ಪೋಸ್ಟ್‌ಗಳು

Hope ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭರವಸೆ

ಇಮೇಜ್
 ಮೂಲ: ರೋಸ್ ಮೆರಿ ವಾಹ್ತೋಲಾ ಟ್ರಾಮರ್ ಅನುವಾದ: ಸಿ ಪಿ ರವಿಕುಮಾರ್  ಭರವಸೆಯ ಕಿಸೆಯಲ್ಲಿವೆ ಸಣ್ಣ ರಂಧ್ರಗಳು; ಜಾರಿ ಬೀಳುವ  ತುಣುಕುಗಳು ತೋರುತ್ತವೆ ನಮಗೆ ಆತಂಕವಾದಾಗ ಅನುಸರಿಸಲು ದಾರಿ. ಭರವಸೆಯ ಗುಟ್ಟು ಏನೆಂದರೆ ಅದಕ್ಕೆ ಗೊತ್ತೇ ಇಲ್ಲ ಯಾವುದೆಂಬುದು ಗುರಿ. ಅದಕ್ಕೆ ಗೊತ್ತಿರುವುದು ಇಷ್ಟೇ, ಪ್ರತಿಯೊಂದು ದಾರಿಯ ಪ್ರಾರಂಭವೂ ಒಂದು ಹೆಜ್ಜೆಯ ಮುಂದೆ  ಇನ್ನೊಂದನ್ನು ಇಟ್ಟಾಗ ಎಂದಷ್ಟೇ.

ಇಷ್ಟೆಲ್ಲದರ ನಡುವೆ

ಇಮೇಜ್
ಇಷ್ಟೆಲ್ಲದರ ನಡುವೆ ಮೂಲ: ಟಾಮ್ ಹಿರಾನ್ಸ್ ಇಷ್ಟೆಲ್ಲದರ ನಡುವೆ ಅರಳುತ್ತವೆ ಹೂ ಯಥಾಪ್ರಕಾರ ಚಂದ್ರೋದಯ ಸೂರ್ಯೋದಯಕ್ಕಿಲ್ಲ ಸಂಚಕಾರ ಮಕ್ಕಳು ಮುಗುಳ್ನಗುತ್ತವೆ ದೊಡ್ಡದಾಗಿ ನಿಷ್ಕಾರಣ ಮತ್ತು ಅಸಂಭವ ದಾಟಿ ಎರಡು ಹೃದಯಗಳ ಮಿಲನ ಅಪರಿಚಿತರು ಹಂಚಿಕೊಳ್ಳುತ್ತಾರೆ ಕಡ್ಡಿಪೆಟ್ಟಿಗೆ, ನಗೆ  ನೀರಿನ ಮೇಲೆ ಆಡುತ್ತವೆ ಬೆಳಕಿನ ಕೋಲುಗಳು ಮೆಲ್ಲಗೆ ಅನಿರೀಕ್ಷಿತ ಬೀದಿಗಳಲ್ಲಿ ಅರಳುತ್ತದೆ ಔದಾರ್ಯ  ನೆರೆ, ಭೂಕಂಪನಗಳ ನಡುವೆ  ಪುನರ್ವಸತಿ ಕಾರ್ಯ ಬದುಕಿನ ಕಡೆಗೆ ವಾಲುತ್ತದೆ ಜೀವನ ಎಲ್ಲವನ್ನೂ ಸಾವು ತೆಗೆದುಕೊಂಡರೂ ಆಫೋಷನ ನಡುವೆ ಇದ್ದವು ಎಷ್ಟೊಂದು ಅಮೂಲ್ಯ ಕ್ಷಣ ಎಲ್ಲವೂ ಪ್ರಕಾಶಮಾನವಾಗಿ ಜಗಮಗ ನಾವು ಮತ್ತೊಮ್ಮೆ  ನಮ್ಮ ಈ ಜಗ ವನ್ನು ಪ್ರೀತಿಸುವಂತೆ ಇತ್ತು ಜೀವನ.

