ಪೋಸ್ಟ್‌ಗಳು

ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನ್ಯೂಟನ್, ಬುದ್ಧ, ಮತ್ತು ಮರ

ನ್ಯೂಟನ್, ಬುದ್ಧ, ಮತ್ತು ಮರ ^^^^^^^^^^^^^^^^^^^^^^^^^^^^ ಒಬ್ಬನು ಹೋಗಿ ಕೂತ ಬೋಧಿ ಮರದ ಕೆಳಗೆ ಪೂರ್ಣಿಮೆಯ ರಾತ್ರಿ ಮಲಗಿರುವಾಗ ಧಾತ್ರಿ ಇರದಿದ್ದರೂ ಸದ್ದು ನಿದ್ದೆ ಬರದೆ ಎದ್ದಿದ್ದು ಆಸೆಯೇ ದುಃಖಕ್ಕೆ ರೂಟು ಎಂದೇನೇನೋ ನೂರೆಂಟು ರಚಿಸಿ ಸಮೀಕರಣ ತೊಡಿಸಿದ ಆಭರಣ ನಮ್ಮ ನಿಮ್ಮ ತಲೆಗೆ ಬೋಧಿ ಮರದ ಕೆಳಗೆ ಇನ್ನೊಬ್ಬ ಹೋಗಿ ಕೂತ ಸೇಬಿನ ಮರದ ಕೆಳಗೆ ಸೇಬು ತಿನ್ನುವ ಆಸೆ ಒಳಗೊಳಗೇ ಮೇಲೇಳಲು ಮಾತ್ರ ಬಿಡದು ಆಲಸಿಕೆ ಪ್ಲೇಗ್ ಹರಡಿದ್ದ ಕಾಲಮಾನ ಲಾಕ್ ಡೌನ್ ಪರಿಣಾಮ ರದ್ದಾಗಿ ಸಾರೋಟು ಲೈಸೆನ್ಸು ಎಲ್ಲೆಲ್ಲೂ ಶಾಂತಿ ಸೈಲೆನ್ಸು ಹೀಗಿರುವಾಗ ಸದ್ದಾಗಿ ಟಪ್ ಎಂದು ಹಣ್ಣು ತಲೆಯಮೇಲೇ ಬಿದ್ದಿತೊಂದು! ಏನಾಯಿತೋ ತಲೆಯಲ್ಲಿ ಪರಿವರ್ತನೆ ವಿಚಿತ್ರವಾಯಿತು ಐಸಾಕನ ವರ್ತನೆ ಫೋರ್ಸು ಗ್ರಾವಿಟಿ ಎಂಜಿ ಎಂದು ಏನೇನೋ ಬಡಬಡಿಸಿ ಮಡದಿ "ಯಾವಾಗ ಬರುವುದೋ ರೇಷನ್ನು?" ಎಂದರಿವನು "ಬಂದಾಗ ಆಕ್ಸಲರೇಷನ್ನು, ಯಾವುದೂ ಬಾರದು ತನ್ನಿಂದ ತಾನೇ ತಡೆಯಲೂ ನಡೆಸಲೂ ಶಕ್ತಿ ಇರಬೇಕು ಕಾಣೇ" ಎಂದು ಆಕೆಗೂ ತನ್ನ ಕನ್ಫ್ಯೂಷನ್ನು ಹರಡಿಬಿಡುತ್ತಿದ್ದನಂತೆ ನ್ಯೂಟನ್ನು! ಪಾಪ ಇನ್ನೇನು ಮಾಡಿಯಾಳು ಬಡಪಾಯಿ ಹೆಣ್ಣು ನೀಡದೆ ಈಕ್ವಲ್ ಅಂಡ್ ಆಪೋಸಿಟ್ ರಿಯಾಕ್ಷನ್ನು! ಕಂಡುಹಿಡಿಯುವ ಮುನ್ನ ಪ್ಲೇಗ್ ಲಸಿಕೆ ಚುಚ್ಚಿಬಿಟ್ಟನು ಎಲ್ಲರಿಗೂ ಕ್ಯಾಲ್ಕ್ಯುಲಸಿಕೆ! ಒಂದೆರಡಲ್ಲ ಚಲನಕ್ಕೆ ಮೂರು ಸೂತ್ರಗಳು ಯೂ, ವೀ, ಏ, ಟೀ ಎಂಬ ವಿಚಿತ್ರ ಪಾತ್ರಗಳು! ತುಂಬಿಹೋದ ನಮ್ಮ

