ಮುಳ್ಳು ಹೂವಿನ ಹಾಸಿಗೆ
(ಗಿಯ್ ಡಿ ಮೂಪಸಾನ ಕಥೆಯನ್ನು ಆಧರಿಸಿ) ನಾನೊಮ್ಮೆ ನನ್ನ ಗೆಳೆಯರೊಂದಿಗೆ ಕೆಲವು ದಿನ ಕಾಲ ಕಳೆಯಲು ಚಿಕ್ಕಮಗಳೂರಿನ ಎಸ್ಟೇಟಿಗೆ ಹೋದೆ. ನನ್ನ ಬಾಲ್ಯಸ್ನೇಹಿತರು, ಅವಳಿಜವಳಿ ಸೋದರರು, ನನ್ನನ್ನು ಗೇಟಿನ ಬಳಿಯೇ ಬಂದು ಆದರದಿಂದ ಬರಮಾಡಿಕೊಂಡರು. ಈ ಸ್ನೇಹಿತರು ಏನಾದರೂ ತರಲೆ ಕಿತಾಪತಿ ಮಾಡುವುದರಲ್ಲಿ ಸಿದ್ಧಹಸ್ತರು. ಹಾಗಿಲ್ಲದಿದ್ದರೆ ನಾನು ಅವರ ಸ್ನೇಹ ಬಯಸುತ್ತಲೂ ಇರಲಿಲ್ಲ. ಅವರು ಈ ಸಲ ನನ್ನನ್ನು ಬೇಸ್ತು ಬೀಳಿಸಲು ಹೊಸದಾಗಿ ಏನು ತರಲೆ ಮಾಡಲಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕೊರೆಯುತ್ತಿತ್ತು. ನಾನು ಗೇಟನ್ನು ಬಹಳ ಸಾವಧಾನವಾಗಿ ಪ್ರವೇಶಿಸಿದೆ. ಅತ್ತಿತ್ತ ನೋಡುತ್ತಲೇ ಒಳಗೆ ಹೋದೆ. ಗೆಳೆಯರು ನನ್ನನ್ನು ಅಪ್ಪಿಕೊಂಡಿದ್ದು, ಅದೇಕೆ ಇಷ್ಟು ದಿನಗಳಿಂದ ನಾಪತ್ತೆಯಾಗಿದ್ದೆ ಎಂದು ದೂರಿದ್ದು, ಹೆಗಲ ಮೇಲೆ ಕೈಹಾಕಿ ತಮ್ಮ ಗಾಡಿಯ ಬಳಿ ಕರೆದೊಯ್ದಿದ್ದು, ಎಲ್ಲವೂ ನನ್ನಲ್ಲಿ ಸಂಶಯ ಮೂಡಿಸಿದವು. ನಾನು ಕಾರಿನಲ್ಲಿ ಕೂಡುವ ಮುನ್ನ ಸೀಟನ್ನು ಒಮ್ಮೆ ಮುಟ್ಟಿ ಪರೀಕ್ಷಿಸಿದೆ. ಗೆಳೆಯರು ಏನೋ ಹಳೆಯದನ್ನು ನೆನೆದು ನಗುತ್ತಿದ್ದರು. ಆದರೆ ನನಗೆ ಅದರ ಮೇಲೆ ಗಮನವಿರಲಿಲ್ಲ. ಮನೆಯಲ್ಲಿ ನನಗೆ ಅದೇನು ಅದ್ಧೂರಿಯ ಸ್ವಾಗತ! ನನಗಾಗಿ ಮಹಡಿಯಲ್ಲಿ ಒಂದು ಕೋಣೆಯನ್ನು ರೆಡಿ ಮಾಡಿಸಿದ್ದರು. ಅದೊಂದು ಹೋಟೆಲ್ ಕೋಣೆಯಂತೆ ಸುಸಜ್ಜಿತವಾಗಿತ್ತು. ಸ್ನಾನ ಮಾಡಿ ಬಾ, ತಿಂಡಿ ರೆಡಿಯಾಗಿದೆ ಎಂದು ಅವರು ಕೆಳಗೆ ಹೋದರು. ಬಿಸಿನೀರಿನ ಮತ್ತು ತಣ್ಣೀರಿನ ನಲ್...