ನವವಧು
ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ. ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ. ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”. ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್...