ಪೋಸ್ಟ್‌ಗಳು

Sun ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಇರುಳಿಗಿವೆ ಕಣ್ಣುಗಳು ಸಹಸ್ರಾರು

ಇಮೇಜ್
ಇರುಳಿಗಿವೆ ಕಣ್ಣುಗಳು ಸಹಸ್ರಾರು ದಿವಸಕ್ಕೆ ಒಂದೇ ಒಂದು, ಆದರೂ ಕೊನೆಗಾಣುವುದು ಜಗತ್ತಿನ ಬೆಳಕು ಅಸ್ತಂಗತನಾದಾಗ ನೇಸರು. ಮನಸ್ಸಿಗೆ ಕಣ್ಣುಗಳು ಸಹಸ್ರಾರು, ಹೃದಯಕ್ಕೆ ಇರುವುದು ಒಂದೇ ಒಂದು. ಆದರೂ ಕಂತುವುದು ಜೀವನದ ಬೆಳಕು ಬತ್ತಿಹೋದಾಗ ಪ್ರೇಮಸಿಂಧು. ಮೂಲ: ಫ್ರಾನ್ಸಿಸ್ ವಿಲಿಯಂ ಬೋರ್ಡಿಯಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಶಿಶಿರಗಾನ

ಇಮೇಜ್
  ಮೂಲ: ಸರೋಜಿನಿ ನಾಯ್ಡು ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದುಃಖಿಸುವ ಹೃದಯದೊಳಿರುವ ಒಂಟಿ ಸಂತಸದಂತೆ ಸಿಕ್ಕಿಸಿದೆ  ಮೋಡದ ಮೇಲೆ ಸೂರ್ಯಾಸ್ತ; ಸುಕ್ಕು ತರಗೆಲೆ  ಕೆಳಗುದುರಿ ಚಿನ್ನದ ರೇಕುಗಳಂತೆ  ಸಿಕ್ಕಿ ಬಿರುಗಾಳಿಗೆ ಮೇಲೆದ್ದು ಅಸ್ತವ್ಯಸ್ತ, ರೆಕ್ಕೆ ಬಂದಂತೆ ಹಾರುತ್ತಿವೆ ಸುತ್ತಮುತ್ತ. ಕರೆಯುತ್ತಿಹರು ದೂರದಲ್ಲಾರೋ ಕೇಳಿಸಿತೇ! ಯಾರವರು ಕೂಗುವರು ಗಾಳಿಯ ದನಿಯಲ್ಲಿ? ಬರಿದಾಗಿದೆ ಹೃದಯ, ತುಂಬುತ್ತಿದೆ ಖಿನ್ನತೆ ತರಗೆಲೆಯಂತೆ ಉದುರಿ ಕನಸುಗಳು, ಒಣಬಳ್ಳಿ ಮರುಗುತ್ತಿದೆ ನಾನೇಕಿನ್ನೂ ನಿಂತಿರುವೆನಿಲ್ಲಿ?

ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು,

ಇಮೇಜ್
 (ಎಷ್ಟೇ ಕಷ್ಟಪಟ್ಟರೂ ಆಗುತ್ತಿಲ್ಲ ಎಂದು ಹತಾಶರಾದವರಿಗೆ) ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು, ಪಟ್ಟೆನೆಷ್ಟು ಕಷ್ಟ, ತೊಟ್ಟೆನೆಷ್ಟು ಗಾಯಗಳು ಆದರೂ ಬೀಳಲೊಲ್ಲ ಶತ್ರು, ಕಾಣನು ಸೋಲು ಎಲ್ಲವೂ ಯಥಾಸ್ಥಿತಿ, ಬದಲಾಗಿಲ್ಲ ಚೂರೂ. ಭರವಸೆಗಳು ಹುಸಿಯಾದರೆ, ಭಯಗಳೂ ಹುಸಿ ಇರಬಹುದು ನಿನಗೆ ಕಾಣದಂತೆ ಹೊಗೆಯ ಹಿನ್ನೆಲೆಯೊಳಗೆ ನಿನ್ನ ಪಕ್ಷದವರು ಹಿಮ್ಮೆಟ್ಟಿಸಿ ಶತ್ರುಪಡೆ ಆಗಲೇ ಮೈದಾನವನು ವ್ಯಾಪಿಸಿಕೊಂಡಿರಬಹುದು ಗೆದ್ದು. ಇಲ್ಲಿ ಬಲಹೀನ ಅಲೆಗಳು ಯತ್ನಿಸಿ ಸೋತರೂ ಪೂರಾ ಅಂಗುಲವೂ ಬಿಟ್ಟುಕೊಡದ ಮಹಾಪರ್ವತ ಇನ್ನೆಲ್ಲೋ ಸೋತಿರಬಹುದು  ಕಣಿವೆಗಳಲ್ಲಿ, ತೀರ್ಥ ಎಳೆಯಾಗಿ ಒಳನುಗ್ಗಿ ಉಂಟಾಗಿರಬಹುದು ಮಹಾಪೂರ. ಪೂರ್ವಮುಖಿ ಕಿಟಕಿಗಳಿಂದಷ್ಟೆ ಬಾರದು ಬೆಳಕು ಮೇಲೇರ ತೊಡಗಿದಾಗ ಸೂರ್ಯ ಒಳಬರುವ ನಸುಬೆಳಕು, ಕಂಡರೂ ಕಾಣದಂತಿರುವ ಬೆಳಕು, ನೋಡಲ್ಲಿ ಪಶ್ಚಿಮದಲ್ಲಿ ತಂದಿಹುದು ಬೆಳಗು. ಮೂಲ: ಆರ್ಥರ್ ಹ್ಯೂ ಕ್ಲೋ ಅನುವಾದ: ಸಿ. ಪಿ. ರವಿಕುಮಾರ್

