ನಿಮ್ಮ ಪಿನ್ ಬದಲಾಯಿಸಿ
ಇವತ್ತೊಂದು ಭಯಾನಕ ಅನುಭವ. ಒಂದೆರಡು ದಿನಗಳ ಹಿಂದೆ ನನ್ನ ಫೋನ್ "ನಿಮ್ಮ ಪಿನ್ ಬದಲಾಯಿಸಿ" ಅಂತ ಒಂದೇ ಸಮನೆ ಹೊಡಕೋತಿತ್ತು. ಪಿನ್ನು ಪಿನ್ನೆಂದೇಕೆ ಗೋಳುಗರೆವರು ನನ್ನ ಪಾಡಿಗೆ ನನ್ನ ಬಿಡದ ಕಾವಲರು ಎಂದು ನಾನು ಕುಪಿತನಾದೆ. ಎಲ್ಲೆಡೆ ಈ ಕಾವಲರ ಅಥವಾ ಸೆಕ್ಯೂರಿಟಿಯವರದ್ದೆ ರಾಜ್ಯ. ಪಿನ್ನು ಪಾಸ್ವರ್ಡ್ ಬಯೋಮೆಟ್ರಿಕ್ಸ್ ಕಾಪ್ಚ ನನ್ನದೇ ಫೋನ್ ಬಳಸಲು ನನಗೆಷ್ಟು ಕಷ್ಟ ಎಂದು ನಾನು ದಾಸರ ಶೈಲಿಯಲ್ಲಿ ಹಾಡುವ ಮುನ್ನ ಹಾಳಾಗಿ ಹೋಗಲಿ ಎಂದು ಪಿನ್ ಬದಲಾಯಿಸಿದೆ. ಹಳೆಯ ಪಿನ್ನನ್ನೇ ಏನೋ ಒಂದಿಷ್ಟು ಅದಲು ಬದಲು ಮಾಡಿ ಹೊಸ ಪಿನ್ ತಯಾರಿಸಿ ಪಿನ್ ಪೀಡೆಯಿಂದ ಪಾರಾದೆ. ನನ್ನ ಹೆಬ್ಬೆಟ್ಟು ಗುರುತಿನಿಂದ ಖುಲ್ ಜಾ ಸಿಮ್ ಸಿಮ್ ಎಂದು ಅಣತಿ ಮಾಡುತ್ತಿದ್ದ ನನಗೆ ಇವತ್ತು ಬೆಳಗ್ಗೆ ಫೋನ್ ಪಿನ್ ಹೇಳೆಂದು ಕೇಳಿತು. ಆಲಿಬಾಬಾನ ತಮ್ಮನಿಗೂ ಇಂಥದ್ದೇ ಏನೋ ಆಗಿರಬಹುದು. ನಿಮಗೆ ಈ ಆಲಿಬಾಬಾ ಕಥೆ ಗೊತ್ತು ತಾನೇ? ಕಳ್ಳರಿಂದ ಕಳ್ಳತನದ ಮಾಲನ್ನು ಕಳ್ಳತನ ಮಾಡಿದವನಿಗೆ ಬಾಬಾ ಎಂಬ ಹೆಸರು ಯಾಕೆ ಬಂತೋ ಎಂದು ನಾನು ಹಿಂದೆ ಯೋಚಿಸುತ್ತಿದ್ದೆ. ನಮ್ಮ ಜೀವಮಾನದಲ್ಲಿ ಅದೆಷ್ಟೋ ಬಾಬಾಗಳು ಸ್ವಾಮಿಗಳು ಇಂಥದ್ದೇ ಸಾಧನೆಗಳನ್ನು ಮೆರೆದು ನನ್ನ ಅನುಮಾನ ಪರಿಹಾರವಾಗಿದೆ. ಈ ಆಲಿಬಾಬಾನ ತಮ್ಮನ ಹೆಂಡತಿಗೆ ತನ್ನ ಓರಗಿತ್ತಿ ಒಮ್ಮೆಲೇ ಒಳ್ಳೊಳ್ಳೆಯ ಉಡುಗೆ ತೊಟ್ಟು ಒಳ್ಳೊಳ್ಳೆಯ ಅಡುಗೆ ಮಾಡುವುದು ಇವೆಲ್ಲ ಕ...