ಪೋಸ್ಟ್‌ಗಳು

Gulzar ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕುಸುಮಿತ ಸೌರಭದ ಧಗೆ

ಇಮೇಜ್
ಮೂಲ ಹಿಂದಿ ರಚನೆ - ಗುಲ್ಜಾರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಲತಾ ಮಂಗೇಶ್ಕರ್ ಅವರ ಅದ್ಭುತ ಗಾಯನದಲ್ಲಿ ಅರಳಿದ ಗುಲ್ಜಾರ್ ಅವರ ಪಂಕ್ತಿಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನ. ಖಾಮೋಶಿ ಚಿತ್ರದಲ್ಲಿ ಬಳಸಿಕೊಂಡ ಈ ಕವಿತೆ ಕಥೆಯ ಮುಖ್ಯಪಾತ್ರದ ಮನಸ್ಸಿಗೆ ಹಿಡಿದ ಕನ್ನಡಿ.  ಭಗ್ನಪ್ರೇಮದ ಕಾರಣದಿಂದ ಉಂಟಾದ ಮನೋವಿಕಲ್ಪದಿಂದ ಆಸ್ಪತ್ರೆ ಸೇರಿದ ತರುಣನನ್ನು ಗುಣಪಡಿಸಲು ಒಬ್ಬ ದಾದಿಯನ್ನು ಆಯ್ಕೆ ಮಾಡಲಾಗುತ್ತದೆ. ಅವಳು ಆತನೊಂದಿಗೆ ಪ್ರೀತಿಯನ್ನು ನಟಿಸಬೇಕು. ದೂರದಿಂದಲೇ ಆತನನ್ನು ಪ್ರೀತಿಸಬೇಕು. ಅವನೊಂದಿಗೆ ನಿಜವಾದ ಪ್ರೇಮದ ಭಾವನೆಯನ್ನು ಬೆಳೆಸಿಕೊಳ್ಳಬಾರದು!  ಕಂಡಿತೇ ಕಂಗಳಲ್ಲಿ ಕುಸುಮಿತ ಸೌರಭದ ಧಗೆ? ಸ್ಪರ್ಶಿಸಿ ಸಂಬಂಧವನು ಆರೋಪಿಸುವುದೇಕೆ ? ಬರಿ ಮನವರಿಕೆಗಿದು, ದೂರದಿಂದ ಅನುಭವಿಸು  ಪ್ರೀತಿಯಾಗೇ ಇರಲಿ ಪ್ರೀತಿ, ಏತಕೆ ಹೆಸರು? ಇಲ್ಲ ಪ್ರೀತಿಗೆ ಭಾಷೆ, ಇಲ್ಲ ನಾಲಿಗೆ ಮಾತು, ಆಲಿಸುವ ಮೌನವು ಬಾಯ್ತೆರೆಯದೆ ಮಾತಾಡುವುದು, ಎಂದಿಗೂ ಆರದಿದು, ನಿಲ್ಲದು, ತಂಗದು ಎಲ್ಲೂ, ಬೆಳಕಿನ ಹನಿಯು ಯುಗಾಂತರದಿಂದಲು ಹರಿಯುವುದು  ಮಂದಹಾಸವು ಎಲ್ಲೋ ಅರಳುವುದು ಕಣ್ಣೊಳಗೆ ಮತ್ತು ಹೊಂಬೆಳಕು ಅಗೋ ಮುಚ್ಚಿದ ರೆಪ್ಪೆಯ ಮೇಲೆ, ಬಿರಿಯದ ಅಧರಗಳು, ಅದುರುವ ತುಟಿಗಳ ಮೇಲೆ ಕಂಪಿಸುತ್ತವೆ ಎಷ್ಟೋ ಕಥೆಗಳ ನಿಶ್ಶಬ್ದದಲೆ

ಮುಗ್ಧ ಪ್ರಶ್ನೆಗಳು

ಇಮೇಜ್
ಮಾಸೂಮ್ (ಮುಗ್ಧ) ಹಿಂದಿಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಹಾಡನ್ನು ಬರೆದವರು ಗುಲ್ಜಾರ್.  ಮೊದಲು ಫ್ರೆಂಚ್ ಭಾಷೆಯಲ್ಲಿ ಅನಂತರ ಇಂಗ್ಲಿಷ್ ಭಾಷೆಯಲ್ಲಿ ತಯಾರಾದ "ಮ್ಯಾನ್, ವುಮನ್ ಅಂಡ್ ಚೈಲ್ಡ್" ಚಿತ್ರದಿಂದ ಪ್ರಭಾವಿತವಾದ ಮಾಸೂಮ್ ಚಿತ್ರವನ್ನು ನಿರ್ದೇಶಿಸಿದವರು ಶೇಖರ್ ಕಪೂರ್.  ಈ ಚಿತ್ರದಲ್ಲಿ ಅನ್ಯೋನ್ಯದಿಂದ ಸಂಸಾರ ಮಾಡಿಕೊಂಡಿರುವ ಗಂಡ-ಹೆಂಡಿರ ಕಥೆ ಇದೆ (ಅಭಿನಯ - ನಸೀರುದ್ದೀನ್ ಶಾಹ್ ಮತ್ತು ಶಬಾನಾ ಆಜ್ಮಿ).  ಇವರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು.  ಈ ಮಕ್ಕಳು ಹಾಡುವ "ಲಕಡೀ ಕೀ ಕಾಠೀ" ಹಾಡನ್ನು  ನೀವು ಕೇಳಿರಬಹುದು. ಇವರೆಲ್ಲರ ಸುಂದರ ಜೀವನದಲ್ಲಿ ಒಮ್ಮೆಲೇ ಬಿರುಗಾಳಿ ಬೀಸುತ್ತದೆ. ಗಂಡ ಹಿಂದೆ ಒಮ್ಮೆ ಜೀವನದಲ್ಲಿ ಎಡವಿದ್ದಾನೆ - ಅವನ ಹಳೆಯ ಸಂಬಂಧದಿಂದ ಅವನಿಗೊಬ್ಬ ಮಗನಿದ್ದಾನೆ ಎಂದು ಅವನಿಗೇ ತಿಳಿದಿಲ್ಲ.  ಇದ್ದಕ್ಕಿದ್ದಂತೆ ಅವನಿಗೊಂದು ಪತ್ರ ಬರುತ್ತದೆ. ಅವನ ಹಿಂದಿನ ಗೆಳತಿ ಈ ವಿಷಯ ತಿಳಿಸಿ ತಾನು ಸಾವಿನ ಅಂಚಿನಲ್ಲಿದ್ದೇನೆಂದು ಬರೆದಿದ್ದಾಳೆ. ತನ್ನ ಮಗನನ್ನು ಅವನು ಕರೆದುಕೊಂಡು ಬರುತ್ತಾನೆ.  ಅವನ ಹೆಂಡತಿ-ಮಕ್ಕಳಿಗೆ ಇದರಿಂದ ಆಘಾತವಾಗುತ್ತದೆ. ಮುದ್ದಾದ ಮಗುವನ್ನು ಪ್ರೀತಿಸಬೇಕೋ ದ್ವೇಷಿಸಬೇಕೋ ತಿಳಿಯದೆ ಹೆಂಡತಿ ತೊಳಲಾಡುತ್ತಾಳೆ. ಗಂಡನೂ ಅಪರಾಧೀ ಪ್ರಜ್ಞೆಯಿಂದ ತೊಳಲಾಡುತ್ತಾನೆ. ತಮ್ಮ ಬದುಕಿನಲ್ಲಿ ಒಮ್ಮೆಲೇ ಪ್ರವೇಶಿಸಿದ...

