ಪೋಸ್ಟ್‌ಗಳು

Love ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಇಷ್ಟೆಲ್ಲದರ ನಡುವೆ

ಇಮೇಜ್
ಇಷ್ಟೆಲ್ಲದರ ನಡುವೆ ಮೂಲ: ಟಾಮ್ ಹಿರಾನ್ಸ್ ಇಷ್ಟೆಲ್ಲದರ ನಡುವೆ ಅರಳುತ್ತವೆ ಹೂ ಯಥಾಪ್ರಕಾರ ಚಂದ್ರೋದಯ ಸೂರ್ಯೋದಯಕ್ಕಿಲ್ಲ ಸಂಚಕಾರ ಮಕ್ಕಳು ಮುಗುಳ್ನಗುತ್ತವೆ ದೊಡ್ಡದಾಗಿ ನಿಷ್ಕಾರಣ ಮತ್ತು ಅಸಂಭವ ದಾಟಿ ಎರಡು ಹೃದಯಗಳ ಮಿಲನ ಅಪರಿಚಿತರು ಹಂಚಿಕೊಳ್ಳುತ್ತಾರೆ ಕಡ್ಡಿಪೆಟ್ಟಿಗೆ, ನಗೆ  ನೀರಿನ ಮೇಲೆ ಆಡುತ್ತವೆ ಬೆಳಕಿನ ಕೋಲುಗಳು ಮೆಲ್ಲಗೆ ಅನಿರೀಕ್ಷಿತ ಬೀದಿಗಳಲ್ಲಿ ಅರಳುತ್ತದೆ ಔದಾರ್ಯ  ನೆರೆ, ಭೂಕಂಪನಗಳ ನಡುವೆ  ಪುನರ್ವಸತಿ ಕಾರ್ಯ ಬದುಕಿನ ಕಡೆಗೆ ವಾಲುತ್ತದೆ ಜೀವನ ಎಲ್ಲವನ್ನೂ ಸಾವು ತೆಗೆದುಕೊಂಡರೂ ಆಫೋಷನ ನಡುವೆ ಇದ್ದವು ಎಷ್ಟೊಂದು ಅಮೂಲ್ಯ ಕ್ಷಣ ಎಲ್ಲವೂ ಪ್ರಕಾಶಮಾನವಾಗಿ ಜಗಮಗ ನಾವು ಮತ್ತೊಮ್ಮೆ  ನಮ್ಮ ಈ ಜಗ ವನ್ನು ಪ್ರೀತಿಸುವಂತೆ ಇತ್ತು ಜೀವನ.

ನನ್ನ ಬದುಕಿದೆಯಲ್ಲ

ಇಮೇಜ್
ನನ್ನ ಬದುಕಿದೆಯಲ್ಲ ಮೂಲ.: ಲಿಯೋ ಮಾರ್ಕ್ಸ್ ಅನುವಾದ: ಸಿ ಪಿ ರವಿಕುಮಾರ್ ನನ್ನ ಈ ಬದುಕಿದೆಯಲ್ಲ ಅದೊಂದೇ ನನ್ನದೆಂಬುದು, ಮತ್ತು ಆ ಬದುಕು ನಿನ್ನದು. ಈ ಬದುಕಿನ ಬಗ್ಗೆ ನನಗಿರುವ ಆಸೆ ನಿನ್ನದು, ನಿನ್ನದು ನಿನ್ನದು! ನಾನು ನಿದ್ರಿಸಬಹುದು ನಾನು ವಿರಮಿಸಬಹುದು ಸಾವು ಕೂಡಾ ಒಂದು ಮಧ್ಯಂತರ ವಿರಾಮ. ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ  ಬೆರೆತ ನನ್ನ ಮನಃಶಾಂತಿ ನಿನ್ನದು, ನಿನ್ನದು, ನಿನ್ನದು!

ನೋಟ

ಇಮೇಜ್
ಸ್ಟೀವನ್ ನನ್ನನ್ನು ಚುಂಬಿಸಿದ  ವಸಂತದಲ್ಲಿ ರಾಬಿನ್ ಚುಂಬಿಸಿದನು ಶಿಶಿರದಲ್ಲಿ. ಕೊಲಿನ್ ಮಾತ್ರ ಚುಂಬಿಸಲೇ ಇಲ್ಲ ಸುಮ್ಮನೇ ನೋಡಿದ ಕಣ್ಣಿಟ್ಟು ಕಣ್ಣಲ್ಲಿ. ನಗೆಯಲ್ಲಿ ಕರಗಿಹೋಯಿತು ಸ್ಟೀವನ್ ಕೊಟ್ಟದ್ದು ಆಟದಲ್ಲಿ ಕಳೆದುಹೋಯಿತು ರಾಬಿನ್ ಚುಂಬನ ಕೊಲಿನ್ ನೆಟ್ಟನಲ್ಲ ನನ್ನ ಕಡೆ ನೋಟ ಕಾಡುತ್ತದೆ ಅದು ಇಂದಿಗೂ ಪ್ರತಿದಿನ. ಮೂಲ: ಸಾರಾ ಟೀಸ್ ಡೇಲ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ನನಗೆ ನೀನು ಬೇಕು

ಇಮೇಜ್
 ಮೂಲ: ರಯಾನ್ ಮೆಕೆನ್ಜಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನನಗೆ ನೀನು ಬೇಕು. ಆದರೆ ಆಟಿಕೆ ಬೇಕೆನ್ನಿಸಿದಂತಲ್ಲ ಮಗುವಿಗೆ, ಮೂಳೆ ಬೇಕೆನ್ನಿಸಿದಂತಲ್ಲ ನಾಯಿಗೆ, ಫೋನ್ ಬೇಕೆನ್ನಿಸಿದಂತಲ್ಲ ಜನರಿಗೆ. ನನಗೆ ನೀನು ಬೇಕಾಗಿರುವುದು ಸಮುದ್ರಕ್ಕೆ ಉಪ್ಪು ಬೇಕಾದಂತೆ, ಹೂವಿಗೆ ಬೇಕಾದಂತೆ ನೀರು, ಹೃದಯಕ್ಕೆ ಬೇಕಾದಂತೆ ನೆತ್ತರು. ನನಗೆ ನೀನು ಬೇಕಾದದ್ದು ನನ್ನ ಉಳಿವಿಗೆ.