ಏನೇ ಮಾಡಿದರೂ

ಇಮೇಜ್
 ಏನೇ ಮಾಡಿದರೂ  ಮೂಲ: ಮ್ಯಾಕ್ಸ್ ಏರ್ಮನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಏನೇ ಮಾಡಿದರೂ ಮಾಡದಿದ್ದರೂ ನೀನು ಅನುಸರಿಸಬೇಕಾದ ವ್ರತವೊಂದಿದೆ: ಸಂತೋಷ. ಆಗಾಗ ಒಮ್ಮೆ ಯಾವ ಭಿಡೆಯೂ ಇಲ್ಲದೆ ಮಾಡು ಜೋರಾಗಿ ನಕ್ಕುಬಿಡುವ ಕೆಲಸ. ಎಷ್ಟೇ ಶಪಿಸಿದರೂ ಜಗತ್ತಿನ ಕೆಡುಕನ್ನು ನೀನು, ನೆನಪಿರಲಿ ಜಗತ್ತು ಕೆಟ್ಟುಹೋಗಿಲ್ಲ ಪೂರ್ತಿ; ಎಲ್ಲೋ ಮಕ್ಕಳು ಇನ್ನೂ ಆಟವಾಡುತ್ತಿವೆ ನಿನ್ನ ವೃದ್ಧಾಪ್ಯವೂ ಮಕ್ಕಳಾಟಗಳ ಕಲಿಯಲಿ; ನೆನಪಿರಲಿ ಹೆಣ್ಣುಗಳು ಇನ್ನೂ ನಲಿಯುತ್ತವೆ ಗಂಡುಗಳ ಧೀರೋದಾತ್ತ ಹೃದಯಗಳಲ್ಲಿ. ನೆನಪಿರಲಿ ಎಷ್ಟೇ ಅಲೆದಾಡಿದರೂ ಮಾನವ ಎಲ್ಲೆಲ್ಲೂ ತುಳಿಯುತ್ತಾ ಅವಿಶ್ರಾಂತ ಹೆಜ್ಜೆ ಜಗದ ಬಿರುಗಾಳಿ ಮಳೆ ಸಿಡಿಲು ಮಿಂಚುಗಳಿಂದ ನೀಡುವುದು ಒಲವೆಂಬ ಮನೆ ನಿನಗೆ ರಕ್ಷೆ.

ಜೀವನ

ಇಮೇಜ್
 ಜೀವನ ಮೂಲ ಕವಿತೆ: ಹೆನ್ರಿ ವ್ಯಾನ್ ಡೈಕ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ವರುಷದಿಂದ ವರುಷಕ್ಕೆ ಬದುಕಬಯಸುವುದೆನ್ನ ಚಿತ್ತ ಸದಾ ಮುಂದಕ್ಕೆ ನೋಡುತ್ತಾ, ಆತ್ಮ ಪಶ್ಚಾತ್ತಾಪರಹಿತ, ಮುನ್ನುಗ್ಗದೇ ಗುರಿಯತ್ತ, ಗುರಿಯಿಂದ ಎಂದೂ ಆಗದೆ ವಿಮುಖ, ಭೂತದ ಕತ್ತಲಲ್ಲಿ ಕಳೆದುಹೋದದ್ದಕ್ಕೆ ಪಡದೆ ದುಃಖ, ಮೇಲೇಳುವ ಮುನ್ನವೇ ಭವಿಷ್ಯದ ಪರದೆ ಮುಂದೇನು ಎಂದು ಇಂದೇ ಭೀತನಾಗಿರದೆ, ಸಂತಸದಿಂದ  ಕಟ್ಟುತ್ತಾ ವಯೋಮಾನಕ್ಕೆ ತೆರಬೇಕಾದ ತೆರಿಗೆ ಲಗುಬಗೆಯ ಹೆಜ್ಜೆ ಇಡುತ್ತಾ ಬರುವ ವರುಷದ ಕಡೆಗೆ. ಮೇಲ್ಮುಖವೋ ನತಶಿರವೋ ಮುಂದಿರುವ ಪಥ  ಒರಟೋ ನಯವೋ! ಪಯಣ ಹೇಗಿದ್ದರೂ ಸುಖ! ಹುಡುಕುತ್ತ ಸಾಗುವೆ ನಾನು ಬಾಲ್ಯದಿಂದಲೂ ಬಯಸಿದ್ದನ್ನೇ, ಹೊಸಮೈತ್ರಿ, ಉತ್ತುಂಗ ಸಾಹಸ, ಮತ್ತೊಂದು ಮುಕುಟ! ಹುಡುಕಾಟದ ಕೆಚ್ಚು  ಹೃದಯದಲ್ಲಿರುವುದು ಎಂದೆಂದಿಗೂ. ಆಶಿಸುವೆ ಅತ್ಯುತ್ತಮವಾಗಿರಲಿ ಪಯಣದ ಕೊನೆಯ ತಿರುವು

