ನಿನಗೆ ನಾನೇನನ್ನು ಕೊಡಲಿ ಪ್ರತಿಯಾಗಿ?
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಾನೆಟ್ 8 ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಕನ್ನಡಕ್ಕೆ : ಸಿ. ಪಿ. ರವಿಕುಮಾರ್ ಕವಿತಾಸ್ವಾದನೆ: ಇದು ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಅವರ "ಸಾನೆಟ್ಸ್ ಫ್ರಂ ದ ಪೋರ್ಚುಗೀಸ್" ಸಂಗ್ರಹದ ಎಂಟನೇ ಸಾನೆಟ್. ಇದಕ್ಕೆ ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನಗೆ ಸಿಕ್ಕ ಪ್ರೇಮಕಾಣಿಕೆಯನ್ನು ಸ್ವೀಕರಿಸುತ್ತಾ ಅದಕ್ಕೆ ಪ್ರತಿಯಾಗಿ ತಾನೇನನ್ನು ಕೊಡಲೆಂದು ಚಿಂತಿಸುತ್ತಾಳೆ. ನಿನಗೆ ನಾನೇನನ್ನು ಕೊಡಲಿ ನೀನಿತ್ತ ರಾಜೋಚಿತ ಉಡುಗೊರೆಗಳ ಪ್ರತಿಯಾಗಿ? ತೆರೆದು ಹೃದಯದ ಕಪಾಟು ಹಾಸಿರುವೆ ಹೊಳೆವ ಬಂಗಾರದ ತಾಟು, ಹರಡಿರುವೆ ಅದರೊಳಗೆ ನಿಷ್ಕಳಂಕ ರತ್ನಖಚಿತ ಪ್ರೇಮಾಭರಣಗಳನ್ನು ನನ್ನಂತಹವಳಿಗಾಗಿ, ಬಿಗಿದು ಕೊರಳು ಸ್ವೀಕರಿಸುವೆಯಾ ಎಂದು ಕೇಳುತ್ತಿರುವೆ! ಕಠಿಣ ಹೃದಯವೇ ನನ್ನದು? ಕೃತಘ್ನಳೇ ನಾನು? ಕೃಪಣ ಮನದವಳೇ ಪ್ರತಿಯಾಗಿ ಮರಳಿ ಏನನ್ನೂ ನೀಡದಿರಲು? ಕೃಪಣತನವಲ್ಲ, ದಟ್ಟದಾರಿದ್ರ್ಯವೆನ್ನುವುದು ಮೇಲು, ಕೇಳು ಎಲ್ಲವನ್ನೂ ಬಲ್ಲ ದೈವವನ್ನು. ಆ ದೇವರಿಗೆ ಗೊತ್ತು, ನಿರಂತರ ಸುರಿಸಿ ಕಳೆದುಕೊಂಡಿರುವೆ ಹೃದಯದೆಲ್ಲ ಮುತ್ತು, ಮಾಸಿಹೋಗಿವೆ ಕಂಬನಿಯಲ್ಲಿ ಜೀವನದ ಬಣ್ಣಗಳು! ...