ಪೋಸ್ಟ್‌ಗಳು

ಮಕ್ಕಳ ಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಧ್ಯಾಹ್ನದ ಮಳೆ (ಮಕ್ಕಳ ಪದ್ಯ)

ಇಮೇಜ್
ಕತ್ತಲಾಗುತಿದೆ ನಡುಮಧ್ಯಾಹ್ನ ಸೂರ್ಯನೆಲ್ಲಿ ಹೋದನು ಹೇಳಮ್ಮಾ ಮೋಡಗಳಿವು ಬಂದವು ಎಲ್ಲಿಂದ? ಒಮ್ಮೆಲೇ ಸೂರ್ಯನಿಗೇತಕೆ ಬಂಧ! ಬ್ರೇಕಿಂಗ್ ನ್ಯೂಸ್ ಬರುತಿದೆಯೇನಮ್ಮಾ ಹಚ್ಚು ಟಿವಿ ಹಚ್ಚು! ನಡೆಯುತ್ತಿದೆಯೇನಮ್ಮಾ ಯುದ್ಧ? ಏನದು ಬಾನೊಳು ಗುಡುಗುಡು ಶಬ್ದ! ನೋಡಮ್ಮಾ ಈ ರೊಯ್ಯನೆ ಗಾಳಿ ನುಗ್ಗುವ ಹಾಗೆ ಸೊಕ್ಕಿದ ಗೂಳಿ ಗುಟುರು ಹಾಕಿ ಬರುತಿದೆ ಸನ್ನದ್ಧ! ಮುಚ್ಚು ಕದವ ಮುಚ್ಚು! ಧೋ ಧೋ ಮಳೆ  ಸುರಿಯುತ್ತಿದೆ ಹೇಗೆ ಮರಗಳೆಲ್ಲ ಉಯ್ಯಾಲೆಯ ಹಾಗೆ ತೂಗಾಡುತ್ತಿವೆ ಅತ್ತಿಂದಿತ್ತ! ಗಿಡಗಳು ಬಾಗಿವೆ ಸೊಟ್ಟಂಪಟ್ಟ! ಕಾಣದು ಏನೂ ಕಿಟಕಿಯ ಹೊರಗೆ, ಎಲ್ಲಿ ದೀಪ ಸ್ವಿಚ್ಚು! ಕೊನೆಗೂ ನಿಂತಿತು ಮಳೆ ಸುರಿಸುರಿದು ಶುಭ್ರಾಕಾಶವು ಬರಿದೋ ಬರಿದು ಶಾಂತವಾಗಿಹವು ಗಿಡಮರಬಳ್ಳಿ ಸೂರ್ಯ ನಗುತಿಹನು ಆಗಸದಲ್ಲಿ ಏಳು ಬಣ್ಣಗಳ ಕಮಾನು ತೆರೆದು! ಹೊರಡುವೆ, ಆಟದ ಹೊತ್ತು! ಸಿ. ಪಿ. ರವಿಕುಮಾರ್ 

ನಾನೂ ಹಕ್ಕಿ

ಇಮೇಜ್
(ಮಕ್ಕಳಪದ್ಯ) ನಾನೂ ಹಕ್ಕಿ ನಾನೂ ಹಕ್ಕಿ ರೆಕ್ಕೆಯ ಬಿಚ್ಚಿ ಹಾರುತ್ತಿರುವೆನು ಬಾನಲ್ಲಿ ಅತ್ತಿಂದಿತ್ತ ಅಲೆಯುವ ಚಿತ್ತ ಊರು, ಕೇರಿ, ಕಾನನ,ಹಳ್ಳಿ! ನಗುವಿರಿ ಏಕೆ ಕೈಗಳ ರೆಕ್ಕೆ ಎಬ್ಬಿಸಲಾರದೆ ಸುಳಿಗಾಳಿ? ಓಡಿಸಿ ತಲೆಯ ಗಳಿಸಿ ಐಡಿಯಾ ಗುಟ್ಟು ನಿಮಗೂ ಹೇಳುವೆ ತಾಳಿ! ಕಾಗದ ಪಿನ್ನು ಕಡ್ಡಿ ತುಂಡನ್ನು ಸೇರಿಸಿದರೆ ತಿರುಗುವ ರಾಟೆ ತಲೆಯ ಮೇಲ್ಗಡೆ ಡ್ರೋನಿನ ಹಾಗೆ ಹಚ್ಚಿಕೊಂಡು ಇಗೋ ನಾ ಹೊರಟೆ! ನಾನೂ ಡ್ರೋನು ಹಾರಾಡುವೆನು ಬರಿದಾಗಿವೆ ಕೈಗಳು ನೋಡಿ ಕೊಡುವಳು ಅಮ್ಮ ಕೊಬ್ಬರಿ  ಬೆಲ್ಲ ತಿನ್ನುತ ಹಾರುವೆ ಬಾನಾಡಿ -- ಸಿ.ಪಿ. ರವಿಕುಮಾರ್

