ಯುಕ್ರೇನಿನಲ್ಲಿ ಕ್ರಿಸ್ಮಸ್ ೨೦೨೨
( ಐವಾನ್ ಯರ್ಚಕ್ (ಯುಕ್ರೇನ್) ಅವರ ಕ್ರಿಸ್ಮಸ್ ೨೦೨೨ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ) ಯುದ್ಧಕಾಲದ ಆಕಾಶದಲ್ಲಿ ಹೊಳೆಯುವುದು ತಾರೆಯಲ್ಲ ಬಿದ್ದ ಕ್ಷಿಪಣಿಗೆ ಇಂಥದ್ದೆಂಬ ಯಾವ ಗುರಿಯಿಲ್ಲ ಸದ್ದಾದರೆ ಈಗೀಗ ಬೆಚ್ಚುತ್ತಿಲ್ಲ ಮಕ್ಕಳು; ಹೆದರುವರು ಶುದ್ಧ ಶಾಂತಿಯು ನೆಲೆಸಿದಾಗ, ನಡುಗದೆ ಇದ್ದಾಗ ಬಂಕರು. ಚಳಿಯಲ್ಲಿ ನಡುಗುತ್ತಾ ಅಮ್ಮನ ಬಳಿ ಕೂತ ಮಗು ಕೇಳುವುದು ಕ್ರಿಸ್ಮಸ್ ಯಾವಾಗ ಎಂದು; ಪಾಳು ನಗರದ ನಡುವೆ ವಿಲಕ್ಷಣ ವಿಷಲ್ ಕೂಗು, ಬೀಳುತ್ತಿದೆ ಎಲ್ಲೋ ಭದ್ರ ಕಟ್ಟಡ ಇನ್ನೊಂದು. ಇಂದು ನಡೆದಿದೆ ನೆಲಮಾಳಿಗೆಯಲ್ಲಿ ಒಂದು ಪವಾಡ ಅಂಧಕಾರದ ನಡುವೆ ಹಚ್ಚಿಟ್ಟ ಹಾಗೊಂದು ದೀವಿಗೆ ಬಂದಿದೆ ಧರೆಗೊಂದು ಮಗು, ನುಡಿದಂತೆ ಪ್ರವಾದ - ನಂದಿದ್ದ ಹಣತೆ ಮತ್ತೊಮ್ಮೆ ಹತ್ತಿಕೊಂಡಂತೆ ಕಾವಿಗೆ. ಪ್ರಶ್ನೆ ಕೇಳಿದ ಮಗುವಿನ ತಲೆ ನೇವರಿಸಿ ತಾಯಿ ಕ್ರಿಸ್ಮಸ್ ಬರುತ್ತದೆ ಮಗು, ಭರವಸೆಯಿಂದ ಕಾಯಿ. ಚಿತ್ರಕವಿತೆ: ಸಿ. ಪಿ. ರವಿಕುಮಾರ್