ನಾನೂ ಹಕ್ಕಿ

ಇಮೇಜ್
(ಮಕ್ಕಳಪದ್ಯ) ನಾನೂ ಹಕ್ಕಿ ನಾನೂ ಹಕ್ಕಿ ರೆಕ್ಕೆಯ ಬಿಚ್ಚಿ ಹಾರುತ್ತಿರುವೆನು ಬಾನಲ್ಲಿ ಅತ್ತಿಂದಿತ್ತ ಅಲೆಯುವ ಚಿತ್ತ ಊರು, ಕೇರಿ, ಕಾನನ,ಹಳ್ಳಿ! ನಗುವಿರಿ ಏಕೆ ಕೈಗಳ ರೆಕ್ಕೆ ಎಬ್ಬಿಸಲಾರದೆ ಸುಳಿಗಾಳಿ? ಓಡಿಸಿ ತಲೆಯ ಗಳಿಸಿ ಐಡಿಯಾ ಗುಟ್ಟು ನಿಮಗೂ ಹೇಳುವೆ ತಾಳಿ! ಕಾಗದ ಪಿನ್ನು ಕಡ್ಡಿ ತುಂಡನ್ನು ಸೇರಿಸಿದರೆ ತಿರುಗುವ ರಾಟೆ ತಲೆಯ ಮೇಲ್ಗಡೆ ಡ್ರೋನಿನ ಹಾಗೆ ಹಚ್ಚಿಕೊಂಡು ಇಗೋ ನಾ ಹೊರಟೆ! ನಾನೂ ಡ್ರೋನು ಹಾರಾಡುವೆನು ಬರಿದಾಗಿವೆ ಕೈಗಳು ನೋಡಿ ಕೊಡುವಳು ಅಮ್ಮ ಕೊಬ್ಬರಿ  ಬೆಲ್ಲ ತಿನ್ನುತ ಹಾರುವೆ ಬಾನಾಡಿ -- ಸಿ.ಪಿ. ರವಿಕುಮಾರ್

ಬೂರ್ಶ್ವಾ

ಬ್ರೆಡ್ ಕದ್ದನೆಂಬ ಅಪರಾಧಕ್ಕಾಗಿ ಜಾನ್ ವಾಲ್ಜಾನ್ ಅನುಭವಿಸಿದ ವರ್ಷಗಟ್ಟಲೆ ಸೆರೆವಾಸ ಮತ್ತು ತಪ್ಪಿಸಿಕೊಂಡಾಗ ಬೆಂಬಿಡದ ಪೊಲೀಸ್ ಅಧಿಕಾರಿ ಜಾವೇ ಕಣ್ತಪ್ಪಿಸಿ ಓಡಾಡುವ ದುಸ್ಸಾಹಸ. ಮಂದಿಗೆ ಬ್ರೆಡ್ ಸಿಕ್ಕದ ಕಾಲದಲ್ಲೂ ಬೂರ್ಶ್ವಾ ಶ್ರೀಮಂತರು ನಡೆಸುತ್ತಿದ್ದರು ಕೇಕ್ ಮತ್ತು ವೈನ್ ಗಮ್ಮತ್ತು. ಮೇರಿ ಅಂಟಾಯ್ನೇ ಕೇಳಿದ ಪ್ರಶ್ನೆಯಿಂದ ಉದ್ರಿಕ್ತ ಜನ ಗಿಲೊಟಿನ್ ಗರಗಸಕ್ಕೆ ದೂಡಿದರು ಅವಳ ನಾಜೂಕು ಕತ್ತು. ಯಾರೋ ಅನ್ನುತ್ತಾರೆ ದಿನಗೂಲಿ ಜನರಿಗೆ ತಿನ್ನಲು ಗತಿಯಿಲ್ಲ. ಇನ್ನೊಬ್ಬರು ಶೇರ್ ಮಾಡುತ್ತಾರೆ ಇದು ನಾನೇ ಮನೆಯಲ್ಲಿ ಮಾಡಿದ ರಸಗುಲ್ಲ. ಸಮೋಸಾ ವಡೆ ಕಾಶಿ ಹಲ್ವಾ. ನಾವೆಲ್ಲರೂ ಹೀಗೆ ಬೂರ್ಶ್ವಾ ಆಗಿಬಿಟ್ಟಿದ್ದೇವಲ್ವಾ. ಇರಲಾರದು ನಮಗೆ ಗಿಲೊಟಿನ್ ಆಪತ್ತು ಆದರೆ ಹೇಗಿದ್ದೀತು ಕತ್ತರಿಸಿದರೆ ನಮ್ಮೆಲ್ಲರ ನೆಟ್ಟು. ಸಿ. ಪಿ. ರವಿಕುಮಾರ್

