ಪೋಸ್ಟ್‌ಗಳು

Original Poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಂದು ವಿವಾದ

ಇಮೇಜ್
 (ಈ ಕವಿತೆಗೆ ಪ್ರೇರಣೆ ಆಂಟೋನಿಯೊ ರೋಟಾ ಎಂಬ ಕಲಾವಿದನ ಚಿತ್ರ. ಒಬ್ಬ ಚಪ್ಪಲಿ ಹೊಲೆಯುವವನನ್ನು ತನ್ನ ಹಳೆಯ ಚಪ್ಪಲಿ ರಿಪೇರಿ ಮಾಡಿಕೊಡಲು ದುಂಬಾಲು ಬಿದ್ದ ಬಾಲಕಿಯ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏ ಐ. ಒಂದು ವಿವಾದ 'ಆಗದಮ್ಮ ಏನೂ ಮಾಡಲು ಆಗದು ಜಾಗವೇ ಇಲ್ಲ ಹಾಕಲು ಹೊಲಿಗೆ ಹೋಗು! ಸುಮ್ಮನೇ ಪೀಡಿಸದಿರು ಮಗೂ!! 'ಹೀಗೇ ಹೇಳಿದ್ದೆಯಲ್ಲ ಹೋದಸಲವೂ!' ರಾಗ ಎಳೆದಳು (ಅವನಲ್ಲಿ ಅಪ್ಪನಷ್ಟೆ ಸಲುಗೆ) 'ಆಗ ಹೇಗಾಯಿತೋ ಹಾಗೇ ಈಗಲೂ.' 'ಮೃದುವಾದ ಪಾದಕ್ಕೆ ಬೇಕು ಹೊಸ ಪಾದುಕೆ ಇದು ಕೂಡಾ ಹೋಗದಲ್ಲ ನಿನ್ನಪ್ಪನ ತಲೆಗೆ! ಕೊಡಿಸು ಹೊಸದೆಂದು ಕೇಳಿಕೋ ಹೋಗು!' 'ಐದು ವರ್ಷದ ಹಿಂದೆ ಕೊಂಡದ್ದು ನಿನ್ನಲ್ಲೇ ಇದರ ಸಾಲ ತೀರಿದ್ದು ವರ್ಷದ ಕೆಳಗೆ! ಪದೇ ಪದೇ ಮನೆಗೆ  ಬರಬೇಕಾಯಿತು ನೀನು!' 'ಆಯಿತು ಹೋಗು, ಏನಾದೀತೋ ! ಕಾಯಬೇಕಾದೀತು ಎರಡು ವಾರದವರೆಗೆ! ಸಾಯದೇ ಇದ್ದರೆ ಮಾಡುವ ಏನಾದರೂ!' 'ಬೇಗ ಮುಗಿಸಿಕೊಡು ಮಾವ, ನಾನು ನಾಳೆ ಬರುವೆ ಆಗದೆಂದರೂ ಕೆಲಸ ನೀನು ದೇವರ ಹಾಗೆ ಹೇಗೋ ಮಾಡುವೆ ಪೂರ್ತಿ  ಹಿಂದೆ ಬಿದ್ದಾಗ ಜನರು!'

ಎತ್ತರ

ಇಮೇಜ್
 (ಇನಾರಿ ಕ್ರೋಹ್ನ್ ಅವರ ಚಿತ್ರ ನೋಡಿ ಪ್ರೇರಿತನಾಗಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಎತ್ತರದ ಮರದ ಬುಡದಲ್ಲಿ ನಿಂತು ಹತ್ತಲು ಉತ್ಸುಕನಾದ ಹುಡುಗ. ಪಟ್ಟು ಸಾಹಸ ಪ್ರಯತ್ನಿಸಿ ಸೋತು  ಮತ್ತೊಮ್ಮೆ ಯತ್ನವ ಮಾಡಿ ದಿನವೂ ಹತ್ತನೇ ದಿವಸ ಏರಿಯೇ ಬಿಟ್ಟ ಮರದ ತುತ್ತ ತುದಿಗೆ. ಎದೆಯುಬ್ಬಿಸಿ ನೋಡಿದ ಸುತ್ತಲೂ. ಕಾಣಿಸಿತು ದೂರದಲ್ಲಿ ಹತ್ತಿರದ ಬೆಟ್ಟ. ಬಾ ಎಂದು ಕೈ ಬೀಸಿತು ಇವ ನತ್ತ. ಕಟ್ಟಿಕೊಂಡು ಬುತ್ತಿ ಹೊರಟೇ ಬಿಟ್ಟ ಕಷ್ಟ ಎನ್ನಿಸಿತು, ಆದರೂ ಬಿಡದೆ ಪ್ರಯತ್ನ ಕೊಟ್ಟಕೊನೆಯನ್ನು ಏರಿಯೇ ಬಿಟ್ಟವನು ದಿಟ್ಟಿಸಿದ, ಎಷ್ಟು ಪುಟ್ಟದು ನೆನ್ನೆ ಹತ್ತಿದ ಮರ! ಮತ್ತೊಂದು ದಿಕ್ಕಿಗೆ ತಿರುಗಿದಾಗ ಕಂಡದ್ದೇನು ಅವನು - ಉತ್ತುಂಗ ಗಿರಿಶಿಖರ, ದೇವದಾರುಗಳ ಕಾನು. #ಚಿತ್ರಕವಿತೆ ಸಿ. ಪಿ. ರವಿಕುಮಾರ್ (ಕಾನು - ಕಾನನ, ಕಾಡು)

ಮಾಗಿ

ಇಮೇಜ್
 (ಜ್ಯಾಕ್ ಸೊರೆನ್ಸನ್ ಅವರ ತೈಲವರ್ಣ ಚಿತ್ರಕ್ಕೆ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ) ಮಾಗಿ ಕಷ್ಟದಲ್ಲಿ ಕಳೆಯುತ್ತಿದೆ ಚಳಿಗಾಲ ಇಷ್ಟೆತ್ತರ ಹಿಮ ಗುಡಿಸದಿದ್ದರೆ ಪ್ರತಿದಿನ ಗಟ್ಟಿ ಮಂಜಿನಗಡ್ಡೆಯಾಗಿ ಜಾರಿಕೆ. ಕೆಲಸ ಹುಡುಕಿ ಹೊರಟ ಮನೆಯೊಡೆಯ ವಲಸೆ ಹೊರಟುಹೋದನೋ ಎಂಬ ಭಯ ಬಲವಂತದ ನಗು ನೆರೆಯವರಿಗೆ ತೋರಿಕೆ. ಮಕ್ಕಳು ಕೇಳುತ್ತಾರೆ ಅಪ್ಪ ಬರುವುದು ಎಂದು ಬಿಕ್ಕಳಿಸಿ ಮರೆಯಲ್ಲಿ ಕಣ್ಣಂಚಿನ ಬಿಂದು ಸಕ್ಕರೆಯ ನಗೆ ನಕ್ಕು ಅನ್ನುವಳು : ಹಬ್ಬಕ್ಕೆ. ಹಬ್ಬಕ್ಕೆ ಸಿಹಿ ಮಾಡಲೇ ಬೇಕಲ್ಲ ಮಕ್ಕಳಿಗಾಗಿ ಮಬ್ಬುಗತ್ತಲೆಯಲ್ಲೆದ್ದು ಒಲೆ ಹಚ್ಚಿ ದೀಪ ಬೆಳಗಿ ಎಬ್ಬಿಸಲು ಹೋದಾಗ ಕೇಳುತ್ತದೆ ನಗೆಕೇಕೆ. ಇಣುಕಿ ನೋಡಿದ ಕಣ್ಣು ಅರಳುತ್ತದೆ ಒಮ್ಮೆಲೇ ಕೆನೆಯುತ್ತಿದೆ ಮನೆಗೆ ಹಿಂದಿರುಗಿದ ಕುದುರೆ - ಕೊನೆಗೂ ಬೆಳಕಾಗಿದೆ ಹೊರಗೆ  ನಿಶ್ಶಂಕೆ. ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಯುಕ್ರೇನಿನಲ್ಲಿ ಕ್ರಿಸ್ಮಸ್ ೨೦೨೨