ಪಾತ್ರಗಳು

ಇಮೇಜ್
ಕಿರ್ದಾರ್ ಅಥವಾ "ಪಾತ್ರಗಳು" ಎಂಬ ಹಿಂದಿ/ಉರ್ದೂ ಕಥೆಗಳನ್ನು ಆಧರಿಸಿದ ದೂರದರ್ಶನ ಕಾರ್ಯಕ್ರಮವನ್ನು ಗುಲ್ಜಾರ್ ನಿರ್ದೇಶಿಸಿದ್ದಾರೆ. ಅಪರೂಪದ ಕಥೆಗಳನ್ನು ಅವರೇ ಆಯ್ದು ಚಿತ್ರಕಥೆ ಸಿದ್ಧಪಡಿಸಿ ನಿರ್ದೇಶಿಸಿದ್ದಾರೆ.  ಯೂ  ಟ್ಯೂಬ್ ಮಾಧ್ಯಮದಲ್ಲಿ  ಲಭ್ಯವಾಗಿವೆ. ಈ ಕಾರ್ಯಕ್ರಮದ ಆರಂಭದಲ್ಲಿ ಬಳಸಲಾದ ನಾಲ್ಕು ಸಾಲಿನ ಗೀತೆಯನ್ನು ಬರೆದವರೂ ಗುಲ್ಜಾರ್ ಅವರೇ.  ಅದನ್ನು ಮಧುರವಾಗಿ ಹಾಡಿದವರು ಜಗಜೀತ್ ಸಿಂಗ್. ಈ ಹಾಡು ಮತ್ತೆ ಮತ್ತೆ ಮೆಲಕುಹಾಕುವಂತಿದೆ.  ಮೂಲ ಹಿಂದಿ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ  ರವಿಕುಮಾರ್  ಹಾದುಬರುವಾಗ  ಹಳೆಯ  ಹೊತ್ತಿಗೆಗಳ ಮೂಲಕ   ಎದುರಾಗುತ್ತವೆ  ಒಮ್ಮೆಲೇ ಪಾತ್ರಗಳು  ಕೆಲವು ಮುಖಾಮುಖಿಯಾಗುತ್ತಾರೆ ಕೈಬೀಸುತ್ತಾ  ಗತಕಾಲದ ಹೊಸ್ತಿಲಲ್ಲಿ ನಿಂತಿರುವ ಮಿತ್ರರು  ತೊರೆದು ಬಂದಿದ್ದೆವಲ್ಲ  ಹೃದಯದ ಬಂಜರು ನೆಲವೆಂದು ಅದೇ ಜಾಗದಲ್ಲಿ ಇಂದು  ಪಾಳುನಗರದ ನಡುವೆ ಗೋಚರಿಸುತ್ತವೆ   ಆಸರೆ ನೀಡುವ ಬಳ್ಳಿ ಒಂದೊಂದು 

ವಿಲಕ್ಷಣವಾಗಿತ್ತು ಆ ಸಂಜೆ

ಇಮೇಜ್
ಖಾಮೋಶಿ ಚಿತ್ರಕ್ಕಾಗಿ ಗುಲ್ಜಾರ್ ಅವರು ಬರೆದ  ಈ ಗೀತೆಯನ್ನು ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಕಿಶೋರ್ ಕುಮಾರ್  ಹಾಡಿದ್ದಾರೆ. ಈ ಗೀತೆ ಎಪ್ಪತ್ತು-ಎಂಬತ್ತರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು.  ಈ ಚಿತ್ರದ ನಾಯಕನಿಗೆ ಪ್ರೇಮದಲ್ಲಿ ನಿರಾಸೆಯುಂಟಾಗಿ ಅವನು ಮತಿಭ್ರಮಣೆಗೆ ತುತ್ತಾಗಿದ್ದಾನೆ (ಅಭಿನಯ - ರಾಜೇಶ್ ಖನ್ನಾ). ಅವನನ್ನು ಪ್ರೀತಿಸಿದಂತೆ ನಟಿಸಿ ಅವನ ಮನಸ್ಸಿಗೆ ಚಿಕಿತ್ಸೆ ನೀಡಲು ಒಬ್ಬ ನರ್ಸ್ ಗೊತ್ತುಮಾಡುತ್ತಾರೆ (ಅಭಿನಯ - ವಹೀದಾ ರಹಮಾನ್). ಇವಳನ್ನು ತನ್ನ ಪ್ರೇಮಿಕೆಯೆಂದೇ ನಾಯಕ ಭ್ರಮಿಸುತ್ತಾನೆ. ಈ ಗೀತೆಯಲ್ಲಿ ನಾಯಕನ ಮನಸ್ಸಿನ ಕಳವಳವನ್ನು ಕಾಣಬಹುದು. ಹಿಂದಿನ ಯಾವುದೋ ನೆನಪು ಅವನನ್ನು ಕಾಡುತ್ತಿದೆ. ತಾನು ಪ್ರೇಮಿಸಿದವಳೂ ತನ್ನನ್ನು ಅಷ್ಟೇ ಪ್ರೀತಿಸುತ್ತಾಳೆ ಎಂದು ನಾಯಕ ಭ್ರಮಿಸಿದ್ದಾನೆ. ಆದರೆ ಆಕೆಯ ನಗೆಯಲ್ಲಿ ಅವನಿಗೆ ಏನೋ ವ್ಯಂಗ್ಯದ ಛಾಯೆ ಕಾಣುತ್ತದೆ. ಅವನ ಮನಸ್ಸು ಕುಸಿಯುತ್ತದೆ. ಅಷ್ಟರಲ್ಲಿ ಈಗ ತನ್ನೊಂದಿಗೆ ಇರುವವಳನ್ನು ಕಂಡು ಅವನು ಮತ್ತೆ ಸಾಂತ್ವನ ಹೇಳಿಕೊಳ್ಳುತ್ತಾನೆ - ತನ್ನ ನಾಯಿಕೆ ಇನ್ನೆಲ್ಲೂ ಹೋಗಿಲ್ಲ, ತನ್ನ ಬಳಿಯಲ್ಲೇ ಇದ್ದಾಳೆ! ಅವಳಿನ್ನೂ ತನ್ನನ್ನು ಪ್ರೀತಿಸುತ್ತಾಳೆ ಎಂದು ನಾಯಕ ಸಮಾಧಾನ ಪಟ್ಟುಕೊಳ್ಳುತ್ತಾನೆ.  ಕಿಶೋರ್ ಕುಮಾರ್-ಗುಲ್ಜಾರ್-ಹೇಮಂತ್ ಕುಮಾರ್ ಅವರ ಸಂಗಮ ಈ ಗೀತೆಗೆ ವಿಶೇಷ ಮೆರುಗು ತಂದುಕೊಟ್ಟಿದೆ.  ಮೂಲ ಕವಿತೆ - ಗುಲ್ಜಾರ್...