ಕತ್ತಲ ಹಣತೆ

ಇಮೇಜ್
ಕತ್ತಲ ಹಣತೆ ಮೂಲ: ಹರಿವಂಶರಾಯ್ ಬಚ್ಚನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಆಗಸ್ಟ್ ಹದಿನೈದು ೨೦೨೩ ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಕಮನೀಯ ಮಂದಿರವನ್ನು ಕಟ್ಟಿದ್ದೆಯಾ ಕಲ್ಪನೆಯ ಕೈಯಿಂದ? ಭಾವನೆಯ ಕೈಯಿಂದ ಅದರೊಳಗೆ ಬಂಧಿಸಿದ್ದೆಯಾ ಸ್ವಚ್ಛಂದ?ಕನಸುಗಳ ಕೈಯಿಂದ ಸಿಂಗರಿಸಿದ್ದೆಯಲ್ಲ ಬಹು ಅಂದ?ಅಲ್ಲಿ ಹರಡಿದ್ದೆಯಾ ಸ್ವರ್ಗದ ಸೌರಭದ ಸಿರಿಗಂಧ? ಮುರಿದು ಬಿದ್ದಿತೆ ಸೌಧ? ಆಯ್ದು ಇಟ್ಟಿಗೆ ಕಲ್ಲು ಅದರಿಂದ ಕಟ್ಟಿಕೊಳ್ಳಲು ಕಷ್ಟವೇ ಸರಳ ಶಾಂತಿ ಕುಟೀರವೊಂದ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ನಭನೀಲ ನೀಲಿಮೆಯಿಂದ ಮಾಡಿದ ಮಧುಪಾತ್ರೆಯೋ ಮನಮೋಹಕ ಮುಗಿಲ ಕಂಬನಿಯಲ್ಲಿ ನೆಂದು ಹೊಳೆಯುತ ಲಕಲಕ ಮಧುಪಾತ್ರೆಯೊಳು ನವಮೇಘದೊಲು ತುಳುಕುವ ದ್ರಾವಕ ಉಷೆಯ ಕೋಮಲ ಪ್ರಥಮ ಕಿರಣದ ಬಣ್ಣದ ಸಿಹಿ ಪಾನಕ ಮುರಿದು ಹೋದರೆ ಪಾತ್ರೆ ಜೋಡಿಸಿ ಎರಡು ಕೈಗಳ ಅಂಜಲಿ ಒಂದು ನಿರ್ಮಲ ನೀರಧಾರೆಯ ಕುಡಿಯಲು ಯಾವ ನಿರ್ಬಂಧ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಹಿಂದೆ ಜೀವನದಲ್ಲಿ ಎಂದೂ ಹತ್ತಿರ ಬರಲಿಲ್ಲ ಚಿಂತೆ ಕತ್ತಲೆಯ ಮಾತಿರಲಿ ಕರಿಛಾಯೆಯೂ ಬೀಳಲಿಲ್ಲ ಎಂಬಂತೆ! ಕಣ್ಣಲ್ಲಿತ್ತು ಮಾದಕತೆ, ಮಾತುಗಳಲ್ಲಿ ಮೋದದ ಕವಿತೆ ಗುಡುಗಿನಂತಹ ನಗೆಗೆ ನಾಚುತ್ತಿತ್ತು ಕಾರ್ಮೋಡಗಳ ಸಂತೆ ಕಳೆದುಕೊಂಡು ಇದೆಲ್ಲ ಉಲ್ಲಾಸವೇ ಕಳೆದುಹೋದಂತೆ, ಆದರೆ ಅಸ್ಥಿರತೆಯ ಈ ಸಮಯದಲ್ಲಿ ಮುಗುಳುನಗಲು ಯಾರ ನಿರ್ಬಂಧ? ಇರುಳು ಕತ್ತಲುಮಯವಾದ...

ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು,

ಇಮೇಜ್
 (ಎಷ್ಟೇ ಕಷ್ಟಪಟ್ಟರೂ ಆಗುತ್ತಿಲ್ಲ ಎಂದು ಹತಾಶರಾದವರಿಗೆ) ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು, ಪಟ್ಟೆನೆಷ್ಟು ಕಷ್ಟ, ತೊಟ್ಟೆನೆಷ್ಟು ಗಾಯಗಳು ಆದರೂ ಬೀಳಲೊಲ್ಲ ಶತ್ರು, ಕಾಣನು ಸೋಲು ಎಲ್ಲವೂ ಯಥಾಸ್ಥಿತಿ, ಬದಲಾಗಿಲ್ಲ ಚೂರೂ. ಭರವಸೆಗಳು ಹುಸಿಯಾದರೆ, ಭಯಗಳೂ ಹುಸಿ ಇರಬಹುದು ನಿನಗೆ ಕಾಣದಂತೆ ಹೊಗೆಯ ಹಿನ್ನೆಲೆಯೊಳಗೆ ನಿನ್ನ ಪಕ್ಷದವರು ಹಿಮ್ಮೆಟ್ಟಿಸಿ ಶತ್ರುಪಡೆ ಆಗಲೇ ಮೈದಾನವನು ವ್ಯಾಪಿಸಿಕೊಂಡಿರಬಹುದು ಗೆದ್ದು. ಇಲ್ಲಿ ಬಲಹೀನ ಅಲೆಗಳು ಯತ್ನಿಸಿ ಸೋತರೂ ಪೂರಾ ಅಂಗುಲವೂ ಬಿಟ್ಟುಕೊಡದ ಮಹಾಪರ್ವತ ಇನ್ನೆಲ್ಲೋ ಸೋತಿರಬಹುದು  ಕಣಿವೆಗಳಲ್ಲಿ, ತೀರ್ಥ ಎಳೆಯಾಗಿ ಒಳನುಗ್ಗಿ ಉಂಟಾಗಿರಬಹುದು ಮಹಾಪೂರ. ಪೂರ್ವಮುಖಿ ಕಿಟಕಿಗಳಿಂದಷ್ಟೆ ಬಾರದು ಬೆಳಕು ಮೇಲೇರ ತೊಡಗಿದಾಗ ಸೂರ್ಯ ಒಳಬರುವ ನಸುಬೆಳಕು, ಕಂಡರೂ ಕಾಣದಂತಿರುವ ಬೆಳಕು, ನೋಡಲ್ಲಿ ಪಶ್ಚಿಮದಲ್ಲಿ ತಂದಿಹುದು ಬೆಳಗು. ಮೂಲ: ಆರ್ಥರ್ ಹ್ಯೂ ಕ್ಲೋ ಅನುವಾದ: ಸಿ. ಪಿ. ರವಿಕುಮಾರ್

ಕಾಡುದಾರಿಯ ಹಾಡು

ಇಮೇಜ್
 (ಆಸ್ಕರ್ ಫಿಗುವರ್ಡೋ ಅವರ ಒಂದು ವರ್ಣ ಚಿತ್ರ ನೋಡಿ ಬರೆದ ಕವಿತೆ. ಇಲ್ಲಿ ಕೊಟ್ಟಿರುವ ಚಿತ್ರವನ್ನು ಬರೆದಿದ್ದು ಏಐ) ಎಷ್ಟೋ ಜನ ತುಳಿದು ಹೋದ ಹಾದಿಯನ್ನೇ ನೀನೂ ತುಳಿ ಕಷ್ಟವೆನ್ನಿಸಿದಾಗ ಮೇಲೇರುವಾಗ ಏದುಬ್ಬಸ ಪಡುವಾಗ ಅಷ್ಟು ಹೊತ್ತು ನಿಂತು ನೋಡು ಇಕ್ಕೆಲದಲ್ಲೂ ಹಬ್ಬಿ ಸುಸ್ತಾದ ಪಯಣಿಗನಿಗೆ ನೆರಳು ಕೊಡುವ ವನರಾಜಿ. ಮತ್ತೆ ಬರುವೆಯೋ ಇಲ್ಲವೋ ಈ ದಾರಿಯಲ್ಲಿ! ಸುತ್ತಲೂ ನೋಡು,ಪಕ್ಕದಲ್ಲಿಟ್ಟು ನಿನ್ನ ಸಂವಹನ ಸಾಧನ! ಗುಟ್ಟುಗಳೆಷ್ಟೋ ಒಳಗಿಟ್ಟುಕೊಂಡು ಹೊರಗೆ ನಗುತ್ತಾ ನಿತ್ಯವೂ ವಾಟ್ಸಾಪ್ ಇತ್ಯಾದಿಗಳಲ್ಲಿ ನಡೆಸುವ ಸಂಭಾಷಣೆ ವ್ಯರ್ಥ! ಅಗೋ ಕೇಳು.  ಕಿವಿಗೊಟ್ಟು ಏನು ಹೇಳುತ್ತಿದೆ  ಎತ್ತರದ ಮರ! ಅದೆಷ್ಟು ಹಕ್ಕಿ ಹುಳಹುಪ್ಪಟೆಗಳ ಆಗರ! ಎಷ್ಟು ಗಿಳಿ ಗಿಡುಗ ಸಂಸಾರ ಹೂಡಿವೆಯೋ ಇದರೊಳಗೆ ಹುಟ್ಟಿವೆಯೋ ಎಷ್ಟು ಮರಿ, ಜೀವಗಳೆಷ್ಟು ಸತ್ತಿವೆಯೋ! ಅತ್ತ ನೋಡು ಸಂಭ್ರಮಿಸುತ್ತಿದೆ  ಹೂ ಮುಡಿದ ಬಳ್ಳಿ ಉತ್ತರವಿಲ್ಲ ಏನು ಕಾರಣವೆಂಬ ಪ್ರಶ್ನೆಗೆ ಯಾರಲ್ಲಿ