ಇಮೇಜ್
 ( ಐವಾನ್ ಯರ್ಚಕ್ (ಯುಕ್ರೇನ್) ಅವರ ಕ್ರಿಸ್ಮಸ್ ೨೦೨೨ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ) ಯುದ್ಧಕಾಲದ ಆಕಾಶದಲ್ಲಿ ಹೊಳೆಯುವುದು ತಾರೆಯಲ್ಲ ಬಿದ್ದ ಕ್ಷಿಪಣಿಗೆ ಇಂಥದ್ದೆಂಬ ಯಾವ ಗುರಿಯಿಲ್ಲ ಸದ್ದಾದರೆ ಈಗೀಗ ಬೆಚ್ಚುತ್ತಿಲ್ಲ ಮಕ್ಕಳು; ಹೆದರುವರು ಶುದ್ಧ ಶಾಂತಿಯು ನೆಲೆಸಿದಾಗ, ನಡುಗದೆ ಇದ್ದಾಗ ಬಂಕರು. ಚಳಿಯಲ್ಲಿ ನಡುಗುತ್ತಾ ಅಮ್ಮನ ಬಳಿ ಕೂತ ಮಗು ಕೇಳುವುದು ಕ್ರಿಸ್ಮಸ್ ಯಾವಾಗ ಎಂದು; ಪಾಳು ನಗರದ ನಡುವೆ ವಿಲಕ್ಷಣ ವಿಷಲ್ ಕೂಗು, ಬೀಳುತ್ತಿದೆ ಎಲ್ಲೋ ಭದ್ರ ಕಟ್ಟಡ ಇನ್ನೊಂದು. ಇಂದು ನಡೆದಿದೆ ನೆಲಮಾಳಿಗೆಯಲ್ಲಿ ಒಂದು ಪವಾಡ ಅಂಧಕಾರದ ನಡುವೆ ಹಚ್ಚಿಟ್ಟ ಹಾಗೊಂದು ದೀವಿಗೆ ಬಂದಿದೆ ಧರೆಗೊಂದು  ಮಗು, ನುಡಿದಂತೆ ಪ್ರವಾದ - ನಂದಿದ್ದ ಹಣತೆ ಮತ್ತೊಮ್ಮೆ ಹತ್ತಿಕೊಂಡಂತೆ ಕಾವಿಗೆ. ಪ್ರಶ್ನೆ ಕೇಳಿದ ಮಗುವಿನ ತಲೆ ನೇವರಿಸಿ ತಾಯಿ ಕ್ರಿಸ್ಮಸ್ ಬರುತ್ತದೆ ಮಗು, ಭರವಸೆಯಿಂದ ಕಾಯಿ. ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಮಂಜಪ್ಪನ ಕೋಳಿ

ಇಮೇಜ್
(ರಾಜಕುಮಾರ್ ಸ್ಥಬತಿ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ಕೊಟ್ಟಿರುವ ಚಿತ್ರ ಬರೆದಿದ್ದು ಏಐ) ಮೂಳೆ ಕೊರೆಯುವ ಚಳಿಗಾಲದ ರಾತ್ರಿ  ಮಂಜಪ್ಪ ತೊಟ್ಟು ತನ್ನ ಹಸಿರು ಟೋಪಿ ನಿದ್ದೆ ಬಾರದೆ ಎದ್ದು ಕೊಟ್ಟಿಗೆಗೆ ಬಂದು ನೋಡುವನು ಕೋಳಿ ಮಲಗಿದೆಯೇ ಎಂದು ಪ್ರೀತಿಯಿಂದ ಸಾಕಿದ್ದಾನೆ ಹಾಕಿ ಕಾಳು ನೀರು ಇನ್ನೇನು ತಿಂಗಳು ಕಳೆದರೆ ಮಾರಮ್ಮನ ತೇರು ಮೊಟ್ಟೆ ಇಟ್ಟು ಮರಿ ಮಾಡುವ ತನ್ನ ಧನಮೂಲ ಸಮೀಪಿಸುತ್ತಿದೆ ಮಾರಮ್ಮನಿಗೆ ಒಪ್ಪಿಸುವ ಕಾಲ ಇಲ್ಲ ಎನ್ನಲಾಗದು ಊರಲ್ಲಿ ಎಲ್ಲರಿಗೂ ಸರತಿ ಬಂದಾಗ ಕೋಳಿ ಒಪ್ಪಿಸುವುದೇ ರೀತಿ ಕೈಗೆತ್ತಿಕೊಂಡಾಗ ಕೋಳಿಯನ್ನು ಕಂದನ ಹಾಗೆ ಮಂಜಪ್ಪನ ಕಣ್ಣು ಮಂಜಾದದ್ದು ಯಾಕೆ ಹೀಗೇ ಎತ್ತಿಕೊಳ್ಳುತ್ತಿದ್ದ ಮಗಳ ನೆನಪಾಗಿ ಮತ್ತಷ್ಟು ಕ್ರೂರ ಎನಿಸುತ್ತದೆ ಮಾಗಿ ಮಾತು ಬಾರದ ಮೌನಿ, ಮನೆಗೆಲಸದಲ್ಲಿ ಜಾಣಿ ಹೆಗಲಿನ ಮೇಲೆ ಹೊತ್ತು ಬೆಳೆಸಿದ ರಾಣಿ ಜಾತ್ರೆಯಲ್ಲೇ ನಡೆದಿದ್ದಲ್ಲವೇ ಅವಳ ಮದುವೆ ಹರಕೆ ಹೊತ್ತಿದ್ದ ಮಾರಮ್ಮನಿಗೆ ಕೋಳಿ ಕೊಡುವೆ ಅವನ ಕಣ್ಣಂಚಲ್ಲಿ ನೆನಪು ತರಿಸುತ್ತದೆ ತೇವ ತಬ್ಬಿಕೊಳ್ಳುವನು ತನ್ನದೆಂಬ ಏಕೈಕ ಜೀವ ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಮಕ್ಕಳ ದಿನ