ಇರುಳಿಗಿವೆ ಕಣ್ಣುಗಳು ಸಹಸ್ರಾರು

ಇಮೇಜ್
ಇರುಳಿಗಿವೆ ಕಣ್ಣುಗಳು ಸಹಸ್ರಾರು ದಿವಸಕ್ಕೆ ಒಂದೇ ಒಂದು, ಆದರೂ ಕೊನೆಗಾಣುವುದು ಜಗತ್ತಿನ ಬೆಳಕು ಅಸ್ತಂಗತನಾದಾಗ ನೇಸರು. ಮನಸ್ಸಿಗೆ ಕಣ್ಣುಗಳು ಸಹಸ್ರಾರು, ಹೃದಯಕ್ಕೆ ಇರುವುದು ಒಂದೇ ಒಂದು. ಆದರೂ ಕಂತುವುದು ಜೀವನದ ಬೆಳಕು ಬತ್ತಿಹೋದಾಗ ಪ್ರೇಮಸಿಂಧು. ಮೂಲ: ಫ್ರಾನ್ಸಿಸ್ ವಿಲಿಯಂ ಬೋರ್ಡಿಯಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಅಮ್ಮನ ಸೀಕ್ರೆಟ್

ಇಮೇಜ್
ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು! ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು! ಪರಿಮಳ ಬರುತಿದೆ ಘಮಘಮ ಎಂದು ಇರಲಾಗದು ಬರಿಹೊಟ್ಟೆಯೊಳಿನ್ನು ಕೈತೊಳೆದಾಗಿದೆ, ಬೇಕಾದರೆ ನೋಡು ಹೇಳುವೆನೇ ಎಂದಾದರೂ ಸುಳ್ಳನ್ನು! ಗುಂಡಗೆ ಕೆಂಪಗೆ ಗರಿಗರಿ ರೊಟ್ಟಿ ಮೇಲ್ಗಡೆ ಕರಗುವ ತುಪ್ಪದ ಗಟ್ಟಿ ಮುರಿಯಿತೇ ಅಯ್ಯೋ ಪರವಾಗಿಲ್ಲ ಮುರಿದೇ ಬಾಯಿಗೆ ಹಾಕುವೆನಲ್ಲ! ರುಚಿರುಚಿಯಾಗಿದೆ ಬಿಸಿಬಿಸಿ ರೊಟ್ಟಿ ಇದು ಒನ್ ಹಂಡ್ರೆಡ್ ಪರ್ಸೆಂಟ್ ಬಿಟ್ಟಿ! ಏನಮ್ಮಾ ಹಾಕಿದೆ ಈ ಅದ್ಭುತ ರುಚಿಗೆ ಹೇಳಿಬಿಡಮ್ಮಾ ಸೀಕ್ರೆಟ್ ನನಗೆ! ಎಂದರೆ ನಗುವಳು ಗಲ್ಲವ ಹಿಂಡುತ್ತಾ ಪ್ರೀತಿ ಎಂಬುದೇ ಸೀಕ್ರೆಟ್ ಪುಟ್ಟಾ! ಇರುವುದು ಅಮ್ಮಂದಿರ ಬಳಿ ಮಾತ್ರ ಎಲ್ಲಾಕಡೆಗೂ ಸಿಕ್ಕಿಬಿಡುತ್ತಾ! ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು

ನಾನಿರುವುದಿಲ್ಲ ಎಂಬ ಭೀತಿ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾನಿರುವುದಿಲ್ಲ ಮುಂದೊಂದು ದಿನ, ಅದಕ್ಕೆ ಮೊದಲೇ ಜೇನುನೊಣದಂತೆ ಹೀರಿಕೊಂಡು ನನ್ನ ಲೇಖನಿಯು ಮಾನಸೋದ್ಯಾನದ ಅಸಂಖ್ಯ ಕಲ್ಪನಾಪುಷ್ಪಗಳ ಮಧುವನ್ನು ಘನೀಕರಿಸದಿದ್ದರೆ ಅಕ್ಷರರೂಪ ಗ್ರಂಥಮಾಲೆಯಲ್ಲಿ , ಎಂದು ಧೇನಿಸಿ ಭೀತಗೊಳ್ಳುವೆನು. ನೋಡಿದಾಗ ಆಗಸದ ಕಡೆಗೆ ಕಾಣಿಸಿ ನಕ್ಷತ್ರಪುಂಜದಲ್ಲಿ ಯಾವುದೋ ಪ್ರೇಮಕಥನವು ಬಾನಲ್ಲಿ, ನಿಡುಸುಯ್ಯುವೆನು ಅದರ  ನೆರಳನ್ನಾದರೂ ನಾನಿಲ್ಲಿ ಗ್ರಹಿಸಿಡಲು ಬಿಡುವುದೇ ವಿಧಿಯ ಮಾಯಾಹಸ್ತ! ನಿನ್ನ ಮೊಗದ ಚೆಲುವನ್ನು ನೋಡುತ್ತಾ ದುಃಖಿಸುವೆ ಮತ್ತೆ ಇನ್ನೆಂದೂ ಕಾಣಲು ಸಿಕ್ಕದೆಂದು;  ದೊರೆಯದು ನನಗೆ ಇನ್ನೆಂದೂ ಭಾವನಾತೀತ, ನಿಷ್ಕಲ್ಮಶ ಪ್ರೇಮದ ಸುಖ; ಕಣ್ಣಾಡಿಸಿ ನೋಡುತ್ತೇನೆ ಜಗತ್ತಿನ ಕಿನಾರೆಯಲ್ಲಿ ನಿಂತು: ಎಲ್ಲಿಯವರೆಗೆ ನಿಂತಿರುತ್ತೇನೆ ಇಲ್ಲಿ ನಾನೆಂದರೆ ಯಾವ ಘಳಿಗೆ ಮುಳುಗುವುವೋ ಕೀರ್ತಿ ಮತ್ತು ಪ್ರೇಮ ಶೂನ್ಯದೊಳಗೆ.

