ಪೋಸ್ಟ್‌ಗಳು

ಅನುವಾದ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪಂಥ (ಷೆಕಾಫ್ ಅವರ ಸಣ್ಣಕತೆ,)

ಇಮೇಜ್
ಪಂಥ ಮೂಲ ಕಥೆ - ಆಂಟನ್ ಷೆಕಾಫ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಶರತ್ಕಾಲದ ಕಡುಗಪ್ಪು ರಾತ್ರಿ. ವೃದ್ಧ ಬ್ಯಾಂಕರ್ ತನ್ನ ಬೈಠಕ್ಕಿನಲ್ಲಿ ಶತಪಥ ತಿರುಗುತ್ತಿದ್ದ. ಹದಿನೈದು ವರ್ಷಗಳ ಹಿಂದಕ್ಕೆ ಅವನ ನೆನಪು ಓಡಿತು. ಇಂಥದ್ದೇ ಶರತ್ಕಾಲದ ರಾತ್ರಿಯಂದು ತಾನು ನೀಡಿದ ಔತಣಕೂಟದಲ್ಲಿ ಅದೆಷ್ಟು ಮಂದಿ ಬುದ್ಧಿವಂತರು ಸೇರಿ ಸುರಸ  ಸಂಭಾಷಣೆಗಳಲ್ಲಿ ತೊಡಗಿದ್ದರು! ಕೊನೆಗೆ ಮಾತು ಗಲ್ಲುಶಿಕ್ಷೆಯತ್ತ ಹೊರಳಿತು. ಅಲ್ಲಿ ನೆರೆದಿದ್ದ ಬಹಳ ಜನ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಮರಣದಂಡನೆಯನ್ನು ಬಲವಾಗಿ ಟೀಕಿಸಿದರು.   ಅದೊಂದು ಪ್ರಾಚೀನ ರೀತಿಯ ಶಿಕ್ಷೆ, ಅನೀತಿಯುತವಾದದ್ದು, ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ನಾಡುಗಳಲ್ಲಿ ಅಸಮ್ಮತವಾದ ಪದ್ಧತಿ ಎಂದು ಅವರು ವಾದಿಸಿದರು.  ಮರಣದಂಡನೆಗೆ ಬದಲಾಗಿ  ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನು ಘೋಷಿಸುವುದೇ ಸರಿಯಾದದ್ದು ಎಂದು ಕೆಲವರು ಅಭಿಪ್ರಾಯ ಕೊಟ್ಟರು. "ನಾನು ಒಪ್ಪುವುದಿಲ್ಲ," ಎಂದು ಬ್ಯಾಂಕರ್ ಘೋಷಿಸಿದ. "ನನಗೆ ಎರಡರದ್ದೂ ಅನುಭವವಿಲ್ಲವಾದರೂ ಹೋಲಿಕೆಯಲ್ಲಿ ಮರಣದಂಡನೆಯೇ ಹೆಚ್ಚು ನೀತಿಯುಕ್ತವಾದದ್ದು, ಹೆಚ್ಚು ಮಾನವೀಯವಾದದ್ದು  ಎನ್ನಿಸುತ್ತದೆ. ಮರಣದಂಡನೆ ಮನುಷ್ಯನನ್ನು ಒಂದೇ ಏಟಿಗೆ ಕೊಲ್ಲುತ್ತದೆ. ಆದರೆ ಜೀವಾವಧಿ ಶಿಕ್ಷೆ ಅವನನ್ನು ನಿಧಾನವಾಗಿ ಕೊಲ್ಲುತ್ತದೆ. ನೀವೇ ಹೇಳಿ, ಒಂದೇ ಕ್ಷಣದಲ್ಲಿ ಗಲ್ಲಿಗೇರಿಸಿ ಪ್ರಾಣ ತೆಗೆದುಬಿಡುವವನು ಉತ...

ಹಾಡುವರಾರು ನದೀತಟದಲ್ಲಿ?