ಇಮೇಜ್
ಮಕ್ಕಳಿದ್ದವರನ್ನು ಕೇಳಿ ಮಕ್ಕಳ ದಿನ ಯಾವುದೆಂದು ಹುಟ್ಟಿದಾಗ ಅತ್ತರೂ  ಕಣ್ಣಲ್ಲಿ ಮುತ್ತು ತುಂಬಿಕೊಳ್ಳುವ ತಾಯಿ ಎಂದೂ ಹಾಡದ ತಂದೆಯೂ ಕಲಿತು ಹಳ್ಳುಳ್ಳಾಯಿ ಸೀತವಾದರೆ ಕೆಮ್ಮಾದರೆ ರಾತ್ರಿ ಇಡೀ ಜಾಗರಣೆ  ಹೆಗಲಮೇಲೆ ಹೊತ್ತು ರಥಯಾತ್ರೆ ವಿಜೃಂಭಣೆ ರಾತ್ರಿ ಕುಸುಕುಸು ಸದ್ದು ನಿದ್ದೆಯಲ್ಲೇ ಎದ್ದು ಒದ್ದೆಯಾಗಿದೆಯೇ ಬೇಕಾಗಿದೆಯೇ ಹಾಲು ಹೊಟ್ಟೆನೋವೇ ಏನೋ ತಿಳಿಯದೆ ಕಂಗಾಲು ತಾರಮ್ಮಯ್ಯ ಎಂದಾಗ ನಕ್ಕರೆ ಬೀಗಿ ತೂಗಿ ತೂಗಿ ಮಲಗದ ಮಗುವಿಗೆ ರೇಗಿ ಹೆಜ್ಜೆ ಇಟ್ಟರೆ ಸಂಭ್ರಮ ಅಪ್ಪ ಅಮ್ಮ ಎಂದರೆ ವಿಭ್ರಮ ಮೊದಲ ದಿನ ಸ್ಕೂಲಲ್ಲಿ ಹೋ ಎಂದು ಅತ್ತಾಗ ಅಳದಿದ್ದರೂ ಕರುಳು ಕಿತ್ತಂತೆ ಇತ್ತಾಗ  ಎಷ್ಟು ಬೆಳೆಯಿತು ಎಂದು ಹಾಕುತ್ತಾ ಗೀಟು ಏಳು ಏಳು ಶಾಲೆಗೆ ಹೊತ್ತಾಯಿತು ಶಾಲೆಯಲ್ಲಿ ಸಂಭ್ರಮದ ಆನುವಲ್ ಡೇ  ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವ ಮಗು ನಮ್ಮದೇ ಒಂದು ಎರಡು ಶಿಶುಗೀತೆ ಹಾಡು ಮೂರು ನಾಕು ಮಗ್ಗಿ ಉರು ಹಾಕು ಏಳು ಎಂಟು ಆಲ್ಜೀಬ್ರಾ ನಂಟು ಒಂಬತ್ತು ಹತ್ತು ಮೀಸೆ ಬಂದಿತ್ತು ಎನ್ನುತ್ತಾ ಕಳೆಯುತ್ತಾರಲ್ಲ ದಿನವೆಲ್ಲಾ  ಒಂದರ ನಂತರ ಒಂದು ಕೇಳಿ ಅವರನ್ನು ಮಕ್ಕಳ ದಿನ ಯಾವುದೆಂದು ಸಿ ಪಿ ರವಿಕುಮಾರ್ #ಕವಿತಾಸ್ಫೂರ್ತಿ

ಗುಬ್ಬಚ್ಚಿಗೆ

ಇಮೇಜ್
 ಎಲ್ಲಿ ಕಾಣಲೇ ಇಲ್ಲವಲ್ಲ ಬಹಳ ದಿನ ಎಲ್ಲಿ ಹಾರಲು ಪ್ರೇರೇಪಿಸಿತು ಮನ! ಒಮ್ಮೊಮ್ಮೆಯಾದರೂ ಹಾಕುತ್ತಿರು ಸ್ವಂತಿ ಲೈಕ್ ಹಾಕಲಿ ಬಿಡಲಿ ಜನರು! ಏನಂತೀ? ಗೆಳೆಯರಾದ ಮೇಲೆ ಸ್ನೇಹ ಯಾಚಿಸಿ ಬಂದು ಕಾಣೆಯಾಗುವರಲ್ಲ ಕೆಲವು ಫೇಸ್ಬುಕ್ ಬಂಧು ಅವರಂತೆ ನೀನೂ ತಲೆ ಮರೆಸಿಕೊಂಡು ಹೋಗಿಬಿಟ್ಟೆಯೋ ಏನೋ ಮಾಡಿ ಅನ್ಫ್ರೆಂಡು! ಟ್ವೀಟ್ ಮಾಡುತ್ತಿರುವುದೆಲ್ಲ ಗೂಗೆ-ರಣಹದ್ದು ಎಂದು ನಿಲ್ಲಿಸಿಬಿಟ್ಟೆಯಾ ನಿನ್ನ ಚಿಲಿಪಿಲಿ ಸದ್ದು! ಯಾರೂ ಕಿವಿ ಮುಚ್ಚುವುದಿಲ್ಲ, ನಿನಗೇಕೆ ಚಿಂತೆ ಕಾದಿರಬಹುದು ನಿನ್ನುಲಿಗೇ, ಗದ್ದಲದ ಸಂತೆ! ಸಿ. ಪಿ. ರವಿಕುಮಾರ್ #ಕವಿತಾಸ್ಫೂರ್ತಿ

ಪ್ಲವ

ಪ್ಲವವು ತರಲಿ ನವಪಲ್ಲವ ನಮ್ಮೆಲ್ಲರ ಬಾಳಲಿ ಕವಲು ಒಡೆದ ದಾರಿ ಮತ್ತೆ ಒಂದಾಗಿ ಸೇರಲಿ ತವಕ, ಕ್ಷೋಭೆ, ಅನಿಶ್ಚಿತತೆ, ಭೀತಿ ಹಿಂದೆ ಸರಿಯಲಿ ಕವಿತೆಯಲ್ಲಿ ಮತ್ತೆ ಮಾವು ಮಲ್ಲಿಗೆಗಳು ಬಿರಿಯಲಿ. ಕೆಟ್ಟ ಕನಸಿನಿರುಳಿನಂತೆ ಕಳೆದು ಹೋದ ಶಾರ್ವರೀ ಬಿತ್ತಿಹೋದ ಭೀತಿಭಾವ ಕತ್ತಲಂತೆ ಕರಗಲಿ ದಟ್ಟಗಪ್ಪು ಮೋಡದಂಚಿನಲ್ಲಿ ಬೆಳ್ಳಿ ಮಿಂಚಲಿ ಮತ್ತೆ ಸ್ಥೈರ್ಯ ಹುಟ್ಟಿ ಪ್ಲವದ ಕಣ್ಣಿನಲ್ಲಿ ಹೊಳೆಯಲಿ ಒಡೆದ ವಿಶ್ವದಲ್ಲಿ ಮತ್ತೆ ಒಂದೇ ಬಿಂಬ ಮೂಡಲಿ ಒಡಕಲು ಸ್ವರ ಒಂದಾಗಿ ಒಂದೆ ರಾಗ ಹಾಡಲಿ ಕಡೆದ ಕಡಲಿನಲ್ಲಿ ಸುಧೆಯ ಹೊತ್ತು ತರಲಿ ಪ್ಲವ ತಡೆದು ಗಂಟಲಲ್ಲಿ ನಂಜು ಕಾಯುತಿಹನು ಶಿವ! (c) ಸಿ. ಪಿ. ರವಿಕುಮಾರ್, ಏಪ್ರಿಲ್ ೧೩, ೨೦೨೧