ನಿನ್ನನ್ನು ಒಮ್ಮೆ ಪ್ರೀತಿಸುತ್ತಿದ್ದೆ

ಇಮೇಜ್
ಮೂಲ: ಅಲೆಕ್ಸಾಂಡರ್ ಪುಷ್ಕಿನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನಿನ್ನನ್ನು ಒಮ್ಮೆ ಪ್ರೀತಿಸುತ್ತಿದ್ದೆ. ಆರಿಲ್ಲ ಅದರ ಕಿಚ್ಚು ನನ್ನ ಹೃದಯದಲ್ಲಿ ಇನ್ನೂ. ಮಂದವಾಗಿ ಉರಿಯುತ್ತಿದೆ ಈಗ ನಂದಾದೀಪದಂತೆ ನಿನಗೆ ನೀಡದು ಯಾವ ಪೀಡೆಯನ್ನೂ. ಹತಾಶೆಯಿತ್ತು ನಿನ್ನ ಕುರಿತು ನನ್ನ ಮೂಕ ಪ್ರೀತಿಯಲ್ಲಿ ಕೆಲವೊಮ್ಮೆ ಅತಿ ಸಂಕೋಚ, ಕೆಲವೊಮ್ಮೆ ಭುಗಿಲೆದ್ದ ಈರ್ಷೆ. ದೇವರು ಕರುಣಿಸಲಿ ನಿನಗೆ ಬೇರೊಬ್ಬರನ್ನು ಯಾರು  ಪ್ರೀತಿಸುವರೋ ನಿಜವಾಗಿ, ಕೋಮಲವಾಗಿ ನನ್ನಂತೆ.

ಪ್ರೇಮ

ಇಮೇಜ್
 ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಪ್ರೇಮವು – ಹೊತ್ತಿ ಉರಿಯುವ ಆತ್ಮದಿಂದ ಸ್ಫುರಿಸಿ ಸುತ್ತಲಿನ ಭೂಮಿಯನ್ನು ಬೆಳಗುವ ಒಂದು ಮಾಂತ್ರಿಕ ಕಿರಣ. ಅದರ ಬೆಳಕಿನಲ್ಲಿ ನಮಗೆ ಮೂಡುವುದು ನಮ್ಮ ಜಾಗೃತ ಸ್ಥಿತಿಗಳ ನಡುವೆ ಜೀವನ ಒಂದು ಸುಂದರ ಕನಸೆಂಬ ಪರಿಜ್ಞಾನ.

ನನ್ನನ್ನಗಲಿ ಹೋಗದಿರು

ಇಮೇಜ್
 ಮೂಲ: ಪಾಬ್ಲೋ ನೆರುಡಾ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದೂರವೆಲ್ಲೂ ಹೋಗದಿರು ಒಂದೇ ದಿನವಾದರೂ ಏಕೆಂದರೆ ಹೇಗೆ ಹೇಳಲಿ ನಾನು ದಿನವೊಂದು ಸುದೀರ್ಘ ಕಾಲಮಾನ ನಾನು ಕಾಯುತ್ತಿರುವೆ ನಿನಗಾಗಿ, ಬೋಗಿಗಳು ಎಲ್ಲೋ ದೂರದಲ್ಲಿ ಮಲಗಿರುವ ಜನರಹಿತ ರೇಲ್ವೆ ನಿಲ್ದಾಣದಲ್ಲಿ  ಕಾದಂತೆ ದೂರವೆಲ್ಲೂ ಹೋಗದಿರು ಒಂದೇ ತಾಸಾದರೂ ಏಕೆಂದರೆ ಆತಂಕದ ಸಣ್ಣ.ಹನಿಗಳು ಒಗ್ಗೂಡಿ ಬಿಡುವುವು ಆಗ ಇರಲೊಂದು ಮನೆಗಾಗಿ ಅರಸುತ್ತಾ ಅಲೆಯುವ ಹೊಗೆ ಹೊಕ್ಕು ನನ್ನೊಳಗೆ, ಕಳೆದುಹೋದ ಹೃದಯ ಉಸಿರುಗಟ್ಟುವುದು ನಿನ್ನ ನೆರಳು ಎಂದೂ ಮರೆಯಾಗದಿ ರಲಿ ಕಡಲ ಕಿನಾರೆಯಲ್ಲಿ ಮೀಟದಿರಲಿ ನಿನ್ನ ಕಣ್ಣೆವೆ  ದೂರದ ಶೂನ್ಯದೊಳಗೆಂದೂ. ನನ್ನ ಪ್ರಿಯತಮೆಯೇ ಒಂದು ಕ್ಷಣವೂ ನನ್ನನ್ನು ಅಗಲದಿರು ಏಕೆಂದರೆ ಆ ಕ್ಷಣ ನೀನು ದಾಟಿಬಿಡುವೆ ಅದೆಷ್ಟು ದೂರ ಗೊತ್ತೇ, ನಾನು ನಿನ್ನನ್ನು ಅರಸುತ್ತಾ ಭೂಮಿಯ ಚಕ್ರವ್ಯೂಹದಲ್ಲಿ ಅಡ್ಡಾಡುತ್ತೇನೆ, ನೀನು ಮರಳಿ ಬರುವೆಯೋ ಇಲ್ಲ ನನ್ನನ್ನು ಸಾಯಲು ಬಿಟ್ಟು ಹೋದೆಯೋ ಎಂದು ಪ್ರಶ್ನಿಸಿಕೊಳ್ಳುತ್ತಾ.

ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ (ಪಾಬ್ಲೋ ನೆರುಡಾ)

ಇಮೇಜ್
 ಮೂಲ ಕವಿತೆ: ಪಾಬ್ಲೋ ನೆರುಡಾ ಅನುವಾದ: ಸಿ. ಪಿ. ರವಿಕುಮಾರ್ ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ ನನ್ನ ಮೃತ್ಯುವಿನ ಸಮಯದಲ್ಲಿ.   ನಿನ್ನ ಕೈಗಳ ಬೆಳಕು, ಗೋಧಿ ತೆನೆಯ ನವೋಲ್ಲಾಸ  ಇನ್ನೊಮ್ಮೆ ಹರಿದು ಬರಲಿ ನನ್ನತ್ತ.  ಮತ್ತೊಮ್ಮೆ ಅನುಭವಿಸುವೆನು ನನ್ನ ವಿಧಿಯನ್ನು ಬದಲಿಸಿದ ಅವುಗಳ ಮೃದುತ್ವ. ನಾನು ನಿದ್ರಿಸುವಾಗ ನಿನ್ನ ನಿರೀಕ್ಷೆಯಲ್ಲಿ  ನೀನು ಬದುಕಬೇಕೆಂದು ನನ್ನಾಸೆ.  ನಿನ್ನ ಕಿವಿಗಳಲ್ಲಿ ಮೊರೆಯುತ್ತಿರಲಿ ಸಮುದ್ರದ ಗಾಳಿ, ತೀಡುತ್ತಿರಲಿ ನಿನ್ನ ಬಳಿ ನಮಗಿಬ್ಬರಿಗೂ ಆಪ್ಯಾಯವಾಗಿದ್ದ ಕಡಲಿನ ಗಂಧ ನಾವಿಬ್ಬರೂ ನಡೆಯುತ್ತಿದ್ದ ಕಡಲತೀರದಲ್ಲಿ ಅಡ್ಡಾಡು ಎಂದಿನಂತೆ ಅನಂತಕಾಲವೂ ಜೀವಿಸಲಿ ನಾನು ಪ್ರೀತಿಸಿದ್ದೆಲ್ಲವೂ ಇನ್ನು ನೀನೋ ನನಗೆ ಪ್ರಿಯತಮ ನಿನ್ನನ್ನು ಪ್ರೀತಿಸಿದೆ ಎಲ್ಲಕ್ಕಿಂತಲೂ ಉತ್ಕಟವಾಗಿ ನಿನ್ನನ್ನು ಹಾಡಿದೆ ಅತ್ಯುಚ್ಚ ಕಂಠದಲ್ಲಿ ಹೀಗಾಗಿ ಸದಾ ಕುಸುಮಿಸುತ್ತಿರು ಓ ನನ್ನ ಕುಸುಮ! ನನ್ನ ಪ್ರೀತಿಯು ಆದೇಶಿಸಿದ್ದೆಲ್ಲವೂ ದೊರಕಲಿ ನಿನಗೆ ನನ್ನ ನೆರಳು ಹಾಯುತ್ತಿರಲಿ ನಿನ್ನ ಕುರುಳೊಳಗೆ ನನ್ನ ಹಾಡಿಗೆ ಕಾರಣ ತಿಳಿಯಲಿ ಅವರಿಗೆ ಹೀಗೆ.

ಮರೆಯದಿರು ನನ್ನನ್ನು (ಪಾಬ್ಲೋ ನೆರುಡಾ)

ಇಮೇಜ್
ಮರೆಯದಿರು ನನ್ನನ್ನು ಮೂಲ: ಪಾಬ್ಲೋ ನೆರುಡಾ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನನ್ನದೊಂದು ಅರಿಕೆ ಇದೆ ನಿನ್ನೊಳಗೆ. ನಿನಗೆ ಗೊತ್ತೇ ಇದೆ: ನಾನು  ದಿಟ್ಟಿಸಿದಾಗ ಸ್ಫಟಿಕಚಂದ್ರನನ್ನು ಅಥವಾ ನನ್ನ ಕಿಟಕಿಯ ಸರಕುಗಳ ಹೊರಗೆ ತೆವಳುವ ಶಿಶಿರದ ಕೆಂಪು ಟೊಂಗೆಯನ್ನು, ಮುಟ್ಟಿದಾಗ ಬೆಂಕಿಯ ಬಳಿ ಉದುರಿ  ಬೆರಳಿಗೆ ಸಿಕ್ಕಿದರೂ ಸಿಕ್ಕದ ಬೂದಿಯನ್ನು  ಅಥವಾ ನೇವರಿಸಿದಾಗ ಸುಕ್ಕುಗಟ್ಟಿದ ಮರದ ಕಾಂಡ, ಇವೆಲ್ಲವೂ  ಕರೆದೊಯ್ಯುವುದು ನನ್ನನ್ನು ನಿನ್ನ ಬಳಿಗೇ. ಸೃಷ್ಟಿಯ ಎಲ್ಲ ವಾಸನೆಗಳು, ಬೆಳಕು, ಲೋಹಗಳು,  ಎಲ್ಲವೂ ಪುಟ್ಟ ದೋಣಿಗಳಾಗಿ ಚಲಿಸುತ್ತವೆ  ನನಗಾಗಿ ಕಾದಿರುವ ನಿನ್ನ ದ್ವೀಪಗಳ ಕಡೆಗೆ.  ಆದರೆ  ಬತ್ತಿಹೋದರೆ ನನ್ನ ಕುರಿತಾದ  ನಿನ್ನ ಪ್ರೀತಿಯ ಒರತೆ ನಿಧಾನವಾಗಿ ಬತ್ತಿ ಹೋಗುವುದು ನನ್ನ ಪ್ರೀತಿಯ ಸೆಲೆ. ಮರೆತೆಯಾದರೆ ನನ್ನನ್ನು ಅರಸದಿರು ನನ್ನನ್ನು  ಮರೆತರೆ ನನ್ನನ್ನು ಅರಸಲು ಹೋಗದಿರು ಏಕೆಂದರೆ  ನಾನು ಆಗಲೇ ಮರೆತುಬಿಟ್ಟಿರುತ್ತೇನೆ ನಿನ್ನನ್ನು.  ನೀನು ದೀರ್ಘವಾಗಿ ಯೋಚಿಸಿ ನೋಡು : ಬಾವುಟಗಳನ್ನು ಹಾದು ಬಂದು ನನ್ನ ಬಾಳಲ್ಲಿ ಬೀಸುವ ಗಾಳಿಯೇ ತ್ಯಜಿಸುವೆಯಾದರೆ ನನ್ನನ್ನು  ನನ್ನ ಬೇರುಗಳಿರುವ ಹೃದಯದ ತೀರದಲ್ಲಿ ನೆನಪಿರಲಿ, ಅಂದೇ ಅದೇ ಘಳಿಗೆ ನಾನು ಮೇಲೆತ್ತುವೆನು ನನ್ನ ತೋಳುಗಳನ್ನು ಮತ್ತು ನನ್ನ ಬೇರುಗಳು ವಲಸೆ ಹೊರಡುತ್ತವೆ  ಬೇರೊಂದು ನಾಡನ್ನು...

