ಜರೆ
(ಚಾರ್ಲ್ಸ್ ಸ್ಪೆನ್ಸ್ಲೇ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಚಿತ್ರಕವಿತೆ: ಸಿ. ಪಿ. ರವಿಕುಮಾರ್ ಜರೆ ಮರೆತ ರಾಗಗಳನ್ನು ಮತ್ತೆ ನೆನೆಸಿಕೊಳ್ಳುತ್ತಾ ನೆರೆತ ಕೂದಲಿನವನು ಕೂತಿರುವನು ಸುಮ್ಮನೆ ಬರುವವರಿದ್ದರಲ್ಲ ಇಂದು ಯಾರೋ? ಅಥವಾ ಕರೆದಿದ್ದರೋ ಅವರು ತನ್ನನ್ನೇ ಮನೆಗೆ? ಯಾರವರು? ಓರಗೆಯವರು ಒಬ್ಬರೂ ಇಲ್ಲವಲ್ಲ. ಹೊರದೇಶದಲ್ಲಿದ್ದಾರಲ್ಲವೆ ವರ್ಷಗಳಿಂದ ಮಕ್ಕಳು? ಕರೆದು ಕೇಳೋಣ ಎಂದು ಕೂಗಿದ ಅವಳನ್ನು; ಮರುಕ್ಷಣವೇ ಅವಳು ಮನದಲ್ಲಿ ನಕ್ಕಳು: ತೆರೆತೆರೆಯಾಗಿ ನಗಬಲ್ಲವಳು ಅವಳೊಬ್ಬಳೇ ಪೊರೆಗಣ್ಣಿಗೂ ಕಾಣುತ್ತದೆ ಅವಳ ನಗುಮುಖ. ಅರಳು ಮರಳಾಗಿದೆ ಎಂದು ರೇಗಿಸಿ ನಕ್ಕರೂ ಬರಲಿಲ್ಲ ಏಕೆಂದು ಯೋಚಿಸಿದ ಮುದುಕ. ಬರಿದಾದ ರಂಗ, ವಾದ್ಯ ನುಡಿಸುತ್ತಿದ್ದಾಗ ತಾನೊಬ್ಬನೇ ತೆರೆ ಯಾಕೆ ಎಳೆಯುತ್ತಿದೆ? ಕಾರ್ಯಕ್ರಮ ಮುಗಿಯಿತೇ?