ಸಂಪಾದಕನ ಸ್ವಗತ

ಇಮೇಜ್
ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ  ವರದಿ ತಲುಪಿದೆ  ಬ್ರಿಟನ್ ಸುದ್ದಿಪತ್ರಿಕೆಯ ಸಂಪಾದಕನಿಗೆ.  ಕನ್ನಡಕದ ಕಣ್ಣು ಓದುತ್ತಿದೆ ವರ್ತಮಾನ.  ಅಮೃತ ಸರೋವರದ ದಡದಲ್ಲಿ ಮೃತ್ಯುವಿಗೆಲ್ಲಿದೆ ಸ್ಥಾನ? ಸತ್ತವರ ಸಂಖ್ಯೆ ನೂರೂ ಚಿಲ್ಲರೆ ಅದಕ್ಕೇಕೆ ದೊಡ್ಡಕ್ಷರದ ಬಿಗುಮಾನ? ಬೇಡ ಇದಕ್ಕೆ ಸಲ್ಲದು ಮೊದಲ ಪುಟದ ಸ್ಥಾನಮಾನ ಒಳಗಿನ ಪುಟದ ಮೂಲೆಯಲ್ಲಿರಲಿ ಸಾಕು ಜಲಿಯಾನ್ ವಾಲಾ ಉದ್ಯಾನ! ಮೊದಲ ಪುಟ ಸುದ್ದಿಯೆಂದರೆ ರಾಣಿಯ ಹೊಸಬೆಕ್ಕು ಜೊಹಾನಾ. ನಗರದಲ್ಲಿದ್ದಾಗ ರೌಲಟ್ ಕಾಯಿದೆ ಅಷ್ಟೊಂದು ಜನ ಸೇರಿದ್ದೇ ಅಪಮಾನ! ಡಯರ್ ಮಾಡಿದ್ದು ಒಳ್ಳೆಯದೇ ಹೆಚ್ಚಿಕೊಳ್ಳುತ್ತಿದ್ದಾರೆ ಕಂದುಜನ ದಿನದಿನಾ! ನೆನ್ನೆ ಖಜಾನೆಗೆ ಲಗ್ಗೆ ಇಡುವಷ್ಟು ಧಾರ್ಷ್ಟ್ಯ! ಒಬ್ಬ ಬ್ರಿಟಿಷ್ ಹೊಂದಿದ್ದಾನೆ ಅವಸಾನ! ಗಾಯಗೊಂಡಿದ್ದಾರೆ ರಾಣಿಯ ಇಬ್ಬರು ಸೇವಕರು! ಈ ಗಾಂಧಿ ಆಗಿಕೂತಿದ್ದಾನೆ ದೊಡ್ಡ ಯಜಮಾನ!! ಲೋ ಯಾರಲ್ಲಿ! ತೊಗೊಳ್ಳಿ ಎಂಟನೇ ಪುಟಕ್ಕೆ ಅಳವಡಿಸಿ ಈ ಜುಜುಬಿ ವರದಿಯನ್ನ (c) ಸಿ. ಪಿ. ರವಿಕುಮಾರ್, ಏಪ್ರಿಲ್ ೨೦೨೧

ಸತ್ಯಭಾಮೆ ಮತ್ತು ಪಾರಿಜಾತ

ಇಮೇಜ್
ಸಿ. ಪಿ. ರವಿಕುಮಾರ್   ಆಭರಣದ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು ಕೋರೈಸುವ ವಜ್ರವನ್ನು ಮೆಲ್ಲನೆ ಹೊರತೆಗೆದು ಅಂಗೈಯಲ್ಲಿಟ್ಟು ನೋಡಿದಳು ಸತ್ಯಭಾಮೆ. ಅದು ಅವಳಿಗೆ ಬಂದ ಪಿತ್ರಾರ್ಜಿತ ಆಸ್ತಿ: ತಂದೆ ಸತ್ರಾರ್ಜಿತನು ಕೊಟ್ಟ ಸ್ಯಮಂತಕ! ಸತ್ಯವಂತರು ದಿನವೂ ಪೂಜೆ ಮಾಡಿದರೆ ಕೊಡುತ್ತದಂತೆ ದಿನವೂ ಚಿನ್ನ ಒಂದು ತೂಕ! ಹೇಗೆ ತಪಸ್ಸು ಮಾಡಿರಬಹುದು ಅಪ್ಪ ಕಣ್ಮಿಟುಕಿಸದೆ ನೋಡುತ್ತಾ ಸೂರ್ಯನನ್ನು! ತಪಸ್ಸಿಗೆ ಮೆಚ್ಚಿ ಸೂರ್ಯನೇ ಕೊಟ್ಟ ವರ - ಸೂರ್ಯನ ಮರಿಯಂತಿರುವ ಈ ಸ್ಯಮಂತಕ: ಇದನ್ನು ನೋಡಿದರೂ ಕೋರೈಸುತ್ತದೆ ಕಣ್ಣು! ಸ್ಯಮಂತಕ ಬೇಡುತ್ತದೆ ಕಠಿಣ ವ್ರತ , ಕಟ್ಟುನಿಟ್ಟಾದ ನೇಮನಿಷ್ಠೆ. ನನ್ನಿಂದಾಗದು! ಎಂದು ದಿಟ್ಟತನದಿಂದ ಆಭರಣದ ಪೆಟ್ಟಿಗೆಯಲ್ಲಿ ಮುಚ್ಚಿಟ್ಟುಬಿಟ್ಟೆ. ಬೀಸಿದ ಗಾಳಿಗೆ ತೇಲಿ ಬಂದ ಸುಗಂಧ ಆಘ್ರಾಣಿಸಿ ಮುದಗೊಂಡಳು ಸತ್ಯಭಾಮೆ ಕಿಟಕಿಯಿಂದ ಇಣುಕಿ ನೋಡಿದರೆ ಕಾಣಿಸಿತು:   ದೇವಲೋಕದಿಂದ ತಂದು ನೆಡಿಸಿದ್ದು ನಾನೇ! ಪ್ರತಿದಿನವೂ ನೀಡುತ್ತದೆ ನಿರ್ವಂಚನೆಯಿಂದ ಒಂದು ತೂಕ ಚಿನ್ನದಷ್ಟು ಹೂ , ಪಾರಿಜಾತ! ಮುಟ್ಟಿದರೂ ಬಾಡುವ ಮೃದು ಹೂವಿಗೆ ಕೇಸರಿ ತಿಲಕವನ್ನು ಹೇಗಿಟ್ಟನೋ ಕಾಣೆ , ವಿಧಾತ! ಬೇಡದು ಯಾವುದೇ ನೇಮ , ನಿಷ್ಠೆ ಕಠಿಣವ್ರತ! ಸುರಿಸುವುದು ಬೆಳಬೆಳಗ್ಗೆ , ಪಾರಿಜಾತ! ಕೊಳಲು ನುಡಿಸುತ ತನ್ಮಯತೆಯಿಂದ ಮುಗ್ಧ ಮುಗುಳ್ನಗೆ ಸೂಸ...