ಪ್ರೀತಿ (ಪಾಬ್ಲೊ ನೆರೂಡಾ)

ಇಮೇಜ್
 ಪ್ರೀತಿ ಪಾಬ್ಲೋ ನೆರೂಡಾ ಅನುವಾದ: ಸಿ. ಪಿ. ರವಿಕುಮಾರ್ ನೀನೊಂದು ಉಪ್ಪಿನ ಗುಲಾಬಿಯೋ, ನೀಲಮಣಿಯೋ  ಬೆಂಕಿ ಪ್ರವಹಿಸುವ ಕಾರ್ನೇಷನ್ ಹೂಗಳ ಬಾಣವೋ ಎಂಬಂತೆ ನಿನ್ನನ್ನು ಪ್ರೀತಿಸುವುದಿಲ್ಲ ನಾನು.  ಹೇಗೆಂದರೆ ನಿನ್ನ ಕುರಿತಾದ ನನ್ನ ಪ್ರೀತಿ ನೆರಳು ಮತ್ತು ಆತ್ಮಗಳಂತೆ ಅಮೂರ್ತವಾದದ್ದನ್ನು ನಾವು ಗುಪ್ತವಾಗಿ ಪ್ರೀತಿಸುವುದಿಲ್ಲವೇ ಹಾಗೆ. ತಾನೇ ಅರಳದಿದ್ದರೂ ಗಿಡವು ಹೊರುವುದಿಲ್ಲವೇ ತನ್ನಲ್ಲಿ ಬಚ್ಚಿಟ್ಟುಕೊಂಡ ಹೂವುಗಳ ಬೆಳಕನ್ನು ಹಾಗಿದೆ ನಿನ್ನನ್ನು ಕುರಿತಾದ ನನ್ನ ಪ್ರೀತಿ. ಮಣ್ಣಿನಿಂದ ಎದ್ದ ಗಾಢ ಸುಗಂಧ ನನ್ನೊಳಗೆ ಎಲ್ಲೋ ಮಂಕಾಗಿ ಮನೆಮಾಡಿರಲು ಕಾರಣವೇ ನಿನ್ನ ಪ್ರೀತಿ. ನಿನ್ನನ್ನು ಕುರಿತಾದ ನನ್ನ ಪ್ರೀತಿ ಅರಿಯದು  ಹೇಗೆ ಯಾವಾಗ ಎಲ್ಲಿಂದ ಎಂಬ ಪ್ರಶ್ನೆಗಳ ಉತ್ತರ. ಗರ್ವವಿಲ್ಲ ಅದರಲ್ಲಿ ,ತೊಡಕಿಲ್ಲ, ಏನಿದ್ದರೂ ನೇರ ಪ್ರೀತಿ ಮಾತ್ರ. ಹೀಗೇಕೆ ಪ್ರೀತಿಸುವೆ ನಾನೆಂದು ಕೇಳಿದರೆ ಅರಿಯೆ ನಾನು ಬೇರಾವ ರೀತಿ. ಪ್ರೇಮದ ಈ ರೂಪದಲ್ಲಿ ಮಾತ್ರವೇ ನಾನು ಮತ್ತು ನೀನೂ ಕೂಡಾ ಇರಬಲ್ಲೆವು ತೀರಾ ಸನಿಹಕ್ಕೆ ಬಾರದಂತೆ ಎಷ್ಟು ಸನಿಹವೆಂದರೆ ನಿನ್ನ ಕೈಯಿದೆ ನನ್ನೆದೆಯ ಮೇಲೆ ಮತ್ತು ನನ್ನ ಕನಸುಗಳನ್ನು ಹೊತ್ತು ಮುಚ್ಚುವುವು ನಿನ್ನ ಕಣ್ಣೆವೆ.

ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯೋಣ ನಮ್ಮ ಧೋರಣೆಗಳ ಮೇಳವಿಸಿ ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ ಸಹಿಸಿಕೊಂಡದ್ದು ಸಾಕು ನೋವು ಪರಿತಾಪ ನಡೆ ಮುನ್ನಡೆಯೋಣ ಇವುಗಳನಿಲ್ಲೇ ತ್ಯಜಿಸಿ ಎಷ್ಟು ಸಹಿಸುವುದು ಏಕೆ ಸಹಿಸುವುದು ದುರಾಚಾರ ನಡೆ ಮುಂದೆ ರಕ್ತ ಕಣ್ಣೀರುಗಳನೊರೆಸಿ ನಡುಗುವುದೇಕೆ ಹೇಳು ಜಗದ ಭೀತಿಯಲ್ಲಿನ್ನೂ ಮುನ್ನಡೆಯೋಣ ಜಗದ ಪಂಥವನ್ನು ಸ್ವೀಕರಿಸಿ ಅಲ್ಲಿ ಇಲ್ಲೆಂದು ಎಲ್ಲ ಕಡೆಗೂ ಅಲೆದಾಡಿದೆವು ಬಾ, ನಡೆ, ಗುರಿಸೇರುವ ಮಾರ್ಗವನ್ನು ಅನುಸರಿಸಿ ಸಾಕು ಓದಿದ್ದು ಅಮರಪ್ರೇಮಗಳ ಕಹಿಕಥನ ನಡೆ ಪುಟವನ್ನು ತಿರುವಿ ಹೊಸ ಅಧ್ಯಾಯವನರಸಿ!