ತಾಯಿ

ಇಮೇಜ್
 ತಾಯಿ ಟರ್ಕಿಯ ಭೂಕಂಪದ ನಾಲ್ಕು ದಿವಸಗಳ ತರುವಾಯ ಸಿಕ್ಕಿದ್ದಾರೆ ಜೀವಂತವಾಗಿ ಕಲ್ಲುಮಣ್ಣುಗಳ ತಳದಲ್ಲಿ ಹೊಕ್ಕಳುಬಳ್ಳಿಗೆ ಅಂಟಿಕೊಂಡಿದ್ದ ನವಜಾತ ಶಿಶು ಮತ್ತು ಪಕ್ಕದಲ್ಲಿ ಇನ್ನೂ ಜೀವಕ್ಕೆ ಅಂಟಿಕೊಂಡಿದ್ದ  ಅದರ ತಾಯಿ. ಮೂಳೆ ಕೊರೆವ ಚಳಿಯಲ್ಲಿ ಹೇಗೆ ಕಾಪಾಡಿದಳೊ ಎಳೆಯ ಬಾಳನ್ನು! ಎದೆಗವಚಿಕೊಂಡು, ಕತ್ತಲೆಯ ಕಂಬಳಿಯನ್ನೇ ಸೀಳಿ ಹೊದ್ದಿಸಿಕೊಂಡು! ತನ್ನೆದೆಯ ಹಾಲೇ ಅಮೃತವೆಂದು ಸೋಲನ್ನೊಪ್ಪದೆ ಹಾಡುತ್ತಾ ಕ್ಷೀಣದನಿಯಲ್ಲಿ ಹಳ್ಳುಳ್ಳಾಯಿ. ಎಲ್ಲಿದ್ದಾನೋ ಮಗುವಿನ ತಂದೆ! ಹುಡುಕುತ್ತಿರುವನೋ ಇಲ್ಲ ತತ್ತರಿಸಿಹೋದನೋ ವಿಧಿಯ ವಜ್ರಾಘಾತಕ್ಕೆ? ತಲ್ಲಣಿಸಿ ಅಳಲು ತಾಯಿಗೆ ಪುರುಸೊತ್ತೆಲ್ಲಿ! ಕರುಳಿನ ಬಳ್ಳಿಯನ್ನು ಕಾಪಾಡುವ ಹೊರೆಹೊತ್ತ ಏಕಧ್ಯೇಯಿ. ಕಪ್ಪುತೆರೆ ಆವರಿಸುತ್ತಿದೆ ಕಣ್ಮುಂದೆ, ನಿದ್ರೆಯ ಸುಖದ ಸುಪ್ಪತ್ತಿಗೆಯು ಕರೆಯುತ್ತಿದೆ, ಆದರೆ ಕಣ್ಮುಚ್ಚಲು ಅಳುಕು! ತಪ್ಪಿ ಕಣ್ತೆರೆಯದೇ ಹೋದರೆ ಏನಾದೀತು ಇದರ ಗತಿ! ಅಪ್ಪಿಕೊಂಡು ನನ್ನನ್ನೇ ನಂಬಿಕೊಂಡಿದೆ ಬಡಪಾಯಿ! ದೂರದಲ್ಲೆಲ್ಲೋ ಕುಟ್ಟಿದ ಸದ್ದು ಕೇಳುತ್ತಿದೆ, ಅರೆಮರುಳೇ? ತೂರಿ ಬರುತ್ತಿದೆ ಎಲ್ಲಿಂದಲೋ ಬೆಳಕು, ಸ್ವರ್ಗದ ಬಾಗಿಲೇ? ಯಾರೋ ಮೇಲೆತ್ತಿಕೊಂಡರು, ಅಂತಿಮಯಾತ್ರೆಯೇ? ನೀರು ಕುಡಿಸುತ್ತಿದ್ದಾರೆ! 'ನೋಡಿ ಇಲ್ಲಿದೆ ಮಗುವಿನ ಬಾಯಿ.' ದಪ್ಪ ಕಾಂಕ್ರೀಟ್ ಕೆಳಗೇನು ಸಿಕ್ಕಿತೆಂಬ ಪ್ರಶ್ನೆಗೆ ಸಪ್ಪಗೆ ನಕ್ಕು ಉತ್ತರಿಸಿದ  ರಕ್ಷಣಾ ಸಿಬ್ಬಂದಿ:  ಇಪ್ಪತ್ತುಸಾವಿರಕ್ಕೂ ಸ...

