ಸ್ಮರಣೆಯೊಂದೇ ಸಾಲದೇ?
ಗೆಳೆಯ ಸುಧೀಂದ್ರ ಕನ್ನಡ ಲೇಖಕರ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಾನೆ. ಇದು ಬಹಳ ಸಂತೋಷದ ಸಂಗತಿ. ಅವನು ನಿರಂಜನ ಮತ್ತು ಅನುಪಮಾ ಅವರನ್ನು ಕುರಿತು ಮಾತಾಡಿದ್ದು ಸ್ವಾರಸ್ಯಕರವಾಗಿದೆ. ಕೆಲವು ಖಾಸಗೀ ನೆನಪುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ನಿರಂಜನ ಮತ್ತು ಅನುಪಮಾ ಅವರ ಸ್ಮರಣೆ ಎಂದಿಗೂ ಚೇತೋಹಾರಿ. ನಮ್ಮ ತಂದೆಗೆ ನಿರಂಜನ ಹತ್ತಿರದ ಗೆಳೆಯರು. ಒಂದು ಕಾಲದಲ್ಲಿ ಇಬ್ಬರೂ ಕನ್ನಡ ಪತ್ರಿಕೆಗಳಿಗೆ ಬರೆದವರು. ಆದರೆ ನನ್ನ ತಂದೆಯವರ ಒಲವು ಇಂಗ್ಲಿಷ್ ಬರವಣಿಗೆಯಲ್ಲಿ ಹೆಚ್ಚಿತ್ತು. ನಿರಂಜನ ದಂಪತಿಗಳ ಮದುವೆಯಲ್ಲೂ ನಮ್ಮ ತಂದೆ ಒಂದು ಸಣ್ಣ ಪಾತ್ರ ವಹಿಸಿದ್ದರು. ನನ್ನ ತಾಯಿಗೆ ಅನುಪಮಾ ಅವರು ಗೆಳತಿಯಾಗಿದ್ದರು. ಒಮ್ಮೆ ಅವರಿಗೆ ಚಿಕಿತ್ಸೆ ಕೂಡಾ ನೀಡಿದ್ದರು. ನಮ್ಮ ತಂದೆ ದೆಹಲಿಗೆ ವರ್ಗವಾಗಿ ಹೋದಾಗ ಐದು ವರ್ಷಗಳ ಕಾಲ ಸಂಪರ್ಕಗಳು ಕಡಿಮೆಯಾದವು. ಆಗ ಇಂದಿನಂತೆ ಫೋನ್, ಸೋಷಿಯಲ್ ಮೀಡಿಯಾ ಇವೆಲ್ಲಾ ಇರಲಿಲ್ಲ. ಪತ್ರ ವ್ಯವಹಾರವೊಂದೇ ಆಗಿದ್ದ ಸಂಪರ್ಕ ಸಾಧನ! ನಾವು ಮರಳಿ ಬೆಂಗಳೂರಿಗೆ ಬಂದಾಗ ಅವರು ನಮ್ಮ ತಂದೆಗೆ ವಿಮರ್ಶೆಗಾಗಿ ಕಳಿಸಿದ ಜ್ಞಾನಗಂಗೋತ್ರಿಯ ಸಂಪುಟಗಳನ್ನು ಓದುತ್ತಾ ನಾನು ಬೆಳೆದೆ. ಅಂಥ ದೊಡ್ಡ ಪ್ರಮಾಣದ ವಿಶ್ವಕೋಶದ ಸಂಪಾದನೆಯ ಹೊಣೆಯನ್ನು ಹೊರುವುದು ನಿರಂಜನ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಆದರೆ ಕೆಲಸದ ಒತ್ತಡ ಅವರ ಮೇಲೆ ಹೆಚ್ಚಾಯಿತು. ಸ...