಗೊತ್ತಿದೆಯೋ ಅವರು ಮುಗ್ಧರು, ಅವರಿಗೆ ತಿಳುವಳಿಕೆ ನೀಡು. ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದೂ ಗೊತ್ತಿಲ್ಲವೋ ಅವರು ಮೂರ್ಖರು, ಅವರಿಂದ ದೂರವಿರು. ನೀವು ಯಾವುದೋ ವಿಷಯವನ್ನು ಕುರಿತು ವಿಷಯ ಸಂಗ್ರಹಣೆ ಮಾಡಬೇಕು ಎಂದುಕೊಳ್ಳಿ. ಈಗಂತೂ ಗೂಗಲ್ಲಿಗೆ ಹೋಗಿ ಏನೇ ಹುಡುಕಿದರೂ ಅದು ಪುಟಗಟ್ಟಲೆ ಮಾಹಿತಿ ಕಕ್ಕಿಬಿಡುತ್ತದೆ! ಇವುಗಳಲ್ಲಿ ಯಾವುದನ್ನು ನಂಬುವುದು? ಯಾವುದನ್ನು ಸ್ವೀಕರಿಸುವುದು? ಅರೇಬಿಯನ್ ಗಾದೆ ನಮಗೆ ಸಹಾಯ ಮಾಡುತ್ತದೆ. ಕೆಲವರಿಗೆ ವಿಷಯ ಗೊತ್ತಿರುತ್ತದೆ; ಅಷ್ಟೇ ಅಲ್ಲ, ತಮಗೆ ಅದು ಗೊತ್ತು ಎಂಬುದರ ಅರಿವೂ ಇರುತ್ತದೆ. ಹೀಗಾಗಿ ಅವರನ್ನು ಕೇಳಿದರೆ ಅವರು ಆತ್ಮವಿಶ್ವಾಸದಿಂದ ನಿಮಗೆ ವಿಷಯವನ್ನು ಹೇಳಿಕೊಡುತ್ತಾರೆ. ಇಂಥ ಗುರುಗಳು ಸಿಕ್ಕುವುದು ಅಪರೂಪ. ಕುಮಾರವ್ಯಾಸ "ಗುರುವರಿಯದವನೆ ಮರುಳ" ಎಂದಿದ್ದಾನೆ. ಇಂಥ ಗುರುಗಳು ಸಿಕ್ಕಾಗ ಗುರುತಿಸದೇ ಹೋದವನು ಮರುಳ ಎನ್ನುವುದು ಈ ಮಾತಿನ ಅರ್ಥ. ...