ಒದ್ದೆಕಣ್ಣಿಂದ ಒರೆಸಿ ಕಣ್ಣೀರು

ಇಮೇಜ್
ಮೂಲ ... ಸಾಹಿರ್‌ ಲೂಧಿಯಾನವಿ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ ಒದ್ದೆಕಣ್ಣಿಂದ ಒರೆಸಿ ಕಣ್ಣೀರು ಮುಗುಳುನಗೆಯ ಹರಡು ನೋಡೋಣ ನತಶಿರರಿಂದ ಏನೂ ಸಾಧಿಸದು, ತಲೆಯ ಮೇಲೆತ್ತಿ ನಿಲ್ಲು ನೋಡೋಣ ಸಿಕ್ಕದು ಬಾಳು ಭಿಕ್ಷೆಯಲ್ಲೆಂದೂ, ಕಸಿಯಬೇಕು ಅದನ್ನು ಮುನ್ನುಗ್ಗಿ, ಕ್ರೂರ ಜಗದಿಂದ ನಿನ್ನ ಹಕ್ಕನ್ನು ಕಸಿದುಕೋ ಒಮ್ಮೆ ಮುಂದೆ ನೋಡೋಣ ಬಣ್ಣವು ಜಾತಿ ಕುಲ ಧರ್ಮಗಳು, ಮಾನವತೆ ಎಲ್ಲದಕ್ಕೂ ಮೀರಿದುದು ಸಹಮತ ನನ್ನ ಮಾತಿಗೆ ಇತ್ತು ನನ್ನ ಬಳಿ ಬಂದು ನಿಲ್ಲು ನೋಡೋಣ ದ್ವೇಷವೇ ತುಂಬಿರುವ ವಿಶ್ವದೊಳು ಕಟ್ಟುವಾ ಪ್ರೀತಿ ತುಂಬಿದ ಗೂಡು ಹೆಗ್ಗಳಿಕೆ ಏನು ದೂರ ನಿಲ್ಲುವುದು? ನಿಲ್ಲು ಬಳಿಸಾರಿ, ಆಗ ನೋಡೋಣ

ಹೇಳು ಏನಾಯ್ತು ಮುಗ್ಧ ಮಾನಸವೇ

ಇಮೇಜ್
(ಮಿರ್ಜಾ ಗಾಲಿಬ್ ಅವರ 'ದಿಲ್ ಏ ನಾದಾನ್ ತುಝೇ ಹುವಾ ಕ್ಯಾ ಹೈ' ಎಂಬುದು ಚಿತ್ರಗೀತೆಯಾಗಿ ಬಹಳ ಪ್ರಸಿದ್ಧ. ಇದನ್ನು ಸುರೈಯ್ಯಾ ಮತ್ತು ತಲತ್ ಮಹಮೂದ್ ಅವರ ಮಧುರಕಂಠದಲ್ಲಿ ನೀವೂ ಕೇಳಬಹುದು . ಈ ಹಾಡಿನಲ್ಲಿ ಮಿರ್ಜಾ ಗಾಲಿಬ್ ಅವರ ತುಂಟತನವನ್ನು ಕಾಣಬಹುದು. ಒಬ್ಬ ಪ್ರೇಮಿ ತನ್ನ ಪ್ರೇಮಿಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆಕೆಗೆ ಕೋಪ ಬಂದಿರಬಹುದು. ಅವಳನ್ನು ರಮಿಸಲು ಪ್ರೇಮಿ ಪರಿಪರಿಯಾಗಿ ಪ್ರಯತ್ನಿಸುತ್ತಾನೆ. "ನಿನ್ನ ಹೊರತು ಬೇರಾರೂ ಇಲ್ಲ" ಎಂದು ಆಣೆ ಹಾಕುತ್ತಾನೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾನೆ. ಪ್ರೇಮವೇ ಅರಿಯದ ನಿನ್ನಂಥವಳನ್ನು ನಾನು ಪ್ರೇಮಿಸಲು ಹಾತೊರೆಯುತ್ತಿರುವೆನಲ್ಲ ಎಂದು ಹಲುಬುತ್ತಾನೆ. "ಒಳ್ಳೆಯದು ಮಾಡಿದರೆ ಒಳಿತೇ ಆಗುತ್ತದೆ" ಎಂದು ದೊಡ್ಡ ಮಾತಾಡುತ್ತಾನೆ. ನನ್ನನ್ನು ಪ್ರೀತಿಸಿದರೆ ಅದರಿಂದ ಒಳಿತೇ ಆಗುತ್ತದೆ ಎಂಬುದು ಅವನ ಮಾತಿನ ಅರ್ಥ. ಕೊನೆಗೆ "ನೋಡು, ನನಗೆ ಯಾವ ಬೆಲೆಯೂ ಇಲ್ಲ ಅಲ್ಲವೇ? ಆದರೂ ಫ್ರೀ ಸಿಕ್ಕಾಗ ಯಾಕೆ ಬಿಡಬೇಕು?" ಎಂಬ ಸವಾಲು ಹಾಕುತ್ತಾನೆ!) ಹೇಳು ಏನಾಯ್ತು ಮುಗ್ಧಮಾನಸವೇ ಹೇಳು ಮದ್ದೇನು ಮನದ ಕಾಯಿಲೆಗೆ ಕಡೆಗಣ್ಣೇಕೆ ಪ್ರೇಮಯಾಚನೆಗೆ ದೈವವೇ ಹೇಳು ಹೀಗೆ ಏತಕ್ಕೆ ನನ್ನ ಬಾಯಲ್ಲೂ ಉಂಟು ನಾಲಗೆಯು ಕೇಳಲೇ ಬಾರದೇನು ನನ್ನರಿಕೆ ಇಲ್ಲ ಬೇರಾರೂ ಹೊರತು ನಿನ್ನನ್ನು ವ್ಯರ್ಥ ಸಂಘರ್ಷ ಆದರೂ ...