ಲಾಕ್ ಡೌನ್ ಇಲ್ಲದ ಹಕ್ಕಿಗಳು

ಇಮೇಜ್
ಹೊರಗಡೆ ಮರದಲಿ ಅಮ್ಮಾ ನೋಡು ಹಕ್ಕಿಯೊಂದು ಕಟ್ಟಿದೆ ಹೊಸ ಗೂಡು ಬಿಡದೆ ಹಾಡುವುದು ಯಾವುದೋ ಹಾಡು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಹೊರಗಡೆ ಮರದಲಿ ಅಮ್ಮಾ ನೋಡು ಎಲೆಗಿಂತಲೂ ಹೆಚ್ಚಾಗಿದೆ ಹೂವು ದಟ್ಟಹಳದಿ, ನೀಲಿ, ತಿಳಿಗೆಂಪು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನೋಡು ಹಕ್ಕಿಗಳು ಬಡಿಯುತ ರೆಕ್ಕೆ ಪಟಪಟ ಹಾರುತ್ತವೆ ಮೇಲಕ್ಕೆ ಲಾಕ್ ಡೌನ್ ಇಲ್ಲವೇ ಇಲ್ಲ ಇವಕ್ಕೆ! ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಬಂದಿರುವಾಗ ಸಕ್ಕರೆ ನಿದ್ದೆ ಕನಸೊಳು ಕಾರ್ಟೂನ್ ನೋಡುತ್ತಿದ್ದೆ ಇವುಗಳ ಕಲಕಲ ಕೇಳುತ ಎದ್ದೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಯಾಕಮ್ಮಾ ಹಕ್ಕಿಗಳಿವು ಹೀಗೆ ಕೂಡದೆ ಸುಮ್ಮನೆ ಒಂದೇ ಕಡೆಗೆ ಹಾರುತ್ತಿರುವುವು ದಿನಾ ಬೆಳಗ್ಗೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನಿನ್ನ ಹಾಗೆ ಹಕ್ಕಿಗಳೂ ಪುಟ್ಟ ಬರುವೆಯಲ್ಲ ತಿಂಡಿಯ ಹುಡುಕುತ್ತ ಹಾಗೇ ಹುಡುಕುತ್ತವೆ ಹುಳು ಹುಪ್ಟ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ತಿಂಡಿ ಎಂದ ಕೂಡಲೇ ನೆನಪಾಯ್ತು ಏನೋ ಘಮಘಮ ಬರ್ತಾ ಇತ್ತು ಮೈಸೂರ್ ಪಾಕೇನಮ್ಮ ಇವತ್ತು? ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! - ಸಿ.ಪಿ. ರವಿಕುಮಾರ್, ಏಪ್ರಿಲ್ ೨೫, ೨೦೨೦

ಲಾಕ್ ಡೌನ್ ಉದಯ

ಇಮೇಜ್
ಬೆಳ್ಳಂಬೆಳಗ್ಗೆ ಮಳೆ ಬಲು ಜೋರು ಏಳಲು ಯಾತಕ್ಕೋ ಬೇಜಾರು ಮಲಗುವೆನಮ್ಮಾ ಬೆಚ್ಚಗೆ ಹೊದ್ದು ಮಾಡಲಾದರೂ ಏನಿದೆ ಎದ್ದು ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು ಈಗ ಯಾವ ಎಕ್ಸಾಮ್ ಇದೆ ಹೇಳು ದೇವರು ವರ ಕೊಟ್ಟರೂ ಪೂಜಾರಿ ಕೊಡದ ಹಾಗೆ ನೀನೇತಕೆ, ವೈರಿ, ಏಳೋ ಏಳೋ ಏಳೋ ಬೇಗ ರಿಕಾರ್ಡು ಹಚ್ಚುವೆ ಒಂದೇ ರಾಗ! ಏನು ಮಾಡಲಿದೆ ನಾ ಮೇಲೆದ್ದು ಹೊರಗಡೆ ಹೋದರೆ ಕೊಡುವರು ಗುದ್ದು ಬೋರಾಗಿದೆ ಮನೆಯೊಳಗೇ ಇದ್ದು ಕೋವಿಡ್ ಕರೋನಾ ಎರಡರದೇ ಸದ್ದು ಸರಿಯೇ ಕಣೋ ಹೇಳುವುದೂ ನೀನು ಬೆಚ್ಚಗೆ ಹೊದ್ದು ಮಲಗುವೆ ನಾನೂ ಅಪ್ಪನೇ ಮಾಡಲಿ ಇಂದಿನ ತಿಂಡಿ ಮಲಗಲು ಸೂಚಿಸುತಿದೆ ಈ ಥಂಡಿ ಅಯ್ಯೋ ಬೇಡಮ್ಮಾ ಇದೋ ಎದ್ದೆ ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ ನೀನೇ ಮಾಡು ಪೂರಿಸಾಗು ರೆಡಿಯಾದಾಗ ನನ್ನನು ಕೂಗು ಅಷ್ಟರವರೆಗೂ ಮಲಗುವೆ ನಾನು ಸವಿಯುತ್ತಾ ನಿದ್ದೆಯ ಜಾಮೂನು - ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಮೇರಿಯ ಮೇಕೆಮರಿ (ಶಿಶುಪ್ರಾಸ)