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಹಾಡುವರಾರು ನದೀತಟದಲ್ಲಿ? ಭಂಗಗೊಳಿಸುತ್ತ ನಿಶೆಯ ನೀರವ  ಮೇಲೇಳುವ ಈ ಗ್ರಾಮೀಣ ಸ್ವರ  ಹಾಯುತ ಹುರುಳಿಯ ಹೊಲಗಳ ಮೇಲೆ  ಎಬ್ಬಿಸುತಿದೆ ಕಾವೇರಿಯೊಳು ಅಲೆ! ಹಾಡುವರಾರು ನದೀತಟದಲ್ಲಿ? ಬಂಧುಗಳಿರಬಹುದಿಲ್ಲೇ ಸನಿಹದಲಿ, ಧ್ಯಾನಿಸುತ್ತ ಮೌನದಿ ಮನದಲ್ಲಿ, ವ್ಯರ್ಥವಲ್ಲ ತಮ್ಮಯ ಆಲಾಪ,  ಶ್ರವಣಸುಖವ ತರುತಿದೆ ಜನಪದಕೆ! ಹಾಡುವರಾರು ನದೀತಟದಲ್ಲಿ? ವಿಚಲಿತವಾಗಿದೆ ಇಂದೇತಕೆ ಮನ  ಕೇಳುತ ಈ ಏಕಾಂತದ ಗಾಯನ? ಇದನೇ ಕೇಳುತ ನಾ ಮುಂಜರಿವೆ! ಇದನೇ ಹಾಡುವೆ, ಇದನೇ ಬರೆವೆ!  ಹಾಡುವರಾರು ನದೀತಟದಲ್ಲಿ?

ಯಾವೊಬ್ಬ ಮಾನವನೂ ದ್ವೀಪವಲ್ಲ

ಇಮೇಜ್
ಮೂಲ ಇಂಗ್ಲಿಷ್ ಕವಿತೆ - ಜಾನ್ ಡನ್  ಅನುವಾದ - ಸಿ. ಪಿ. ರವಿಕುಮಾರ್  ಯಾವೊಬ್ಬ ಮಾನವನೂ ದ್ವೀಪವಲ್ಲ  ಯಾರೊಬ್ಬನೂ ತಾನೇ ಪೂರ್ಣನಾಗ.    ಪ್ರತಿಯೊಂದೂ ಭೂಖಂಡದ ಅಂಶ, ಮೂಲವೊಂದರ ಪುಟ್ಟ ಭಾಗ.  ಕಿನಾರೆಯಿಂದ ಒಂದೇ ಒಂದು ಭೂಮಿಯ ಚೂರು  ಕೊಚ್ಚಿ  ಕೊಂಡೊಯ್ದರೆ    ಕಡಲು   ಉಂಟಾಗುವುದು ಅಷ್ಟೇ  ಚ್ಯುತಿ ಮೂಲಭೂಖಂಡಕ್ಕೆ  ಕಳೆದುಕೊಂಡಂತೆ ಇಡೀ ಭೂಶಿರವನ್ನು ಒಡಲು; ಕಳೆದು ಹೋದರೆ ಹೇಗಿದ್ದೀತು   ನಿನ್ನ ಗೆಳೆಯನಿಗೋ ನಿನಗೋ  ಸೇರಿದ ಜಹಗೀರು.  ಪ್ರತಿಯೊಬ್ಬ ಮಾನವನ ಸಾವೂ  ಕುಂದಿಸುತ್ತದೆ ನನ್ನನ್ನು  ಏಕೆಂದರೆ  ನಾನು ಮಾನವತೆಯ ಅಂಗ.   ಪ್ರಶ್ನಿಸದಿರು  ಯಾರಿಗಾಗಿ ಬಾಜಿಸುತ್ತಿದೆ ಗಂಟೆ  ಎಂದು!  ಬಾಜಿಸುತ್ತಿದೆ  ನಿನಗಾಗಿ   ಮೃದಂಗ. 