ಬೆಳಕು ವಿನ್ಯಾಸ

ಇಮೇಜ್
 (ಐಗಾರ್ ದುಬೊವಾಯ್ ಅವರ ಚಿತ್ರ ನೋಡಿ ಬರೆದ ಕವಿತೆ) ಮೇಲಿಂದ ಯಾರೋ ಲೈಟಿಂಗ್ ಮಾಡುತ್ತಾರಲ್ಲ ನಮ್ಮ ರಂಗಸ್ಥಳ ಯಾರವರು - ಪ್ರತಿದಿವಸ ಹೊಸ ವಿನ್ಯಾಸ ಏನಾದರೂ ಯೋಚಿಸಿಕೊಂಡು ಬರುವರು, ಬೆಳಕು ಅವರದು ಕ್ಯಾಮೆರಾ ನಮ್ಮದು : ಎಷ್ಟು ಮೆಗಾಪಿಕ್ಸೆಲ್ ಏನೋ ತಿಳಿಯದು, ತಾಳು ಸೇವ್ ಮಾಡುವೆನೆಂದರೆ ನಕ್ಕು ಮುಂದುವರೆವರು! ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಶರತ್ಕಾಲದ ಸಂವಾದ

ಇಮೇಜ್
 ಈ ಕವಿತೆಗೆ ಪ್ರೇರಣೆ ನೀಡಿದ್ದು  ರೀನ್ಹೋಲ್ಡ್ ಲಜೆಂಗ್ರೆನ್ ಎಂಬ ಕಲಾವಿದ ಬರೆದ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ #ಚಿತ್ರಕವಿತೆ: ಸಿ. ಪಿ. ರವಿಕುಮಾರ್  ಶರತ್ಕಾಲದ ಬೆಳಗು ನಡೆದು ಹೊರಟಾಗ ನೋಡಿದೆನು ತರಗೆಲೆ ಉದುರಿಸಿ ನಿಂತ ಹೆಮ್ಮರಗಳ ಸಾಲು - ಹೀಗೇಕೆ ಎಲ್ಲ ಬರಿದಾಗಿ ನಿಂತಿರುವಿರಿ ತಪೋನಿರತ ಸಾಧುಗಳ ಹಾಗೆ ನೀವು? ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ: ಶಿಶಿರದಲ್ಲೂ ನಾವು ಹಸಿರೆಲೆ ಛತ್ರಿಯ ಹೊತ್ತು ನಿಂತಿದ್ದರೆ ಓ ಮಗೂ ಯೋಚಿಸಿ ನೋಡು ಸೂರ್ಯನ ಮಂದಾಗ್ನಿ ಹೇಗೆ ಮುಟ್ಟುತ್ತಿತ್ತು? ಮರಳಿ ಬರುವಾಗ ಅದೇ ದಾರಿಯಲ್ಲಿ ನೋಡಿದೆನು ಮರಗಳು ಅಲ್ಲೇ ನಿಂತಿದ್ದವು ಇನ್ನೂ. ಎಲ್ಲರೂ ಕೈ ಎತ್ತಿ ಪ್ರಾರ್ಥಿಸುವ ಹಾಗಿದೆಯಲ್ಲ ಹೇಳಿ ದೇವನಲ್ಲಿ ಸಲ್ಲಿಸುವ ಕೋರಿಕೆ ಏನು? ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ: ಪ್ರಾರ್ಥಿಸುತ್ತಿದ್ದೇವೆ ಹೊಸಚಿಗುರು ಬರಲಿ ನಮಗೆ! ಮುಂಬರುವ ಗ್ರೀಷ್ಮ ನೀನು ನಡೆದು ಬರುವಾಗ ಈ ದಾರಿ ತಂಪಾಗಿಸಲು ಮರಳಿ ಕೊಡು ಹಸಿರೆಲೆಯ ಕಾಣ್ಕೆ.