ನಿನ್ನದೇ ನಿರೀಕ್ಷೆ

ಇಮೇಜ್
ಸಿ ಪಿ ರವಿಕುಮಾರ್  ಖಾ ಮೋಶಿ (ಮೌನ) ಹಿಂದಿ ಚಿತ್ರ ಒಂದು ದುರಂತ ಕಥೆಯನ್ನು ಹೇಳುತ್ತದೆ. ಚಿತ್ರದ ನಾಯಕ (ರಾಜೇಶ್ ಖನ್ನಾ) ಒಬ್ಬ ಭಗ್ನ ಪ್ರೇಮಿ; ಕವಿ. ಮುರಿದ ಪ್ರೇಮದ ಕಾರಣ ಅವನ ಮನಸ್ಸು ವಿಕಲ್ಪವಾಗುತ್ತದೆ. ಅವನನ್ನು ಮನೋವಿಕಾರಗಳ ಆಸ್ಪತ್ರೆಗೆ ಕರೆದು ತರುತ್ತಾರೆ. ಅಲ್ಲಿ ಒಬ್ಬ ನರ್ಸ್ (ವಹೀದಾ ರೆಹಮಾನ್) ಅವನ ಶುಶ್ರೂಷೆಗೆ ನೇಮಕಗೊಳ್ಳುತ್ತಾಳೆ. ಡಾಕ್ಟರ್ ನಡೆಸುತ್ತಿರುವ ಚಿಕಿತ್ಸೆಯಲ್ಲಿ  ಅವಳಿಗೆ ವಿಶೇಷವಾದ  ಪಾತ್ರ ಕೊಡಲಾಗುತ್ತದೆ. ರೋಗಿಯೊಂದಿಗೆ ಪ್ರೇಮವನ್ನು ನಟಿಸಿ ಅವನನ್ನು ಗುಣ ಮಾಡುವ ಹೊರೆ ಅವಳದು. ಹಿಂದೊಮ್ಮೆ ಇದೇ ರೀತಿಯ ಪ್ರಯೋಗದಲ್ಲಿ ಭಾಗಿಯಾದ ನರ್ಸ್ ಈ ನಟನೆಯು ತನ್ನ ಮನಸ್ಸಿನ  ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದನ್ನು ಬಲ್ಲವಳು. ಆದರೆ ಬೇರೆ ದಾರಿಯಿಲ್ಲದೆ ಮತ್ತೊಮ್ಮೆ ಪ್ರೇಮವನ್ನು ಅಭಿನಯಿಸಲು ಒಪ್ಪುತ್ತಾಳೆ.  ಪ್ರೇಮವನ್ನು ನಟಿಸುತ್ತಾ ಅವಳು ನಾಯಕನಲ್ಲಿ ನಿಜವಾಗಿ ಅನುರಕ್ತಳಾಗುತ್ತಾಳೆ. ನಾಯಕ ಗುಣಮುಖನಾಗಿ ಒಂದು ದಿನ ಹೊರಟು ನಿಲ್ಲುತ್ತಾನೆ. ನಾಯಕಿಯ ಮನಸ್ಸಿನ ಮೇಲೆ ಇದು ಆಘಾತ ಉಂಟು ಮಾಡುತ್ತದೆ. ಅವಳು ಸ್ವಯಂ ಮನೋವಿಕಾರಕ್ಕೆ ಗುರಿಯಾಗುತ್ತಾಳೆ. ಈ ದುರಂತ ನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯ ಮನೋಜ್ಞವಾಗಿದೆ. ಚಿತ್ರಕ್ಕೆ ಒಪ್ಪುವ ಗಂಭೀರ ಶೈಲಿಯ ಸಂಗೀತವನ್ನು ಹೇಮಂತ್ ಕುಮಾರ್ ನೀಡಿದ್ದಾರೆ. ಅವರೇ ಹಾಡಿರುವ ಹಾಡು "ತುಮ...

ಮುಖವಾಡ

ಇಮೇಜ್
ಮೂಲ ಹಿಂದಿ ಪದ್ಯ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ ರವಿಕುಮಾರ್ ನಾಚಿಕೆಗೆಟ್ಟ ಬೆತ್ತಲೆ ಹಗಲಿನಲ್ಲಿ ಇಡೀ ದಿವಸ ನನ್ನ ಜೀತದಾಳುಗಳಿಗೆ ಹುಣಸೆ ಬರಲಿನಿಂದ ಏಟು ಬಿಗಿಯುತ್ತೇನೆ. ಕೊಳ್ಳುತ್ತೇನೆ, ಮಾರುತ್ತೇನೆ ನನ್ನ ಗುಲಾಮರನ್ನು.   ನನ್ನ ಬೇಕುಗಳಿಗಾಗಿ ನನ್ನನ್ನೇ ಹರಾಜು ಹಾಕುತ್ತೇನೆ ನಾಚಿಕೆಗೆಟ್ಟ ಬೆತ್ತಲೆ ಹಗಲಿನಲ್ಲಿ ಒಪ್ಪಂದ ಮಾಡಿಕೊಳ್ಳುತ್ತೇನೆ, ರಾಜಿ ಮಾಡಿಕೊಳ್ಳುತ್ತೇನೆ.  ಆದರೆ ರಾತ್ರಿಯ ಖಾಲೀತನದಲ್ಲಿ ಮುಖ ಮುಚ್ಚಿಕೊಂಡು ಬಿಕ್ಕುತ್ತೇನೆ. ಒಂದು ಮುಖ ಎಷ್ಟೊಂದು ಮುಖಗಳಿಗೆ ಹಾಕುತ್ತದೆ ತೆರೆ.  --- ಕವಿತೆಯ ನವಿರು: "ಬೆತ್ತಲೆ ಹಗಲು" ಎಂದು ಬರೆಯುವ ಸ್ವಾರಸ್ಯ ಏನು? ಕವಿ ಇಲ್ಲಿ ಪ್ರಸ್ತಾಪ ಮಾಡುವ ಜೀತದಾಳುಗಳು ಯಾರು? ಯಾರ ಜೊತೆ ರಾಜಿ ಮಾಡಿಕೊಳ್ಳುಬೇಕಾಗಿದೆ ಎಂದು ಕವಿ ಹೇಳುತ್ತಾನೆ?

