ಬಾಪೂ ಮತ್ತು ನಯಾ ದೌರ್
ಬಾಪೂ ಮತ್ತು ನಯಾ ದೌರ್ ಸಿ. ಪಿ. ರವಿಕುಮಾರ್ ಇ ತ್ತೀಚೆಗೆ ಕೈಮಗ್ಗದ ಕೆಲಸಗಾರರ ಪರವಾಗಿ ನಾಟಕಕಾರ ಪ್ರಸನ್ನ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ. ಇದರ ಬಗ್ಗೆ ಓದುವಾಗ ನನಗೆ ಕನ್ನಡ ಕತೆಗಾರರಾದ ಬಾಗಲೋಡಿ ದೇವರಾಯ ಅವರ "ಮಗ್ಗದ ಸಾಹೇಬ" ಕತೆ ನೆನಪಾಗಿ ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಮಹಾತ್ಮಾ ಗಾಂಧಿ ಬೃಹತ್ ಕೈಗಾರಿಕೀಕರಣದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ ಅವರ ಕೆಲವು ಲೇಖನಗಳನ್ನು ಓದಿದೆ; ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದೆ. ಈ ಹುಡುಕಾಟದಲ್ಲಿ ನನ್ನ ಕಣ್ಣಿಗೆ ಬಿದ್ದ ಕವಿತೆ "ಬಾಪೂ." ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾನಂದನ್ ಪಂತ್ ಈ ಕವಿತೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ (೧೯೩೯) ರಚಿಸಿದರು. ಇಲ್ಲಿ "ಬಾಪೂ" ಎಂದು ಅವರು ಸಂಬೋಧಿಸುವುದು ಮಹಾತ್ಮಾಗಾಂಧಿಯವರನ್ನು; ಆದರೆ "ಬಾಪೂ" ಎಂದರೆ ತಂದೆ ಎಂಬ ಅರ್ಥ ಬರುವುದರಿಂದ ರಬೀಂದ್ರನಾಥ್ ಟ್ಯಾಗೋರ್ ಗೀತಾಂಜಲಿಯಲ್ಲಿ "ತಂದೆ" ಎಂದು ಸಂಬೋಧಿಸಿದ ಭಗವಂತನ ಸ್ವರೂಪವನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ ಎಂದು ಕೂಡಾ ಅರ್ಥೈಸಬಹುದು. ಈ ಕವಿತೆಯನ್ನು ಬರೆದಾಗ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇಂಗ್ಲೆಂಡ್ ನಲ್ಲಿ ಮಿಲ್ ಗಳು ಸ್ಥಾಪಿತವಾಗಿದ್ದವು; ಈ ಮಿಲ್ ಬಟ್ಟೆಗಳಿಗೆ ಭಾರತವು ಒಂದು ಮಾರುಕಟ್ಟೆಯಾಯಿತು. ನಮ್ಮ ಖಾದಿ...