ಈ ವಿಶ್ವವೊಂದು ನಾಟಕರಂಗ
ಮೂಲ - ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಈ ವಿಶ್ವವೊಂದು ನಾಟಕರಂಗ, ಎಲ್ಲ ಗಂಡುಹೆಣ್ಣುಗಳೂ ಅಲ್ಲಿ ಪಾತ್ರಧಾರಿಗಳು; ಪ್ರತಿಯೊಬ್ಬರಿಗೂ ಇದೆ ಅವರವರ ಪ್ರವೇಶ-ಪ್ರಸ್ಥಾನ, ಒಬ್ಬ ಮಾನವನಿಗೆ ಒಂದಲ್ಲ ಹಲವಾರು ಪಾತ್ರ: ಅವನ ಏಳು ವಯೋಮಾನಗಳು ಏಳು ನಾಟಕಾಂಕಗಳು. ಮೊದಲನೆಯ ಅಂಕದಲ್ಲಿ ಹಸುಗೂಸು: ತಾಯ ಕಂಕುಳಲ್ಲಿ ಕಾಲ ಕಳೆಯುವುದು ಬಿಕ್ಕುತ್ತ ಕಕ್ಕುತ್ತ. ಮುಂದೆ ಶಾಲಾಬಾಲಕ: ಹೊಳೆವ ಕಣ್ಣಿನ ಸುಕುಮಾರ ಮುಖ ಪಾಟೀಚೀಲ ಹೊರಲಾರದೆ ಹೊತ್ತು ಬಸವನ ಹುಳು ವೇಗದಲ್ಲಿ ಹೊರಟ ಗಮ್ಮತ್ತು. ನಂತರ ಪ್ರೇಮಿ, ಹಬೆಯ ಒಲೆಯಂತೆ ಉಸ್ಸೆಂದು ಆಗಾಗ ನಿಟ್ಟುಸಿರು; ವಿರಹಗೀತೆ ಪ್ರೇಮಿಕೆಯ ಕುಡಿಹುಬ್ಬನ್ನು ನೆನೆದು. ಮುಂದೆ ಹೋರಾಡಲು ಹೊರಟ ಹುರಿಯಾಳು, ಚಿರತೆಯ ಮೀಸೆ, ಬಾಯಲ್ಲಿ ವಿಚಿತ್ರ ಆಣೆಮಾತುಗಳು, ಹೊಟ್ಟೆಯಲ್ಲಿ ಮಾತ್ಸರ್ಯದ ಕಿಚ್ಚು ಭುಗಿಲೆದ್ದು ಸಿಟ್ಟು ಜಗಳಕ್ಕೆ ತಿರುಗುವುದು; ಗೌರವವು ಕೈಗೆ ಸಿಕ್ಕದ ನೀರಗುಳ್ಳೆ ಅದಕ್ಕಾಗಿ ತೋಪಿನ ಬಾಯಿಗೆ ಕಟ್ಟಿದರೂ ಸೈ! ಮತ್ತೂ ಮುಂದೆ ಪಟೇಲ; ನ್ಯಾಯ ಮಾಡುತ್ತಾನೆ ಧರಿಸುತ್ತಾನೆ ಜರಿಯ ಉತ್ತರೀಯ ಡೊಳ್ಳು ಹೊಟ್ಟೆಯ ಮೇಲೆ ಮೊನಚಾಗಿದೆ ಕಣ್ ದೃಷ್ಟಿ, ನುಣುಪಾಗಿದೆ ದಾಡಿ, ಬಾಯ್ ಬಿಟ್ಟರೆ ದೃಷ್ಟಾಂತದ ...