ನೀನಿಲ್ಲದೆ

ಇಮೇಜ್
ಮೂಲ ಹಿಂದಿ ಪದ್ಯ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಗಾಜಿನ ಕಿಟಕಿಯ ಹಿಂದೆ ಮರಗಳ ಬಲಿಷ್ಠ ರೆಂಬೆಗಳ ನಡುವೆ ಬೀಳುತ್ತಿದೆ ಶ್ರಾವಣದ ಮಳೆ.   ಶಬ್ದವಿದೆ, ಜನರಿದ್ದಾರಲ್ಲ, ಮಾತಾಡುತ್ತಿದ್ದಾರೆ.  ಇವರ ಮಾತುಗಳಿಗೂ ಆಚೆ ನನ್ನೊಳಗೆಲ್ಲೋ ಬೇರೊಂದು ಸಮತಲದಲ್ಲಿ ನಿನ್ನ ಗೈರುಹಾಜರಿ ಬೀಳುತ್ತಿದೆ ಮೆಲ್ಲಗೆ, ಬಹುಮೆಲ್ಲಗೆ. 

ಗುಲ್ಜಾರ್ ಅವರಿಗೆ ಪುಷ್ಪಗುಚ್ಛ

ಸಿ. ಪಿ. ರವಿಕುಮಾರ್  ಗು ಲ್ಜಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಗುಣಕ್ಕೆ ನಮ್ಮಲ್ಲಿ ಇನ್ನೂ ಪುರಸ್ಕಾರವಿದೆ ಎಂಬ ಸಮಾಧಾನವನ್ನು ತಂದುಕೊಟ್ಟಿದೆ. ಗುಲ್ಜಾರ್ ಒಬ್ಬ ಅಸಾಮಾನ್ಯ ಕವಿ, ಕತೆಗಾರ, ಚಲನಚಿತ್ರ ನಿರ್ದೇಶಕ.  ೧೯೩೪ ರಲ್ಲಿ ಅವಿಭಾಜಿತ ಭಾರತದ ಪಂಜಾಬ್ ಪ್ರಾಂತದಲ್ಲಿ ಹುಟ್ಟಿದವರು. ಅವರ ನಿಜವಾದ ಹೆಸರು ಸಂಪೂರನ್ ಸಿಂಗ್ ಕಾಲ್ರಾ; ಮೂಲತಃ ಸಿಖ್ ಧರ್ಮಿಗಳು. ಪಂಜಾಬಿನ ವಿಭಜನೆಯ ಸಮಯದಲ್ಲಿ ಇನ್ನೂ ಹದಿಹರೆಯದ ಹುಡುಗನಾಗಿದ್ದ ಗುಲ್ಜಾರ್ ಮನಸ್ಸಿನ ಮೇಲೆ ಆ ಕಾಲದ ಘಟನೆಗಳು ಆಳವಾದ ಮುದ್ರೆಯನ್ನೊತ್ತಿದವು. ಮುಂದೆ ತಮ್ಮ ತಂದೆಯ ಇಚ್ಛೆಯ ವಿರುದ್ಧವಾಗಿ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದರು. ತಮ್ಮ ಹಲವಾರು ಕತೆಗಳಲ್ಲಿ ಅವರು ಭಾರತದ ವಿಭಜನೆಯನ್ನು ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಮುಂದೆ ಪಂಜಾಬ್ ಪ್ರಾಂತದಲ್ಲಿ ಉಗ್ರವಾದಿ ಗುಂಪುಗಳು ಪ್ರತ್ಯೇಕ ಖಾಲಿಸ್ತಾನ್ ದೇಶಕ್ಕೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದಾಗ ಉಗ್ರರ ವ್ಯಥೆಗೆ ಕಾರಣಗಳನ್ನು ಹುಡುಕುವ ಮಾಚಿಸ್ ಎಂಬ ಚಿತ್ರವನ್ನು ನಿರ್ದೇಶಿಸಿದರು.  ಗುಲ್ಜಾರ್ ಅವರು ಪ್ರಸಿದ್ಧ ನಿರ್ದೇಶಕರಾದ ಬಿಮಲ್ ರಾಯ್ ಅವರೊಂದಿಗೆ ಸಹನಿರ್ದೇಶಕರಾಗಿ ಪಳಗಿದವರು.  ಮುಂದೆ ಸ್ವತಂತ್ರವಾಗಿ ನಿರ್ದೇಶಿಸುವ ಅವಕಾಶಗಳು ಸಿಕ್ಕಾಗ ಅನೇಕ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಚಿತ್ರಗಳನ್ನು ನಮಗೆ ಕೊಟ್ಟರು.  ಒಬ್ಬ ಮೂಕ ಇನ್ನೊಬ್ಬ ಮೂಕಿಯ...

ನಿಶಾ ಭಿಕಾರಿಣಿ

ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಒಂಟಿ ಬರುವಳು ನಿತ್ಯ ನಿಶಾ ಭಿಕಾರಿಣಿ ಪಾಪ! ಒಬ್ಬಂಟಿಯಾಗಿ ತೆರಳುವಳು ಚಳಿಗೆ ನಡುಗುವ ಕಪ್ಪು ಕೈಗಳಲಿ ಹಿಡಿದು ಹೊಳೆವ ತಿಂಗಳ ಬಟ್ಟಲು ಲಕ್ಷ ನಕ್ಷತ್ರಗಳ ವಜ್ರ ವೈಡೂರ್ಯ ತುಂಬಿರುವ ಕಪ್ಪು ಸೆರಗು ಇಷ್ಟೆಲ್ಲ ಇದ್ದರೂ ಏನು ಬೇಡುತ್ತಿಹಳು, ಏನಿವಳ  ಕಷ್ಟ  ಕೊರಗು? ಜೋಗಿಣಿಯ ಹಾಗೆ ಕಾಣುವಳು ಯಾರೋ, ಕಣ್ಣಲ್ಲಿ ಅರೆ ನಿದ್ರೆ ಎಚ್ಚರ ಗಲ್ಲಿ ಗಲ್ಲಿಗಳಲ್ಲೂ ತಿರುಗುವಳು ಒಬ್ಬಂಟಿ, ಹೊದ್ದು ಕಪ್ಪಾದ ಹಚ್ಚಡ ಬೇಡುತ್ತಾ ನಿತ್ಯ ಬರುವಳು , ಪಾಪ,  ಒಳಗಿದೆಯೇ ನೋಡಿ  ಪುಟ್ಟ  ಮರಿ ಹಗಲು ಹಾಕಿ ಬಿಡಿ ಇವಳ ಮಡಿಲಿಗೆ, ಸುಮ್ಮನೆ ತೊಂದರೆ ಕೊಡುವುದು ಮಲಗಲು Kannada translation by C.P. Ravikumar of a Hindi Poem by Gulzar ಈ ಕವಿತೆಯನ್ನು ಒಂದು ಹಿಂದಿ ಚಿತ್ರದಲ್ಲಿ ಜೋಗುಳದ ರೊಪದಲ್ಲಿ ಬಳಸಿಕೊಳ್ಳಲಾಗಿದೆ. ಲತಾ ಮಂಗೇಶ್ಕರ್ ಅಧ್ಭುತವಾಗಿ ಹಾಡಿದ್ದಾರೆ. ರಾತ್ರಿಯನ್ನು ಒಬ್ಬ ಭಿಕಾರಿಣಿಗೆ ಹೋಲಿಸಿರುವ  ಕವಿಯ ಕಲ್ಪನೆ ಅನನ್ಯವಾದುದು. ಚಂದ್ರ ಭಿಕಾರಿಣಿಯ ಬಟ್ಟಲಿನಂತೆ ಕವಿಗೆ ಗೋಚರವಾಗುತ್ತದೆ. ಲಕ್ಷಾಂತರ ವಜ್ರಗಳಿದ್ದರೂ ಬೇಡುವ ಸ್ಥಿತಿಯಲ್ಲಿರುವ ನಿಶಾ ಭಿಕಾರಿಣಿಯ ಬಗ್ಗೆ ನಮಗೆ ಅನುಕಂಪ ಮೂಡುತ್ತದೆ.  ಎಷ್ಟೋ...