ಪಾತಕ (ಕವಿತೆ)

ಇಮೇಜ್
ಸಿ.ಪಿ. ರವಿಕುಮಾರ್  ಪರಿಸರ ದಿನಾಚರಣೆ ತ್ಯಾಜ್ಯ ನಿರ್ವಹಣೆ ಇವನ್ನೆಲ್ಲಾ ನಾವು ಪೋಸ್ಟ್ ಮಾಡುತ್ತಿರುವಾಗ ಅಲ್ಲೆಲ್ಲೋ  ಅಲೀಗಢದಲ್ಲಿ ಎರಡು ವರ್ಷದ ಹಸುಳೆಯನ್ನು ಕತ್ತು ಹಿಸುಕಿ ತ್ಯಾಜ್ಯಕ್ಕಿಂತಲೂ ಕಡೆಯಾಗಿ ಎಸೆದ ಸುದ್ದಿ ಓದಿ ಪರಿಸರದ ಬಗ್ಗೆ ಗಾಬರಿಯಾಗಿದ್ದೇನೆ ಪರಿಸರದ ಸಮಸ್ಯೆ ಏನು ಮಹಾ ಅನ್ನಿಸಿದೆ ಇಲ್ಲೇ ಬೆಂಗಳೂರಲ್ಲಿ  ... ಸಾಲದ ಹೊರೆಗೆ ತತ್ತರಿಸಿ ಒಬ್ಬ ತಂದೆ  ಹೆಂಡತಿ ಮಗನನ್ನು ನೇಣಿಗೇರಿಸಿದ ಸುದ್ದಿ ಓದಿ ಎಕಾನಮಿ ಬಗ್ಗೆ ಭೀತಿಗೊಂಡಿದ್ದೇನೆ ಹಣ ನೆಟ್ಟು ಬೆಳೆಸುವ ಬ್ಯಾಂಕ್ ಸ್ಕೀಮುಗಳಲ್ಲಿ ನಾನು ನೆಟ್ಟ ಸಸಿಯಲ್ಲೂ ಕೆಂಪಗಿನದೇನೋ ಕಂಡು ಅಸಹ್ಯ ಪಟ್ಟುಕೊಂಡಿದ್ದೇನೆ ಇಷ್ಟೆಲ್ಲಾ ಕಣ್ಣೀರಿನ ನಡುವೆ ನೀರಿನ ಸಮಸ್ಯೆ ಏನು ಮಹಾ ಅನ್ನಿಸಿದೆ ಡ್ರಗ್ ಟ್ರಾಫಿಕಿಂಗ್ ಹ್ಯೂಮನ್ ಟ್ರಾಫಿಕಿಂಗ್ ಕಿಡ್ನಿಗಾಗಿ ಮಕ್ಕಳ ಅಪಹರಣ ಇವನ್ನೆಲ್ಲಾ ಓದಿ ತಲ್ಲಣಗೊಂಡಿದ್ದೇನೆ ಬೆಂಗಳೂರು ಟ್ರಾಫಿಕ್ ಏನು ಮಹಾ ಅನ್ನಿಸಿದೆ ಎಂಥ ಕರುಣಾಮಯಿಯಾದರೂ ದೇವರು ನಮ್ಮನ್ನು ಕ್ಷಮಿಸಲಾರನೆಂದು ಹತಾಶನಾಗಿದ್ದೇನೆ

ಯಥಾಯಥಾಹಿ ಧರ್ಮಸ್ಯ

ಇಮೇಜ್
ಇದ್ದಲ್ಲೇ ಇರೋಣ ನಾವೆಲ್ಲಾ ಹೀಗೇ ಚೆನ್ನಾಗಿದೆಯಲ್ಲ ಬೇಜಾರಾದರೆ ಮಾಡೋಣ ಕಿತಾಪತಿ ಒಬ್ಬರನ್ನೊಬ್ಬರು ಕಿತ್ತೋಣ ಸುಪ್ರೀಂ ಕೋರ್ಟಿಗೆ ಹೋಗೋಣ ಅರ್ಜಿ ಹಾಕೋಣ ಸಂಸ್ಕೃತ ಬ್ರಾಹ್ಮಣ ದ್ರಾವಿಡ ಶೂದ್ರ ಚರ್ಚಿಸುತ್ತ ಕೂಗಾಡೋಣ ಎಡಗೈಯಿಂದ ಬಲಗೆನ್ನೆಗೆ ಬಲಗೈಯಿಂದ ಎಡಗೆನ್ನೆಗೆ ಕಪಾಳ ಮೋಕ್ಷ ಮಾಡೋಣ ಕಲ್ಲೆಸೆದು ಹಲ್ಮಸೆದು ಹಂಗಿಸೋಣ ಒಬ್ಬರಿನ್ನೊಬ್ಬರ ಕಾಲೆಳೆಯೋಣ ಇದ್ದಲ್ಲೇ ಇರೋಣ ನಾವೆಲ್ಲಾ ಹೀಗೇ ಚೆನ್ನಾಗಿದೆಯಲ್ಲ ನಮಗೇತಕೆ ಗೊತ್ತು-ಗುರಿ ಸಾಕಾಗುವಷ್ಟಿದೆ ಹೊಟ್ಟೆ ಉರಿ ನಮಗೇತಕೆ ಹಾರಾಟ ಮರೆತಿದ್ದೇವೆ ರೆಕ್ಕೆ-ಗರಿ ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ ಡ್ರೈವರ್ ರಹಿತ ಕಾರಂತೆ ಇದೆಯಂತೆ ಏಐ ಕೃತಕ ಬುದ್ಧಿಮತ್ತೆ ವಾವ್ ಸೂಪರ್ ಚಿಂದಿ ಇಲ್ಲೇನಿದ್ದರೂ ಬಿಲಿಯನ್ ಮಂದಿ  ಧೂಳು,ಟ್ರಾಫಿಕ್, ನಾಯಿ, ಹಂದಿ ಎನ್ನುತ್ತಾ ಹತಾಶರಾಗೋಣ ಆದರೂ ಇಲ್ಲೇ ಇರೋಣ ನಾವೆಲ್ಲಾ ಹೀಗೇ  ಚೆನ್ನಾಗಿದೆಯಲ್ಲ ಯಥಾಸ್ಥಿತಿ ಯಥಾಗತಿ ಯಥಾಯಥಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಇದ್ದಲ್ಲೇ ಇರೋಣ ನಾವೆಲ್ಲಾ ಹೀಗೇ ಚೆನ್ನಾಗಿದೆಯಲ್ಲ -- ಸಿ. ಪಿ. ರವಿಕುಮಾರ್