ಲಾಕ್ ಡೌನ್ ಶಾಪ

ಮಾಲಿನಲ್ಲಿ ಅದೆಷ್ಟು ಮಾಡಿದೆವು ಶಾಪ ವೀಕೆಂಡಿನಲ್ಲಿ ತುಂಬಿ ತುಂಬಿ ತಂದೆವು ಪಾಪ ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡ ಪ್ರತಿ ಇಂದ್ರಚಾಪ ಆನ್ಲೈನ್ ಖರೀದಿಯಂತೂ ಇಪ್ಪತ್ನಾಕು ಬಾರ್ ಏಳು ಹಚ್ಚಿಕೊಂಡೆವು ಕ್ಲಿಕ್ ಮಾಡಿ ತರಿಸುವ ಗೀಳು ಮನೆಗೇ ಹರಿಯಿತು ಕಾಮಧೇನುವಿನ ಹಾಲು ಮನೆಗೆ ಬಂದ ಪೀಟ್ಸಾ ತಣ್ಣಗಾಗಿದೆ ಎಂದು ಮೂಗು ಮುರಿದೆವು ಬೈದಾಡಿಕೊಂಡು ಡ್ರೋನ್ ತರಲಾರದೇ ಹಾರುತ್ತಾ ಬಂದು? ಓಲಾಡಿ ಹೊರಟೆವು ಓಲಾ ಊಬರುಗಳಲ್ಲಿ ಕಬಳಿಸಿದವು ನಗರಗಳು ಒಂದೊಂದೇ ಹಳ್ಳಿ ಹಬ್ಬಿದಷ್ಟೂ ರಿಸಾರ್ಟ್ ಕನಸುಗಳ ಬಳ್ಳಿ. ತಟ್ಟಿಬಿಟ್ಟಿತು ನಮಗೆ ಪ್ರಾಣಿಪಕ್ಷಿಗಳ ಶಾಪ ತೋಡಿಕೊಂಡೆವು ನಮಗಾಗಿ ನಾವೇ ಕೂಪ. ಸಿ.ಪಿ. ರವಿಕುಮಾರ್