ಬಾ ಹೆಜ್ಜೆಯ ಹಾಕು ನನ್ನೊಡನೆ

ಇಮೇಜ್
ಮೂಲ ... ನಕ್ಷ ಲ್ಯಾಲ್ ಪುರಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಬಾ ಹೆಜ್ಜೆಯ ಹಾಕು ನನ್ನೊಡನೆ, ನಾ ಹೇಳುವೆ ಹೃದಯದ ಒಳಗುಟ್ಟು ಕಣ್ಟನೋಟದ ಭಾಷೆ ಸೋತಾಗ ಹೇಳುವೆ ಮಾತನ್ನು ಬಾಯ್ದಿಟ್ಟು ತುಟಿಗಳ ಮೇಲೆ ಹೂವಿನ ಹಾಗೆ ಮಂದಸ್ಮಿತವೊಂದು ಬಿರಿದಾಗ. ಮೆಲ್ಲನೆ ನಿನ್ನ ಕಿವಿಗಳ ಒಳಗೆ ನಾನುಸಿರುವೆನೊಂದು ಅಣಿಮುತ್ತು ಪ್ರೇಮನಿವೇದನೆಯನು ನೀನರಿಯೆ, ನೀನರಿಯೆ ಪ್ರೇಮನಿರಾಕರಣ ಬೇರಾವದೋ ಕವಿಯ ಹೆಸರಿನಲ್ಲಿ ನಾನಾಡುವೆ ಎದೆಯೊಳಗೇನಿತ್ತು ತುಂಬಾ ನಿಷ್ಕರುಣಿ ಹವಾಮಾನ, ಬಿರುಗಾಳಿಯನ್ನೆಬ್ಬಿಸುವುದು ಸಹಜ, ಹೆಸರಿಡುವರು ಅರಿಯದ ಜನರಿದಕೆ "ಏರುವ ಯೌವ್ವನದ ತಾಕತ್ತು "

ಡೋರಿ ಅಟ್ಲಾಂಟಾಗೆ ಹೊರಟಿದ್ದು

ಇಮೇಜ್
ಮೂಲ - ಮಾರ್ಕ್ ಹ್ಯಾಲಿಡೆ (ಅಮೇರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ ರವಿಕುಮಾರ್     ಜೆನ್? ಹೇಯ್, ನಾನು, ಡೋರಿ. ಬಸ್‍ನಲ್ಲಿ ಹೊರಟಿದ್ದೇನೆ ಲಗ್ವಾರ್ಡಿಯಾ, ಅಟ್ಲಾಂಟಾಗೆ.  ಏನು? ... ಇರಬಹುದು. ನನಗೆ ಖಡಾಖಂಡಿತ ಗೊತ್ತಿಲ್ಲ. ಅವನ ದಿನಚರಿ ಎಷ್ಟು ಕಿತ್ತುಹೋಗಿದೆ ಅಂದರೆ ...  ಅದು ಹೋಗಲಿ. ನಾನು ನಿನಗೆ ಮಾರ್ಸಿಯ ವಿಷಯ ಹೇಳೋದಿತ್ತು. ಹೂಂ.  ನಾನು ಅವಳಿಗೆ ಹೇಳಿದೆ. ನಾನಂದೆ, ಮಾರ್ಸೀ, ಇವನು ಉಳಿದವರ ಹಾಗಲ್ಲ ಅನ್ನಿಸುತ್ತೆ, ಗೊತ್ತಾ? ನೀನು ಈನಡುವೆ  ಡೇಟ್ ಮಾಡಿದ ಹುಡುಗರಿಗೆ ಹೋಲಿಸಿ ನೋಡು.  ನೀನು ಅವರ ಬಗ್ಗೆ ಹೇಳಿದ್ದು ಕೇಳಿದರೆ  ನಿಜ ಹೇಳ್ತೀನಿ, ಮಾರ್ಸೀ, ಈ ಹುಡುಗರು  ಎಷ್ಟೇ ಚಮಕ್ ಧಮಕ್ ಇರಬಹುದು, ಎಷ್ಟೇ ಒಳ್ಳೇ ಕೆಲಸದಲ್ಲಿರಬಹುದು, ಆದರೆ ನಿಜ ಹೇಳಬೇಕಂದ್ರೆ - ಕೊನೆಗೆ ಆಗೋದೇನು, ಮಂಚಕ್ಕೆ ಹೋಗೋದು ತಾನೇ, ಬೆಳಗ್ಗೆ ಎದ್ದಾಗ ಕಾಫಿ ಚೆನ್ನಾಗಿತ್ತು, ಥ್ಯಾಂಕ್ಸ್ ಅಂತ ಹೇಳೋದು, ಅಷ್ಟೇ ತಾನೇ? ಆದರೆ ಈ ಹುಡುಗ ... ಏನಂದಿ? ಹೌದು, ಜೇಸನ್. ಹೂಂ,  ನಾನು ಮಾರ್ಸಿಗೆ ಹೀಗೇ ಹೇಳಿದೆ,  ನೀನು ಹೇಳೋದು ಕೇಳಿದರೆ ಜೇಸನ್ ಬೇರೆ ಥರದ ಹುಡುಗ ಅಂತ ಕಾಣತ್ತೆ, ಮತ್ತೆ ಬಾಬ್ ಅವನ ವಿಷಯದಲ್ಲಿ ಹೇಳಿದ್ದು ಕೇಳಿದರೂ ಅಷ್ಟೇ ... ಬಾಬ್ ಅವನ ಜೊತೆ ಹೋದ ವರ್ಷ ಯಾವುದೋ ಪ್ರಾಜೆಕ್ಟ್ ಮಾಡಿದ್ದನಂತೆ,  ಅದಕ್ಕೇ ನಾನು ಮ...