ಬೆಳಕಿನ ಹನಿ

ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ ಬರಿದೆ ನೋಡು ಆ ಕಣ್ಣುಗಳಿಂದ ಹೊಮ್ಮುವ ಸುಗಂಧವನು ಕೈಯಿಂದ ಮುಟ್ಟಿ ತೊಡಿಸದಿರು ಸಂಬಂಧಗಳ ಬೇಡಿ ಆತ್ಮದಿಂದ ಅನುಭವಿಸು, ಪ್ರೀತಿಯನ್ನು ಹಾಗೇ ಬಿಟ್ಟು ಬಿಡು ಹಣೆಪಟ್ಟಿ ಹಚ್ಚದಿರು ಹೆಸರನ್ನು ನೀಡಿ  ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ ಕೇಳುವುದು, ಆಡುವುದು ಮೌನದಲ್ಲೆ.  ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ - ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ.  ಕಣ್ಣುಗಳಲ್ಲಿ ಎಲ್ಲೋ ಅರಳಿ ನಗುವ ಮುಗುಳು ರೆಪ್ಪೆಗಳ ಮೇಲೆ ಆಟವಾಡುವ ಬೆಳಕು ಮೌನವಾಗಿದ್ದರೂ ಕಂಪಿಸುವ ತುಟಿಗಳಲಿ ಘನಿತವಾಗಿವೆ ಕಥಾನಕಗಳೆಷ್ಟೊಂದು ಕವಿತೆಯನ್ನು ಕುರಿತು  ಗುಲ್ಜಾರ್ ಅವರ ಈ ಕವಿತೆಯನ್ನು ಖಾಮೋಶಿ ಚಿತ್ರದಲ್ಲಿ ಗೀತೆಯನ್ನಾಗಿ ಬಳಸಲಾಗಿದೆ. ಈ ಕವಿತೆಯಲ್ಲಿ ಪ್ರೇಮದ ಬಗ್ಗೆ ಒಂದು ವ್ಯಾಖ್ಯಾನವಿದೆ.   ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ ಕೇಳುವುದು, ಆಡುವುದು ಮೌನದಲ್ಲೆ ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ ಖಾಮೋಶಿ ಚಿತ್ರದಲ್ಲಿ ದುರಂತನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯಿಸಿದ್ದಾರೆ.  ಭಗ್ನಪ್ರೇಮದಿಂದ ಹುಚ್ಚನಾದ ಕವಿಯೊಬ್ಬ ಮಾನಸಿಕ ಆಸ್ಪತ್ರೆಗೆ ಸೇರುತ್ತಾನೆ. ಅವನನ್ನು ಪ್ರೀತಿಸುವ...

ಸಂಜೆಯಿಂದಲೂ  ಏಕೋ ಕಣ್ಣಿನಲ್ಲಿ ತೇವ 

ಇಮೇಜ್
ಮೂಲ ಉರ್ದು ಗಜಲ್ : ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಸಂಜೆಯಿಂದಲೂ  ಏಕೋ ಕಣ್ಣಿನಲ್ಲಿ ತೇವ  ಇಂದು ಮತ್ತೆ ಕಾಡುತ್ತಿದೆ ನಿನ್ನದೇ ಅಭಾವ  ಉಸಿರಾದರೂ ಆಡುತ್ತಿದ್ದೆ ಹೂತಿದ್ದರೆ ನೆಲದಲ್ಲಿ  ನಾಡಿ ಮಿಡಿತವು ಯಾಕೋ ನಿಂತಂಥ ಭಾವ  ಕಾಲವೆಂಬುದು ಒಂದೆಡೆಗೆ ನಿಲ್ಲದು ಬಚ್ಚಿಟ್ಟುಕೊಂಡು   ಮಾನವರಂತೆ ಅದರ ಕಾರ್ಯವಿಧಿ ಕೂಡಾ  ಈಗ ಯಾವ ಸಂಬಂಧವೂ ಉಳಿದಿಲ್ಲ, ಆದರೂ  ಕರ್ತವ್ಯವೆಂಬಂತೆ ಕೈ ಮುಗಿದು ನಮಸ್ಕಾರ Kannada translation by C.P. Ravikumar of an Urdu Gazal by Gulzar  

ಉರುವಲು

ಮೂಲ ಹಿಂದಿ ಕವಿತೆ: ಗುಲ್ಜಾರ್ ಕನ್ನಡಕ್ಕೆ : ಸಿ.ಪಿ. ರವಿಕುಮಾರ್ ಚಿಕ್ಕವಯಸ್ಸಿನಲ್ಲಿ ನಮಗೊಂದು ಆಟ  ಅಮ್ಮ ಬೆರಣಿ ತಟ್ಟುತ್ತಿದ್ದಾಳೆ  ನಾವು ಹೋಗಿ ಬೆರಣಿಯಲ್ಲಿ   ನಮ್ಮ ಚಹರೆ ಬರೆಯುವವರು  ಕಣ್ಣು ಬರೆದು ಹುಬ್ಬು ತೀಡಿ ಭೇಷಾಗೊಂದು ಮೂಗು  ಕೆಳಗೆ ತೆರೆದ ಬಾಯಿ  ಕಿವಿಗೆ   ಅಲಂಕಾರದ ಮಾಟ  ಒಂದಕ್ಕೆ ಟೋಪಿ ಇನ್ನೊಂದಕ್ಕೆ ಪೇಟ  ಇದು ನನ್ನ ಬೆರಣಿ  ಅದು  ನಿನ್ನ ಬೆರಣಿ  ಹೀಗೆ ಸಾಲಾಗಿ ಚಹರೆಗಳ ಸರಣಿ  ಸೂರ್ಯ ಬರುವನು ಬೆಳಗ್ಗೆ ನಗುನಗುತ್ತ  ಅವನಿಗೆ ಬೆರಣಿಗಳೊಂದಿಗೆ ಆಟ  ಸಂಜೆಯ ಒಲೆ ಉರಿಯುವಾಗ  ಅಲ್ಲಿ ನೆರೆಯುವುದು ಮಕ್ಕಳ ಕೂಟ  ಇವತ್ತು ಯಾರ ಬೆರಣಿ ಉರಿದು ಬೂದಿ? ಪಂಡಿತನದೆ? ಪುಟ್ಟನದೇ?  ದಶರಥನದೇ ಸರದಿ? ಇದೆಲ್ಲಾ ಆಗಿ ವರ್ಷಗಳೇ ಸಂದಿವೆ  ಸ್ಮಶಾನದಲ್ಲಿ ಕುಳಿತಿದ್ದೇನೆ  ಯೋಚಿಸುತ್ತಾ  ಭೀಕರ ಮೌನದ ರಾತ್ರಿ  ಅಗೋ ಹೊತ್ತು ಉರಿಯುವ ಇಂದಿನ ಒಲೆಯಲ್ಲಿ  ಇನ್ನೊಬ್ಬನ ಬೆರಣಿ ಭಸ್ಮವಾಗಿ ಪರಿಸಮಾಪ್ತಿ  Kannada translation of a poem by Gulzar Translated by C.P. Ravikumar