ಜೀವನಕ್ಕೇ ವಿಜಯ

ಇಮೇಜ್
ಮೂಲ ಹಿಂದಿ ಕವಿತೆ - ಮೈಥಿಲೀಶರಣ ಗುಪ್ತ  ಅನುವಾದ - ಸಿ. ಪಿ. ರವಿಕುಮಾರ್  ವ್ಯರ್ಥ ಮೃತ್ಯುವಿನ ಭಯ ಜೀವನಕ್ಕೇ ವಿಜಯ ಬೇರನು ಸುದೃಢಗೊಳಿಸುತ ಜೀವ  ನಿತ್ಯ ಗಳಿಸುತಿದೆ ಹೊಸವೈಭವವ ಮರುವುಟ್ಟು ಪಡೆಯುವನು  ಮಗುವಲ್ಲಿ ಮಾನವ  ಈ ಆತ್ಮವು ಅಕ್ಷಯ  ಜೀವನಕ್ಕೇ ವಿಜಯ   ಜಾಗೃತಗೊಳುವುದು ಜೀವನ ಕಣ್ಬಿಚ್ಚಿ   ಮರಣವೋ!  ನಿಶ್ಚೇಷ್ಟಿತ,   ಕಣ್ಮುಚ್ಚಿ!  ಒಂದು ಬೀಜ ನೂರಾಗುವ ಸೃಷ್ಟಿ  ಕರ್ತನು ತುಂಬಾ ಸದಯ! ಜೀವನಕ್ಕೇ ವಿಜಯ ಜೀವನಕ್ಕಾಗಿ ಸಾಯಲೂ ನಾ ಸಿದ್ಧ! ಎಲ್ಲಡಗಿಸಲೀ ಧನವನು ಭದ್ರ?  ತಿಳಿಯದೆ ಬಳಸಿದರಿದರೌಚಿತ್ಯ  ಮಾತ್ರ ಖಂಡಿತ ಪ್ರಳಯ!  ಜೀವನಕ್ಕೇ ವಿಜಯ

ಬರುತಿದೆ ರವಿಯ ಸವಾರಿ!

ಇಮೇಜ್
ಮೂಲ - ಹರಿವಂಶರಾಯ್ ಬಚ್ಚನ್ ಅನುವಾದ - ಸಿ. ಪಿ. ರವಿಕುಮಾರ್ ಬರುತಿದೆ ರವಿಯ ಸವಾರಿ! ನವಕಿರಣದ ಹೊಳೆವ ರಥ ಬಿರಿವ ಮುಗುಳ ಕುಸುಮಪಥ ಸ್ವಾಗತಿಸುವ ಮೇಘಸೈನ್ಯ ಸ್ವರ್ಣವಸ್ತ್ರಧಾರಿ! ಬರುತಿದೆ ರವಿಯ ಸವಾರಿ! ವಿಹಗ, ಭೃಂಗ, ಹೆಜ್ಜೇನು, ಹಾಡುತ್ತಿವೆ ಕೀರ್ತಿಯನು ತ್ಯಜಿಸಿ ರಣವ ತಾರಾಬಲ ಆಗುತಿದೆ ಪರಾರಿ! ಬರುತಿದೆ ರವಿಯ ಸವಾರಿ! ಕುಣಿದು ಜಯವ ಕೂಗಲು ಮನ ಶಂಕಿಸುವುದು ಏಕೆ? ಹೀನ- ನಂತೆ ನಿಂತ ನಿಶೆಯ ನೋಡಿ, ಭಿಕ್ಷುವೇಷಧಾರಿ! ಬರುತಿದೆ ರವಿಯ ಸವಾರಿ!

