ದಸರಾ ದರ್ಬಾರ್
"ಮೈಸೂರು ದಸರಾ ದರ್ಬಾರಿನಲ್ಲಿ ನಾನು ಭಾಗವಹಿಸುವುದಿಲ್ಲ, ಮನ್ನಿಸಿ" ಎಂದು ಬರೆದರಂತೆ ಪತ್ರ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್. ಮಹಾರಾಜರಿಗೆ ಇದು ಅಪಮಾನ ಎನ್ನಿಸಿ ಕಳಿಸಿದರು ಮಾರೋಲೆ "ಏಕೆಂದು ಕೇಳಬಹುದೇ ಉತ್ತರಿಸಿ ಕೂಡಲೇ" "ಮಹಾಸ್ವಾಮಿ, ದರ್ಬಾರಿನಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಮಾತ್ರ ಕುರ್ಚಿ ಭಾರತೀಯರಿಗೆ ನೆಲದ ಮೇಲೆ ಸ್ಥಾನ. ಇದು ನಮಗೆ ಮಾಡಿದ ಅಪಮಾನ. ನನ್ನಿಂದಾಗದು, ಕ್ಷಮಿಸಿ. ಅವರಿಗೆ ನೆಲದ ಮೇಲೆ ಕೂಡಲು ಎಷ್ಟಿದೆಯೋ ಕುರ್ಚಿಯ ಮೇಲೆ ಕೂಡಲು ನಮಗೂ ಅಷ್ಟೇ ಇದೆ ಹಕ್ಕು. ಪತ್ರ ಮುಗಿಸುವೆ ಗೌರವದಿಂದ ನಮಿಸಿ." ವಿಷಯ ಹೋಯಿತು ಕಿವಿಯಿಂದ ಕಿವಿಗೆ ತಲುಪಿತು ಬ್ರಿಟಿಷ್ ಆಧಿಕಾರಿಯವರೆಗೆ. ನೆಲಕ್ಕೆ ಕುಟ್ಟಿ ಬೂಟು "ಎಷ್ಟು ಈ ಇಂಜಿನಿಯರಿಗೆ ಸೊಕ್ಕು!" ಎಂದು ಕಳಿಸಿದನಂತೆ ಖುದ್ದು ಆಹ್ವಾನ: ದರ್ಬಾರಿಗೆ ಬಂದು ಚೀಫ್ ಇಂಜಿನಿಯರ್ ನಮಗೆ ನೀಡಬೇಕು ದರ್ಶನ" ಬಂತು ದರ್ಬಾರಿನ ದಿನ. ದರ್ಬಾರ್ ನೋಡಲು ಬಂದ ಜನ ಎಲ್ಲಾ ಕಡೆ ಕುತೂಹಲದಿಂದ ಹರಿಸಿದರು ಕಣ್ಣು ಹುಡುಕಿದರು ಚೀಫ್ ಇಂಜಿನಿಯರನ್ನು. ಚೀಫ್ ಇಂಜಿನಿಯರ್ ಬರಲಿಲ್ಲ ನುಡಿದಂತೆ ಅವರ ನಡೆ. ಯಾರು ಈ ಚೀಫ್ ಇಂಜಿನಿಯರ್ ಎಂದು ನಿಮಗೆ ಈಗಾಗಲೇ ಹೊಳೆದಿರಬಹುದಷ್ಟೇ. ಇವರೇ ಕಟ್ಟಿದ್ದು ಕನ್ನಂಬಾಡಿ ಕಟ್ಟೆ."