 ಅಪರಿಚಿತನಾಗಿರುವೆ ನನ್ನ ಮನೆಗೆ ನಾ ಬಂದು 

ಇಮೇಜ್
ಮೂಲ ಉರ್ದು ಗಜಲ್ : ಗುಲ್ಜಾರ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಅಪರಿಚಿತನಾಗಿರುವೆ ನನ್ನ ಮನೆಗೇ ನಾ ಬಂದು ಬೆದರಿಹುದು ನನ್ನಾತ್ಮ ನನ್ನನ್ನಿಲ್ಲಿ ಕಂಡು ಮೂಲೆ ಸೇರಿಹವು ಆಸೆಗಳು ಯಾಕೋ ಮುನಿದು ಅಭಿಲಾಷೆಗಳ ಮುಖಗಳಲ್ಲಿ ನಂದಿಹುದು ಬೆಳಕು ಹವ್ಯಾಸವು ಮಾತಾಡದು ಹಿಡಿಯಲಾಗದೆ ಗುರುತು ಸತ್ತು ಹೋಗಿದೆ ಆಕಾಂಕ್ಷೆ ಹೊಸಲಲ್ಲಿ ತಲೆಯಿಟ್ಟು ಯಾವ ನಾಡನ್ನರಸುತ್ತಾ ಹೊರಟೆನೋ ಮನೆಯಿಂದ ಕಾಣೆ ಮರಳಿದಾಗ ಹೊರಗಿನವನಾದೆ ನನ್ನ ಮನೆಯೊಳಗೇ Translation of an Urdu Gazal by Gulzar. Translated into Kannada by C.P. Ravikumar

ಅಭ್ಯಾಸಬಲವೋ ಎಂಬಂತೆ 

ಮೂಲ ಉರ್ದು ಗಜಲ್: ಗುಲ್ಜಾರ್  ಕನ್ನಡಕ್ಕೆ : ಸಿ. ಪಿ.  ರವಿಕುಮಾರ್  ಅಭ್ಯಾಸಬಲವೋ ಎಂಬಂತೆ ಭಾಷೆಯಿತ್ತೆ ನೀನು  ಅಭ್ಯಾಸಬಲವೋ  ಎಂಬಂತೆ ಸ್ವೀಕರಿಸಿದೆ ನಾನು  ನೀನು ಬರುವ ಹಾದಿ ಎಂದು ನೆನೆನೆನೆದು ಕಾದುದಕ್ಕೆ  ನನ್ನ ವಿನಾ  ಅಲ್ಲಿ ನನಗೆ ಎದುರಾದುದೇನು? ಇನ್ನು ಬೇಡುವುದಿಲ್ಲ ದೇವರೇ ಬದುಕನ್ನು  ಆ ತಪ್ಪು ಈಗಾಗಲೇ ಮಾಡಿರುವೆನು ನಾನು  Translation of an Urdu Gazal by Gulzar. Translated into Kannada by C.P. Ravikumar 

ಮಳೆ ಬರುವ ಮುನ್ನವೇ

ಇಮೇಜ್
ಕವಿತೆ ಓದುವ ಮುನ್ನ ... "ಮಳೆ ಬರುವ ಕಾಲಕ್ಕs ಒಳಗ್ಯಾಕs ಕುಳಿತೇವೋ, ಬಾ ಗೆಣೆಯ ಜಳಕಾs ಮಾಡೋಣs! ನಾವೂನೂ ಮೋಡಗಳ ಆಟ ಆಡೋಣs" ಎಂದರು ನಮ್ಮ ಬೇಂದ್ರೆ.  ಮಳೆಗೆ ಮಲೆನಾಡಿನವರು, ಕರಾವಳಿ ಪ್ರದೇಶದಲ್ಲಿರುವವರು  ಹೆದರುವುದಿಲ್ಲ. ಆದರೆ ನಗರದ ಜನರಿಗೆ ಮಳೆಯೆಂದರೆ ಗಾಬರಿ! ದೇವಲೋಕದ ಜೊತೆಗೆ ಭೂಮಿಯನ್ನು ಒಂದಷ್ಟು ಕಾಲ ಕನೆಕ್ಟ್ ಮಾಡುವ ಮಳೆಗೆ ನಾವು ಯಾಕೆ ಹೆದರುತ್ತೇವೆ? ಈ ಪ್ರಶ್ನೆಯನ್ನು ಗುಲ್ಜಾರ್ ಈ ಕವಿತೆಯಲ್ಲಿ ಕೇಳುತ್ತಾರೆ .... ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾರಿ ಗೋಡೆಗಳ ಬಿರುಕುಗಳನ್ನು ಮುಚ್ಚಿ ಛಾವಣಿಯ ಮೇಲೆ ಸುಣ್ಣ ಸಾರಿಸಿ ಸಾಲದ್ದಕ್ಕೆ ನಡೆಯುತ್ತಿದೆ ಕೊಡೆಯ ರಿಪೇರಿ ಹೊರಗಡೆ ತೆರೆಯುವ ಕಿಟಕಿಯ ಮೇಲೆ ಚಜ್ಜ ಹಾಕಿಸಿದ್ದಾಯ್ತು ಮರಳು ಮತ್ತಿನ್ನೇನೋ ಕುಟ್ಟಿ ಗಟ್ಟಿ ಮಾಡುತ್ತಿದ್ದಾರೆ ಮೇನ್ ರೋಡಿನಿಂದ ಮನೆವರೆಗೆ ಬರುವ ಕಿರುದಾರಿ ಇಲ್ಲದಿದ್ದರೆ ನೋಡಿ ಹಳ್ಳಗಳಲ್ಲಿ ತುಂಬಿಕೊಂಡು ನೀರು ಉಟ್ಟ ಬಟ್ಟೆ ಬೂಟುಗಳಿಗೆಲ್ಲ ಕೆಂಪು ಕಸರಿನ ರಾಡಿ ಸದ್ಯ ಎಲ್ಲಾದರೂ ತೊಡರೀತು ಸಪ್ತ ವರ್ಣ! ನೆಂದರೇನು ಗತಿ  ಮೋಡದಲ್ಲಿ! ಪಾರಾಗುತ್ತ ಶ್ರಾವಣದಿಂದ ಅಂತೂ ಇಂತೂ ಬದುಕೋಣ ಹೇಗಾದರೂ ಮಾಡಿ ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾ...