ಶಿಷ್ಯ (ಕವಿತೆ)

ಇಮೇಜ್
ಮೂಲ: ಆಸ್ಕರ್ ವೈಲ್ಡ್ ಅನುವಾದ: ಸಿ.ಪಿ. ರವಿಕುಮಾರ್ ನಾರ್ಸಿಸಸ್ ಸತ್ತಾಗ ಅವನ ಅಚ್ಚುಮೆಚ್ಚಿನ ಸಿಹಿನೀರಿನ ಕೊಳ ಉಪ್ಪು ಕಣ್ಣೀರಿನ ಮಡುವಾಗಿಹೋಯ್ತು. ಕೇಳಿದಾಗ ಈ ಸಂಗತಿ ಗಿರಿಕಿನ್ನರಿಯರು ಹಾರಿ ಬಂದು ನಿಜಕ್ಕೂ ಸಿಹಿನೀರಿನ ಕೊಳ ಉಪ್ಪು ಕಣ್ಣೀರ ಮಡುವಾಗಿದ್ದು ಕಂಡು ಸಂತೈಸಿದರು ತಮ್ಮ ನೀಳ ಹಸಿರುಕೇಶವನ್ನು ಇಳಿಬಿಟ್ಟು ಕೊಳದೊಳಗೆ. ನಿನ್ನ ದುಃಖ ನನಗೆ ಅರ್ಥವಾಗುತ್ತದೆ! ನಾರ್ಸಿಸಸ್‌ನಂಥ ಚೆಲುವನಿರಲಿಲ್ಲ ಬೇರೊಬ್ಬ! ಕುತೂಹಲದಿಂದ ಕೇಳಿತು ಕೊಳ: ನಾರ್ಸಿಸಸ್ ಚೆಲುವನಾಗಿದ್ದನೇ? ನಿನಗಿಂತಲೂ ಚೆನ್ನಾಗಿ ಬಲ್ಲವರಾರು ಈ ವಿಷಯ? ನಿನ್ನ ಮೊಗದ ಕನ್ನಡಿಯಲ್ಲಿ ಅವನು ನೋಡಿಕೊಳ್ಳುತ್ತಿರಲಿಲ್ಲವೇ ತನ್ನ ಮುಖ! ಕೊಳವು ಉತ್ತರಿಸಿತು: ಹೌದೇ! ಅವನು ಬಾಗಿ ನೋಡಿದಾಗ ಅವನ ಕಣ್ಣಲ್ಲಿ ನಾನು ನನ್ನ ಸೌಂದರ್ಯವನ್ನು ನೋಡಿ ಹಿಗ್ಗುತ್ತಿದ್ದೆ.