ಲಾಕ್ ಡೌನ್ ಸಡಿಲ

ಈಗ ಹೊರಗಡೆ ಓಡಾಡುವುದು ಸುಲಭವಲ್ಲ ಗೂಗಲ್ ಅಕ್ಕನಿಗೂ ರಸ್ತೆ ತಿಳಿಯುವುದಿಲ್ಲ ಕೆಲವು ದಾರಿಗಳು ಮುಚ್ಚಿವೆ ಕೆಲವು ಅರ್ಧ ಮಾತ್ರ ಕಣ್ಬಿಚ್ಚಿವೆ ಜನ ಹೇಗೆ ಗಾಡಿ ಓಡಿಸುತ್ತಿದ್ದಾರೋ ಕಾಣೆ ಹೇಗೋ ಒಪ್ಪಿಕೊಂಡಿದ್ದಾರೆ ಬದಲಾವಣೆ ನಮ್ಮ ಜನರಿಗಿಲ್ಲ ಮಾಸ್ಕ್ ತೊಟ್ಟು ಅಭ್ಯಾಸ ಕೆಲವರು ಹಾಗೇ ಹೊರಬಂದಿದ್ದಾರೆ ರಾಜಾರೋಷ ಕೆಲವರ ಧ್ವಜ ಜಾರಿದೆ ಅರ್ಧದಷ್ಟು ಕೆಳಗೆ ಕೆಲವರಿಗೆ ಮಾತ್ರ ಬಾಯ್ಮುಚ್ಚುವಷ್ಟು ಸಲುಗೆ ಜನ ಹೇಗೋ ಉಸಿರಾಡುತ್ತಿದ್ದಾರೆ ಈಗಲೂ ಮೂಗು ಬಾಯಿ ಲಾಕ್ ಡೌನ್ ಮಾಡಿದರೂ ಬಾಗಿಲು ಇರಾಕ್, ಸಿರಿಯಾಗಳಲ್ಲಿ ಬಾಂಬ್ ದಾಳಿಗೆ ಹೆದರಿ ಜನ ಹೇಗೆ ಬದುಕುವರೋ ದಿನದಿನ! ಧರ್ಮಾಂಧನ ಎದೆ ಕರೋನಾಗಿಂತ ಕಠಿಣ ಸಿಡಿಯುವುದು ಯಾವುದೋ ಅನಿರೀಕ್ಷಿತ ಕ್ಷಣ ಯಾವ ಮುಖವಾಡವೂ ನೀಡಲಾರದು ರಕ್ಷೆ ಎಷ್ಟು ಕೈ ತೊಳೆದರೇನು ಯಾರ ಪಾಪಕ್ಕೆ ಬಾಂಬ್ ದಾಳಿಯ ನಂತರ ಹೊರಗೆ ಬಂದಂತೆ ಜನ ಅಳುಕುತ್ತಿದ್ದರೂ ತಾಳಲಾಗದೇ ಬಂಧನ ಹೊರಗೆ ಇಣುಕುತ್ತಿದ್ದಾರೆ ಮೆಲ್ಲಮೆಲ್ಲನೆ ಮಂದಿ ಬಹುಮೆಲ್ಲನೆ ಕುಂಟುತ್ತಿದೆ ಬದುಕಿನ ಜಟಕಾ ಬಂಡಿ. ಮುಖವಾಡವಿದ್ದರೂ ಗುರುತಿಸಿ ಮುಗುಳ್ನಗೆ ಹೆಚ್ಚು ಮಾತಿಲ್ಲ ಹೊರಗೆ, ಎಲ್ಲ ಒಳಗೊಳಗೇ. "ತೆರೆದ ಬಾಗಿಲು ನಾನು, ಸರ್ವಋತು ಬಂದರು." ವೈಶಾಖ ಕಳೆದರೂ ವರ್ಷಋತು ಬಂದರೂ. ಬರಲಿ ಏನೇ ಪಾಲಿಗೆ ಅದುವೆ ಪಂಚಾಮೃತ ಎನ್ನುತ್ತ ಜನಗಣವು ಬಿಡದೆ ಜೀವನವೃತ ಮುನ್ನಡೆಯುತ್ತಿದೆ ಹೇಗೋ ನಮ್ಮ ಮಹಾನ್ ಭಾರತ ಗತಿ ನಿಧಾನವಾದರೇನು ಯಾರಿಗಿಲ್

