ನೆರಳು ಚಿತ್ರಗಳು
ಮೂಲ ಕವಿತೆ - ಮೇರಿ ಕಾರ್ನಿಶ್ (ಅಮೆರಿಕಾ ಸಂಯುಕ್ತರಾಷ್ಟ್ರ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಕಂದೀಲಿನ ಬಿಳಿ ಬೆಳಕಿನಲ್ಲಿ ಅಪ್ಪ ಕೈಚಾಚಿದಾಗ ಹಸ್ತಗಳ ಜೋಡಿ ಕುದುರೆಯಾಗಿ ಕಿವಿ ನಿಮಿರಿಸಿ ಕೆನೆಯುತ್ತಿತ್ತು ಮೇಲಕ್ಕೆ ಮೈ ಕೊಡವಿ; ಕ್ಯಾನವಾಸ್ ಗೋಡೆಯ ಮೇಲೆ ನಿದ್ದೆ ನಟಿಸುತ್ತಿದ್ದ ಮೊಸಳೆ ಒಮ್ಮೆಲೇ ಮೇಲೆದ್ದು ತೆರೆದು ಮುಚ್ಚುತ್ತಿತ್ತು ಬಾಯಿ; ಹಂಸವೊಂದು ಬಿಂಕದ ಕತ್ತನ್ನು ತಿರುಗಿಸಿ ವೈಯ್ಯಾರದಿಂದ ಕೆಳಗಿಳಿಸಿ ಬೆರಳುಕೊಕ್ಕನ್ನು ನಯವಾಗಿ ಬಾಚಿಕೊಳ್ಳತ್ತಿತ್ತು ಅಪ್ಪನ ಕೂದಲಗರಿ. ನಮ್ಮ ಟೆಂಟ್ ಹೊರಗೆ ಕಾಡಿನಲ್ಲಿ ಪ್ರತಿದಿನವೂ ಒಂದಿಷ್ಟು ಕ್ಷಯಿಸುವ ತಾರೆಗಳ ಕೆಳಗೆ ಸರಸರ ಓಡಾಡುತ್ತಿದ್ದವು ಹೆಗ್ಗಣಾದಿ. ತಾರಾಮಂಡಲದ ಒರಾಯನ್ ಖಡ್ಗದ ಆಳದಲ್ಲಿ ಹರಡುವ ಬೆಳಕಿನಲ್ಲಿ ಹುಟ್ಟುತ್ತಿದ್ದವು ಲಕ್ಷಾಂತರ ಚುಕ್ಕಿ. ಹಾರುತ್ತಿದ್ದವು ಒಂದರ ಹಿಂದೆ ಇನ್ನೊಂದು ಅಪ್ಪನ ಕೈ ಹೆಬ್ಬೆರಳು ತೆಕ್ಕೆ ಹಾಕಿಕೊಂಡ ಬಾನಾಡಿ. ಟಿಪ್ಪಣಿ - ತನ್ನ ಬಾಲ್ಯದ ಘಟನೆಯೊಂದನ್ನು ಆಧರಿಸಿ ಕವಯಿತ್ರಿ ಈ ಕವಿತೆಯನ್ನು ರಚಿಸಿದ್ದಾಳೆ. ಮಕ್ಕಳು ರಜಾದಿನಗಳಲ್ಲಿ ಅಪ್ಪನೊಂದಿಗೆ ಕ್ಯಾಂಪಿಂಗ್ ಹೋಗಿದ್ದಾರೆ. ಕಾಡಿನ ಅಂಚಿನಲ್ಲಿ ಟೆಂಟ್ ನಿರ್ಮಿಸಿ ಅದರಲ್ಲಿ ಇರುವುದೇ ಒಂದು ರೋಮಾಂಚಕ ಅನುಭವ. ...