ಕರುಣೆ

ಇಮೇಜ್
ಮೂಲ - ಶೇಕ್ಸ್‌ಪಿಯರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  (ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ನ್ಯಾಯಾಧೀಶನ ವೇಷದಲ್ಲಿ ಪೋರ್ಷಿಯಾ ಮಾಡುವ ಭಾಷಣ) ಕರುಣೆಯು ಲುಪ್ತವಾಗಿಹೋಗಿಲ್ಲ.   ಅದು ಮೆಲ್ಲಮೆಲ್ಲನೆ ಉದುರುತ್ತದೆ ನೆಲಕ್ಕೆ  ಮೇಲಿನ ಸ್ವರ್ಗದಿಂದ.   ಅದರ ಲಾಭ ದ್ವಿಗುಣ.  ಪಡೆದುಕೊಂಡವನಿಗೆ ಲಾಭ ಸಿಕ್ಕುವುದು ಸಹಜ, ಕರುಣೆ ತೋರಿದವನಿಗೂ ಲಭಿಸುತ್ತದೆ ಅದರ ಆಶೀರ್ವಾದ.  ಬಲಗಳಲ್ಲಿ ಅತಿದೊಡ್ಡ ಬಲವೇ ಕರುಣೆ.  ಸಿಂಹಾಸನದ ಮೇಲೆ ಕುಳಿತ ರಾಜನಿಗೆ  ಕರುಣೆಯೇ ಕಿರೀಟಕ್ಕಿಂತಲೂ ಹೆಚ್ಚು ಶೋಭಿಸುವ ಸಿಂಗಾರ.  ಅವನ ಖಡ್ಗ  ತತ್ಕಾಲದ ಅಧಿಕಾರದ ಸಂಕೇತ, ಜನರಲ್ಲಿ ಬೆರಗು ಹುಟ್ಟಿಸುವುದಷ್ಟೇ ಅದರ ಗುಣ, ಖಡ್ಗವನ್ನು ಕಂಡು ಹೆದರಿ ನಡುಗುತ್ತಾರೆ ಜನ.    ಕರುಣೆಯ ಸ್ಥಾನ ಖಡ್ಗಕ್ಕಿಂತ ಎಷ್ಟೋ ಮೇಲು, ಅದು ನೆಲೆಸುವುದು ರಾಜನ ಹೃದಯಸಿಂಹಾಸನದಲ್ಲಿ. ಸ್ವಯಂ ದೇವತೆಗಳ ಬಳಿ ಇರುವ ಆಭರಣ. ಭೂಮಿಯ ಮೇಲೆ ನಡೆದ ಕರುಣಾಪೂರ್ಣ ನ್ಯಾಯದಾನಕ್ಕೆ  ಸಿಕ್ಕುತ್ತದೆ ದೈವತ್ವದ ಮೆರುಗು.  ಹೀಗಾಗಿ, ಓ ವರ್ತಕ! ನ್ಯಾಯ ನಿನ್ನ ಪರವಾಗಿದ್ದರೂ  ಯೋಚಿಸಿ ನೋಡು. ಈ ನ್ಯಾಯದಿಂದ ಯಾರದೂ ಉದ್ಧಾರವಿಲ್ಲ. ನಾವು ನಿನ್ನಲ್ಲಿ ಬೇಡುವುದು ಕರುಣೆ. ನಾನು ಇಷ್ಟು ಮಾತಾಡಿದ್ದು  ನೀನು ಕೋರಿದ ಶಿಕ್ಷೆಯನ್ನು ಒಂದಷ್ಟು ಮೆತ್ತಗಾಗಿಸಲು, ನೀನು ಕೋರಿದ್ದನ್ನು ಅಕ...

ಮೂಗು ಮುರಿಯದಿರಿ ಮುಖದ ಮೇಲಿರುವುದೇಕೆಂದು

ಇಮೇಜ್
ಮೂಲ ಕವಿತೆ: ಜ್ಯಾಕ್ ಪ್ರೆಲುಟ್ಸ್ಕಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಮೂ ಗು ಮುರಿಯದಿರಿ ಮುಖದ ಮೇಲಿರುವುದೇಕೆಂದು , ಎಲ್ಲಿದೆಯೋ ಅಲ್ಲೇ ಚೆನ್ನಾಗಿದೆ ಮೂಗು! ಬೇರೆಲ್ಲಾದರೂ ಮೆತ್ತಿದ್ದರೆ ಮೂಗಣ್ಣನ ಅಣ್ಣ   ಫಜೀತಿಯಾಗುತ್ತಿತ್ತು ನಿನ್ನ ಮೂಗನ್ನ! ಕಾಲ್ಬೆರಳುಗಳ ನಡುವೆ ಇದ್ದಿದ್ದರೆ ಮೂಗು ಹೇಗಿರುತ್ತಿತ್ತೆಂದು ಆಲೋಚಿಸಿ ನೋಡು! ಪಾಪ! ಇಡೀ ದಿವಸವೂ ಆಘ್ರಾಣಿಸುತ್ತಾ ಇರಬೇಕಾಗುತ್ತಿತ್ತು ನಿನ್ನ ಪಾದಗಳ ದುರ್ನಾತ . ತಲೆಯ ಮೇಲೆ ಕೂಡಿಸಿದ್ದರೆ ಆ ಬ್ರಹ್ಮ ಅನರ್ಥವೇ ಆಗುತ್ತಿತ್ತು ಕಾಣಣ್ಣಾ! ಗಾಳಿ ಬೀಸಿದಾಗೆಲ್ಲಾ ಹಾರಾಡುವ ಕೂದಲು ಮುತ್ತಿಟ್ಟು ಮೂಗಿಗೆ ದಿನವೆಲ್ಲ ಸೀನು! ಕಿವಿಯೊಳಗೇ ಇಟ್ಟುಬಿಟ್ಟಿದ್ದರೆ ಹೇಗೆ ? ಹೆದರುತ್ತೇನೆ ಹೀಗೆ ಆಲೋಚಿಸಿದರೇನೇ! ಆಕ್ಷಿ! ಆಕ್ಷಿ! ಎಂದು ಸೀನಿದಾಗೆಲ್ಲಾ ಮಿದುಳಲ್ಲಿ ನಾನ್ನೂರು ವೋಲ್ಟ್ ಸಂಚಾರ!   ಅಂಟಿಸಿದ್ದಾನೆ ಹುಬ್ಬು-ಗಲ್ಲಗಳ ನಡುಮಧ್ಯೆ ಪರಬೊಮ್ಮ ಸರಿಯಾದ ಜಾಗದಲ್ಲೇ ಬೇರೆಲ್ಲಾದರೂ ಮೆತ್ತಿದ್ದರೆ ಮೂಗಣ್ಣನ ಅಣ್ಣ   ಫಜೀತಿಯಾಗುತ್ತಿತ್ತು ನಿನ್ನ ಮೂಗನ್ನ! (c) 2017, ಸಿ. ಪಿ. ರವಿಕುಮಾರ್ 