ಎತ್ತರ

ಇಮೇಜ್
 (ಇನಾರಿ ಕ್ರೋಹ್ನ್ ಅವರ ಚಿತ್ರ ನೋಡಿ ಪ್ರೇರಿತನಾಗಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಎತ್ತರದ ಮರದ ಬುಡದಲ್ಲಿ ನಿಂತು ಹತ್ತಲು ಉತ್ಸುಕನಾದ ಹುಡುಗ. ಪಟ್ಟು ಸಾಹಸ ಪ್ರಯತ್ನಿಸಿ ಸೋತು  ಮತ್ತೊಮ್ಮೆ ಯತ್ನವ ಮಾಡಿ ದಿನವೂ ಹತ್ತನೇ ದಿವಸ ಏರಿಯೇ ಬಿಟ್ಟ ಮರದ ತುತ್ತ ತುದಿಗೆ. ಎದೆಯುಬ್ಬಿಸಿ ನೋಡಿದ ಸುತ್ತಲೂ. ಕಾಣಿಸಿತು ದೂರದಲ್ಲಿ ಹತ್ತಿರದ ಬೆಟ್ಟ. ಬಾ ಎಂದು ಕೈ ಬೀಸಿತು ಇವ ನತ್ತ. ಕಟ್ಟಿಕೊಂಡು ಬುತ್ತಿ ಹೊರಟೇ ಬಿಟ್ಟ ಕಷ್ಟ ಎನ್ನಿಸಿತು, ಆದರೂ ಬಿಡದೆ ಪ್ರಯತ್ನ ಕೊಟ್ಟಕೊನೆಯನ್ನು ಏರಿಯೇ ಬಿಟ್ಟವನು ದಿಟ್ಟಿಸಿದ, ಎಷ್ಟು ಪುಟ್ಟದು ನೆನ್ನೆ ಹತ್ತಿದ ಮರ! ಮತ್ತೊಂದು ದಿಕ್ಕಿಗೆ ತಿರುಗಿದಾಗ ಕಂಡದ್ದೇನು ಅವನು - ಉತ್ತುಂಗ ಗಿರಿಶಿಖರ, ದೇವದಾರುಗಳ ಕಾನು. #ಚಿತ್ರಕವಿತೆ ಸಿ. ಪಿ. ರವಿಕುಮಾರ್ (ಕಾನು - ಕಾನನ, ಕಾಡು)

ಶಾಂತಿ ನಿಕೇತನ

ಇಮೇಜ್
ನೇರಳೆ ಬಣ್ಣದ ಹೂವಿನ ಹೊದರು ನೀಲಾಕಾಶವು ಹಿನ್ನೆಲೆಯಲ್ಲಿ ಹಸಿರುಹುಲ್ಲು, ಮಣ್ಣಿನ ಕಿರುದಾರಿ ಹಳದಿ ಹೂವುಗಳ ರತ್ನಗಂಬಳಿ ಕೇಳಿಸಿತೇ ಮರಗಳ ಮರೆಯಲ್ಲಿ ಯಾವುದೋ ಹಕ್ಕಿಯ ಪ್ರೇಮಾರ್ತ ಕರೆ? ಎಸೆದ ಕಲ್ಲಿಗೆ  ನಗೆತರಂಗ ತರಂಗ ಚಿಮ್ಮಿಸಿ ಮತ್ತೆ ಶಾಂತವಾದಂತೆ ಕೆರೆ ಮತ್ತೆ ನೆಲೆಸುವುದೆಂತೋ ಶಾಂತಿ ಹಾಗೇ ಮರಳಿ ಬರಲಿ ನೆಮ್ಮದಿ ನಮ್ಮ ಬಾಳ್ಗೆ. ಕೊನೆಗೊಳ್ಳಲಿ  ಕೊರೋನಾ ರೋಗರುಜಿನ, ಮತ್ತು ಮಾನವ-ಮಾನವ ದ್ವೇಷ, ರಕ್ತಪಾತ, ಕದನ.