ಮತ್ತೆ ಬಂದಿದೆ ಹೊಸವರ್ಷ

ಇಮೇಜ್
ಮತ್ತೆ ಸರಕಾರ ಉರುಳಿಹೋಗುವ ಭೀತಿ ಬಿಟ್ಟು ಎಲ್ಲಾ ಮಾನ ಹೊಸವರ್ಷ ಬಂದಿದೆ ಮತ್ತೆ ಬ್ರಿಗೇಡ್ ರೋಡಿನಲ್ಲಿ ಗಂಡಸರ ತಳ್ಳಾಟ ಕೊಟ್ಟು ಒಂದು ಕಪಾಳಕ್ಕೆ ಹೊಸವರ್ಷ ಬಂದಿದೆ ಮತ್ತೆ ರಾಜಕಾರಣ ಕುದುರೆ ಕಾಲೆಳೆದಾಟ ತುತ್ತೂರಿ ಊದುತ್ತ ಹೊಸವರ್ಷ ಬಂದಿದೆ ಮತ್ತೆ ಯಾರಿಗೋ ನೂರಾಹತ್ತನೇ ಸನ್ಮಾನ ಸುತ್ತಿ ತಲೆಮಾರಿಗೆ ಪೇಟ ಹೊಸವರ್ಷ ಬಂದಿದೆ ಮತ್ತೆ ಕನ್ನಡಕ್ಕೆ ಅನ್ಯಾಯ ಅನ್ಯಾಯ ಕೂಗು ಹಾ- ಕುತ್ತ ಬ್ರೋ ಹ್ಯಾಪೀ ನ್ಯೂ ಇಯರ್ ಬಂದಿದೆ ಮತ್ತೆ ಭಗವಾನ ರಾಮನಿಂದಾಸ್ತೋತ್ರ ಸತ್ತು ಹಳೆವರ್ಷ ಹೊಸವರ್ಷ ಬಂದಿದೆ

ಹತ್ತು ಹನಿಗವನಗಳು

ಇಮೇಜ್
(1) ತೂತಾಗಿ ಸೋರುತ್ತಿದೆಯೇ ನಿನ್ನ ಅಂಬರೆಲ್ಲಾ? ತೂತಾಗಿ ಸೋರುತ್ತಿದೆಯಲ್ಲ ಅಂಬರವೆಲ್ಲಾ! (2) ಪಟಾಕಿ ಹಚ್ಚುವುದು ನಿಷೇಧವಂತೆ ದೆಹಲಿಯಲ್ಲಿ ಕೇಳಿ ನಿಷೇಧಿಸುವರೇ ಉತ್ತರ ಕೊರಿಯಾದಲ್ಲಿ? (3) ಒಬ್ಬನಿಗೆ ಇದ್ದರಂತೆ ಇಬ್ಬರು ಹೆಂಡಿರು ಒಬ್ಬಳ ತಲೆಗೂದಲು ಕಪ್ಪು ಇನ್ನೊಬ್ಬಳದ್ದು ಬಿಳುಪು ಅವಳು ಕಿತ್ತಿದಳಂತೆ ಇವನ ನೆರೆಗೂದಲು ಇವಳು ಕಿತ್ತಿದಳು ಕಪ್ಪು ಎಳೆಗೂದಲು. ಪಟಾಕಿ ಹಚ್ಚಲೇಬೇಕು. ಮಾಂಸ ತಿನ್ನಲೇಬೇಕು. (4) ಶಾಸಕರಿಗೂ ಅನ್ನಭಾಗ್ಯವೇ ಎಂದು ಹುಬ್ಬೇರಿಸಿ ಜನರ ಹಾಹಾಕಾರ ಶಾಸಕರನ್ನು ಏನೂ ಅನ್ನದ ಭಾಗ್ಯವೇ ಎಂದು ಪಬ್ಬಿನಲ್ಲೇರಿಸಿದ ಪತ್ರಿಕಾ ವರದಿಗಾರ (5) ತೋಡಿ ನಿಮ್ಮ ಮನೆಯಲ್ಲಿ ಮಳೆನೀರಿನ ಇಂಗುಗುಂಡಿ ಎಂಗೆ ಅಂದ್ರೆ ರೋಡಲ್ಲಿ ನೋಡಿರಿ  ಎಲ್ಲಾಕಡೆ ನಿಮಗೆ ಸಿಕ್ಕುವುದು ಮಾದರಿ ತೋಡಬಹುದು ಕಣ್ರೀ ಇಂಗೂ ಗುಂಡಿ! (6) ಎಲ್ಲರಿಗಿಂತಲೂ ಜನಪ್ರಿಯ ಐಯ್ಯಂಗಾರ್! ಗೊತ್ತಾ ನಿಮಗೆ ಯಾಕೆ ರೀ? ಎಲ್ಲಿ ನೋಡಿದರೂ ಬೋರ್ಡು ಕಾಣಿಸೋದಿಲ್ಲವಾ? ಐಯ್ಯಂಗಾರ್ ಬೇಕರಿ! (7) ನಡೆಯಲು ಕಲಿತ ಮೇಲೆ ನಮ್ ಬಿಂದು ಹೆಸರು ಬದಿಲಿಸಿದ್ದೇವೆ "ರೇಖಾ" ಎಂದು! ದುಡುದುಡು ಓಡಿ ಹಾಕುತ್ತಾ ಕೇಕೆ ಬರೆಯುವಳು ಅವ್ಯಕ್ತ ವಕ್ರರೇಖೆ! (8) ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಎಂದೆಲ್ಲಾ ಹಾಡಬಾರದಾಗಿತ್ತು ಲೌಡ್ ಸ್ಪೀಕರ್ನಲ್ಲಿ ಅಥವಾ ಕಟ್ಟಬಾರದಾಗಿತ್ತು ಸಿಟಿಯನ್ನು ಕೆರೆಯಲ್ಲಿ ...