ಪ್ರತಿಬಿಂಬದ ಬಂಧನ

ಇಮೇಜ್
ಶಹರಿಯಾರ್ ಅವರ ಒಂದು ಗಜಲ್ ಭಾಷಾಂತರಿಸುವ ಸಾಹಸ ಇಲ್ಲಿದೆ.  ಅವರ ಇನ್ನೂ ಅನೇಕ ರಚನೆಗಳಂತೆ ಇಲ್ಲೂ ನಗರಜೀವನದ ಬಗ್ಗೆ ಒಂದಿಷ್ಟು ನೋಟಗಳಿವೆ. ನಗರದ ಜೀವನ ಒಂದು ಮರೀಚಿಕೆಯಂತೆ. ಮಾತಿನಲ್ಲಿ ಅದನ್ನು ಬಂಧಿಸಿಡುವುದು ಕೂಡಾ ಕಷ್ಟ.  ನಾವು ನಡೆಯುತ್ತಿದ್ದೇವೆಂಬ (ನಂಬಿಕೆಯ) ಹಾದಿ ಗಟ್ಟಿಯಾದದ್ದೆಂಬುದು ಒಂದು ಭ್ರಮೆ!  ಸ್ಮಾರ್ಟ್ ಸಿಟಿ ಎಂಬ ಕಲ್ಪನೆಯನ್ನೇ ತೆಗೆದುಕೊಳ್ಳಿ. ಈ ಅದ್ಭುತ ಕಲ್ಪನಾಲೋಕ ಎಂದಾದರೂ ನಿಜವಾದೀತೇ? ಅದರ ಸಾಧ್ಯತೆ ಕಡಿಮೆಯೇ ಎಂದು ನಮಗೆ ಗೊತ್ತಿದ್ದರೂ ನಾವು ಕನಸು ಕಾಣುವುದನ್ನು ಬಿಡುವುದಿಲ್ಲ!  ಮೂಲ ಉರ್ದೂ : ಶಹರಿಯಾರ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಪ್ರತಿಬಿಂಬವನ್ನು ಹಿಡಿದಿಡಲೇ,  ತೊಡಿಸಲೇ ನೆರಳಿಗೆ ಕಡಿವಾಣ? ಹೇಗೆ ಸಾಕ್ಷಾತ್ಕರಿಸಿಕೊಳ್ಳಲಿ ಮರೀಚಿಕೆಯನ್ನ? ಪದತಲದಲ್ಲಿ ಇದೆಯಲ್ಲ ಅದು ಗಟ್ಟಿನೆಲವೆಂದು   ನಡೆ ಇನ್ನೊಂದಿಷ್ಟು ದಿನ ಭ್ರಮೆಯನ್ನು ಹರಡೋಣ  ಭರವಸೆಗಳ ನಗರ ನಿಜವೇ ಆಗುವುದು ಸಾಧ್ಯವಿಲ್ಲ  ಎಂದಾದರೆ ಅದನ್ನು ಕಲ್ಪನೆಯಲ್ಲೇ ಹಿಡಿದಿಡೋಣ  ಹೆಚ್ಚೂ ಕಡಿಮೆ ಈಗ ಕಣ್ಣುಗಳಿಗೆ ಇರುವ ಕೆಲಸ ಒಂದೇ  ಕಂಡ ಕನಸುಗಳಿಗೆಲ್ಲಾ ಹುಡುಕುವುದು ಅರ್ಥವನ್ನ  ನೆನ್ನೆಯೆಷ್ಟಿತ್ತೋ ನನಗೆ ಇಂದೂ ಅಷ್ಟೇ ಇದೆ ಅಧೈರ್ಯ  ಯಾರ ತುಟಿಗಳ ಮೇಲೆ ಬರೆಯಲಿ ದಾಹವನ್ನ? ಸವೆಸೋಣ ಉಳಿದ ಬದುಕಿನ ...