ಅಗೋ ಕಳೆಯಿತು ದಿವಸ, ಅಗೋ ರಾತ್ರಿ (ಅನುವಾದಿತ ಕವಿತೆ}

ಇಮೇಜ್
  ಸೂರ್ಯನು ಸೇರಿ ಪಶ್ಚಿಮ ದಡ ,  ಮುಳುಗಿದನು ಸಂಧ್ಯೆಯ ಮುಸುಕನ್ನು ತೊಟ್ಟಿತು ಧಾತ್ರಿ ನೂರು ಸಂಜೆಗಳಂತೆಯೇ ಆ ಸಂಜೆಯೂ ಇತ್ತು ಮತ್ತೆ ಎದ್ದೇಳುವಾಗ ನನಗೇಕೆ ಅನ್ನಿಸಿತ್ತು ದಿನದಲ್ಲಿ ನಡೆವುದು ಏನಾದರೂ ಹೊಸತು? ಅಗೋ ಕಳೆಯಿತು ದಿವಸ, ಅಗೋ ರಾತ್ರಿ  ಮೆಲ್ಲಮೆಲ್ಲನೆ ಹೊರಬಂದವು ತಾರಗೆ ಮಿನುಗತೊಡಗಿತು ಬಿಚ್ಚಿಟ್ಟ ಬಾನ್ ಛತ್ರಿ ನೂರು ಇರುಳುಗಳಂತೆ ಆ ಇರುಳೂ ಇತ್ತು ಮತ್ತೆ ಸಂಜೆಯಾದಾಗ ಹೀಗೇಕೆ ಅನ್ನಿಸಿತ್ತು ತರುವುದೇನಾದರೂ ನಿಶೆ ಹೊಸದನ್ನು ಹೊತ್ತು? ಅಗೋ ಕಳೆಯಿತು ದಿವಸ, ಅಗೋ ರಾತ್ರಿ ಹಕ್ಕಿಗಳು ಉಲಿದವು, ಬಿರಿದವು ಮೊಗ್ಗು ಮತ್ತೆ ಬೆಸೆಯಿತು ಕಮಲ ಸೂರ್ಯನ ಮೈತ್ರಿ ಎಂದಿನಂತೆಯೇ ಇತ್ತು ಆ ದಿನದ ಬೆಳಗು ಮತ್ತೇಕೆ ನಿದ್ರೆಯಲ್ಲಿ ಉಲಿಯುತ್ತಿತ್ತು ನನ್ನೊಳಗು ನಸುಕು ನಾವೀನ್ಯವನ್ನು ತಂದೀತು ಎಂದು? ಅಗೋ ಕಳೆಯಿತು ದಿವಸ,  ಅಗೋ ರಾತ್ರಿ ಮೂಲ: ಹರಿವಂಶ ರಾಯ್ ಬಚ್ಚನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಬರುತಿದೆ ರವಿಯ ಸವಾರಿ!

ಇಮೇಜ್
ಮೂಲ - ಹರಿವಂಶರಾಯ್ ಬಚ್ಚನ್ ಅನುವಾದ - ಸಿ. ಪಿ. ರವಿಕುಮಾರ್ ಬರುತಿದೆ ರವಿಯ ಸವಾರಿ! ನವಕಿರಣದ ಹೊಳೆವ ರಥ ಬಿರಿವ ಮುಗುಳ ಕುಸುಮಪಥ ಸ್ವಾಗತಿಸುವ ಮೇಘಸೈನ್ಯ ಸ್ವರ್ಣವಸ್ತ್ರಧಾರಿ! ಬರುತಿದೆ ರವಿಯ ಸವಾರಿ! ವಿಹಗ, ಭೃಂಗ, ಹೆಜ್ಜೇನು, ಹಾಡುತ್ತಿವೆ ಕೀರ್ತಿಯನು ತ್ಯಜಿಸಿ ರಣವ ತಾರಾಬಲ ಆಗುತಿದೆ ಪರಾರಿ! ಬರುತಿದೆ ರವಿಯ ಸವಾರಿ! ಕುಣಿದು ಜಯವ ಕೂಗಲು ಮನ ಶಂಕಿಸುವುದು ಏಕೆ? ಹೀನ- ನಂತೆ ನಿಂತ ನಿಶೆಯ ನೋಡಿ, ಭಿಕ್ಷುವೇಷಧಾರಿ! ಬರುತಿದೆ ರವಿಯ ಸವಾರಿ!