ಶ್ರೀ ರಸ್ತಾ ಸ್ತೋತ್ರಂ

ಇಮೇಜ್
( ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳ ಮೇಲೆ ಓಡಾಡುವ ಅನುಭವದಿಂದ ಪ್ರೇರಿತ) ಎಲೈ ರಸ್ತೆ, ನಾದುರಸ್ತೆ, ನಗರ ಜೀವನಾವ್ಯವಸ್ಥೆ, ನಮೋಸ್ತುತೆ! ಪಾಟ್ ಗುಂಡಿ ವಿರಾಜಿತೆ, ವಾಯುವಜ್ರ ಸಂಪೂಜಿತೆ, ನಮೋಸ್ತುತೆ! ಸಿಮೆಂಟ್ ಟಾರ್‌ ವಂಚಿತೆ ನಿತ್ಯವಾರುಣ ಸಿಂ'ಚಿತೆ, ನಮೋಸ್ತುತೆ! ಹಂಪುಶೈಲವಿಹಾರಿಣಿ, ಅಮೃತಾಂಜನದಾಯಿನಿ, ನಮೋಸ್ತುತೆ! ಕಾಳಮುಖಿಶ್ರೀಭೈರವಿ ಕೈಗಳಂ ಮುಗಿವ ರವಿ, ಕಾಪಾಡು ಶ್ರೀಮಾತೆ, ನಮೋಸ್ತುತೆ! ಸೇಲಿಹುದು ಮಾಲಿನಲಿ, ತಲುಪಿಸೈ ವೇಗದಲಿ, ನೆರೆನಂಬಿ ಬಂದಿಹೆನು, ನಮೋಸ್ತುತೆ! ಇತಿ ಶ್ರೀ ರಸ್ತಾ ಸ್ತೋತ್ರಂ ಸಂಪೂರ್ಣಂ ಸಿ. ಪಿ. ರವಿಕುಮಾರ್

ರಕ್ತಸಂಬಂಧ (ಒಂದು ಗಜಲ್)

ಇಮೇಜ್
ಸುರಿದರೂ ನಾನು ನಿನ್ನ ಕಿವಿಯೊಳಗೇ ನಾದಸುಧೆ ಸರಿ ಸರಿ ಎಂದು ಕೈ ಝಾಡಿಸುವೆ ಓ ನಿಷ್ಕರುಣಿ! ನಿನ್ನ ಸಭೆಯೊಳಗೆ ನನಗೆ ಕೊಡದಿದ್ದರೂ ಆಹ್ವಾನ ನನ್ನ ಅಭಿಮಾನ ಮರೆತು ಹಾಡುವೆ ನಾ ತೆರೆದು ದನಿ ಅತಿಥಿಗಳ ಸ್ವಾಗತಕ್ಕೆ ಉರಿಸುವರು ಅಗರುಹೊಗೆ ನಿನ್ನ ಹೊಗೆಯಿಂದೇಕೋ ಸುರಿಯುತ್ತಿದೆ ಕಣ್ಣಲ್ಲಿ ಹನಿ ನೆತ್ತರಿನ ಬಂಧು ನಾನು, ಬೇಡೆನು ನಾ ಬೇರೇನೂ ತಟ್ಟಿ ಕೈಯೊಳು ಹೊಸಕಿ ಹಾಕುವೆಯಾ ಹೃದಯ-ದಣಿ! ಸಿ.ಪಿ. ರವಿಕುಮಾರ್

ಬೀದಿಗೆ ಚಂದ್ರಮ ಮತ್ತಿತರ ಹನಿಗವನಗಳು

ನೋಟ ಚುನಾವಣಾ ಕಣದಲ್ಲಿ ಇಳಿದಿದ್ದರು ಆತ ಏಟೀಎಮ್ಮಿನಂತೆ ಹಂಚಿದರು ತಲಾ ಸಾವಿರದ ನೋಟ ಜಾಣ ಮತದಾರನ ಕಣ್ಣಿಗೆ ಇಂಪಾದ ನೋಟ ಈವೀಎಮ್ಮಿನಲಿ ಆದರೂ ಒತ್ತಿದನು ನೋಟಾ. ನ್ಯಾನ್ಸಿ ಹಿಂದೊಮ್ಮೆ ಅವನೊಬ್ಬ ಪ್ರೇಮರೋಗಿ ಒದ್ದಾಡುತ್ತಿದ್ದ ಮಿಸ್. ನ್ಯಾನ್ಸಿಗಾಗಿ ಓಕೆ ಎಂದಳು ನ್ಯಾನ್ಸಿ ಮದುವೆಯೋ ಬಹು ಫ್ಯಾನ್ಸಿ ಈಗ ಒದ್ದಾಡುತ್ತಾನೆ ಫೈ-ನ್ಯಾನ್ಸಿಗಾಗಿ ವಿವೇಕ ಅರೈಸ್ ಅವೇಕ್ ಎಂದು ಎಬ್ಬಿಸಿದಂತೆ ಹಿಂದೊಮ್ಮೆ ಶ್ರೀ ವಿವೇಕಾನಂದ ಹಾಸ್ಟೆಲ್ ಹುಡುಗರನ್ನು ಎಬ್ಬಿಸುವ ವಾರ್ಡನ್ ಹುಡುಗರ ಬಾಯಲ್ಲಿ ಅವೇಕಾನಂದ ಬೀದಿಗೆ ಚಂದ್ರಮ "ಬಿದಿಗೆ ಚಂದ್ರಮ ಡೊಂಕು" ಎಂದು ಬರೆದರು ಅಂಬಿಕಾತನಯದತ್ತ ಬೀದಿಗೆ ಚಂದ್ರಮ ಡೊಂಕು ಎಂದು ಟೈಪಿಸಿದನು ಟೈಪಿಸ್ಟನು ಇತ್ತ ಬಿದ್ದಾಗ ಚಂದ್ರಮ ಬಾನಿಂದ ಬೀದಿಗೇ ಯಾರಪ್ಪಾ ವಾಪಸ್ ಏರಿಸೋರು ಬಾನಿಗೆ? ಕ.ಬು. ಹಿಂದೆ ಕವಿಗೂ ಸಂಪಾದಕನಿಗೂ ಇರುತ್ತಿತ್ತು ಕನಿಷ್ಠ ವಿಷಾದಪತ್ರದ ಕನೆಕ್ಷನ್ನು ಇದು ಅದೂ ಇಲ್ಲವಾಗಿದೆ ಇರುವುದೊಂದೇ ರೀಸೈಕಲ್ ಬಿನ್ನು