ನಿಸಾರ್ ಅಹಮದ್ ಅವರ ನೆನಪು

ನಿ ಸಾರ್ ಅಹ್ಮದ್ ಅವರೊಂದಿಗೆ ಒಮ್ಮೆ ಪ್ರಯಾಣಿಸುವ ಮತ್ತು ಅವರೊಂದಿಗೆ ಕಾವ್ಯವಾಚನದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಬಂದಿತ್ತು. ಅದು ಆದದ್ದು ಹೀಗೆ. ಶ್ರೀ ಎಂ. ಎಸ್. ಭಾರದ್ವಾಜ್ ಅವರು ನನ್ನ ತಂದೆಯವರ ಹತ್ತಿರದ ಮಿತ್ರರು. ಅವರಿಗೆ ವಾರ್ತಾ ಇಲಾಖೆಯಲ್ಲಿ ಉನ್ನತ ಹುದ್ದೆ. ನಿರಂಜನ, ಭಾರದ್ವಾಜ್, ನಮ್ಮ ತಂದೆ ಇವರು ಮೂವರೂ ಹತ್ತಿರದ ಮಿತ್ರರು. ನನ್ನ ತಂದೆ ದೆಹಲಿಗೆ ಹೋದಾಗ ಭಾರದ್ವಾಜ್ ಅವರೂ ದೆಹಲಿಯಲ್ಲಿದ್ದರು. ಅವರ ಮನೆಗೆ ನಾವು ಹೋದ ನೆನಪು ಹಸಿರಾಗಿದೆ. ಅವರ ಹೆಂಡತಿ ಶ್ರೀಮತಿ ವೃಂದಾ ಭಾರದ್ವಾಜ್ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಮಕ್ಕಳು ಮಾಯಾ ಮತ್ತು ಮಮತಾ. ನಮ್ಮ ತಂದೆ ದೆಹಲಿಯಲ್ಲಿ 5 ವರ್ಷ ಕೆಲಸ ಮಾಡಿ ಬೆಂಗಳೂರಿಗೆ ಮರಳಿದರು. ಮುಂದೆ ಭಾರದ್ವಾಜ್ ಕೂಡಾ ಬೆಂಗಳೂರಿಗೆ ಮರಳಿ ಬಂದರು. ಅವರ ಮನೆ ನಮ್ಮ ಮನೆಯ ಪಕ್ಕದ ಬೀದಿಯಲ್ಲೇ ಇತ್ತು. ಅವರು ಈಗ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ನನ್ನನ್ನು ಅವರು ತಮ್ಮ ಮಗನಷ್ಟೇ ಪ್ರೀತಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ನಾನೂ ಒಂದಿಷ್ಟು ಬರೆಯುತ್ತೇನೆ ಎಂದು ನನ್ನ ತಂದೆ ಅವರಿಗೆ ಹೇಳಿದ್ದೇ ಅವರಿಗೆ ಸಾಕಾಯಿತು. ಒಂದು ದಿನ ಬಂದು "ಚಿತ್ರದುರ್ಗದಲ್ಲಿ ಒಂದು ಕವಿಗೋಷ್ಠಿ ಇದೆ. ರವಿಯನ್ನೂ ಕಳಿಸಿಕೊಡಿ, ನನ್ನ ಜೊತೆ ಬರುತ್ತಾನೆ, ಅವನೂ ಒಂದು ಕವಿತೆ ಓದಲಿ" ಎಂದರು. ಹಿಂದೆಂದೂ ಕವಿಗೋಷ್ಠಿಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೆ ಇದು ಹೊಸ ಅನುಭವ. ನಾನು ಒಂದು ಕವಿತ

ನಾನು ಓದಿದ ಕವಿತೆ

ನಾನು ಓದಿದ ಮತ್ತು ನನಗೆ ಇಷ್ಟವಾದ ಕವಿತೆಗಳನ್ನು ಹಂಚಿಕೊಳ್ಳಲು ನಾನೊಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೇನೆ.  ಈಗ ಈ ಚಾನೆಲಿನಲ್ಲಿ ಲಭ್ಯವಾದವು ೧. ಅಡಿಗರ "ನನ್ನ ಅವತಾರ" ೨. ಅಡಿಗರ "ಅಲಸನ ಹಾಡು" ೩. ಕೆ. ಎಸ್. ನರಸಿಂಹಸ್ವಾಮಿ ಅವರ "ದೇವರ ಹೆಜ್ಜೆ" ೪. ಬಾಬ್ ಡಿಲನ್ ಅವರ "ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?" ೫. ಮೈಥಿಲಿ ಶರಣ ಗುಪ್ತ ಅವರ "ಜೀವನಕ್ಕೇ ವಿಜಯ" ೬. ಮಾಯಾ ಏಂಜೆಲೋ ಅವರ "ವಸುಧೈವ ಕುಟುಂಬಕಮ್" ೭. ರಾಬರ್ಟ್ ಫ್ರಾಸ್ಟ್ ಬರೆದ "ನಾನು ತುಳಿಯದ ಹಾದಿ" ನಿಮ್ಮ ಅನ್ನಿಸಿಕೆಗಳನ್ನು ತಿಳಿಯಲು ಕುತೂಹಲಿಯಾಗಿದ್ದೇನೆ. ಸಿ. ಪಿ. ರವಿಕುಮಾರ್