ಪ್ಲವ

ಪ್ಲವವು ತರಲಿ ನವಪಲ್ಲವ ನಮ್ಮೆಲ್ಲರ ಬಾಳಲಿ ಕವಲು ಒಡೆದ ದಾರಿ ಮತ್ತೆ ಒಂದಾಗಿ ಸೇರಲಿ ತವಕ, ಕ್ಷೋಭೆ, ಅನಿಶ್ಚಿತತೆ, ಭೀತಿ ಹಿಂದೆ ಸರಿಯಲಿ ಕವಿತೆಯಲ್ಲಿ ಮತ್ತೆ ಮಾವು ಮಲ್ಲಿಗೆಗಳು ಬಿರಿಯಲಿ. ಕೆಟ್ಟ ಕನಸಿನಿರುಳಿನಂತೆ ಕಳೆದು ಹೋದ ಶಾರ್ವರೀ ಬಿತ್ತಿಹೋದ ಭೀತಿಭಾವ ಕತ್ತಲಂತೆ ಕರಗಲಿ ದಟ್ಟಗಪ್ಪು ಮೋಡದಂಚಿನಲ್ಲಿ ಬೆಳ್ಳಿ ಮಿಂಚಲಿ ಮತ್ತೆ ಸ್ಥೈರ್ಯ ಹುಟ್ಟಿ ಪ್ಲವದ ಕಣ್ಣಿನಲ್ಲಿ ಹೊಳೆಯಲಿ ಒಡೆದ ವಿಶ್ವದಲ್ಲಿ ಮತ್ತೆ ಒಂದೇ ಬಿಂಬ ಮೂಡಲಿ ಒಡಕಲು ಸ್ವರ ಒಂದಾಗಿ ಒಂದೆ ರಾಗ ಹಾಡಲಿ ಕಡೆದ ಕಡಲಿನಲ್ಲಿ ಸುಧೆಯ ಹೊತ್ತು ತರಲಿ ಪ್ಲವ ತಡೆದು ಗಂಟಲಲ್ಲಿ ನಂಜು ಕಾಯುತಿಹನು ಶಿವ! (c) ಸಿ. ಪಿ. ರವಿಕುಮಾರ್, ಏಪ್ರಿಲ್ ೧೩, ೨೦೨೧

ಮಳೆಗಾಲದ ದಿವಸ

ಇಮೇಜ್
ಮೂಲ ಕವಿತೆ: ಎಚ್. ಡಬ್ಲ್ಯೂ. ಲಾಂಗ್ ಫೆಲೋ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ದಿನವಿಡೀ ಕವಿದ ಮೋಡ, ನಡುಕ ಹುಟ್ಟಿಸುವ ಚಳಿ,   ಒಂದೇಸಮ ಬೀಳುವ ಮಳೆ, ಹುಯ್ಲಿಡುವ ರಭಸದ ಗಾಳಿ; ಹೇಗೋ ಅಂಟಿಕೊಂಡಿದೆ ಬಳ್ಳಿ ಶಿಥಿಲ ಗೋಡೆಯಮೇಲೆ - ಗಾಳಿ ಬೀಸಿದಾಗಲೆಲ್ಲಾ  ಉದುರಿಸುತ್ತದೆ ಹಣ್ಣೆಲೆ; ದಿನವಿಡೀ ಕತ್ತಲು, ಮೇಲೆದ್ದರದು ನಿರುತ್ಸಾಹದ ಅಲೆ.  ಹೀಗೇ ನನ್ನ ಬದು ಕು: ಕತ್ತಲು, ನಿರುತ್ಸಾಹ, ಚಳಿ, ಒಂದೇಸಮ ಬೀಳುವ ಮಳೆ, ಹುಯ್ಲಿಡುವ ರಭಸದ ಗಾಳಿ; ಶಿಥಿಲ ಗತಕಾಲಕ್ಕೆ ಅಂಟಿಕೊಂಡರೂ ಆಲೋಚನೆಗಳು     ಹೊಡೆತಕ್ಕೆ ಉದುರಿ ಬೀಳುವ ಯೌವ್ವನದ ಆಶಯಗಳು; ಕತ್ತಲುಮಯ  ದಿನಗಳು;  ಕಟ್ಟಿಕೊಂಡಿದೆ ನಿರುತ್ಸಾಹದ ಬಲೆ.  ಸಾಕು ದುಃಖಿ ಹೃದಯವೇ, ಇನ್ನು ಹಲುಬದಿರು . ಮೋಡಗಳ ಹಿಂದೆ ಇನ್ನೂ ಹೊಳೆಯುತ್ತಿದೆ  ನೇಸರು.  ಎಲ್ಲರಿಗೂ ದೊರೆತದ್ದೇ ದಕ್ಕಿದೆ ನಿನ್ನ ಪಾಲಿಗೂ  ಇರಬೇಕು ಮಳೆಗಾಲ ಪ್ರತಿಯೊಂದು ಬಾಳಿಗೂ   ಒಂದಷ್ಟು ದಿನ  ಕವಿಯಲೇ ಬೇಕಲ್ಲವೆ  ಕತ್ತಲೆ? (c) 2016, ಸಿ. ಪಿ. ರವಿಕುಮಾರ್