ಗಾಜಿನ ಬೀರುಗಳಿಂದ ಇಣುಕುತ್ತವೆ ಪುಸ್ತಕ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಪುಸ್ತಕಗಳೊಂದಿಗೆ ಒಂದು ರಕ್ತ ಸಂಬಂಧವಿತ್ತಲ್ಲ, ಕಡಿದುಹೋಗಿದೆ ಒಂದು ಕಾಲ ಇತ್ತು: ಎದೆಯ ಮೇಲಿಟ್ಟುಕೊಂಡು ಮಲಗಿಕೊಳ್ಳುವುದೇನು ಮಡಿಲಲ್ಲಿಟ್ಟುಕೊಂಡು ಮೆರೆಸುವುದೇನು ಕೆಲವೊಮ್ಮೆ ಮಂಡಿಗಳನ್ನೇ ಮಂದಲಗೆ ಮಣೆ ಮಾಡಿಕೊಂಡು ನತಮಸ್ತಕರಾಗಿ ಓದುತ್ತಿದ್ದೆವಲ್ಲ, ಹಣೆ ಮುಟ್ಟಿಸಿಕೊಂಡು ತಿಳುವಳಿಕೆಗೇನು ಸಿಕ್ಕುವುದು ಹೇಗೂ ಆದರೆ ಸಿಕ್ಕುತ್ತಿದ್ದವಲ್ಲ ಹೂವಿನ ಒಣಗಿದ ಪಕಳೆ ಘಮ್ಮೆನ್ನುವ ಹಾಳೆ ಪುಸ್ತಕ ಕೇಳಿ ಪಡೆಯುವ ನೆಪದಲ್ಲಿ, ಬೀಳುವ ಎತ್ತಿಕೊಡುವ ನೆಪದಲ್ಲಿ ಹುಟ್ಟಿಕೊಳ್ಳುತ್ತಿದ್ದವಲ್ಲ ಸಂಬಂಧಗಳು ಅವುಗಳಿಗೆ ಬಹುಶಃ ಇನ್ನು ಇಲ್ಲ ಅವಕಾಶ Translation of a Hindi Poem by Gulzar (ಈ-ಪುಸ್ತಕಗಳ ಕಾಲ ಬರುವುದಕ್ಕೆ ಬಹಳ ಹಿಂದೆಯೇ ಗುಲ್ಜಾರ್ ಈ ಕವಿತೆ ಬರೆದಿದ್ದರು! ಡೌನ್ ಲೋಡ್ ಮಾಡಿಕೊಂಡು ಪುಸ್ತಕ ಓದುವಾಗ ನಮಗೆ ಅದರಲ್ಲಿ ನವಿಲುಗರಿಯಾಗಲಿ, ಹೂವಿನ ಪಕಳೆಗಳಾಗಲಿ ದೊರೆಯುವುದಿಲ್ಲ! ಯಾರೋ ಪುಸ್ತಕದ ಅಂಚಿನಲ್ಲಿ  ಗೀಚಿದ ಬರಹ ನಮ್ಮನ್ನು ಕಾಡುವುದಿಲ್ಲ. ನಶಿಸುತ್ತಿರುವ ಮಾನವ ಸಂಬಂಧಗಳನ್ನು ಕುರಿತು ಈ ಕವಿತೆ ಸೂಕ್ಷ್ಮವಾಗಿ ವ್ಯಾಖ್ಯಾನ ಮಾಡುತ್ತದೆ. ಇದರಿಂದ ಸ್ಫೂರ್ತಿ ಪಡೆದವರು ಯಾರಾದರೂ ಹೊಸ ಬಗೆಯ ಈ-ಪುಸ್ತಕ ಅಪ್ಲಿಕೇಶನ್ ತಯಾರಿಸಬಹುದೇನೋ!)

ಶೂನ್ಯ ರೇಖೆ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  (ಕವಿತೆಯನ್ನು ಓದಿದ ಮೇಲೆ ಕೆಳಗಿರುವ ಟಿಪ್ಪಣಿ ಓದಿ ನಂತರ ಕವಿತೆಯನ್ನು ಮತ್ತೊಮ್ಮೆ ಓದಿ.) ಹೆಜ್ಜೆಗಳನ್ನು ಅಳೆಯುತ್ತಾ  ನಾನು ವಾಘಾದಲ್ಲಿ ಶೂನ್ಯರೇಖೆಯ ಮೇಲೆ ಬಂದು ನಿಂತಾಗ ನನ್ನ ನೆರಳು ಪಾಕೀಸ್ತಾನದಲ್ಲಿತ್ತು. ಸೂರ್ಯ ನನ್ನ ಬೆನ್ನಿಗಿದ್ದ. ಎದುರಿಗೆ ನನ್ನ ಅಬ್ಬೂ ಗೋಚರಿಸಿದರು. ನನ್ನನ್ನು ನೋಡಿದವರೇ ಕೈಯಲ್ಲಿದ್ದ ಕೋಲನ್ನು ನೆಲಕ್ಕೆ ಊರಿ ಮುಗುಳ್ನಕ್ಕು ಮಾತಾಡಿಸಿದರು: "ಅಲ್ಲಿ ಮಣ್ಣು ಹಾಕಿದ ಮೇಲೆ  ನಾನು ನನ್ನ ಮನೆಗೆ ಮರಳಿ ಬಂದೆ;  ನನಗೆ ವಿದಾಯ ಹೇಳಲು  ನೀನು ಬಂದೇ ಬರುತ್ತೀಯ  ಅಂತ ನನಗೆ ಭರವಸೆ ಇತ್ತು.  ನನ್ನ ಸಾವಿನ ಸುದ್ದಿ ನಿನಗೆ ಮುಟ್ಟಿರಲಿಲ್ಲ!" ಕೋಲನ್ನು ನೆಲಕ್ಕೆ ಮತ್ತೊಮ್ಮೆ ಬಡಿದು ನನ್ನ ಕಡೆ ಕೈ ಚಾಚಿ ನುಡಿದರು - "ನಡೆ, ದೀನಾಗೆ ಹೋಗೋಣ." [ಗುಲ್ಜಾರ್ ಹುಟ್ಟಿದ್ದು ಇಂದಿನ ಪಾಕಿಸ್ತಾನದ ದೀನಾ ಎಂಬ ಊರಿನಲ್ಲಿ.  ಭಾರತದ ವಿಭಜನೆಗೆ ಮುಂಚೆ ಅವರ ತಂದೆ  ಪಾಕಿಸ್ತಾನದಲ್ಲಿದ್ದ  ತಮ್ಮ ನೆಲೆಯನ್ನು ತ್ಯಜಿಸಿ ಕುಟುಂಬದೊಂದಿಗೆ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದರು. ಮುಂದೆ ಗುಲ್ಜಾರ್ ಕವಿತೆಗಳನ್ನು ಬರೆಯತೊಡಗಿ ಮುಂಬೈಗೆ ಚಿತ್ರರಂಗದಲ್ಲಿ ಕೆಲಸ ಮಾಡಲೆಂದು ಹೋದಾಗ ಅವರ ತಂದೆಗೆ ಅದು ಇಷ್ಟವಿರಲಿಲ್ಲ. "ಇದರಲ್ಲಿ ನ...

