ಕವಿ ತೆರೆದ ಬಾಗಿಲು
ಸಿ. ಪಿ. ರವಿಕುಮಾರ್ ಕೆ. ಎಸ್. ನರಸಿಂಹಸ್ವಾಮಿ ಅವರ ನೂರನೇ ಹುಟ್ಟುಹಬ್ಬವನ್ನು ಇವತ್ತು ಆಚರಿಸಲಾಗುತ್ತಿದೆ. ಅವರನ್ನು ನಾನು ಸ್ವಲ್ಪ ಹತ್ತಿರದಿಂದ ನೋಡಿದ್ದರಿಂದ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸುತ್ತಿದೆ. ನ ನ್ನ ತಂದೆ ಸಿ.ಎಚ್. ಪ್ರಹ್ಲಾದರಾವ್ ಅವರಿಗೆ ಕೆ. ಎಸ್. ನ. ಅವರ ಪರಿಚಯವಿತ್ತು. ನಾವು ಆಗ ಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು; ನಮ್ಮ ತಂದೆ ತಮ್ಮ ಕೆಲಸದಿಂದ ನಿವೃತ್ತಿಯಾಗುವ ಕೆಲವು ವರ್ಷಗಳ ಹಿಂದೆ ಸ್ವಂತ ಮನೆ ಕಟ್ಟಿಸುವ ಯೋಚನೆ ಮಾಡಿದರು. ಮನೆಯ ಕೆಲಸ ಪ್ರಾರಂಭವಾಗಿತ್ತು. ಕೆ. ಎಸ್. ನ. ಕೂಡಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಏಜೀಸ್ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ನಮ್ಮ ತಂದೆ ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪ್ರತಿದಿನ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಸರಕಾರೀ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಒಂದು ವಿಶೇಷ ಬಸ್ ಹೊರಡುತ್ತಿತ್ತು. ನಮ್ಮ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಸಂಜೆ ಕೆ. ಎಸ್. ನ. ಮತ್ತು ಇನ್ನೊಬ್ಬ ಕವಿ-ಮಿತ್ರರಾದ ಹಿ. ಮ. ನಾಗಯ್ಯ ಇಬ್ಬರೂ ಬಂದಿದ್ದು ನನಗೆ ನೆನಪಿದೆ. ಕೆ. ಎಸ್. ನ. ಅವರದ್ದು ಯಾವಾಗಲೂ ಒಂದೇ ಬಗೆಯ ಉಡುಗೆ. ಬಿಳಿ ಜುಬ್ಬಾ, ಬಿಳಿ ಪಂಚೆ. ನೆರೆಯುತ್ತಿದ್ದ ದಟ್ಟವಾದ ಕೂದಲು. ಕನ್ನಡ...