ಆರತಿಗೊಂದು ಕನ್ನಡ, ಕೀರುತಿಗೊಂದು ಇಂಗ್ಲಿಷ್
ಡಾ. ಸಿ. ಪಿ. ರವಿಕುಮಾರ್ ನ ಮ್ಮ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಈ ವರ್ಷ ಕನ್ನಡ ಚರ್ಚಾಸ್ಪರ್ಧೆ ಇಟ್ಟುಕೊಳ್ಳಿ ಎಂಬ ಸಲಹೆ ಕೊಟ್ಟವನು ನಾನೇ. ಕಾರ್ಯಕ್ರಮದ ಆಯೋಜಕರು ನನ್ನ ಮಾತನ್ನು ಕೇಳಿಕೊಂಡು ಪ್ರಕಟಣೆಯನ್ನು ಹೊರಡಿಸಿದರು. ಸ್ಪರ್ಧೆಯ ದಿವಸ ಹತ್ತಿರ ಬಂದಂತೆ ಮುಖ್ಯ ಆಯೋಜಕ ನನ್ನನ್ನು ಕಾಣಲು ಬಂದ. ಸ್ವಲ್ಪ ಗಾಬರಿಯಾಗಿದ್ದ. "ಸರ್, ಸ್ಪರ್ಧೆಗೆ ಕೇವಲ ಆರು ಜನ ಮಾತ್ರ ಹೆಸರು ಬರೆಸಿದ್ದಾರೆ!" ಎಂದ. "ಅದನ್ನು ಹಾಗೆ ಹೇಳಬೇಡಿ, ಮೂರ್ತಿ! ಸ್ಪರ್ಧೆಗೆ ಆರು ಜನ ಹೆಸರು ಬರೆಸಿಬಿಟ್ಟಿದ್ದಾರೆ ಸರ್! ಅಂತ ಉತ್ಸಾಹದಿಂದ ಹೇಳಿ. ಇದು ರೆಕಾರ್ಡ್ ಕಣ್ರೀ!" ಎಂದೆ. ಇಬ್ಬರೂ ನಕ್ಕೆವು. ಕಾಲೇಜುಗಳಲ್ಲಿ ಕನ್ನಡ ಪಾಠ ಹೇಳಿಕೊಡುವ ಪ್ರಾಧ್ಯಾಪಕರನ್ನು ತೀರ್ಪುಗಾರರನ್ನಾಗಿ ಕರೆಯಬೇಕು ಎಂಬ ತೀರ್ಮಾನವಾಯಿತು. ಸ್ಪರ್ಧೆಯ ದಿನವೂ ಬಂತು. "ಸರ್, ನನಗೆ ಯಾವ ಕನ್ನಡ ಪ್ರಾಧ್ಯಾಪಕರೂ ಗೊತ್ತಿಲ್ಲ; ನಾನು ಪ್ರಯತ್ನ ಪಟ್ಟ ಕಡೆ ಫಲ ಸಿಕ್ಕುವ ಭರವಸೆ ಇಲ್ಲ. ನೀವೇ ತೀರ್ಪುಗಾರರಾಗಬೇಕು" ಎಂದು ಮೂರ್ತಿ ತೀರ್ಪು ನುಡಿದ. ಮಾಡಿದ್ದುಣ್ಣೋ ಎಂದು ಮನಸ್ಸಿನಲ್ಲೇ ಅಂದುಕೊಂಡು ಒಪ್ಪಿಕೊಂಡೆ. ಮತ್ತೊಬ್ಬ ತೀರ್ಪುಗಾರರನ್ನಾಗಿ ನನ್ನ ಸಹೋದ್ಯೋಗಿ ರಾವ್ ಅವರನ್ನು ಒಪ್ಪಿಸಿದೆ. ಸ್ಪರ್ಧೆಯ ವಿಷಯವನ್ನು ನಾನೇ ಕೊಟ್ಟಿದ್ದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ತಾನೇ! ಪ್ರಜಾವಾಣಿಯಲ...