ಗ್ರಂಥಾಲಯದಲ್ಲಿ ಕವನವಾಚನ
ಸಿ. ಪಿ. ರವಿಕುಮಾರ್ (17 ನವೆಂಬರ್, 2016) ಗ್ರಂಥಾಲಯ ಸಪ್ತಾಹ ಆಚರಣೆಯ ಪರವಾಗಿ ಒಂದು ಕಾವ್ಯವಚನ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೆಳೆಯ ಅಭಿನವ ರವಿಕುಮಾರ್ ಕರೆ ಮಾಡಿದರು. ಸಾಲದೆಂಬಂತೆ "ತೊಗೊಳ್ಳಿ, ಶ್ರೀನಿವಾಸ್ ಅವರೂ ನಿಮ್ಮ ಜೊತೆ ಮಾತಾಡುತ್ತಾರೆ," ಎಂದು ಫೋನ್ ವರ್ಗಾಯಿಸಿದರು. "ರವಿಕುಮಾರ್, ನೀವು ಖಂಡಿತ ಬರಬೇಕಪ್ಪ." ಎಂದು ಆತ್ಮೀಯವಾಗಿ ಕರೆದವರು "ಶೂದ್ರ" ಶ್ರೀನಿವಾಸ್. ಅವರು ನನ್ನ ಹಿತೈಷಿಗಳು. ನ್ಯಾಷನಲ್ ಕಾಲೇಜಿನಲ್ಲಿ ನನಗೆ ಕನ್ನಡ ಪಾಠ ಹೇಳಿದ ಕೆ.ಎನ್.ಎನ್. ಮತ್ತು ಎಚ್.ಎಸ್.ಎಂ.ಆರ್. ಇವರಿಬ್ಬರೂ ನನ್ನನ್ನು ಕುರಿತು ಆಡಿರಬಹುದಾದ ಒಳ್ಳೆಯ ಮಾತುಗಳು ನನಗೆ ಎಷ್ಟೋ ಜನ ಹಿತೈಷಿಗಳನ್ನು ಸಂಪಾದಿಸಿಕೊಟ್ಟಿದೆ! ಕಾವ್ಯವಾಚನದಲ್ಲಿ ಮುಖ್ಯ ಅತಿಥಿಯಾಗಿ ಬಂದವರು ಪ್ರಸ್ತುತ ಕನ್ನಡ ಕಾವ್ಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಕವಿಯೆಂದು ಗುರುತಿಸಲ್ಪಡುವ ಎಚ್.ಎಸ್. ವೆಂಕಟೇಶಮೂರ್ತಿ. ಎಚ್ಚೆಸ್ವಿ ಅವರ ಕಾವ್ಯದ ಹರಹು ಬಹಳ ದೊಡ್ಡದು. ಮಕ್ಕಳ ಕವಿತೆಯಿಂದ ಹಿಡಿದು ಮಹಾಕಾವ್ಯದವರೆಗೆ. ಅವರನ್ನು ಮತ್ತೊಮ್ಮೆ ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ನನಗೆ ಸಿಕ್ಕಿತು. ಜಯನಗರದ ನಗರ ಕೇಂದ್ರ ಗ್ರಂಥಾಲಯದೊಂದಿಗೆ ತಮಗಿರುವ ಸಂಬಂಧವನ್ನು ಎಚ್.ಎಸ್.ವಿ. ನೆನೆಸಿಕೊಂಡರು. "ನಾನು ಬೆಂಗಳೂರಿಗೆ ಬಂದಾಗ ಮೊದಲು ನೆಲೆಸಿದ್ದು ಜಯನಗರದಲ್ಲಿ. ಪಾಠ ಹೇಳಿ ಮನೆಗೆ ಬಂದ ಮೇಲೆ ಸಂಜೆ ವಾಕಿಂಗ್ ಹೊರಟು ಇಲ...