ವಚನ ನ ಜಾಯೇ
ಸಿ ಪಿ ರವಿಕುಮಾರ್ ನಾನು ಸಭಾಗೃಹದ ಸುತ್ತ ಕಣ್ಣು ಹಾಯಿಸಿದೆ. ಸೇರಿದ ಸುಮಾರು ಐವತ್ತು ಮಂದಿ ಜನರಲ್ಲಿ ಬಹುತೇಕರು ವಯಸ್ಸಾದವರೇ. ಇದನ್ನೇ ಮುಂದೆ ಭಾಷಣಕಾರರು ಕೂಡಾ ಬೊಟ್ಟು ಮಾಡಿ ತೋರಿಸಿದರು. ಸಂದರ್ಭ: ಸಂವಾದ ಟ್ರಸ್ಟ್ ನಡೆಸಿದ ಕಾರ್ಯಕ್ರಮದಲ್ಲಿ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ ಅವರ ಉಪನ್ಯಾಸ. ವಿಷಯ: ಇಂದು ವಚನಗಳು ಪ್ರಸ್ತುತವೇ? ಕಾರ್ಯಕ್ರಮದ ಕೊನೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳಲ್ಲಿ ಬಳಕೆಯಾದ ಕನ್ನಡ ಪದಗಳ ನಿಘಂಟನ್ನು ತಯಾರಿಸಿ ಅವುಗಳಿಗೆ ವ್ಯಾಖ್ಯಾನ ಬರೆಯುವ ಕೆಲಸ ಆಗಬೇಕೆಂಬ ಮಾತು ಬಂತು. ಅದನ್ನು ಯಾರು ಮಾಡಬೇಕೆಂಬ ಜಿಜ್ಞಾಸೆಗೆ ಭಾಷಣಕಾರರು ಉತ್ತರಿಸುತ್ತಾ ವಿಷಾದದಿಂದ "ಈ ಕೆಲಸವನ್ನು ಯಾರೂ ಮಾಡಲಾರರು" ಎಂಬ ಅನುಮಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಬಂದವರೆಲ್ಲಾ ಐವತ್ತರ ಗಡಿ ದಾಟಿದವರೆಂಬುದನ್ನು ಆಗಲೇ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದು. ಇದು ಬಹುತೇಕ ಇಂದಿನ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ನಾವು ನೋಡಬಹುದಾದ ವಿಷಯವೇ. ವಚನಗಳನ್ನು ಆನ್ ಲೈನ್ ಸಂಗ್ರಹಿಸಿ ಅವುಗಳನ್ನು ಹುಡುಕುವ ಸಾಮರ್ಥ್ಯವನ್ನು ಇಂದು ಸೃಷ್ಟಿಸಲಾಗಿದೆ. ಇದರಿಂದ ಸಂಶೋಧಕರಿಗೆ ಉಪಯೋಗವಾಗಿದೆಯೇ ಎಂಬುದನ್ನು ಪ್ರೊ| ನಾಗಭೂಷಣಸ್ವಾಮಿ ಪ್ರಶ್ನಿಸುತ್ತಾ "ಒಂದು ಕಾಲದಲ್ಲಿ ವಚನಗಳು ಸಿಕ್ಕುವುದೇ ಕಷ್ಟವಾಗಿತ್ತು. ಒಂದು ಪದವನ್ನು 25,000 ವಚನಗಳಲ್ಲಿ ಹುಡುಕುವುದು ದುಸ್ಸಾಧ್ಯವಾಗಿತ್ತು. ಇಂದು ಅದನ್ನು ಸೆಕೆಂಡುಗಳಲ್ಲಿ ಮಾಡ...