ಮಾಡರ್ನ್ ಗುರು ಮಾಡರ್ನ್ ಕಲಿಕೆ
ಗುರ್ ಎನ್ನುವವನೇ ಗುರು ಎಂಬುದರಲ್ಲಿ ಗುಲಗಂಜಿಯಷ್ಟೂ ನಿಜವಿಲ್ಲ. ಗುರುಗಳು ಗುರ್ ಎನ್ನಬಹುದು, ಆದರೆ ಗುರ್ ಎನ್ನುವವರೆಲ್ಲ ಗುರುಗಳಲ್ಲ. ಗುರ್ ಎನ್ನುವ ರಾಜಕಾರಣಿಗಳು ಎಷ್ಟೋ ಜನರನ್ನು ನೀವು ಗುರುತಿಸಬಹುದು. ಆದರೆ ಅವರೆಲ್ಲರನ್ನೂ ಗುರು ಎನ್ನಲಾದೀತೆ? ಮಾತು ಮಾತಿನಲ್ಲಿ ಸ್ನೇಹಿತರನ್ನು ಏನ್ ಗುರೂ ಎನ್ನುವವರೂ ಇದ್ದಾರೆ. ಆದರೆ ಸ್ನೇಹಿತರಿಂದ ಅವರು ಏನನ್ನು ಕಲಿತರೋ ಹೇಳಲಾಗದು. ನಿಮಗೆ ಅದೃಷ್ಟ ಇದ್ದರೆ ನಿಮ್ಮ ಸ್ನೇಹಿತರೇ ನಿಮಗೆ ಉತ್ತಮ ಗುರುಗಳಾದಾರು. ಬೆತ್ತದ ಏಟಿನಿಂದ ಮೇಷ್ಟ್ರು ಹೇಳಿಕೊಡಲಾಗದ್ದನ್ನು ಎಷ್ಟೋ ಸಲ ಸ್ನೇಹಿತರು ಸರಳವಾಗಿ ಹೇಳಿಕೊಟ್ಟುಬಿಡುವುದನ್ನು ಕಾಣುತ್ತೇವೆ. ಇಟ್ ಟೇಕ್ಸ್ ಎ ವಿಲೇಜ್ ಟು ರೇಸ್ ಎ ಚೈಲ್ಡ್ ಎಂದು ಹೇಳುವುದು ಇದಕ್ಕೇ. ನಮ್ಮ ಸೋಮನಾಥನು ಇದನ್ನೇ ಕೆಲವಂ ಬಲ್ಲವರಿಂದ ಕಲ್ತು ಇತ್ಯಾದಿಯಾಗಿ ಹೇಳಿದ್ದಾನೆ. ಬಲ್ಲವರು ಯಾರು ಎಂದು ಹೇಳುವುದೇ ಈಗ ಕಷ್ಟವಾಗಿದೆ. ಏನೇ ವಿಷಯವನ್ನು ಇಂಟರ್ನೆಟ್ನಲ್ಲಿ ಹುಡುಕಿದರೆ ಅದೆಷ್ಟು ಹಿಟ್ಸ್ ಸಿಕ್ಕುತ್ತವೆ ಎಂದರೆ ಗೂಗಲಿಗೂ ಸುಸ್ತಾಗಿ ಹೋಗುವಷ್ಟು. ಅದೆಷ್ಟು ಜನ ಪಂಡಿತರು ಇದ್ದಾರಪ್ಪ ಎಂದು ಆಶ್ಚರ್ಯವಾಗುವಷ್ಟು. ವಿಕಿಪೀಡಿಯವಂತೂ ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆಗಿಬಿಟ್ಟಿದೆ. ಕೆಲವರು ವಿಕಿಯಿಂದಲೇ ಕಲ್ತು ವಿದ್ಯೆಯ ಸಣ್ಣ ಗುಡ್ಡಗಳಾಗಿ ಶೋಭಿಸುವುದನ್ನೂ ನೀವು ಕಾಣುತ್ತೀರಿ. ಇದನ್ನು ನೋಡಿ ನನ್ನ ಸ್ನೇಹಿತರೊಬ್ಬರ...