ಇಮೇಜ್
(ಇಂಗ್ಲಿಷ್ ಶಿಶುಪ್ರಾಸದ ಅನುವಾದ) ಮೇರಿ ಹತ್ರ ಇತ್ತಂತೆ ಇತ್ತಂತೆ, ಇತ್ತಂತೆ ಮೇರಿ ಹತ್ರ ಇತ್ತಂತೆ ಮುದ್ದು ಮೇಕೆಮರಿ! ಎಲ್ಲೀಗ್ ಹೋದ್ರೂ ಮೇಕೆ ಮರಿ ಮೇಕೆ ಮರಿ, ಮೇಕೆ ಮರಿ  ಅವಳೆಲ್ಲಿಗ್ ಹೋದ್ರೂ ಮೇಕೆ ಮರಿ ಬಂತು ಸವಾರಿ! ಸ್ಕೂಲಿಗೆ ಹೋದಾಗ್ ಒಂದ್ ದಿನ ಒಂದ್ ದಿನ , ಒಂದ್ ದಿನ ಸ್ಕೂಲಿಗೆ ಹೋದಾಗ್ ಒಂದ್ ದಿನ ಮೇಕೇನೂ ಹೋಯ್ತು ರೀ! ಕೋಪ ಬಂತು ಟೀಚರ್ಗೆ ಟೀಚರ್ಗೆ, ಟೀಚರ್ಗೆ ಕೋಪ ಬಂತು ಟೀಚರ್ಗೆ ಮ್ಯಾ ಮ್ಯಾ ಮ್ಯಾಮ್ ಸಾರಿ! - ಸಿ. ಪಿ. ರವಿಕುಮಾರ್

ಗಣಪ ಮತ್ತು ಬಳಪ

ಇಮೇಜ್
ಅಮ್ಮ, ಕೊಡು ಬಳಪ ಎಂದು ಬೇಡಿದನು ಗಣಪ ಏನು ಬರೆವೆ ಮಗು? ಎಂದ ಅಮ್ಮನಿಗೆ ನಗು! ಲ್ಯಾಪ್ ಟಾಪ್, ಮೌಸ್, ಟಚ್ ಪ್ಯಾಡು ಇಂಥದನ್ನು ಬೇಡು ಚಾಕ್, ಹಲಗೆ, ಬಳಪ ಹಳೆಯದಾಯ್ತು ಕಣಪ್ಪ ಲ್ಯಾಪ್ ಟಾಪ್ ನನಗೆ ಯಾಕಮ್ಮ ನಿನ್ನ ತೊಡೆಯೇ ಸಾಕಮ್ಮ ಇನ್ನೊಂದು ಮೌಸ್ ಯಾಕೆ? ಇದೆಯಲ್ಲ ನನ್ನ ನೌಕೆ! ಇನ್ನೊಂದು ಬಂದ್ರೆ ತೊಂದ್ರೆ - ನನ್ನ ಮೋದಕ ಅದೇ ತಿಂದ್ರೆ! ಸಾಕು ಬಳಪ ಹಲಗೆ ಸರಳ, ಮೊದಲ ಕಲಿಕೆ ಅಮ್ಮನಿಂದ ಬಳಪ ಪಡೆದು ಕೊಡಲಿ ಗಣಪ ಮಕ್ಕಳಿಗೆ ಬುದ್ಧಿ, ಅಭಯ ಮತ್ತು ಸೆಂಟ್ ಪರ್ಸೆಂಟ್ ಶ್ರೇಯ - ಸಿ.ಪಿ. ರವಿಕುಮಾರ್