ಹೀಗೊಂದು ಇತ್ತು ಬಾಲ್ಯ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಹೀಗೊಂದು ಇತ್ತು ಬಾಲ್ಯ ಪುಟ್ಟದಾಗಿತ್ತು,  ಇಷ್ಟೇ ಇಷ್ಟು, ಬಾಲ್ಯ  ಬಾಲ್ಯದಲ್ಲೊಬ್ಬರು, ಅಪ್ಪ ಎಂಬವರು,  ಸಾಚಾತನ, ಒಳ್ಳೆಯತನ ಅವರ ಆಂತರ್ಯ  ಹೇಗಿತ್ತು ನಮ್ಮ ಸುಂದರ ಬಾಂಧವ್ಯ! ಹೀಗೊಂದು ಇತ್ತು ಬಾಲ್ಯ  ಮೇಲೆ ರೆಂಬೆಯನ್ನೇರಿ  ಬಾ  ಎನ್ನುವ  ಹೂಗಳು ಹಿಡಿಯಲು ಕೈ ಎತ್ತಿದರೆ  ನಿಲುಕಲಾರವು  ಚಾಚಿದರೂ  ಆಗ ಎಲ್ಲಿಂದಲೋ ಬಂದು  ಬಾಲ್ಯದ ಎರಡು ಕೈಗಳು  ಮೇಲೆತ್ತಿದರೆ ಮುಟ್ಟುವುದು  ಹೂವಿನೊಂದಿಗೆ ಹೂಬೆರಳು - ಇತ್ತು ಬಾಲ್ಯ ಹೀಗೊಂದು  ಹೀಗೇ ಬರುವಾಗ  ಎಲ್ಲೋ ಯಾವಾಗಲೋ  ಬಾಲ್ಯದಲ್ಲೇ ಅಪ್ಪ  ಲೀನವಾದರು  ಕೈಬಿಟ್ಟು  ಮುಷ್ಟಿಯಲ್ಲಿವೆ ಇನ್ನೂ  ಒಣಗಿ ಹೋದ ಹೂದಳ  ಬದುಕ ಬೇಕೆಂಬಾಸೆ  ಈ ಹೂವಿನ ಪರಿಮಳ - ಹೀಗೊಂದು ಇತ್ತು ಬಾಲ್ಯ  ನನ್ನ ತುಟಿಗಳ ಮೇಲೆ ಇನ್ನೂ  ಅವರ ದನಿ ಆಡುತ್ತಿದೆ  ಲಾಸ್ಯ  ನನ್ನ ಉಸಿರಿನಲ್ಲಿ ಇನ್ನೂ ಇದೆ  ಅವರಿತ್ತ ಆತ್ಮವಿಶ್ವಾಸ  ಎಂದು ಸಿಕ್ಕುವರೋ ಮತ್ತೆ  ಯಾವುದೋ ತಿರುವಿನಲ್ಲಿ  ಕೇಳುವರು - ನೆನಪಿದೆಯೇ  ಬಾಲ್ಯದ ...

ಹಾದಿಗಳು

ಇಮೇಜ್
ಹಾದಿಗಳು  ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಗುಲ್ಜಾರ್ ಅವರು ಬರೆದ ಈ ಕವಿತೆಯನ್ನು ಆಂಧಿ ಚಿತ್ರದಲ್ಲಿ ಯುಗಳಗೀತೆಯಾಗಿ ಬಳಸಿಕೊಳ್ಳಲಾಗಿದೆ.  ಇದನ್ನು ಗುಲ್ಜಾರ್ ಚಿತ್ರಕ್ಕಾಗಿ ಬರೆದರೋ ಅಥವಾ ಅವರದೇ ಕವಿತೆಯನ್ನು ಚಿತ್ರಗೀತೆಯಾಗಿ ಅಳವಡಿಸಿಕೊಳ್ಳಲಾಯಿತೋ ಹೇಳುವುದು ಕಷ್ಟ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಪ್ರೀತಿಸಿ ಮದುವೆಯಾದರೂ ತದನಂತರ ಭಿನ್ನಾಭಿಪ್ರಾಯ ಉಂಟಾಗಿ ಬೇರಾಗಿದ್ದಾರೆ. ಅವರ ರಸ್ತೆಗಳು ಬೇರಾಗಿವೆ.  ನಾಯಕಿಯ ರಸ್ತೆ ಬಿರುಗಾಳಿಯಂತೆ ಹಾದು ಹೋಗುವ ರಸ್ತೆ. ನಾಯಕನದ್ದು ನಾಚಿ ಮೆಲ್ಲನೆ ಕೆಳಗಿಳಿಯುವ ರಸ್ತೆ. ನಾಯಕಿಯದು ತೀವ್ರಗತಿಯ ರಸ್ತೆ. ನಾಯಕನದ್ದು  ಆಲಸ ಹೆಜ್ಜೆಯ ರಸ್ತೆ.  ನಾಯಕಿಯದು ಗಾಜಿನ ಅರಮನೆಗೆ ಹೋಗುವ ರಸ್ತೆ. ನಾಯಕನದ್ದು ಕಡ್ಡಿಗಳ ಪುಟ್ಟ ಗೂಡಿಗೆ ಹೋಗುವ ರಸ್ತೆ ...  ಆದರೆ ಈ ರಸ್ತೆಗಳು ಕೂಡಾ ಒಂದು ತಿರುವಿನಲ್ಲಿ ಮತ್ತೆ ಬಂದು ಸೇರಬಹುದು.  ಯಾವುದೋ ಒಂದು ರಸ್ತೆ ಅವರನ್ನು ಪರಸ್ಪರರತ್ತ ಕೊಂಡೊಯ್ಯಬಹುದು ಎನ್ನುವ ಕ್ಷೀಣ ಆಶಯದೊಂದಿಗೆ ಕವಿತೆ ಮುಗಿಯುತ್ತದೆ.  ಈ ಗೀತೆಯನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದಾರೆ.  ಈ ತಿರುವಿನಲ್ಲಿ ಹೊರಳುತ್ತವೆ  ಕೆಲವು ಆಲಸ ಹೆಜ್ಜೆಯ ದಾರಿಗಳು  ಕೆಲವು ತೀವ್ರಗತಿಯ ರಸ್ತೆಗಳು  ಕಲ್ಲು ಗೋಪುರಗ...