ಕೆಲಸವಿಲ್ಲದ ಸೂರ್ಯ ಅದೃಷ್ಟವಂತ

ಇಮೇಜ್
ಮೂಲ ಅಮೆರಿಕನ್ ಹಾಡು: ಹೇವನ್ ಗಿಲೆಸ್ಪಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಬೆಳಗಾಗೆದ್ದು ಹೊರಟು ನಿಂತೆನೆಂದರೆ ನೋಡು ದೆವ್ವ ಬಂದವರಂತೆ ದಿನವಿಡೀ ದುಡಿತ ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ ರೇಗುವ ಹೆಂಡತಿಯ ಜೊತೆ ಏಗುತ್ತಾ ಮಕ್ಕಳಿಗಾಗಿ ಸುಕ್ಕಾಗಿದೆ ತೊಗಲು, ನೆರೆಬಂದು ಕೂದಲಿಗೆ ಬಾಗುತ್ತಿದೆ ಸೊಂಟ ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ ಕಾಣುವುದಿಲ್ಲವೇ ನನ್ನ ಕಣ್ಣಲ್ಲಿನ ನೀರು? ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ ಕಳಿಸಿಕೊಡು ಹಾರಾಡುವ ಬೆಳ್ಳಿತೇರು ಹಾರಿಸು ನನ್ನನ್ನೂ ವೈತರಿಣಿಯ ಮೇಲೆ ಕಳೆದುಹೋಗಲಿ ನನ್ನ ದುಃಖ ನೂರೆಂಟು ಕೊಡಬೇಡ ನನಗೆ ಬೇರಾವುದೂ ಕೆಲಸ ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ ಕಾಣುವುದಿಲ್ಲವೇ ನನ್ನ ಕಣ್ಣಲ್ಲಿ ನೀರು? ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ ಕಳಿಸಿಕೊಡು ಹಾರಾಡುವ ಬೆಳ್ಳಿತೇರು ಹಾರಿಸು ನನ್ನನ್ನೂ ವೈತರಿಣಿಯ ಮೇಲೆ ಕಳೆದುಹೋಗಲಿ ನನ್ನ ದುಃಖ ನೂರೆಂಟು ಕೊಡಬೇಡ ನನಗೆ ಬೇರಾವುದೂ ಕೆಲಸ ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು "ಕೆಲಸವಿಲ್ಲದ ಸೂರ್ಯ ಅದೃಷ್ಟವಂತ" ಎಂಬ ಹಾಡನ್ನು ರಚಿಸಿದವನು ಅಮೆರಿಕನ್ ಬರಹಗಾರ ಹೇವನ್ ಗಿಲೆಸ್ಪಿ. ತಂದೆ ವಿಲಿಯಮ್ ಗಿಲೆಸ್ಪಿ ಮತ್ತು ತಾಯಿ ಆನಾ ರೇಲಿಗೆ ಇ...