ದುಃಖ ಉಮ್ಮಳಿಸಿತು

ಇಮೇಜ್
ಮೂಲ ಗಜಲ್ - ಶಕೀಲ್  ಬದಾಯೂನಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ದುಃಖ ಉಮ್ಮಳಿಸಿತು ಓ ಪ್ರೇಮವೇ  ನಿನ್ನ ಪ್ರತಿಫಲ ನೆನೆದು ದುಃಖ ಉಮ್ಮಳಿಸಿತು ಯಾಕೋ ನಿನ್ನ  ಹೆಸರನು ನೆನೆದು ಸಂಜೆಗಳು ಕಳೆವುವು ಹಾಗೂ ಹೀಗೂ ಭರವಸೆಗಳ ಮೇಲೆ ಇಂದದೇನಾಯಿತೋ  ದುಃಖ ಉಮ್ಮಳಿಸಿತು ಸಂಜೆಯ ನೆನೆದು ಅತ್ತ   ಭವಿಷ್ಯವು ನಿರ್ನಾಮ, ಇತ್ತ  ಜಗದೊಳೆಲ್ಲರ  ಮುನಿಸು ಪ್ರತಿ ಹೆಜ್ಜೆಗೂ ದುಃಖ ಉಮ್ಮಳಿಸಿತು ಪ್ರೇಮದ ದಾರಿಯ ಹಿಡಿದು ಹಾಳು ಈ ಗೋಳ ಕರೆ ತೊಡರಿತು ನನ್ನದೇ ಕಾಲಿಗೆ ಏಕೆ? ದುಃಖ ಉಮ್ಮಳಿಸಿತು ನನ್ನ ವಿಧಿ ಲಿಖಿತವ  ನೆನೆದು ಯಾರೇ ಹಾಡಲಿ  ಪ್ರೇಮದ ಮಾತನ್ನು ತೆಗೆದು  ದುಃಖ ಉಮ್ಮಳಿಸಿತು ನನ್ನ ಭಗ್ನ ಹೃದಯವ ನೆನೆದು  (ಚಿತ್ರ ಕೃಪೆ - ವಿಕಿಮೀಡಿಯಾ)

ನಿನಗಾಗಿ ತಂದಿರುವೆ ಈ ವೈಶಾಖ

ಇಮೇಜ್
ಮೂಲ : ಡಾ. ಎಸ್. (ಕುಟ್ಟಿ) ರೇವತಿ (ತಮಿಳು) ಇಂಗ್ಲಿಷ್ ಅನುವಾದ: ಕಲ್ಯಾಣ್ ರಾಮನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನಿನ್ನೆದೆಯ ಹುಲ್ಲುಗಾವಲು ಒಣಗಿಹೋಗಿದೆಯೇ,   ಪತ್ರಗಳೇ ಬರೆದಿಲ್ಲ ಈನಡುವೆ.  ಪ್ರಶಾಂತಸಾಗರದಂತಿರುವ ನಿನ್ನ ಪತ್ರಗಳು, ಅವುಗಳ ಕೆಳಗೆ ಭೋರ್ಗರೆಯುವ ಕಣ್ಣೀರಿನ ಕಡಲು.  ರಕ್ಷಿಸಲು ಧಾವಿಸಬೇಕೆಂಬ ತವಕ   ಉಂಟು ಮಾಡುವ ನಿನ್ನ ಮೃದುವಾದ ಒಡಲು.  ಬೇಸಗೆಯ ಬೀದಿಯಲ್ಲಿ ಬೇರಾರೂ ಕಾಣಿಸುವುದಿಲ್ಲ,  ಹೊರತಾಗಿ ಒಬ್ಬ ಪೋಸ್ಟ್ ಮ್ಯಾನ್,  ಅವನು ತರುತ್ತಿದ್ದಾನೆ ಕತ್ತು ಹಿಸುಕಿದ ಪತ್ರಗಳನ್ನು ಹೊತ್ತು, ಹಾಗೂ ಬಾಲ್ಯದ ರಹಸ್ಯಗಳನ್ನು ಕಳೆದುಕೊಂಡ ಹುಡುಗಿಯನ್ನು ಬಿಟ್ಟು.  ಎಲ್ಲ ತೊರೆಗಳನ್ನೂ ಒಂದೇ ಗುಟುಕಿನಲ್ಲಿ  ಹೀರಿಬಿಡುವ ವೈಶಾಖದ ವಿಚಿತ್ರ ಹಕ್ಕಿ  ಮೆಲ್ಲನೆ ಬಂದಾಗ ಕಲ್ಲುಬಂಡೆಗಳಿಗೂ ಜೀವ ಬರುತ್ತದೆ.  ಮಕ್ಕಳು ಆಡಲು ನಿರಾಕರಿಸುತ್ತಾರೆ  ನಿತ್ಯವೂ ರಕ್ತದಲ್ಲಿ ಮಿಂದೇಳುವ ಸೂರ್ಯನ ಕೆಳಗೆ.   ಒಂದು ಖಾಲೀ ಮನೆಯಲ್ಲಿ ಬಹಳ ಹೊತ್ತಿನಿಂದಲೂ  ಟೆಲಿಫೋನ್ ರಿಂಗಣಿಸುತ್ತಿದೆ.  ಹುಡುಗಿಯರ ಕಣ್ಣುಗಳು ಮಬ್ಬಿನಲ್ಲಿ ತೇಲುತ್ತವೆ.  ಹಿಂದೊಮ್ಮೆ  ಮರಗಳಿಗೆ ನಿಲ್ಲಲೂ ಶಕ್ತಿಯಿಲ್ಲದ ಒಂದು ಬೇಸಗೆಯಲ್ಲಿ  ನನ್ನ ದೇಹವನ್ನು ಜೀವಂತ, ಅಗಾಧವೆಂದು  ಬಣ್ಣಿಸಿದ್ದೆ ನೀನು....