ಜಗದೋದ್ಧಾರ ಮತ್ತಿತರ ಹನಿಗವನಗಳು

ಜಗದೋದ್ಧಾರ ಕಂಡ್ ಮುದ್ದೆ ಬೆಣ್ಣೆ ತಿಂತಿದ್ದಾಗ ಒಬ್ನೇ ಯಾರೋ ಬಂದ್ ಹಾಗ್ ಸದ್ದು! ಗಾಬ್ರಿಗ್ ಮುದ್ದೆ ಬಿದ್ದು ಎಳ್ಕೊಂಡ್ ತಿಂತಿದ್ನಂತೆ ಮಣ್ಣೆ! ಪೂರ್ಣಚಂದ್ರ ಅಮ್ಮಾ ಚಂದ್ರನ ತೋರುತ್ತಾ ತಿನಿಸುವೆಯಲ್ಲ ಮೊಸರನ್ನ ಹುಣ್ಣಿಮೆ ಚಂದ್ರನ ನೋಡುತ್ತಾ ಪೀಟ್ಸಾ ನೆನಪಾಗುವುದಮ್ಮ! ಯಾದವ ನೀ ಬಾ ಯಾದವನೊಬ್ಬ ಕದಿಯುತ್ತಿದ್ದನಂತೆ ಅಮ್ಮ ಕಡೆದಿಟ್ಟ ಹಸಿಬೆಣ್ಣೆ ಎಂಥಾ ಕಾಲ ಬಂತು ಮಾರಾಯ ಮುಂದೊಬ್ಬ ಯಾದವರಾಯ ಕದ್ದ ಹಸುವಿಗಿಟ್ಟ ಹುಲ್ಲನ್ನೇ! ಕಾಲಾಯ ತಸ್ಮೈ ನಮಃ ಎದ್ದಾಗ ಬೆಳಗ್ಗೆ ಆರುಗಂಟೆಗೆ ಅಲಾರಂ ಸದ್ದಿಗೆ ನಿದ್ರಿಸುತ್ತೇನೆಂದು ಕಣ್ಮುಚ್ಚಿದರೆ ಎರಡು ನಿಮಿಷ ಮತ್ತೆ ಕಣ್ ಬಿಟ್ಟಾಗ ಗಡಿಯಾರ ನುಡಿಯುವುದು ಆರೂ ಮುಕ್ಕಾಲೆಂಬ ಸತ್ಯ! ಮಧ್ಯಾಹ್ನ ಆಫೀಸಿನಲ್ಲಿ ಎರಡೂವರೆಗೆ ಸುಸ್ತಾಗಿ ಕದ್ದುಮುಚ್ಚಿದರೆ ಕಣ್ಣು ಐದು ನಿಮಿಷ ಎದ್ದಾಗ ಗಡಿಯಾರ ನುಡಿಯುತ್ತದೆ 'ಇನ್ನೂ ಎರಡೂ ಮೂವತ್ತೊಂದು' ಎಂಬ ಮಿಥ್ಯ! ಕಿವಿಕಣ್ಣುಬಾಯಿ ಮುಚ್ಚಿಕೋ ಎಂದು ಬಾಪೂಜಿ ಮೂಗುಮುಚ್ಚಿ ಉಸಿರಾಡು ಎಂದು ಬಾಬಾಜಿ

ವೃತ್ತಪತ್ರಿಕೆ ಮತ್ತಿತರ ಹನಿಗವಿತೆಗಳು

ವೃತ್ತಪತ್ರಿಕೆ  ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ? ಗುಂಡಗಿನ ಭೂಮಿಯ ಸ್ತುತ್ತಮುತ್ತಲಿಂದ ಗ್ರಹಿಸಿರುವೆ ಸುದ್ದಿ ನಮ್ಮ ತಲೆ ತಿನ್ನುತ್ತಾ ಸಾಕಷ್ಟು ಬೆಳೆದಿರಬೇಕು ನಿನ್ನ ಬುದ್ಧಿ ನಿನಗೆ ಜಾಮೆಟ್ರೀ ಹೇಳಿಕೊಡಬೇಕೆ? ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ? ನಿರ್ಮಮ     ನಾ, ಮಮ ಎಲ್ಲವನ್ನೂ ಬಿಟ್ಟು ಬಿಡಿ ಎಂದು  ಗುರುಗಳು ಉಪನ್ಯಾಸ ನೀಡಿದರು ಎಂದು  ಅವರ ಶಿಷ್ಯರೆಲ್ಲರೂ ಯೋಚಿಸಿ ತ್ಯಜಿಸಿದ್ದಾರೆ  'ನಾ'ಚಿಕೆ 'ಮಾ'ನ  ಹಾಗೂ 'ಮ'ರ್ಯಾದೆ  ಹೊರಗೆ   ಹಿಂದೊಮ್ಮೆ  ಗುಡಿಚರ್ಚುಮಸೀದಿಗಳನ್ನು  ಹೊರಗಿಟ್ಟು ಬನ್ನಿ! ಇಂದು  ಗುಡಿಚರ್ಚುಮಸೀದಿಗಳ ಹೊರಗೆ : "ಚಪ್ಪಲಿ  ಹೊರಗಿಟ್ಟು ಬನ್ನಿ" ಬಂಗಾರದ ಮನುಷ್ಯ  ಹಾಲಿವುಡ್ "ಐರನ್ ಮ್ಯಾನ್" ತಯಾರಿಸುವ ಮುನ್ನ ಕನ್ನಡದಲ್ಲಿ ತಯಾರಿಸಿಬಿಟ್ಟಿದ್ದರು ಬಂಗಾರದ ಮನುಷ್ಯನ್ನ ಕಿಣಿ  ಮದುವೆಯಾದಳು ಎಂಬಿಬಿಎಸ್ ಪಡೆದು ಮಿಸ್. ಮಂದಾಕಿನಿ, ಡಾ. ಕಿಣಿಯನ್ನು ಹಿಡಿದು ನಡೆಸುತ್ತಾರೆ ಕ್ಲಿನಿಕ್ ದಂಪತಿಗಳು ಇಬ್ಬರೂ  ಸೇರಿ ಬೋರ್ಡ್ ಬರೆದವನು ಹೀಗೆ ಬರೆಯಬಹುದೆನ್ರೀ ಅವಳ ಹೆಸರಿನ ಕೆಳಗೆ  "ಶ್ರೀಮತಿ ಡಾ.ಕಿಣಿ" ವಿಲ್ಲಾ  ಹಸಿದಾಗ ಕಾಣಿಸಿದ ರೆಸ್ತೊರಾಂ ಹೆಸರು "ಆಹಾರ್ ವಿಲ್ಲಾ" "ಸಾರ್ ಇಂದು ಕರೆಂಟ್ ಇಲ್ಲ, ಗೊತ್ತಾತ್ರಾ...

ಆರು ಹಿತವರು ನಿನಗೆ

ಇಮೇಜ್
ಧರ್ಮ, ರಾಜಕಾರಣ ಮತ್ತು ಸಾಹಿತ್ಯ ಬೆರೆಸಿ ಯಾವುದೇ ಎರಡನ್ನು ತಯಾರಿಸಬಹುದು ವ್ಯಂಜನ ಆರು - ಧರ್ಮಸಾಹಿತ್ಯ ಸಾಹಿತ್ಯಧರ್ಮ ಧರ್ಮರಾಜಕಾರಣ ರಾಜಕಾರಣಧರ್ಮ ಸಾಹಿತ್ಯರಾಜಕಾರಣ ರಾಜಕಾರಣಸಾಹಿತ್ಯ ಕೆಲವು ಸಿಹಿ, ಕೆಲವು ಹುಳಿ ಕೆಲವು ವಿಷಕಾರಿ, ಹುಷಾರು! ಇನ್ನು ಬೆರೆಸಿ ಮೂರನ್ನೂ ಸಿಕ್ಕುವ ಆರು ಅವುಗಳಿಂದ ನಮ್ಮನ್ನು ರಕ್ಷಿಸುವವರಾರು! ಸಿ. ಪಿ. ರವಿಕುಮಾರ್