ಭರವಸೆ

ಇಮೇಜ್
ಮೂಲ ಹಿಂದಿ ಕವಿತೆ: (ಯಾರದೆಂದು ಗೊತ್ತಿಲ್ಲ) ಅನುವಾದ: ಸಿ. ಪಿ. ರವಿಕುಮಾರ್ ನೀರು ಹಿಮದಗಡ್ಡೆಯಾಗಲು ಸಮಯ ಬೇಕು ಮುಳುಗಿದ ಸೂರ್ಯ ಹೊರಬರಲು ಸಮಯ ಬೇಕು. ಸ್ವಲ್ಪ ಧೈರ್ಯವಿಟ್ಟುಕೋ  ಮನಸ್ಸಿನಲ್ಲಿ - ಇನ್ನಷ್ಟು ಬಲ ಬರಲಿ ನಿನ್ನ ಪ್ರಯತ್ನದಲ್ಲಿ: ತುಕ್ಕು ಹಿಡಿದ ಅದೃಷ್ಟದ ಬಾಗಿಲು ತೆರೆಯಲು ಸಮಯ ಬೇಕು. ಸುಸ್ತಾದರೆ ಸುಧಾರಿಸಿಕೊಂಡು ಮತ್ತೆ ಮೇಲೆದ್ದು ನೂಕು. ಮುಗ್ಗರಿಸಿದಾಗ ಮತ್ತೆ ಮೇಲೇಳಲು ಸಮಯ ಬೇಕು. ನೀನೇ ನೋಡುತ್ತೀಯ, ನಿನ್ನ ಬದುಕಿನಲ್ಲಿ ಮತ್ತೆ ಉಂಟಾಗುತ್ತದೆ ಬೆಳಕು ಮುರಿದ ಮನಸ್ಸು ಮತ್ತೆ ಒಂದಾಗಲು ಸಮಯ ಬೇಕು. ಅಂದಿದ್ದನ್ನು  ನೀನು ಮಾಡಿ ತೋರಿಸುತ್ತೀ ಗೆಳೆಯ!   ಮೋಡ ಗುಡುಗಿದ ಮೇಲೆ ಮಳೆಯಾಗಲು ಸಮಯ ಬೇಕು. ಸಂತೋಷದ ದಿನಗಳು ಬರಲಿವೆ, ಬಂದೇ ತೀರುತ್ತವೆ, ಸ್ವಲ್ಪ ಕಾಯಬೇಕು. ನೋವುದುಃಖಗಳು ಹಠಮಾರಿಗಳು, ಮೇಲೆಬ್ಬಿಸಲು ಸಮಯ ಬೇಕು.

ಚಿಂತೆ, ಬಿಡಿಹೂವ ಮುಡಿದಂತೆ

ಇಮೇಜ್
ಸಿ ಪಿ ರವಿಕುಮಾರ್  ಬಿಡಿಹೂವು ಮುಡಿದ ಸಸಿಗೆ ಏನು ಚಿಂತೆ? ಮಸಿಯಂತೆ ದಟ್ಟವಾಗಿ ಏಳುತ್ತಿರುವ ಇಂಗಾಲದ ಹೊಗೆ ಆಗಸದವರೆಗೂ ಅದರ ವ್ಯಾಪಕತೆ ಹಾರಾಡುತ್ತಿವೆ ಕ್ರೌರ್ಯ, ದ್ವೇಷ, ಅರಾಜಕತೆ ಪಂಡೋರಳ ಪಟ್ಟಿಗೆಯಿಂದ ಹೊರಬಂದ ಟೆರೋಸಾರ್ಗಳಂತೆ ಗ್ರೀಸ್ ದೇಶದಲ್ಲಿ ಇನ್ನೊಂದು ದುರಂತ ಕತೆ ... ನುಂಗಿಕೊಂಡು ಅರಳಿದೆಯಲ್ಲ ನಗೆಮುಗುಳು ಏನು ನಿನ್ನ ರಹಸ್ಯ? ಕಿವಿಯಲ್ಲಿ ಹೇಳು.